ಮಹಾಭಾರತದಲ್ಲಿ ಪಾಂಡವರ ವಂಶಾವಳಿಯ ಬಗ್ಗೆ... (ಭಾಗ ೧೫)

ಮಹಾಭಾರತದಲ್ಲಿ ಪಾಂಡವರ ವಂಶಾವಳಿಯ ಬಗ್ಗೆ... (ಭಾಗ ೧೫)

ಮಹಾಭಾರತದ ಸಮಯದಲ್ಲಿ ನಡೆದ ಕುರುಕ್ಷೇತ್ರ ಯುದ್ಧದಲ್ಲಿ ಎಲ್ಲಾ ನೂರು ಮಂದಿ ಕೌರವರು ಮರಣ ಹೊಂದುತ್ತಾರೆ. ಐದು ಜನ ಪಾಂಡವರು ಮಾತ್ರ ಬದುಕಿ ಉಳಿಯುತ್ತಾರೆ. ಯುದ್ಧದ ನಂತರ ಹಸ್ತಿನಾಪುರದ ರಾಜನಾಗಿದ್ದ ಧೃತರಾಷ್ಟ್ರನು ತನ್ನ ಸಿಂಹಾಸನವನ್ನು ತನ್ನ ತಮ್ಮನಾದ ಪಾಂಡುವಿನ ಹಿರಿಯ ಪುತ್ರ ಯುಧಿಷ್ಟಿರನಿಗೆ ವಹಿಸಿ ವಾನಪ್ರಸ್ತಕ್ಕೆ ತೆರಳುತ್ತಾನೆ. ಅವನ ಜೊತೆ ಅವನ ಪತ್ನಿ ಗಾಂಧಾರಿ ಹಾಗೂ ಪಾಂಡುವಿನ ಪತ್ನಿಯಾದ ಕುಂತಿಯೂ ತೆರಳುತ್ತಾರೆ ಎಂದು ಪುರಾಣದ ಕಥೆಗಳು ಹೇಳುತ್ತವೆ.

ಹೀಗೆ ಹಸ್ತಿನಾಪುರದ ರಾಜನಾದ ಯುಧಿಷ್ಟಿರನು ಪಾಂಡವರಲ್ಲಿ ಹಿರಿಯನಾಗಿರುತ್ತಾನೆ. ಮಹಾಭಾರತ ಯುದ್ಧದ ಬಳಿಕ ಐದು ಜನ ಪಾಂಡವರು ಮಾತ್ರ ಉಳಿಯುತ್ತಾರೆ ಎಂದು ಶ್ರೀ ಕೃಷ್ಣನಿಗೆ ಮೊದಲೇ ತಿಳಿದಿತ್ತಂತೆ. ಅದನ್ನು ಅವನು ಮೊದಲೇ ದ್ರೌಪದಿಗೆ ಹೇಳಿರುತ್ತಾನೆ. ದ್ರೌಪದಿಯು ತನ್ನ ಎಲ್ಲಾ ಮಕ್ಕಳು ಹಾಗೂ ಇತರ ಪಾಂಡವರ ಮಕ್ಕಳೂ ಸಾಯುತ್ತಾರೆ ಎಂದು ತಿಳಿದು ತುಂಬಾ ನೊಂದು ಕೊಳ್ಳುತ್ತಾಳೆ. ಆಗ ಪಾಂಡವರ ಕುಲವನ್ನು ಬೆಳೆಸಲು ಓರ್ವ ಪುತ್ರನನ್ನು ಬದುಕಿಸುತ್ತೇನೆ ಎಂದು ಶ್ರೀಕೃಷ್ಣನು ಮಾತು ಕೊಡುತ್ತಾನೆ. ಅರ್ಜುನ-ಸುಭದ್ರರ ಮಗನಾದ ಅಭಿಮನ್ಯುವು ಕುರುಕ್ಷೇತ್ರ ಯುದ್ಧದಲ್ಲಿ ವೀರ ಮರಣವನ್ನಪ್ಪುತ್ತಾನೆ. ದ್ರೌಪದಿಯ ಐದೂ ಜನ ಮಕ್ಕಳು (ಇವರು ಉಪ ಪಾಂಡವರೆಂದು ಖ್ಯಾತಿ) ನಿದ್ರಿಸಿರುವಾಗ ಅವರೇ ಪಾಂಡವರೆಂದು ತಿಳಿದು ಅಶ್ವತ್ಥಾಮನು ಕೊಲ್ಲುತ್ತಾನೆ. ಹೀಗೆ ಎಲ್ಲರೂ ಸತ್ತರೂ ಅಭಿಮನ್ಯುವಿನ ಸಂತಾನ ಉತ್ತರೆಯ ಗರ್ಭದಲ್ಲಿ ಬೆಳೆಯುತ್ತಿತ್ತು. ಬ್ರಹ್ಮಾಸ್ತ್ರ ಬಳಸಿ ಅಶ್ವತ್ಥಾಮನು ಆ ಭ್ರೂಣವನ್ನು ಕೊಲ್ಲಲು ಹವಣಿಸುತ್ತಾನೆ. ಆದರೆ ಶ್ರೀ ಕೃಷ್ಣನು ತಾನು ದ್ರೌಪದಿಗೆ ನೀಡಿದ ಮಾತಿನಂತೆ ಆ ಭ್ರೂಣವನ್ನು ಬ್ರಹ್ಮಾಸ್ತ್ರದ ಏಟಿನಿಂದ ಪಾರು ಮಾಡುತ್ತಾನೆ. ಹೀಗೆ ಹತ್ತಾರು ಮಕ್ಕಳು ಪಾಂಡವರಿಗೆ ಇದ್ದರೂ ಕೊನೆಗೆ ತಮ್ಮ ವಂಶವನ್ನು ಉಳಿಸಲು ಉಳಿಯುವ ಅಭಿಮನ್ಯು-ಉತ್ತರೆಯ ಮಗನಾದ ಪರೀಕ್ಷಿತನು ಪಾಂಡವರ ನಂತರದ ದಿನಗಳಲ್ಲಿ ಹಸ್ತಿನಾಪುರವನ್ನು ಆಳುತ್ತಾನೆ. 

ಪಾಂಡವರ ವಂಶಾವಳಿಯನ್ನು ನಾವೊಮ್ಮೆ ಗಮನಿಸುವ. ದ್ರೌಪದಿ ಹೊರಟು ಪಡಿಸಿ ಪಾಂಡವರಿಗೆ ಎಷ್ಟು ಮಂದಿ ಪತ್ನಿಯರು ಇದ್ದರು? ಮಕ್ಕಳು ಎಷ್ಟು ಮಂದಿ? ಎಲ್ಲವನ್ನೂ ಒಂದೊಂದಾಗಿ ನೋಡುತ್ತಾ ಹೋಗುವ. ಭೀಷ್ಮನು ತನ್ನ ತಂದೆ ಶಂತನುಗೆ ನೀಡಿದ ವಚನದಂತೆ ಅಖಂಡ ಬ್ರಹ್ಮಚಾರಿಯಾಗಿ ಉಳಿದು ಬಿಡುತ್ತಾನೆ. ಅವನ ತಾಯಿ ಗಂಗೆ. ಶಂತನು ಮತ್ಸ್ಯಕನ್ಯೆ ಸತ್ಯವತಿಯನ್ನು ಪ್ರೇಮಿಸಿ ಮದುವೆಯಾಗುತ್ತಾನೆ. ಅವರ ಪುತ್ರ ವಿಚಿತ್ರ ವೀರ್ಯ. ಅವನ ಪತ್ನಿಯರು ಅಂಬಾಲಿಕೆ, ಅಂಬಿಕೆ. ಅವರ ಮಕ್ಕಳು ಧೃತರಾಷ್ಟ್ರ ಹಾಗೂ ಪಾಂಡು. ಧೃತರಾಷ್ಟ್ರ ಹುಟ್ಟಾ ಕುರುಡನಾಗಿದ್ದುದರಿಂದ ಪಾಂಡು ಸಣ್ಣವನಾದರೂ ರಾಜನಾಗುತ್ತಾನೆ. ಧೃತರಾಷ್ಟ್ರನ ಪತ್ನಿ ಗಾಂಧಾರ ದೇಶದ ರಾಜಕುಮಾರಿ ಗಾಂಧಾರಿ. ಪಾಂಡುವಿನ ಪತ್ನಿಯರು ಕುಂತಿ ಹಾಗೂ ಮಾದ್ರಿ. 

ಕುಂತಿಯು ತನಗೆ ದುರ್ವಾಸ ಮುನಿಯು ನೀಡಿದ ವರವನ್ನು ಪರೀಕ್ಷಿಸಲು ಹೋಗಿ ಮದುವೆಯ ಮೊದಲೇ ಸೂರ್ಯದೇವನಿಂದ ತಾಯಿಯಾಗುತ್ತಾಳೆ. ಆ ಮಗುವನ್ನು ಅವಳು ತ್ಯಜಿಸುತ್ತಾಳೆ. ಅವನು ಮುಂದೆ ಬೆಳೆದು ಕರ್ಣನಾಗುತ್ತಾನೆ. ಪಾಂಡು ಜೊತೆ ಮದುವೆಯ ನಂತರ ಯಮ ಧರ್ಮರಾಯನನ್ನು ಸ್ಮರಿಸಿ ಕುಂತಿಯು ಯುದಿಷ್ಟಿರನನ್ನು ಮಗನಾಗಿ ಪಡೆಯುತ್ತಾಳೆ. ನಂತರ ವಾಯುದೇವನನ್ನು ಸ್ಮರಿಸಿ ಭೀಮನನ್ನು ಪಡೆಯುತ್ತಾಳೆ, ದೇವರಾಜ ಇಂದ್ರನನ್ನು ಸ್ಮರಿಸಿ ಅರ್ಜುನನನ್ನು ಪಡೆಯುತ್ತಾಳೆ. ಆ ಮಂತ್ರವನ್ನು ತನ್ನ ತಂಗಿ ಮಾದ್ರಿಗೆ ಹೇಳಿ ಕೊಟ್ಟು, ಮಾದ್ರಿಯು ಅಶ್ವಿನಿ ದೇವತೆಗಳನ್ನು ಸ್ಮರಿಸಿ ನಕುಲ-ಸಹದೇವರೆಂಬ ಅವಳಿ ಮಕ್ಕಳನ್ನು ಪಡೆಯುತ್ತಾಳೆ. ಹೀಗೆ ಐದು ಮಂದಿ ಮಕ್ಕಳು ಹುಟ್ಟುತ್ತಾರೆ. ಮುಂದಿನ ದಿನಗಳಲ್ಲಿ ಅರ್ಜುನ ದ್ರೌಪದಿಯನ್ನು ಸ್ವಯಂವರದಲ್ಲಿ ಗೆದ್ದರೂ, ತಾಯಿಯ ಮಾತಿಗೆ ಸಿಲುಕಿ ತನ್ನ ಎಲ್ಲಾ ಸಹೋದರರ ಜೊತೆ ಹಂಚಿಕೊಳ್ಳಬೇಕಾಗುತ್ತದೆ. ಹಾಗೆ ದ್ರೌಪದಿ ಐವರೂ ಪಾಂಡವರ ಪತ್ನಿಯಾಗಿ ಪಾಂಚಾಲಿ ಎಂಬ ಹೆಸರು ಪಡೆಯುತ್ತಾಳೆ.

ಹಿರಿಯ ಪಾಂಡವ ಯುದಿಷ್ಟಿರನಿಂದ ದ್ರೌಪದಿಗೆ ಪ್ರತಿವಿಂಧ್ಯ ಎಂಬ ಮಗನೂ, ಭೀಮನಿಂದ ಸೂತಸೋಮ, ಅರ್ಜುನನಿಂದ ಶ್ರುತಕರ್ಮ, ನಕುಲನಿಂದ ಶತನಿಕ ಹಾಗೂ ಸಹದೇವನಿಂದ ಶ್ರುತಸೇನ ಎಂಬ ಹೆಸರಿನ ಗಂಡು ಮಕ್ಕಳನ್ನು ಹೊಂದುತ್ತಾಳೆ. ಕೆಲವೊಂದು ಜಾನಪದ ಕಥೆಗಳಲ್ಲಿ ದ್ರೌಪದಿಗೆ ಕೇವಲ ಗಂಡು ಮಕ್ಕಳಷ್ಟೇ ಅಲ್ಲ ಇಬ್ಬರು ಹೆಣ್ಣು ಮಕ್ಕಳೂ ಇದ್ದರಂತೆ. ದ್ರೌಪದಿಗೆ ಯುದಿಷ್ಟಿರನಿಂದ ಸುತನು ಮತ್ತು ಅರ್ಜುನನಿಂದ ಪ್ರಗತಿ ಎಂಬ ಹೆಣ್ಣು ಮಕ್ಕಳು ಜನಿಸುತ್ತಾರೆ. ಕುರುಕ್ಷೇತ್ರ ಯುದ್ಧದ ಬಳಿಕ ಸುತನು ಸ್ವರಭಾನು ಎಂಬ ಯುವಕನನ್ನು ಮದುವೆಯಾಗುತ್ತಾಳೆ. ಸ್ವರಭಾನು ಕೃಷ್ಣ ಹಾಗೂ ಸತ್ಯಭಾಮೆಯ ಮಗನಾಗಿರುತ್ತಾನೆ. ಪ್ರಗತಿ ಓರ್ವ ಋಷಿಯನ್ನು ಮದುವೆಯಾಗುತ್ತಾಳೆ. ಐದು ಮಂದಿ ಪಾಂಡವರಿಗೆ ದ್ರೌಪದಿಯ ಜೊತೆ ಇರಲು ಸಿಗುವ ಅವಧಿ ತಲಾ ಒಂದು ವರ್ಷ ಮಾತ್ರ. ಹೀಗಾಗಿ ಓರ್ವ ಪಾಂಡವನಿಗೆ ನಾಲ್ಕು ವರ್ಷಗಳಿಗೆ ಒಮ್ಮೆ ಮಾತ್ರ ದ್ರೌಪದಿಯ ಸಾಂಗತ್ಯ ಸಿಗುತ್ತಿತ್ತು. ಆ ಕಾರಣದಿಂದ ಎಲ್ಲಾ ಪಾಂಡವರಿಗೆ ಬೇರೆ ಉಪ ಪತ್ನಿಯರು ಇದ್ದರು.

ಯುದಿಷ್ಟಿರ ದೇವಿಕ ಎಂಬ ಹುಡುಗಿಯನ್ನು ವಿವಾಹವಾಗಿದ್ದ. ದೇವಿಕಳು ಗೋವಾಸನ ಎಂಬ ರಾಜನ ಮಗಳಾಗಿದ್ದಳು. ಇವರಿಗೆ ಯೋದ್ಧೇಯ ಎಂಬ ಪುತ್ರನಿದ್ದ. ಭೀಮಸೇನನು ಕಾಶಿ ರಾಜನ ಮಗಳಾದ ವಲಂಧರಳನ್ನು ವಿವಾಹವಾಗಿದ್ದ. ಅವಳಿಂದ ಭೀಮನಿಗೆ ಸರ್ವಗ ಎಂಬ ಪುತ್ರನ ಜನನವಾಗುತ್ತದೆ. ಭೀಮ ದ್ರೌಪದಿಯನ್ನು ಮದುವೆಯಾಗುವುದಕ್ಕೆ ಮೊದಲೇ ರಾಕ್ಷಸ ರಾಜ ಹಿಡಿಂಬಾಸುರನ ತಂಗಿಯಾದ ಹಿಡಿಂಬೆಯನ್ನು ಮದುವೆಯಾಗಿರುತ್ತಾನೆ. ಹಿಡಿಂಬೆಯಿಂದ ಭೀಮನಿಗೆ ಘಟೋತ್ಕಜ ಎಂಬ ಮಗ ಜನಿಸಿದ್ದ. ಒರಿಸ್ಸಾದ ಕೆಲವು ಜಾನಪದ ಕಥೆಗಳಲ್ಲಿ ಭೀಮನಿಗೆ ನಾಗ ಕನ್ಯೆಯ ಜೊತೆಗೂ ಮದುವೆಯಾಗಿತ್ತು ಎಂದು ಬರೆಯಲಾಗಿದೆ.

ಅರ್ಜುನನ ಮದುವೆಯ ಕಥೆಗೆ ಬಂದರೆ ಅವನಿಗೆ ದ್ರೌಪದಿ ಹೊರತು ಪಡಿಸಿ ಮೂವರು ಪತ್ನಿಯರು ಇದ್ದರು. ನಾಗಲೋಕದ ರಾಜ ಕೌರವ್ಯನ ಮಗಳಾದ ಉಲೂಪಿ, ಮಣಿಪುರದ ರಾಜಕುಮಾರಿ ಚಿತ್ರಾಂಗದಾ ಹಾಗೂ ಕೃಷ್ಣ ಬಲರಾಮರ ತಂಗಿ ಸುಭದ್ರ ಈ ಮೂವರನ್ನು ಅರ್ಜುನ ಮದುವೆಯಾಗಿದ್ದ. ಉಲೂಪಿಯಿಂದ ಇರಾವಾನ್, ಚಿತ್ರಾಂಗದಾಳಿಂದ ಭಬ್ರುವಾಹನ ಹಾಗೂ ಸುಭದ್ರಳಿಂದ ಅಭಿಮನ್ಯು ಎಂಬ ಗಂಡು ಮಕ್ಕಳು ಜನಿಸಿದ್ದರು. 

ನಕುಲ ಛೇದಿ ದೇಶದ ರಾಜ ದೃಷ್ಟಕೇತುವಿನ ತಂಗಿ ರಾಜಕುಮಾರಿ ಕರೇನುಮತಿಯನ್ನು ಮದುವೆಯಾಗಿದ್ದ. ಕರೇನುಮತಿಯಿಂದ ನಕುಲನಿಗೆ ನಿರಮಿತ್ರ ಎಂಬ ಪುತ್ರನಿದ್ದ. ಸಹದೇವನು ಮಾದ್ರ ದೇಶದ ರಾಜಕುಮಾರಿಯಾದ ವಿಜಯಳನ್ನು ಮದುವೆಯಾಗಿ ಸುಹೋತ್ರ ಎಂಬ ಪುತ್ರ ಸಂತಾನವನ್ನು ಪಡೆದಿದ್ದ.  ಹೀಗೆ ಎಲ್ಲಾ ಪಾಂಡವರೂ ತಮ್ಮ ಪತ್ನಿಯಾದ ದ್ರೌಪದಿ ಜೊತೆಗೆ ಉಪ ಪತ್ನಿಯರನ್ನೂ ಹೊಂದಿದ್ದರು. ಆದರೆ ಎಲ್ಲಾ ಪಾಂಡವರ ಉಪ ಪತ್ನಿಯರು ಅವರವರ ತವರು ಮನೆಯಲ್ಲೇ ಇರುತ್ತಿದ್ದರು. ಏಕೆಂದರೆ ದ್ರೌಪದಿಯು ತನ್ನ ಅರಮನೆಯ ಅಂತಃಪುರವನ್ನು ಸವತಿಯರ ಜೊತೆ ಹಂಚಿಕೊಳ್ಳಲು ತಯಾರಿರಲಿಲ್ಲ. ಆದರೆ ಸುಭದ್ರ ಹೇಗೋ ದ್ರೌಪದಿಯ ಅಂತಃಪುರದೊಳಗೆ ಪ್ರವೇಶ ಪಡೆದುಕೊಳ್ಳುತ್ತಾಳೆ. ಶ್ರೀಕೃಷ್ಣನ ಮಾಯಾಜಾಲವೇ ಇರಬಹುದೇನೋ?

ಪಾಂಡವರಿಗೆ ಇಷ್ಟು ಮಂದಿ ಮಕ್ಕಳು ಇದ್ದೂ ಯುದ್ಧದ ನಂತರ ಕಡೆಗೆ ಉಳಿಯುವುದು ಓರ್ವ ಮೊಮ್ಮಗ ಮಾತ್ರ. ಅದೂ ಶ್ರೀಕೃಷ್ಣನ ಕೃಪೆಯಿಂದ. 

ಪೂರಕ ಮಾಹಿತಿ: ತಮಿಳುನಾಡು ರಾಜ್ಯದ ಕೆಲವು ಜಾನಪದ ಕಥೆಗಳಲ್ಲಿ ಅರ್ಜುನನಿಗೆ ಇನ್ನೂ ಕೆಲವು ಮಂದಿ ಉಪ ಪತ್ನಿಯರು ಇದ್ದರು ಎಂಬ ಉಲ್ಲೇಖವಿದೆ. ಅದರೆ ಅವರಿಂದ ಅರ್ಜುನನಿಗೆ ಸಂತಾನವಿತ್ತೋ ಎಂಬುದರ ಬಗ್ಗೆ ಯಾವುದೇ ದಾಖಲೆಗಳು ಇಲ್ಲ.

ಚಿತ್ರ: ಅಂತರ್ಜಾಲ ತಾಣ