ಮಹಾಭಾರತದಲ್ಲಿ ಪಾಂಡವರನ್ನು ಬದುಕಿಸಿದ ದ್ರೌಪದಿಯ ‘ನಮಸ್ಕಾರ’

ಮಹಾಭಾರತದಲ್ಲಿ ಪಾಂಡವರನ್ನು ಬದುಕಿಸಿದ ದ್ರೌಪದಿಯ ‘ನಮಸ್ಕಾರ’

ಕೊರೋನಾ ಲಾಕ್ ಡೌನ್ ಸಮಯದಲ್ಲಿ ಪ್ರಾರಂಭವಾದ ಪೌರಾಣಿಕ ಧಾರವಾಹಿಗಳಾದ ರಾಮಾಯಣ, ಮಹಾಭಾರತ, ರಾಧಾ ಕೃಷ್ಣ, ಗಣಪತಿಯ ಮಹಿಮೆಗಳು ಇತ್ಯಾದಿ ಇನ್ನೂ ದೂರದರ್ಶನದಲ್ಲಿ ಪ್ರಸಾರವಾಗುತ್ತಲೇ ಇವೆ. ಕೆಲವು ಧಾರಾವಾಹಿಗಳು ಮುಗಿದು ಅವುಗಳ ಉಪಕಥೆಗಳು ಪ್ರಾರಂಭವಾಗಿವೆ. ಹಿಂದಿ ಭಾಷೆಯಿಂದ ಡಬ್ ಆಗಿ ಕನ್ನಡಕ್ಕೆ ಕೆಲವು ಧಾರವಾಹಿಗಳು ಬಂದಿವೆ. ಕಡೆಗಾದರೂ ವೀಕ್ಷಕರು ಪೌರಾಣಿಕ ಧಾರವಾಹಿ ನೋಡಲು ಮನಸ್ಸು ಮಾಡುತ್ತಿದ್ದಾರೆ. ಈ ಧಾರವಾಹಿಗಳನ್ನು ನೋಡಿದ ಬಳಿಕ ಜನರಿಗೆ ನಮ್ಮ ಪುರಾತನ ಪರಂಪರೆಗಳ ಬಗ್ಗೆ, ದೈವ ದೇವರ ಬಗ್ಗೆ ತಿಳಿಯುವ ಆಸಕ್ತಿ ಮೂಡಿದೆ. ನಾನು ‘ಸಂಪದ’ದಲ್ಲಿ ಮಹಾಭಾರತದಲ್ಲಿ ಕಡಿಮೆ ಕಾಣಿಸಿದ, ಅಧಿಕ ಮಹತ್ವ ಇರದ ಪಾತ್ರಗಳ ಬಗ್ಗೆ ೧೫ ಕಂತುಗಳನ್ನು ಬರೆದೆ. ಹಲವಾರು ಮಂದಿ ‘ನಮಗೆ ಈ ವ್ಯಕ್ತಿಯ ಬಗ್ಗೆ ಗೊತ್ತೇ ಇರಲಿಲ್ಲ, ಈ ವಿಷಯ ನಮಗೆ ಗೊತ್ತೇ ಇರಲಿಲ್ಲ.’ ಎಂದೆಲ್ಲಾ ಹೇಳಿದರು. ಮೊನ್ನೆ ನನ್ನ ಮೊಬೈಲ್ ಗೆ ಮಹಾಭಾರತದಲ್ಲಿ ನಡೆದಿದೆ ಎನ್ನಲಾದ ಒಂದು ಸಣ್ಣ ಸಂದೇಶ ಬಂತು. ಹಾಗೆ ಒಂದು ಘಟನೆ ನಡೆದಿರಬಹುದೇ? ಎಂದು ನಾನು ಯೋಚಿಸಿದೆ. ಏನೇ ಆದರೂ ಆ ಘಟನೆಯ ಸಾರ ಚೆನ್ನಾಗಿದೆ. ಒಮ್ಮೆ ನೀವೂ ಓದಿಕೊಂಡು ಬಿಡಿ. 

ಕುರುಕ್ಷೇತ್ರದಲ್ಲಿ ಮಹಾಭಾರತ ಭೀಕರ ಯುದ್ಧ ನಡೆಯುತ್ತಿತ್ತು. ಐದಾರು ದಿನಗಳು ಯುದ್ಧ ನಡೆದರೂ ಕೌರವರ ಅಥವಾ ಪಾಂಡವರ ಕಡೆಯ ಒಬ್ಬನೂ ಅತಿರಥ ಮಹಾರಥರು ಸಾವನ್ನಪ್ಪಿರಲಿಲ್ಲ. ಕೌರವರ ಕಡೆಯಿಂದ ಸ್ವತಃ ಭೀಷ್ಮ ಪಿತಾಮಹರು ಸೇನೆಯ ನಾಯಕತ್ವವನ್ನು ವಹಿಸಿಕೊಂಡು ಯುದ್ಧ ಮಾಡುತ್ತಿದ್ದರು. ಅವರನ್ನು ಯುದ್ಧದಲ್ಲಿ ಜಯಿಸಲುಂಟೇ? ಇಚ್ಚಾ ಮರಣಿಯಾದ ಅವರು ಇನ್ನೂ ಬದುಕಿದ್ದರು. 

ಒಂದು ದಿನ ಯುದ್ಧ ಮುಗಿದ ನಂತರ ದುರ್ಯೋಧನನಿಗೆ ಪಾಂಡವರ ಯಾರೊಬ್ಬ ಅತಿರಥನೂ ಸಾಯುತ್ತಿಲ್ಲ ಎಂಬ ನೋವು ಕಾಡುತ್ತಿತ್ತು. ಅವನು ಭೀಷ್ಮ ಪಿತಾಮಹರನ್ನು ‘ ಇಷ್ಟು ದಿನಗಳಾದರೂ ವಿರೋಧಿ ಬಣದ ಯಾರೊಬ್ಬರೂ ಅತಿರಥರು ಸತ್ತಿಲ್ಲ. ನೀವು ಪಾಂಡವರ ಪಕ್ಷಪಾತಿ’ ಎಂದು ಹಿಯಾಳಿಸುತ್ತಾನೆ.

ಈ ವಿಡಂಬನೆಯಿಂದ ತೀವ್ರವಾಗಿ ನೊಂದುಕೊಳ್ಳುವ  ಭೀಷ್ಮ ಭೀಕರ ಘೋಷಣೆ ಮಾಡುತ್ತಾರೆ."ನಾನು ನಾಳೆ ಪಾಂಡವರನ್ನು ಕೊಲ್ಲುತ್ತೇನೆ" ಎಂದು. ಈ ಘೋಷಣೆಯನ್ನು ಕೇಳಿದ ಪಾಂಡವರ ಶಿಬಿರದಲ್ಲಿ ಆತಂಕ ಹೆಚ್ಚಾಗುತ್ತದೆ.

ಭೀಷ್ಮನ ಸಾಮರ್ಥ್ಯಗಳ ಬಗ್ಗೆ ಎಲ್ಲರಿಗೂ ತಿಳಿದಿತ್ತು. ಆದ್ದರಿಂದ ಪ್ರತಿಯೊಬ್ಬರೂ ಮರುದಿನ ಪಾಂಡವರ ಸಾವು ಶತಸಿದ್ಧ ಎಂದು ತೀರ್ಮಾನಿಸಿದರು. ಆದರೆ ಶ್ರೀಕೃಷ್ಣ ಮಾತ್ರ ದ್ರೌಪದಿಯನ್ನು ಕರೆದು' ನೀನು ನನ್ನ ಜೊತೆ ಭೀಷ್ಮ ಪಿತಾಮಹರ ಶಿಬಿರಕ್ಕೆ ಈಗಲೇ ಬರಬೇಕು. ಹೋಗಿ ಅವರಿಗೆ ನಮಸ್ಕಾರ ಮಾಡಿ ಅವರಿಂದ ಆಶೀರ್ವಾದ ಪಡೆದುಕೊಳ್ಳಬೇಕು' ಎಂದು ಹೇಳುತ್ತಾನೆ. ಕೂಡಲೇ ದ್ರೌಪದಿ ಶ್ರೀಕೃಷ್ಣನೊಡನೆ ನೇರವಾಗಿ ಭೀಷ್ಮ ಪಿತಾಮಹರ ಶಿಬಿರವನ್ನು ತಲುಪಿದರು. ಶ್ರೀಕೃಷ್ಣನು ದ್ರೌಪದಿಯನ್ನು ಒಳಗೆ ಹೋಗಿ ನಾನು ಹೇಳಿದಂತೆಯೇ ಮಾಡು ಎನ್ನುತ್ತಾನೆ.

ಶ್ರೀಕೃಷ್ಣನ ಆಜ್ಞೆಯಂತೆ ದ್ರೌಪದಿಯು ಶಿಬಿರದ ಒಳಗೆ ಹೋಗಿ ಪಿತಾಮಹ ಭೀಷ್ಮನಿಗೆ ನಮಸ್ಕರಿಸಿದಾಗ ಅವರು " ಅಖಂಡ ಸೌಭಾಗ್ಯವತಿ ಭವ" ಎಂದು ಆಶೀರ್ವದಿಸುತ್ತಾರೆ. ಅವರು ನಂತರ ದ್ರೌಪದಿಯನ್ನು ಉದ್ದೇಶಿಸಿ ಕೇಳುತ್ತಾರೆ. " ಮಗಳೇ, ಇಂತಹ ರಾತ್ರಿಯಲ್ಲಿ ನೀನು ಏಕಾಂಗಿಯಾಗಿ ಇಲ್ಲಿಗೆ ಹೇಗೆ ಬಂದಿರುವೆ? ಬಹುಷಃ ಶ್ರೀಕೃಷ್ಣನು ಇಲ್ಲಿಗೆ ಕರೆತಂದಿರುವನೇ”?

ಆಗ ದ್ರೌಪದಿ ಹೀಗೆ ಹೇಳಿದಳು "ಹೌದು ಈಗ ಅವರು ಶಿಬಿರದ ಹೊರಗೆ ನನ್ನನ್ನು ಕಾಯುತ್ತಿದ್ದಾರೆ" . ಇದನ್ನು ಕೇಳಿದ ಕೂಡಲೇ ಭೀಷ್ಮನು ಶಿಬಿರದಿಂದ ಹೊರ ಬರುತ್ತಾರೆ ಮತ್ತು ಕೃಷ್ಣನ ಕಾಣುತ್ತಾರೆ. ಇಬ್ಬರೂ ಪರಸ್ಪರ ನಮಸ್ಕಾರಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. "ನನ್ನ ಒಂದು ವಚನವನ್ನು ನನ್ನ ಇತರ ವಚನಗಳಿಂದ ಕತ್ತರಿಸಲು ಶ್ರೀಕೃಷ್ಣ ಮಾತ್ರ ಈ ರೀತಿಯ ಯೋಜನೆಗಳನ್ನು ಮಾಡಬಹುದು" ಎಂದು ಭೀಷ್ಮರು ನಸುನಗುತ್ತಾ ಹೇಳುತ್ತಾರೆ.

ನಂತರ ಶಿಬಿರದಿಂದ ಹಿಂದಿರುಗುವಾಗ ದಾರಿಯಲ್ಲಿ ಶ್ರೀಕೃಷ್ಣನು ದ್ರೌಪದಿಗೆ ಹೀಗೆ ಹೇಳಿದನು - “ನೀನು ಹೋಗಿ ಅಜ್ಜನಿಗೆ ಗೌರವ ಸಲ್ಲಿಸಿದ್ದರಿಂದ, ನಿನ್ನ ಗಂಡಂದಿರಿಗೆ ಜೀವದಾನ ಸಿಕ್ಕಿತು. ಇದು ನಮಸ್ಕಾರದ ಶಕ್ತಿ” ಎನ್ನುತ್ತಾನೆ.

"ನೀನು ಭೀಷ್ಮ, ಧೃತರಾಷ್ಟ್ರ, ದ್ರೋಣಾಚಾರ್ಯ ಇವರೆಲ್ಲರಿಗೆ ಮೊದಲೇ ನಮಸ್ಕಾರ ಮಾಡುತ್ತಿದ್ದರೆ ಮತ್ತು ದುರ್ಯೋಧನ, ದುಷ್ಯಾಸನ ಇವರ ಪತ್ನಿಯರೂ ಸಹ ಪಾಂಡವರಿಗೆ, ಕುಂತಿಗೆ ನಮಸ್ಕಾರ ಮಾಡುತ್ತಿದ್ದರೆ, ಬಹುಶಃ ಈ ಯುದ್ಧವು ಆಗುತ್ತಿರಲಿಲ್ಲ. ಎಲ್ಲರಿಗೂ ಜೀವದಾನದ ಆಶೀರ್ವಾದ ಸಿಕ್ಕಿ ಬಿಡುತ್ತಿತ್ತು. 

ಆದರೆ, ಪ್ರಸ್ತುತ ನಮ್ಮ ಮನೆಗಳಲ್ಲಿ ಅನೇಕ ಸಮಸ್ಯೆಗಳಿಗೆ ಮೂಲ ಕಾರಣವೆಂದರೆ  "ತಿಳಿದೋ ತಿಳಿಯದೆಯೋ ಆಗಾಗ ಮನೆಯ ಹಿರಿಯರನ್ನು ಕಡೆಗಣಿಸಲಾಗುತ್ತದೆ".

"ಮನೆಯ ಮಕ್ಕಳು ಮತ್ತು ಸೊಸೆಯಂದಿರು ಪ್ರತಿದಿನ ಮನೆಯ ಎಲ್ಲ ಹಿರಿಯರಿಗೆ ನಮಸ್ಕರಿಸಿ ಅವರ ಆಶೀರ್ವಾದವನ್ನು ತೆಗೆದುಕೊಂಡರೆ, ಯಾವುದೇ ಮನೆಯಲ್ಲಿ ಎಂದಿಗೂ ಕ್ಲೇಶಗಳು ಉಂಟಾಗುವುದಿಲ್ಲ" ಹಿರಿಯರು ನೀಡಿದ ಆಶೀರ್ವಾದಗಳು ರಕ್ಷಾಕವಚವಾಗಿ ಕಾರ್ಯನಿರ್ವಹಿಸುತ್ತವೆ, ಯಾವುದೇ "ಆಯುಧ" ಈ ಆಶೀರ್ವಾದವನ್ನು ಭೇದಿಸಲು ಸಾಧ್ಯವಿಲ್ಲ. "ಪ್ರತಿಯೊಬ್ಬರೂ ಈ ಸುಂದರ ಭಾರತೀಯ ಸಂಸ್ಕೃತಿಯನ್ನು ಅಳವಡಿಸಿದರೆ, ನಿಯಮ ಬದ್ಧವಾಗಿ ಬದುಕು ಸಾಗಿಸಿದರೆ ಪ್ರತಿಯೊಂದು ಮನೆ ಸ್ವರ್ಗವಾಗುತ್ತದೆ."

 ಏಕೆಂದರೆ,

         ನಮಸ್ಕಾರ ಪ್ರೀತಿ.

        ನಮಸ್ಕಾರ ಶಿಸ್ತು.

        ನಮಸ್ಕಾರ ಶೀತಲತೆ.

        ನಮಸ್ಕಾರ ಗೌರವವನ್ನು ಕಲಿಸುತ್ತವೆ.

        ನಮಸ್ಕಾರದಿಂದ ಸುವಿಚಾರ ಬರುತ್ತದೆ

        ನಮಸ್ಕಾರ ಕೋಪವನ್ನು ಅಳಿಸುತ್ತದೆ.

        ನಮಸ್ಕಾರ ಅಹಂ ಅನ್ನು ಅಳಿಸುತ್ತದೆ.

        ನಮಸ್ಕಾರ ನಮ್ಮ ಸಂಸ್ಕೃತಿ.

ಅಬ್ಬಬ್ಬಾ ಎಷ್ಟು ಶಕ್ತಿ ಹೊಂದಿದೆ ಒಂದು ನಮಸ್ಕಾರಕ್ಕೆ. ಬನ್ನಿ, ಹಿರಿಯರಿಗೆ ನಮಸ್ಕಾರ ಮಾಡಿ ಆಶೀರ್ವಾದ ತೆಗೆದುಕೊಳ್ಳುವ, ಸಮಾನರಿಗೆ ನಮಸ್ಕಾರದ ಗೌರವ ಕೊಡುವ. ಕಿರಿಯರು ನಮಸ್ಕಾರ ಮಾಡುವಾಗ ಅವರಿಗೆ ಆಶೀರ್ವಾದ ನೀಡುವ. 

ಚಿತ್ರ ಕೃಪೆ: ಅಂತರ್ಜಾಲ ತಾಣ