ಮಹಾಭಾರತದಲ್ಲಿ ಕಳೆದು ಹೋದ ಪಾತ್ರಗಳು (ಭಾಗ ೧೧) ವೃಶಾಲಿ ಹಾಗೂ ಸುಪ್ರಿಯಾ

ಮಹಾಭಾರತದಲ್ಲಿ ಕಳೆದು ಹೋದ ಪಾತ್ರಗಳು (ಭಾಗ ೧೧) ವೃಶಾಲಿ ಹಾಗೂ ಸುಪ್ರಿಯಾ

ನಿಮಗೆಲ್ಲಾ ಮಹಾಭಾರತದಲ್ಲಿ ಕರ್ಣ ಗೊತ್ತು. ಆದರೆ ಅವನ ಪತ್ನಿಯರ ಬಗ್ಗೆ ಗೊತ್ತಾ? ಪಾಂಡವರ ಪತ್ನಿ ದ್ರೌಪದಿ, ಅರ್ಜುನನ ಪತ್ನಿಯರಾದ ಸುಭದ್ರ, ಉಲೂಪಿ, ಚಿತ್ರಾಂಗದ ಹಾಗೂ ಭೀಮನ ಪತ್ನಿಯಾದ ಹಿಡಿಂಬೆಯ ಬಗ್ಗೆ ಎಲ್ಲಾ ಕೇಳಿ ಅಥವಾ ಚಿತ್ರಗಳಲ್ಲಿ ನೋಡಿ ತಿಳಿದಿರುತ್ತೀರಿ. ಆದರೆ ಕುಂತಿಯ ಮಗನಾದ ಕರ್ಣನ ಹುಟ್ಟು, ಅವನ ಸಾಕು ತಂದೆ ತಾಯಿಯರು, ಅವರ ಹಾಗೂ ದುರ್ಯೋಧನನ ಜೊತೆಗಿನ ಮಿತ್ರತ್ವ ಎಲ್ಲಾ ಗೊತ್ತು. ಆದರೆ ಕರ್ಣನ ಪತ್ನಿಯರ ಬಗ್ಗೆ ಹಾಗೂ ಮಕ್ಕಳ ಬಗ್ಗೆ ತಿಳಿದಿದೆಯಾ? ಬನ್ನಿ ಸ್ವಲ್ಪ ಆ ಬಗ್ಗೆ ಮಾಹಿತಿ ಪಡೆಯೋಣ.

ದೂರ್ವಾಸ ಮುನಿಯ ವರವನ್ನು ಪರೀಕ್ಷಿಸಲು ಹೋದ ಕುಂತಿಗೆ ಸೂರ್ಯ ದೇವನು ಒಂದು ಗಂಡು ಮಗುವನ್ನು ಕರುಣಿಸುತ್ತಾನೆ. ಅದನ್ನು ಕುಂತಿ ನೀರಿನಲ್ಲಿ ಹರಿಯಬಿಟ್ಟಾಗ ಅದು ಹಸ್ತಿನಾಪುರದ ರಾಜ ದೃತರಾಷ್ಟ್ರನ ಸಾರಥಿಗಳಲ್ಲಿ ಓರ್ವನಾದ ಅದಿರಥ ಎಂಬ ವ್ಯಕ್ತಿಗೆ ಸಿಗುತ್ತದೆ. ಅವನು ಆ ಮಗುವನ್ನು ಮನೆಗೆ ತೆಗೆದುಕೊಂಡು ಬಂದು ತನ್ನ ಪತ್ನಿಯಾದ ರಾಧ ಜೊತೆ ಸೇರಿ ಸ್ವಂತ ಮಗನಂತೆ ಸಾಕುತ್ತಾನೆ. ಅವರು ಅವನಿಗೆ ವಸುಸೇನ ಎಂಬ ಹೆಸರಿಡುತ್ತಾರೆ. ಆದರೆ ಅವನ ಕವಚ-ಕುಂಡಲದ ಕಾರಣದಿಂದ ಕರ್ಣ ಎಂಬ ಹೆಸರಿನಲ್ಲೇ ಖ್ಯಾತನಾಗುತ್ತಾನೆ. ರಾಧಾಳ ಮಗನಾದುದರಿಂದ ಅವನಿಗೆ ರಾಧೇಯ ಎಂಬ ಹೆಸರೂ ಇದೆ. 

ವ್ಯಾಸರ ಮಹಾಭಾರತದ ಕತೆಯಲ್ಲಿ ಕರ್ಣನ ಪತ್ನಿಯರ ಬಗ್ಗೆ ಮಾಹಿತಿ ಇರುವುದು ಕಮ್ಮಿ. ಆದರೆ ಜೈಮಿನಿ ಮುನಿಯ ‘ಅಶ್ವಮೇಧಿಕ ಪರ್ವ' ಮುಂತಾದ ಕೆಲವು ಮಹಾಭಾರತ ಕತೆಗಳಲ್ಲಿ ಕರ್ಣನ ಪತ್ನಿಯ ಬಗ್ಗೆ ಸ್ವಲ್ಪ ಮಾಹಿತಿ ಇದೆ. ಕರ್ಣನ ಓರ್ವ ಪತ್ನಿಯ ಹೆಸರು ವೃಶಾಲಿ. ಇವಳು ದುರ್ಯೋಧನನ ಸಾರಥಿಯಾದ ಸತ್ಯಸೇನನ ಸಹೋದರಿ. ಪಾಂಡವರಿಗೆ ಹಸ್ತಿನಾಪುರವನ್ನು ವಿಭಜಿಸಿ ಇಂದ್ರಪ್ರಸ್ತವನ್ನು ನೀಡಿದಾಗ ವೃಶಾಲಿ ಅಲ್ಲಿಗೆ ಹೋಗಬಯಸುತ್ತಾಳೆ. ಆದರೆ ಕೊನೇ ಕ್ಷಣದಲ್ಲಿ ಅವಳಿಗೆ ಅಲ್ಲಿಗೆ ಹೋಗಲು ಆಗದಾಗ ಸ್ವತಃ ಕರ್ಣನೇ ಅವಳನ್ನು ಇಂದ್ರಪ್ರಸ್ತಕ್ಕೆ ತಲುಪಿಸಲು ಹೋಗುತ್ತಾನೆ. ಆ ಸಮಯದಲ್ಲಿ ಅವರಿಬ್ಬರಿಗೂ ಪ್ರೇಮಾಂಕುರವಾಗುತ್ತದೆ. ಕರ್ಣನು ವೃಶಾಲಿಯನ್ನು ತನ್ನ ಪತ್ನಿಯನ್ನಾಗಿ ಸ್ವೀಕರಿಸುತ್ತಾನೆ. 

ಕರ್ಣನ ಮತ್ತೊರ್ವ ಪತ್ನಿ ಸುಪ್ರಿಯಾ. ಈಕೆ ದುರ್ಯೋಧನನ ಪತ್ನಿ ಭಾನುಮತಿಯ ಗೆಳತಿ. ಇಬ್ಬರು ಪತ್ನಿಯರಿಂದ ಕರ್ಣನಿಗೆ ೯ ಜನ ಮಕ್ಕಳು ಜನಿಸುತ್ತಾರೆ. ಅವರ ಹೆಸರು ವೃಷಸೇನ, ವೃಷಕೇತು, ಚಿತ್ರಸೇನ, ಸತ್ಯಸೇನ, ಸುಶೇನ, ಶತ್ರುಂಜಯ, ದ್ವಿಪಾದ, ಸುಶರ್ಮ ಹಾಗೂ ಪ್ರಸೇನ. ಪ್ರಸೇನನಿಗೆ ಸುಧಾಮ ಎಂಬ ಹೆಸರೂ ಇರುತ್ತದೆ. ಅವನನ್ನು ಸಾತ್ಯಕಿ ಕೊಲ್ಲುತ್ತಾನೆ. ಉಳಿದ ೮ ಮಂದಿ ಕರ್ಣನ ಮಕ್ಕಳು ಕುರುಕ್ಷೇತ್ರ ಯುದ್ಧದಲ್ಲಿ ಪಾಲ್ಗೊಳ್ಳುತ್ತಾರೆ. ಅವರಲ್ಲಿ ಶತ್ರುಂಜಯ, ವೃಷಸೇನ ಹಾಗೂ ದ್ವಿಪಾದನನ್ನು ಅರ್ಜುನ ಕೊಲ್ಲುತ್ತಾನೆ. ಭೀಮ ಸುಶೇನನನ್ನು ವಧೆ ಮಾಡಿದರೆ, ನಕುಲ ಚಿತ್ರಸೇನ, ಸತ್ಯಸೇನ ಹಾಗೂ ಸುಶರ್ಮನನ್ನು ಕೊಲ್ಲುತ್ತಾನೆ. ಕರ್ಣನ ಮಗನಾದ ವೃಷಕೇತು ಮಾತ್ರ ಕುರುಕ್ಷೇತ್ರ ಯುದ್ಧದಲ್ಲಿ ಬದುಕಿ ಉಳಿಯುತ್ತಾನೆ. 

ಕರ್ಣನು ಮರಣ ಹೊಂದಿದಾಗ ಅವನ ಪತ್ನಿಯಾದ ವೃಶಾಲಿಯು ಸತಿ ಪದ್ಧತಿಯಂತೆ ಅವನ ಚಿತೆಗೆ ಹಾರಿ ಬೆಂಕಿಗೆ ಆಹುತಿಯಾಗುತ್ತಾಳೆ. ಆಗಿನ ಕಾಲದಲ್ಲಿ ಸತಿ ಸಹಗಮನ ಪದ್ಧತಿಯು ಕಡ್ಡಾಯವಾಗಿ ಜಾರಿಯಲ್ಲಿ ಇಲ್ಲದಿದ್ದರೂ ವೃಶಾಲಿಯು ತನ್ನ ಪತಿಯ ಜೊತೆಯೇ ಸಾಯಲು ಬಯಸುತ್ತಾಳೆ. ಇದು ವೃಶಾಲಿಗೆ ಕರ್ಣನ ಮೇಲೆ ಇದ್ದ ಪ್ರೇಮವನ್ನು ತೋರಿಸುತ್ತದೆ.   

ಯುದ್ಧದ ಬಳಿಕ ಯುಧಿಷ್ಟಿರ ಹಸ್ತಿನಾಪುರದ ರಾಜನಾದಾಗ ಕರ್ಣನ ಮಗನನ್ನು ತಮ್ಮ ಜೊತೆಯೇ ಇರಿಸಿಕೊಳ್ಳುತ್ತಾನೆ. ರಾಜಸೂಯ ಯಜ್ಞದ ಸಮಯದಲ್ಲಿ ವೃಷಕೇತು ತನ್ನ ಚಿಕ್ಕಪ್ಪನಾದ ಅರ್ಜುನನ ಜೊತೆ ಯಾಗದ ಕುದುರೆಯ ರಕ್ಷಣೆಗೆ ಹೋಗುತ್ತಾನೆ. ಮಣಿಪುರ ದೇಶದಲ್ಲಿ ಭಬ್ರುವಾಹನ (ಅರ್ಜುನನ-ಚಿತ್ರಾಂಗದರ ಮಗ) ಕುದುರೆಯನ್ನು ಕಟ್ಟಿ ಹಾಕಿ, ಯುದ್ಧವಾದಾಗ ವೃಷಕೇತು ಭಬ್ರುವಾಹನನ ಕೈಯಲ್ಲಿ ಹತನಾಗುತ್ತಾನೆ. ಹೀಗೆ ಕರ್ಣನ ೯ ಮಂದಿ ಮಕ್ಕಳಲ್ಲಿ ಯಾರೊಬ್ಬರೂ ಬದುಕಿ ಉಳಿಯುವುದಿಲ್ಲ. 

ಪೂರಕ ಮಾಹಿತಿ: ಕರ್ಣನಿಗೆ ವೃಶಾಲಿ ಹಾಗೂ ಸುಪ್ರಿಯಾ ಹೊರತು ಪಡಿಸಿ ಇನ್ನೂ ಕೆಲವು ಮಂದಿ ಪತ್ನಿಯರು ಇರುವರೆಂದು ವಿವಿಧ ಗ್ರಂಥಗಳಲ್ಲಿ ಉಲ್ಲೇಖಗಳಿವೆ. ತಮಿಳು ಭಾಷೆಯಲ್ಲಿರುವ ಕತೆಯಲ್ಲಿ ಕರ್ಣನಿಗೆ ಪೊನ್ನುರುವಿ, ಉರ್ವಿ ಎಂಬ ಪತ್ನಿಯರೂ, ಬೆಂಗಾಳಿ ಜಾನಪದ ಕತೆಗಳಲ್ಲಿ ಪದ್ಮಾವತಿ ಎಂಬ ಪತ್ನಿಯೂ, ಅಸ್ಸಾಮಿ ಕತೆಯಲ್ಲಿ ತುಲ್ಸಾ, ಒಡಿಸ್ಸಾ ಜಾನಪದ ಕತೆಗಳಲ್ಲಿ ಚಂದ್ರಾವಲಿ ಹಾಗೂ ಪದ್ಮಾವತಿ ಎಂಬ ಪತ್ನಿಯರು ಇದ್ದರು ಎಂದು ಮಾಹಿತಿ ಇದೆ. ಬಹುಷ ಈ ಜಾನಪದ ಕತೆಗಳಲ್ಲಿ ಬರುವ ಹೆಸರುಗಳು ವೃಶಾಲಿ ಹಾಗೂ ಸುಪ್ರಿಯಾ ಅವರುಗಳದ್ದೇ ಬೇರೆ ಬೇರೆ ಹೆಸರುಗಳೂ ಆಗಿರಬಹುದು. 

ಚಿತ್ರಕೃಪೆ: ಅಂತರ್ಜಾಲ ತಾಣ