ಮಹಾಭಾರತದಲ್ಲಿ ಕಳೆದು ಹೋದ ಪಾತ್ರಗಳು (ಭಾಗ ೧೪)- ಸುದಾಮ

ಮಹಾಭಾರತದಲ್ಲಿ ಕಳೆದು ಹೋದ ಪಾತ್ರಗಳು (ಭಾಗ ೧೪)- ಸುದಾಮ

ಗೆಳೆತನಕ್ಕೆ ಉತ್ತಮ ಉದಾಹರಣೆಯೆಂದರೆ ದುರ್ಯೋಧನ ಹಾಗೂ ಕರ್ಣ ಮತ್ತು ಕೃಷ್ಣ ಹಾಗೂ ಸುದಾಮ. ಮೊದಲ ಉದಾಹರಣೆಯಲ್ಲಿ ಉತ್ತಮ ಗೆಳೆತನವಿದ್ದರೂ ದುರ್ಯೋಧನನು ತನ್ನ ಸ್ವಾರ್ಥಕ್ಕಾಗಿ ಈ ಗೆಳೆತನವನ್ನು ಬಳಸಿಕೊಂಡ. ಕರ್ಣನಂಥಹ ವೀರಾಧಿವೀರ ಜೊತೆಗಿದ್ದರೂ ಅನ್ಯಾಯವನ್ನು ಅಪ್ಪಿಕೊಂಡದ್ದರಿಂದ ದುರ್ಯೋಧನನಿಗೆ ಕುರುಕ್ಷೇತ್ರ ಯುದ್ಧದಲ್ಲಿ ಜಯ ಒದಗಿ ಬರಲಿಲ್ಲ. ಧರ್ಮಕ್ಕೇ ಜಯವಾಯಿತು. ತನ್ನ ಗೆಳೆಯನಾಗಿ, ತನ್ನನ್ನು ಅಂಗ ದೇಶಕ್ಕೆ ರಾಜನನ್ನಾಗಿ ಮಾಡಿದ ದುರ್ಯೋಧನನ ಯೋಚನೆಗಳು ಅಧರ್ಮದಿಂದ ಕೂಡಿದೆ ಎಂದು ತಿಳಿದರೂ ಕರ್ಣ ಅವನ ಪಕ್ಷ ತ್ಯಜಿಸಲಿಲ್ಲ. ಮಹಾಭಾರತದಲ್ಲಿ ಕಂಡು ಬರುವ ಮತ್ತೊಂದು ಉದಾಹರಣೆ ಕೃಷ್ಣ ಮತ್ತು ಸುದಾಮರದ್ದು.

ಶ್ರೀಕೃಷ್ಣನು ಬಾಲ್ಯದಲ್ಲಿ ಸಾಂದೀಪನಿ ಋಷಿಯ ಆಶ್ರಮದಲ್ಲಿ ವಿದ್ಯಾರ್ಜನೆ ಮಾಡುತ್ತಿದ್ದ ಸಮಯದಲ್ಲಿ ಸುದಾಮನ ಪರಿಚಯವಾಗುತ್ತದೆ. ಪರಿಚಯ ಗೆಳೆತನಕ್ಕೆ ತಿರುಗುತ್ತದೆ. ಗೆಳೆತನವು ಮತ್ತಷ್ಟು ಗಾಢವಾಗಿ ಆತ್ಮೀಯತೆ ಹೆಚ್ಚಾಗಿ ಒಬ್ಬರನೊಬ್ಬರು ಬಿಟ್ಟಿರಲಾರದ ಮಿತ್ರರಾಗುತ್ತಾರೆ. ಸುದಾಮ ಓರ್ವ ಬಡ ಬ್ರಾಹ್ಮಣ ಹುಡುಗ. ಕೃಷ್ಣ ಶ್ರೀಮಂತ ಅದರಲ್ಲೂ ಮಥುರೆಯ ಪ್ರಮುಖನಾದ ನಂದ ಕುಮಾರನ ಸುಪುತ್ರ. ಆದರೂ ಇವರ ಗೆಳೆತನಕ್ಕೆ ಬಡವ ಬಲ್ಲಿದ ಎಂಬ ಭೇಧಭಾವದ ಸೋಂಕು ತಗುಲಲಿಲ್ಲ. ಸುದಾಮನಿಗೆ ಮನಸ್ಸಿನ ಒಳಗೇ ತಾನು ಬಡವ, ಶ್ರೀಕೃಷ್ಣನ ಗೆಳೆತನಕ್ಕೆ ಸಮಾನನಲ್ಲ ಎಂಬ ಅಳುಕು ಇದ್ದೇ ಇರುತ್ತಿತ್ತು. ಆದರೆ ಕೃಷ್ಣನ ಪ್ರೀತಿ ಅವನನ್ನು ಈ ವಿಚಾರ ಮರೆಯುವಂತೆ ಮಾಡುತ್ತಿತ್ತು. ಒಮ್ಮೆ ಕೃಷ್ಣ ಹಾಗೂ ಸುದಾಮರು ಕಾಡಿಗೆ ಕಟ್ಟಿಗೆ ತರಲು ಹೋಗುತ್ತಾರೆ. ಆಗ ಗುರುವಿನ ಪತ್ನಿ ಅವರಿಗೆ ದಾರಿಯಲ್ಲಿ ಹಸಿವಾದರೆ ತಿನ್ನಲು ಅವಲಕ್ಕಿಯನ್ನು ಕಟ್ಟಿಕೊಡುತ್ತಾರೆ. ಕಾಡಿನಲ್ಲಿ ಕೃಷ್ಣ ಮತ್ತು ಸುದಾಮರು ದಾರಿ ತಪ್ಪಿ ಬೇರೆ ಬೇರೆಯಾಗುತ್ತಾರೆ. ಸುದಾಮನ ಬಳಿ ಅವಲಕ್ಕಿಯ ಗಂಟು ಇರುತ್ತದೆ. ಅವನು ಹಸಿವಾಯಿತೆಂದು ಅವಲಕ್ಕಿಯನ್ನು ತಿನ್ನುತ್ತಾನೆ. ಕೃಷ್ಣನ ಪಾಲನ್ನೂ ತಿಂದು ಬಿಡುತ್ತಾನೆ. ನಂತರ ಕೃಷ್ಣ ಸಿಕ್ಕಾಗ ಅವನಿಗೆ ತನ್ನ ಕಾರ್ಯದ ಬಗ್ಗೆ ಪಶ್ಚಾತ್ತಾಪವಾಗುತ್ತದೆ. ಗುರುಕುಲಕ್ಕೆ ಬಂದ ಬಳಿಕ ಸುದಾಮ ಈ ವಿಷಯವನ್ನು ಸಾಂದೀಪನಿ ಮುನಿಗಳ ಬಳಿ ಹೇಳುತ್ತಾನೆ. ಗುರುಗಳಿಗೆ ಇದರಿಂದ ತುಂಬಾ ಬೇಸರವಾಗುತ್ತದೆ. 'ನೀನು ಕೃಷ್ಣನ ಪಾಲನ್ನೂ ತಿಂದುದರಿಂದ ನಿನಗೆ ಭವಿಷ್ಯದಲ್ಲಿ ತುಂಬಾನೇ ಕಷ್ಟಗಳು ಬರುತ್ತವೆ. ಕೃಷ್ಣನೇ ನಿನಗೆ ಇದರಿಂದ ಮುಕ್ತಿಯನ್ನು ಕೊಡಬಹುದು’ ಎನ್ನುತ್ತಾರೆ.   

ದಿನಗಳು ಕಳೆದು ಇಬ್ಬರ ವಿದ್ಯಾಭ್ಯಾಸವೂ ಪೂರ್ತಿಯಾಗಿ ತಮ್ಮ ತಮ್ಮ ಮನೆಗಳಿಗೆ ಮರಳಿದರು. ಹಾಗೆ ಮರಳುವಾಗ ಕೃಷ್ಣ ತನ್ನ ಗೆಳೆಯನ ಬಳಿ, ನಿನಗೆ ಭವಿಷ್ಯದಲ್ಲಿ ಯಾವುದೇ ಕಷ್ಟ ಬಂದರೂ ನೀನು ನನ್ನನ್ನು ಬಂದು ಕಾಣಬಹುದು. ನಿನಗೆ ನನ್ನ ಮೇಲೆ ಒಂದು (ಅವಲಕ್ಕಿ ತಿಂದ) ಋಣವಿದೆ. ಅದನ್ನು ಸರಿ ಪಡಿಸುವುದಕೋಸ್ಕರವಾದರೂ ನೀನು ಒಮ್ಮೆ ಮಥುರೆಗೆ ಬರಲೇ ಬೇಕಾಗುತ್ತದೆ ಎಂದು ಹೇಳಿ ಭಾರವಾದ ಹೃದಯದಿಂದ ತನ್ನ ಜೀವದ ಗೆಳೆಯನನ್ನು ಬೀಳ್ಗೊಡುತ್ತಾನೆ.

ಸುದಾಮ ತನ್ನ ಊರಿಗೆ ಮರಳಿ ತನಗೆ ತಿಳಿದ ಪೌರೋಹಿತ್ಯದ ಕೆಲಸ ಹಾಗೂ ದೇವಸ್ಥಾನದ ಅರ್ಚಕನಾಗಿ ಕೆಲಸ ಮಾಡುತ್ತಾನೆ. ಕಾಲಕ್ರಮೇಣ ಅವನಿಗೆ ಸುಶೀಲಾ (ಕಲ್ಯಾಣಿ) ಎಂಬ ಹುಡುಗಿ ಜೊತೆ ಮದುವೆಯಾಗುತ್ತದೆ. ಬಡತನ ಎಂಬುವುದು ಸುದಾಮನ ಬೆನ್ನು ಬಿಡಲಿಲ್ಲ. ಪೌರೋಹಿತ್ಯದಿಂದ ಅವನಿಗೆ ಅಧಿಕ ಸಂಪಾದನೆಯೂ ಇರಲಿಲ್ಲ, ಬಡತನಕ್ಕೆ ಮಕ್ಕಳು ಜಾಸ್ತಿ ಎಂಬಂತೆ ಒಂದೊಂದಾಗಿ  ಮಕ್ಕಳು ಹುಟ್ಟಿದರು. ಇದರಿಂದ ಸುದಾಮನ ಸಂಕಷ್ಟಗಳು ಅಧಿಕವಾದವು. ಅವರಿಗೆಲ್ಲಾ ಊಟ ಮಾಡಿಸಿದ ನಂತರ ಸುದಾಮನಿಗೆ ಮತ್ತು ಅವನ ಪತ್ನಿಗೆ ಕೆಲವೊಮ್ಮೆ ಏನೂ ಉಳಿಯುತ್ತಿರಲಿಲ್ಲ. ಹಸಿವಿನಲ್ಲೇ ಮಲಗಿ ಬಿಡುತ್ತಿದ್ದರು. ಸುದಾಮನ ಪತ್ನಿಗೆ ಕೃಷ್ಣ ತನ್ನ ಪತಿಯ ಆತ್ಮೀಯ ಮಿತ್ರರು ಎಂದು ತಿಳಿದಿತ್ತು. ಆದರೆ ಎಷ್ಟೇ ಕಷ್ಣ ಬಂದರೂ ಸ್ನೇಹಿತನ ಮುಂದೆ ಕೈಚಾಚಬಾರದು ಎನ್ನುವುದು ಸುದಾಮನ ನಿಲುವಾಗಿತ್ತು.

ಒಮ್ಮೆಯಂತೂ ಸುದಾಮನಿಗೆ ಎಲ್ಲೂ ಊಟಕ್ಕೆ ಏನೂ ಸಿಗಲಿಲ್ಲ. ಮಕ್ಕಳೆಲ್ಲಾ ಹಸಿವಿನಿಂದ ಕಂಗಾಲಾದರು. ಸುದಾಮನ ಪತ್ನಿ ತನ್ನ ಪತಿಗೆ ಈಗಲಾದರೂ ಕೃಷ್ಣನನ್ನು ಭೇಟಿಯಾಗಿ ಎಂದು ಪರಿಪರಿಯಾಗಿ ಬೇಡಿ ಕೊಂಡಳು. ತನ್ನ ಮಕ್ಕಳು ಹಸಿವಿನಿಂದ ನರಳುವುದನ್ನು ನೋಡಲಾಗದೆ ಸುದಾಮ ಕೃಷ್ಣನನ್ನು ಭೇಟಿಯಾಗಲು ಒಪ್ಪಿದ. ಆದರೆ ಅವನನ್ನು ಭೇಟಿಯಾಗಲು ಹೋಗುವಾಗ ಏನನ್ನಾದರೂ ತೆಗೆದುಕೊಂಡು ಹೋಗಬೇಕಲ್ಲ? ಎಂದು ಚಿಂತಾಕ್ರಾಂತನಾದ. ಸುದಾಮನ ಪತ್ನಿಯು ನೆರೆಮನೆಯಿಂದ ಸ್ವಲ್ಪ ಅವಲಕ್ಕಿಯನ್ನು ಸಾಲವಾಗಿ ತಂದು ಹಳೆಯ ಬಟ್ಟೆಯಲ್ಲಿ ಕಟ್ಟಿ ಕೃಷ್ಣನಿಗೆ ಕೊಡಿ ಎಂದು ಕೊಟ್ಟಳು. ಒಲ್ಲದ ಮನಸ್ಸಿನಿಂದ ಸುದಾಮ ದ್ವಾರಕಗೆ ತೆರಳಿದ.

ದ್ವಾರಕಕ್ಕೆ ಬಂದ ಸುದಾಮ ಕೃಷ್ಣನ ಅರಮನೆಯನ್ನು ನೋಡಿ ದಂಗಾಗಿ ಹೋದ. ಅದರ ಸೌಂದರ್ಯಕ್ಕೆ ಮಾರು ಹೋದ. ಅರಮನೆಯ ಹೆಬ್ಬಾಗಿಲಿನಲ್ಲಿ ಕಾವಲು ಭಟರ ಬಳಿ ಕೃಷ್ಣನನ್ನು ಭೇಟಿಯಾಗಲು ಬಂದಿರುವೆ, ಒಳಗೆ ಬಿಡಿ ಎಂದು ವಿನಂತಿಸಿದ. ಸುದಾಮನ ಹರಕಲು ಬಟ್ಟೆಯನ್ನು ನೋಡಿ ಕಾವಲುಗಾರರು ಅವನನ್ನು ಒಳಗೆ ಬಿಡಲಿಲ್ಲ. ಆದರೆ ಇದನ್ನೆಲ್ಲಾ ಕೃಷ್ಣ ತನ್ನ ಅರಮನೆಯ ಉಪ್ಪರಿಗೆಯಿಂದ ಗಮನಿಸಿದ. ತನ್ನ ಬಾಲ್ಯದ ಪ್ರಾಣ ಸ್ನೇಹಿತನನ್ನು ಅರಮನೆಯೊಳಗೆ ಕರೆದೊಯ್ಯಲು ಅವನೇ ಸ್ವತಃ ಹೆಬ್ಬಾಲಿಗೆ ಬಂದ. ತನ್ನ ಗೆಳೆಯನನ್ನು ಅಪ್ಪಿಕೊಂಡ. ಕೈ ಹಿಡಿದು ತನ್ನ ಕೋಣೆಗೆ ಕರೆದುಕೊಂಡು ಹೋದ. ತನ್ನ ಪತ್ನಿಯಾದ ರುಕ್ಮಿಣಿಗೆ ಸುದಾಮನ ಪರಿಚಯ ಮಾಡಿಕೊಟ್ಟ. ಸ್ವತಃ ಸುದಾಮನ ಕಾಲನ್ನು ಪನ್ನೀರಿನಿಂದ ತೊಳೆದು, ನೀರನ್ನು ತನ್ನ ತಲೆಯ ಮೇಲೆ ಎರಚಿಕೊಂಡ. ಸ್ವಾದಿಷ್ಟವಾದ ಭೋಜನವನ್ನು ತನ್ನ ಗೆಳೆಯನಿಗಾಗಿ ಸಿದ್ಧ ಪಡಿಸಿದ. ಇದನ್ನೆಲ್ಲಾ ನೋಡಿ ಸುದಾಮನಿಗೆ ತಾನು ಬಂದ ವಿಚಾರವನ್ನು ಕೃಷ್ಣನಲ್ಲಿ ಹೇಗೆ ಹೇಳುವುದೆಂಬ ಸಂದಿಗ್ಧ ಪರಿಸ್ಥಿತಿಯಾಯಿತು. ಸಂಕೋಚವೂ ಆಯಿತು. ಭೋಜನದ ಬಳಿಕ ಕೃಷ್ಣ ಕೇಳಿದ ‘ಮಿತ್ರಾ ನೀನು ಇಷ್ಟೊಂದು ವರ್ಷಗಳ ನಂತರ ನನ್ನನ್ನು ನೋಡಲು ಬಂದಿರುವೆ. ಅತ್ತಿಗೆ ನನಗಾಗಿ ಏನಾದರೂ ಕಳಿಸಿರಬೇಕಲ್ವಾ?’ ತಾನು ತಂದ ಅವಲಕ್ಕಿಯನ್ನು ಕೃಷ್ಣನಿಗೆ ಕೊಡಲು ಸುದಾಮನಿಗೆ ಸಂಕೋಚವಾಯಿತು. ಆದರೆ ಕೃಷ್ಣ ಬಿಡಬೇಕಲ್ಲ, ಸುದಾಮನ ಚೀಲವನ್ನು ಹುಡುಕಾಡಿ ಅವಲಕ್ಕಿಯ ಗಂಟನ್ನು ಹೊರತೆಗೆದ. ಅದನ್ನು ಬಿಚ್ಚಿದಾಗ ಅವನ ಪ್ರಿಯ ತಿಂಡಿ ಅವಲಕ್ಕಿಯನ್ನು ನೋಡಿ ತುಂಬಾನೇ ಖುಷಿ ಆಯಿತು. ಕೂಡಲೇ ಒಂದು ಮುಷ್ಟಿ ಅವಲಕ್ಕಿಯನ್ನು ಅವನು ಬಾಯಿಯೊಳಗೆ ಹಾಕಿ ಕೊಂಡ. ನಂತರ ಇನ್ನೊಂದು ಮುಷ್ಟಿ. ಮೂರನೇ ಮುಷ್ಟಿ ತಿನ್ನುವಾಗ ರುಕ್ಮಿಣಿ ಕೃಷ್ಣನನ್ನು ತಡೆದಳು. ಏಕೆಂದರೆ ಸುದಾಮ ಅವನ ಬಡತನದ ಬಗ್ಗೆ ಏನೂ ಹೇಳದಿದ್ದರೂ ಕೃಷ್ಣನಿಗೆ ಅವನ ಬಗ್ಗೆ ಎಲ್ಲಾ ತಿಳಿದಿತ್ತು. ಬಾಲ್ಯದಲ್ಲಿ ಸುದಾಮ ತಿಳಿಯದೇ ಮಾಡಿದ ತಪ್ಪನ್ನು ಸರಿ ಪಡಿಸುವ ಅವಕಾಶವೂ ಬಂದಿತ್ತು. ಮೊದಲ ಮುಷ್ಟಿಯಲ್ಲಿ ಸ್ವರ್ಗ ಲೋಕದ ಸುಖ, ಸಂಪತ್ತೂ, ಎರಡನೇ ಮುಷ್ಟಿಯಲ್ಲಿ ಭೂಲೋಕದ ಐಶ್ವರ್ಯವೂ ಸುದಾಮನ ಪಾಲಾಗಿತ್ತು, ಮೂರನೇ ಮುಷ್ಟಿಯನ್ನು ಕೃಷ್ಣ ತಿನ್ನುತ್ತಿದ್ದರೆ ಅವನ ವೈಕುಂಠ ಲೋಕದ ಸಮಸ್ತ ಐಶ್ವರ್ಯವೂ ಸುದಾಮನದ್ದಾಗುತ್ತಿತ್ತು. ಅದಕ್ಕೇ ರುಕ್ಮಿಣಿಯು ಕೃಷ್ಣನನ್ನು ತಡೆಯುತ್ತಾಳೆ. ಆದರೆ ಈ ವಿಚಾರಗಳು ಯಾವುದೂ ಸುದಾಮನಿಗೆ ತಿಳಿಯುವುದಿಲ್ಲ.

ಕೃಷ್ಣ ತಾನು ತಂದ ಅವಲಕ್ಕಿಯನ್ನು ಖುಷಿಯಿಂದ ಚಪ್ಪರಿಸಿ ತಿಂದ ಎನ್ನುವುದೇ ಅವನಿಗೆ ಸಂತೋಷದ ಸಂಗತಿಯಾಗಿತ್ತು. ಕೃಷ್ಣನನ್ನು ಬೀಳ್ಗೊಡುವಾಗಲೂ ಅವನು ತನ್ನ ಮನದ ಆಶೆಯನ್ನು ಹೇಳಲು ಹೋಗುವುದಿಲ್ಲ. ಊರಿಗೆ ತಲುಪಿದ ಸುದಾಮನಿಗೆ ತನ್ನ ಕಣ್ಣುಗಳನ್ನೇ ನಂಬಲು ಸಾಧ್ಯವಾಗುವುದಿಲ್ಲ. ಏಕೆಂದರೆ ಅವನ ಗುಡಿಸಲು ಇದ್ದ ಜಾಗದಲ್ಲಿ ದೊಡ್ಡದಾದ ಅರಮನೆಯು ಪ್ರತ್ಯಕ್ಷವಾಗಿತ್ತು. ಅವನ ಪತ್ನಿ ಮತ್ತು ಮಕ್ಕಳು ಶ್ರೀಮಂತರಂತೆ ಬಟ್ಟೆ ಬರೆಗಳನ್ನು ಹಾಕಿಕೊಂಡಿದ್ದರು. ಪತ್ನಿಯ ಮೈಮೇಲೆ ಬೆಲೆಬಾಳುವ ಒಡವೆಗಳು ಕಂಗೊಳಿಸುತ್ತಿದ್ದವು. ಸುದಾಮನಿಗೆ ಆಗ ಶ್ರೀಕೃಷ್ಣನ ಮಹಿಮೆಯ ಅರಿವಾಯಿತು. ಅವನು ಅಲ್ಲಿಂದಲೇ ಕೈಮುಗಿದು ' ಭಗವಂತಾ, ನಾನು ಏನೂ ಕೇಳದೇ ಇದ್ದರೂ ನೀನು ನನಗೆ ಇಷ್ಟೆಲ್ಲಾ ಸಂಪತ್ತನ್ನು ಅನುಗ್ರಹಿಸಿದ್ದೀಯಾ. ನನ್ನ ನಿನ್ನ ಮಿತ್ರತ್ವಕ್ಕೆ ನೀನು ನೀಡಿದ ಉಡುಗೊರೆ ಎಂದೇ ನಾನು ಭಾವಿಸುವೆ. ಎಂದು ಕೃತಜ್ಞತೆಯನ್ನು ವ್ಯಕ್ತ ಪಡಿಸಿದನು. 

ಮಹಾಭಾರತದ ಮುಂದಿನ ದಿನಗಳಲ್ಲಿ ಸುದಾಮನ ಬಗ್ಗೆ ಯಾವುದೇ ಉಲ್ಲೇಖಗಳು ಕಂಡು ಬಾರದೇ ಇದ್ದರೂ, ಮಿತ್ರತ್ವಕ್ಕೆ ಬಡವ ಬಲ್ಲಿದ ಎಂಬ ಭಾವ ಇಲ್ಲ ಎಂಬುವುದನ್ನು ಸಾಬೀತು ಮಾಡಿದ್ದೇ ಕೃಷ್ಣ-ಸುದಾಮರ ಗೆಳೆತನ.  

ಚಿತ್ರ ಕೃಪೆ: ಅಂತರ್ಜಾಲ ತಾಣ