ಮಹಾಭಾರತದಲ್ಲಿ ಕಳೆದು ಹೋದ ಪಾತ್ರಗಳು (ಭಾಗ ೧೭) - ಸಾಂಬಾ

ಮಹಾಭಾರತದಲ್ಲಿ ಕಳೆದು ಹೋದ ಪಾತ್ರಗಳು (ಭಾಗ ೧೭) - ಸಾಂಬಾ

ಕಳೆದ ವಾರ ನೀವು ಶ್ರೀಕೃಷ್ಣನ ಪುತ್ರನಾದ ಪ್ರದ್ಯುಮ್ನನ ಬಗ್ಗೆ ತಿಳಿದುಕೊಂಡಿರುವಿರಿ. ಇಂದು ನಾನು ನಿಮಗೆ ಶ್ರೀಕೃಷ್ಣನ ಮತ್ತೊರ್ವ ಪುತ್ರ ಸಾಂಬಾ ಬಗ್ಗೆ ತಿಳಿಸಿಕೊಡಲಿರುವೆ. ಒಂದು ರೀತಿಯಲ್ಲಿ ನೋಡಲು ಹೋದರೆ ಸಾಂಬಾ ಒಬ್ಬ ದುರಂತ ನಾಯಕ ಎಂದೇ ಹೇಳಬಹುದೇನೋ? ಸಂಪೂರ್ಣ ಯಾದವ ಕುಲದ ನಾಶಕ್ಕೆ ಕಾರಣನಾದ ವ್ಯಕ್ತಿ ಈತ. 

ಶಮಂತಕ ಮಣಿಯನ್ನು ಹುಡುಕಿಕೊಂಡು ಹೊರಟ ಕೃಷ್ಣನು ಒಂದು ಗುಹೆಯನ್ನು ಪ್ರವೇಶಿಸುತ್ತಾನೆ. ಅಲ್ಲಿ ಅವನಿಗೆ ಜಾಂಬವಂತನ ಭೇಟಿಯಾಗುತ್ತದೆ. ಆ ಶಮಂತಕ ಮಣಿ ಜಾಂಬವಂತನ ಬಳಿ ಇರುತ್ತದೆ. ಅದನ್ನು ತನಗೆ ಕೊಡು ಎಂದು ಕೃಷ್ಣ ಕೇಳಿದಾಗ ಜಾಂಬವಂತ ನಿರಾಕರಿಸುತ್ತಾನೆ. ಅವರ ನಡುವೆ ಘೋರ ಕಾಳಗ ನಡೆಯುತ್ತದೆ. ಕೊನೆಗೆ ಜಾಂಬವಂತ ಸೋಲನ್ನೊಪ್ಪಿ ಕೃಷ್ಣನಿಗೆ ಶಮಂತಕ ಮಣಿಯ ಜೊತೆ ತನ್ನ ಮಗಳಾದ ಜಾಂಬವತಿಯನ್ನೂ ಮದುವೆ ಮಾಡಿಕೊಡುತ್ತಾನೆ. 

ಜಾಂಬವತಿಯನ್ನು ಕರೆದುಕೊಂಡು ದ್ವಾರಕೆಗೆ ಆಗಮಿಸಿದ ಕೃಷ್ಣ ಆಕೆಯನ್ನು ತನ್ನ ಅಷ್ಟ ರಾಣಿಯರಲ್ಲಿ ಓರ್ವಳನ್ನಾಗಿ ಮಾಡುತ್ತಾಳೆ. ಕೃಷ್ಣನಿಗೆ ೮ ಮಂದಿ ಪಟ್ಟದ ರಾಣಿಯರೂ, ಹದಿನಾರು ಸಾವಿರದ ನೂರು ಮಂದಿ ಗೋಪಿಕೆಯರೂ ಇದ್ದರು ಎಂದು ಪುರಾಣದ ಕಥೆಗಳು ಹೇಳುತ್ತವೆ. (ಕೆಲವು ಕಡೆ ಹದಿನಾರು ಸಾವಿರ ಎಂದು ನಮೂದಾಗಿದ್ದೂ ಇದೆ). ಮದುವೆಯಾಗಿ ಬಹಳ ಸಮಯ ಕಳೆದರೂ ಜಾಂಬವತಿಗೆ ಮಕ್ಕಳಾಗುವುದಿಲ್ಲ. ಈ ದುಃಖವನ್ನು ಕೃಷ್ಣನಲ್ಲಿ ತೋಡಿಕೊಂಡಾಗ, ಅವನು ಶಿವನನ್ನು ಪೂಜೆ ಮಾಡಿದಾಗ ಅವನು ಪ್ರಸನ್ನನಾಗಿ ಅರ್ಧನಾರೀಶ್ವರನ ರೂಪದಲ್ಲಿ ದರ್ಶನ ನೀಡುತ್ತಾನೆ. ಅವನ ಕೃಪೆಯಿಂದ ಜಾಂಬವತಿಗೆ ಮಗು ಜನಿಸುತ್ತದೆ. ಈ ಮಗುವೇ ಸಾಂಬಾ. ಶಿವನ ಆಶೀರ್ವಾದದಿಂದ ಜನಿಸಿದ ಈ ಮಗುವಾದುದರಿಂದ ಹುಟ್ಟುವಾಗಲೇ ಕಾಂತಿಯುತವಾಗಿದ್ದು, ಶ್ರೀಕೃಷ್ಣನನ್ನೇ ಹೋಲುತ್ತಿತ್ತು. ಈ ಮಗುವಿನ ಮುಖದ ತೇಜಸ್ಸು ಮೂರು ಲೋಕಗಳಲ್ಲೂ ಪ್ರಜ್ವಲಿಸುತ್ತಿತ್ತು. ಸಾಂಬಾ ತನ್ನನ್ನೇ ಸಂಪೂರ್ಣವಾಗಿ ಹೋಲುತ್ತಿದ್ದುದರಿಂದ ಕೃಷ್ಣನಿಗೂ ಪ್ರಿಯನಾದ ಪುತ್ರನಾಗಿದ್ದ. 

ಕೃಷ್ಣ ತನ್ನ ಪುತ್ರನನ್ನು ಹಸ್ತಿನಾಪುರಕ್ಕೆ ಕಳುಹಿಸಿ ಶಸ್ತ್ರಾಭ್ಯಾಸ ಮಾಡಿಸುತ್ತಾನೆ. ಅರ್ಜುನ ಅವನಿಗೆ ಬಿಲ್ವಿದ್ಯೆಯನ್ನು ಕಲಿಸುತ್ತಾನೆ. ಸಾಂಬಾನ ದೊಡ್ಡಪ್ಪ ಬಲರಾಮ ಅವನಿಗೆ ಯುದ್ಧದ ಹಲವಾರು ಪಟ್ಟುಗಳನ್ನು ಕಲಿಸುತ್ತಾನೆ. ಹೀಗೆ ಸಾಂಬಾ ಉತ್ತಮ ಯೋಧನಾಗಿ ತಯಾರಾಗುತ್ತಾನೆ. 

ಬಾಲ್ಯದಲ್ಲಿ ಬಹಳ ತುಂಟಾಟ ಮಾಡುತ್ತಿದ್ದ ಸಾಂಬಾ ಈ ಕೃತ್ಯಗಳನ್ನು ತನ್ನ ಯೌವನ ಕಾಲದಲ್ಲೂ ಮುಂದುವರೆಸಿದ್ದ. ಒಮ್ಮೆ ಋಷಿ ಮುನಿಗಳ ಗುಂಪೊಂದು ಅವನ ಊರಿಗೆ ಬಂದಿತ್ತು. ಅವರನ್ನು ಚೇಷ್ಟೆ ಮಾಡುವ ಉದ್ದೇಶದಿಂದ ಅವನ ಗೆಳೆಯರು, ಸಾಂಬಾನಿಗೆ ಹೆಣ್ಣು ಉಡುಗೆ ತೊಡಿಸಿ, ಪುಟ್ಟ ಒನಕೆಯೊಂದನ್ನು ಹೊಟ್ಟೆಗೆ ಕಟ್ಟಿ ಗರ್ಭಿಣಿಯಂತೆ ಮಾಡಿ ಆ ಋಷಿ ಮುನಿಗಳ ಹತ್ತಿರ ಕರೆದುಕೊಂಡು ಹೋಗುತ್ತಾರೆ. ಅವರು ಈ ಯುವತಿಗೆ ಯಾವ ಮಗುವಾಗುತ್ತದೆ ಎಂದು ಆ ಋಷಿಗಳಲ್ಲಿ ಕೇಳುತ್ತಾರೆ. ತಮ್ಮ ದಿವ್ಯ ದೃಷ್ಟಿಯಿಂದ ಅವರ ನೀಚ ಬುದ್ಧಿಯನ್ನು ತಿಳಿದುಕೊಂಡ ಋಷಿ ಹೇಳುತ್ತಾರೆ ‘ ಈ ಹೊಟ್ಟೆಯಲ್ಲಿ ಯಾದವ ಕುಲದ ನಾಶಕ್ಕೆ ಕಾರಣವಾಗುವುದೇ ಹುಟ್ಟುತ್ತದೆ'. ಋಷಿಯ ಈ ಮಾತಿನಿಂದ ಹೆದರಿದ ಸಾಂಬಾ ತನ್ನ ಹೊಟ್ಟೆಗೆ ಕಟ್ಟಿದ್ದ ಒನಕೆಯನ್ನು ಕೆಳಕ್ಕೆ ಬೀಳಿಸುತ್ತನೆ. ಅವರೆಲ್ಲಾ ಓಡಿ ಹೋಗಿ ಉಗ್ರಸೇನ ಮಹಾರಾಜರ ಬಳಿ ತಮ್ಮಿಂದ ನಡೆದ ಅಪರಾಧದ ಬಗ್ಗೆ ತಿಳಿಸುತ್ತಾರೆ. ಈ ವಿಷಯದ ಬಗ್ಗೆ ಚಿಂತಾಕ್ರಾಂತನಾದ ಉಗ್ರಸೇನ ಮಹಾರಾಜ ಒಂದು ಉಪಾಯ ಮಾಡುತ್ತಾನೆ. ಅವನು ಯಾದವರಿಗೆ ಆ ಒನಕೆಯನ್ನು ಚೆನ್ನಾಗಿ ಹುಡಿ ಮಾಡಿ ಸಮುದ್ರಕ್ಕೆ ಎಸೆಯುವಂತೆ ಹೇಳುತ್ತಾನೆ. ಇದರಿಂದ ಮುಂದೆ ಯಾದವ ಕುಲಕ್ಕೆ ಯಾವ ಅಪಾಯವೂ ಬರಲಾರದು ಎಂದು ಆತನ ಯೋಜನೆಯಾಗಿರುತ್ತದೆ. (ಋಷಿಗಳ ಶಾಪ ತಟ್ಟದೇ ಇರುವುದಿಲ್ಲ. ಕೃಷ್ಣನ ಅವಸಾನದ ಕಥೆಯನ್ನು ಮುಂದಿನ ಅಧ್ಯಾಯದಲ್ಲಿ ತಿಳಿಸಲಾಗುವುದು). ಆದರೆ ವಿಧಿ ಲಿಖಿತವನ್ನು ಮೀರಲು ಯಾರಿಂದಲೂ ಸಾಧ್ಯವಿಲ್ಲ. ಅದೇ ಒನಕೆಯ ತುಂಡು ಯಾದವರ ವಿನಾಶಕ್ಕೆ ಕಾರಣವಾಗುತ್ತದೆ.

ಹಸ್ತಿನಾಪುರದ ಯುವರಾಜ ದುರ್ಯೋಧನ ತನ್ನ ಮಗಳಾದ ಲಕ್ಷ್ಮಣಳಿಗೆ ವರವನ್ನು ಹುಡುಕುವುದಕ್ಕಾಗಿ ಸ್ವಯಂವರ ಏರ್ಪಡಿಸಿದ್ದಾನೆ ಎಂಬ ವಿಷಯ ತಿಳಿಯುತ್ತದೆ. ಸಾಂಬಾ ಲಕ್ಷ್ಮಣಳ ಮೇಲೆ ಮೊದಲಿನಿಂದಲೂ ಮಮಕಾರವನ್ನು ಇಟ್ಟುಕೊಂಡಿದ್ದ. ಅವನು ಹಸ್ತಿನಾಪುರಕ್ಕೆ ಹೋಗಿ, ಅಲ್ಲಿಂದ ಲಕ್ಷ್ಮಣಳನ್ನು ಅಪಹರಿಸುತ್ತಾನೆ. ಇದರಿಂದ ರೊಚ್ಚಿಗೆದ್ದ ಕೌರವರು ಸಾಂಬಾನನ್ನು ಹಿಂಬಾಲಿಸುತ್ತಾರೆ. ಅವರು ಸಾಂಬಾನನ್ನು ಯುದ್ಧದಲ್ಲಿ ಸೋಲಿಸಿ ಬಂಧಿಸಿ, ಕಾರಾಗೃಹಕ್ಕೆ ತಳ್ಳುತ್ತಾರೆ. ಈ ವಿಷಯ ತಿಳಿದ ಸಾಂಬಾನ ದೊಡ್ಡಪ್ಪ ಬಲರಾಮ ಸಿಟ್ಟಿಗೆದ್ದು ಹಸ್ತಿನಾಪುರಕ್ಕೆ ತೆರಳುತ್ತಾನೆ. ಅಲ್ಲಿ ಅವನು ತನ್ನ ಆಯುಧವಾದ ನೇಗಿಲಿನಿಂದ ಭೂಮಿಯನ್ನು ಅಗೆದು ಅರಮನೆಯನ್ನು ಧ್ವಂಸ ಮಾಡಲು ಪ್ರಾರಂಭಿಸುತ್ತಾನೆ. ಬಲರಾಮನ ಆಕ್ರೋಶವನ್ನು ಯಾವ ಕೌರವರಿಗೂ ತಡೆಯಲು ಸಾಧ್ಯವಾಗಲಿಲ್ಲ. ಕೊನೆಗೆ ಅವರು ಸಾಂಬಾ ಮತ್ತು ಲಕ್ಷ್ಮಣರನ್ನು ಬಲರಾಮನಿಗೆ ಒಪ್ಪಿಸಿ ತಮ್ಮ ಕೃತ್ಯಕ್ಕೆ ಕ್ಷಮೆಯಾಚಿಸುತ್ತಾರೆ. ಬಲರಾಮನು ಸಾಂಬಾ-ಲಕ್ಷ್ಮಣರನ್ನು ದ್ವಾರಕೆಗೆ ಕರೆತಂದು ಅಲ್ಲಿ ಅದ್ದೂರಿಯಾಗಿ ಮದುವೆ ಮಾಡಿಸುತ್ತಾನೆ. ಶ್ರೀಕೃಷ್ಣ ಹಾಗೂ ಜಾಂಬವತಿಗೆ ಈ ಮದುವೆಯಿಂದ ಬಹಳ ಪ್ರಸನ್ನತೆ ಉಂಟಾಗುತ್ತದೆ.    

ಒಮ್ಮೆ ಗೋಪಿಕಾ ಸ್ತ್ರೀಯರು ಹೊಳೆಯಲ್ಲಿ ಸ್ನಾನ ಮಾಡುತ್ತಿದ್ದರು. ಆ ಸಮಯ ಸಾಂಬಾ ಅಲ್ಲಿಗೆ ಬಂದಾಗ ಅವರೆಲ್ಲಾ ಸಾಂಬಾನ ಸೌಂದರ್ಯಕ್ಕೆ ಮಾರು ಹೋಗುತ್ತಾರೆ. ಅವನೂ ಅವರ ಜೊತೆ ನೀರಿನಲ್ಲಿ ಆಟವಾಡುತ್ತಾನೆ. ಈ ವಿಷಯ ಕೃಷ್ಣನಿಗೆ ತಿಳಿದಾಗ ಅವನಿಗೆ ಬಹಳ ಕೋಪ ಬರುತ್ತದೆ. ಅವನು ನೇರವಾಗಿ ಸಾಂಬಾ ಇದ್ದಲ್ಲಿಗೆ ಬಂದಾಗ ತನ್ನ ಗೋಪಿಕಾ ಸ್ತ್ರೀಯರು ಸಾಂಬಾ ಜೊತೆ ನೀರಾಟವಾಡುತ್ತಿರುವುದನ್ನು ಕಂಡು ಕೆಂಡಾಮಂಡಲವಾಗುತ್ತಾನೆ. ಕೃಷ್ಣ ಸಿಟ್ಟಿನಲ್ಲಿ ಸಾಂಬಾನಿಗೆ ಕುಷ್ಟರೋಗಿಯಾಗು ಎಂದು ಶಾಪ ನೀಡುತ್ತಾನೆ. ಹೀಗೆ ಸಾಂಬಾನಿಗೆ ಅವನ ಸೌಂದರ್ಯವೇ ಶತ್ರುವಾಗಿ ಬಿಡುತ್ತದೆ. ಸಾಂಬಾ ಕುಷ್ಟರೋಗಿಯಾಗಿ ಬದಲಾಗುತ್ತಾನೆ. ಈ ವಿಚಾರ ತಿಳಿದು ಅವನ ತಾಯಿ ಜಾಂಬವತಿ ಕೃಷ್ಣನಲ್ಲಿಗೆ ಬಂದು ತನ್ನ ಪುತ್ರನ ಶಾಪ ವಿಮೋಚನೆ ಮಾಡಿ ಎಂದು ಕೇಳಿಕೊಳ್ಳುತ್ತಾಳೆ. ಶಾಪ ವಿಮೋಚನೆ ಮಾಡುವ ಅಧಿಕಾರ ತನಗಿಲ್ಲ, ಆದರೆ ಅವನ ಶಾಪದಿಂದ ಮುಕ್ತಿ ಸಿಗಲು ಒಂದು ಮಾರ್ಗ ಸೂಚಿಸುತ್ತೇನೆ ಎಂದು ಸಾಂಬಾನನ್ನು ಕಾತಕಿ ಮುನಿಗಳ ಬಳಿ ತೆರಳುವಂತೆ ಸಲಹೆ ನೀಡುತ್ತಾನೆ.

ಕುಷ್ಟರೋಗದಿಂದ ನರಳುತ್ತಾ ಸಾಂಬಾ ಕಾತಕಿ ಮುನಿಗಳ ಹತ್ತಿರ ಬರುತ್ತಾನೆ. ಕಾತಕಿ ಮುನಿಗಳು ಅವನಿಗೆ ಚಂದ್ರಭಾಗ ನದಿಯಲ್ಲಿ ಸ್ನಾನ ಮಾಡಿ ಸೂರ್ಯದೇವನನ್ನು ಪ್ರಾರ್ಥನೆ ಮಾಡುವಂತೆ ಹೇಳುತ್ತಾರೆ. ಅದರಂತೆ ಸಾಂಬಾ ಚಂದ್ರಭಾಗ ನದಿಯಲ್ಲಿ ಸ್ನಾನ ಮಾಡಿ ಸೂರ್ಯದೇವನ ದೇವಾಲಯ ನಿರ್ಮಿಸಿ ಪ್ರಾರ್ಥನೆ ಮಾಡುತ್ತಾನೆ. ಹನ್ನೆರಡು ವರ್ಷಗಳ ಕಠಿಣ ತಪಸ್ಸಿನ ಬಳಿಕ ಸೂರ್ಯದೇವ ಸಾಂಬಾನ ಎದುರು ಪ್ರತ್ಯಕ್ಷನಾಗುತ್ತಾನೆ. ಅವನಿಗೆ ಅದೇ ನದಿಯಲ್ಲಿ ಮುಳುಗಿ ಸ್ನಾನ ಮಾಡಲು ಹೇಳುತ್ತಾನೆ. ಅದೇ ರೀತಿ ಸಾಂಬಾ ಸ್ನಾನ ಮಾಡಿದಾಗ ಅವನ ಕುಷ್ಟರೋಗ ಗುಣವಾಗುತ್ತದೆ. ಅವನು ಮೊದಲಿನಂತೆಯೇ ಸೌಂದರ್ಯವನ್ನು ಹೊಂದುತ್ತಾನೆ. ಅವನು ನಿರ್ಮಿಸಿ ಪೂಜೆ ಸಲ್ಲಿಸಿದ ದೇವಾಲಯ ಈಗಿನ ಪಾಕಿಸ್ತಾನ ದೇಶದಲ್ಲಿರುವ ಮುಲ್ತಾನ್ ಪ್ರಾಂತ್ಯದಲ್ಲಿದೆ. (ನಮ್ಮ ಒರಿಸ್ಸಾದಲ್ಲಿರುವ ಕೋನಾರ್ಕ್ ಸೂರ್ಯ ದೇವಸ್ಥಾನವನ್ನೂ ಸಾಂಬಾನೇ ನಿರ್ಮಾಣ ಮಾಡಿರುವನೆಂದು ಕೆಲವು ಪುರಾಣ ಕಥೆಗಳು ಹೇಳುತ್ತವೆ) ತನ್ನ ಶಾಪ ವಿಮೋಚನೆಯ ಬಳಿಕ ಸಾಂಬಾ ದ್ವಾರಕೆಗೆ ತೆರಳಿ ತನ್ನ ತಂದೆ ಕೃಷ್ಣನ ಬಳಿ ತೆರಳಿ ತನ್ನಿಂದ ಆದ ತಪ್ಪಿಗೆ ಕ್ಷಮೆಯಾಚಿಸುತ್ತಾನೆ. ಕೃಷ್ಣ ಅವನನ್ನು ಕ್ಷಮಿಸುತ್ತಾನೆ.

ಚಿತ್ರ ಕೃಪೆ: ಅಂತರ್ಜಾಲ ತಾಣ