ಮಹಾಭಾರತದಲ್ಲಿ ಮರೆತುಹೋದ ಪಾತ್ರಗಳು (ಭಾಗ-೧೨) ಉಡುಪಿ ರಾಜ

ಮಹಾಭಾರತದಲ್ಲಿ ಮರೆತುಹೋದ ಪಾತ್ರಗಳು (ಭಾಗ-೧೨) ಉಡುಪಿ ರಾಜ

ಪಾಂಡವರು ಮತ್ತು ಕೌರವರ ನಡುವೆ ಹದಿನೆಂಟು ದಿನಗಳ ಕಾಲ ಭೀಕರ ಕುರುಕ್ಷೇತ್ರ ಯುದ್ಧ ನಡೆದ ಸಂಗತಿ ನಿಮಗೆ ಗೊತ್ತೇ ಇದೆ. ಲಕ್ಷಾಂತರ ಸೈನಿಕರು, ಅತಿರಥ ಮಹಾರಥ ರಾಜರು ಎಲ್ಲಾ ಈ ಯುದ್ಧದಲ್ಲಿ ಭಾಗವಹಿಸಿದ್ದರು. ವಿಧರ್ಭದ ರಾಜ ರುಕ್ಮಿ ಹಾಗೂ ಕೃಷ್ಣನ ಅಣ್ಣ ಬಲರಾಮ ಮಾತ್ರ ಈ ಯುದ್ಧದಲ್ಲಿ ಭಾಗಿಯಾಗಿರಲಿಲ್ಲ. ಶ್ರೀಕೃಷ್ಣ ತಾನು ಶಸ್ತ್ರವನ್ನು ಹಿಡಿಯುವುದಿಲ್ಲ ಎಂಬ ಶರತ್ತಿನ ಮೇಲೆ ಯುದ್ಧದಲ್ಲಿ ಪಾಲ್ಗೊಂಡಿದ್ದರು. ಆದರೆ ಇವರಿಗೆಲ್ಲಾ ಯುದ್ಧದ ಸಮಯದಲ್ಲಿ ಊಟೋಪಚಾರ ಯಾರು ಮಾಡುತ್ತಿದ್ದರು ನಿಮಗೆ ಗೊತ್ತೇ? ಆ ಸಮಯ ಊಟದ ನಿರ್ವಹಣೆ ಹೊತ್ತಿದ್ದವರು ಉಡುಪಿಯ ರಾಜ. ಇವರ ಬಗ್ಗೆ ಮಾಹಿತಿ ಇರುವುದು ಕಮ್ಮಿ. ಆದರೆ ಕೆಲವು ಮಹಾಭಾರತದ ಪ್ರಕಾರಗಳಲ್ಲಿ ಉಡುಪಿ ರಾಜರು ತಯಾರಿಸಿದ ಭೋಜನದ ಬಗ್ಗೆ ಮಾಹಿತಿಗಳಿವೆ. ಬನ್ನಿ, ಅವುಗಳನ್ನೊಮ್ಮೆ ಗಮನಿಸುವ.

ಮಹಾಭಾರತ ಯುದ್ಧದ ಪ್ರಾರಂಭಕ್ಕೆ ಮುನ್ನ ಇಡೀ ವಿಶ್ವದ ರಾಜ-ಮಹಾರಾಜರು ತಮ್ಮ ಸೈನ್ಯದೊಡನೆ ಕುರುಕ್ಷೇತ್ರಕ್ಕೆ ಬಂದು ಕೌರವರು ಅಥವಾ ಪಾಂಡವರ ಪಕ್ಷಕ್ಕೆ ಸೇರುತ್ತಿದ್ದರು. ಕೌರವರ ಸೇನೆಗೆ ಶ್ರೀಕೃಷ್ಣನ ಯಾದವ ಸೈನ್ಯದ ಬಲವೂ ಇತ್ತು. ಕೌರವರ ಬಳಿ ೧೧ ಅಕ್ಷೋಹಿಣಿ ಸೈನ್ಯವೂ, ಪಾಂಡವರ ಬಳಿ ೭ ಅಕ್ಷೋಹಿಣಿ ಸೈನ್ಯವೂ ಇತ್ತು, ಅಂದರೆ ಸುಮಾರು ಐವತ್ತು ಲಕ್ಷಕ್ಕೂ ಮಿಕ್ಕಿದ ಸೈನಿಕರು ಇದ್ದರು. ದಕ್ಷಿಣ ಭಾರತದ ಉಡುಪಿ ಅಥವಾ ಉಡಿಪಿ (ಈಗಿನ ಕರ್ನಾಟಕದ ಉಡುಪಿ ಜಿಲ್ಲೆ) ಎಂಬ ದೇಶದ ರಾಜನೂ ಕುರುಕ್ಷೇತ್ರ ಪ್ರದೇಶಕ್ಕೆ ಬರುತ್ತಾನೆ. ಆದರೆ ಅವನಿಗೆ ಯಾವುದೇ ಪಕ್ಷದಿಂದ ಯುದ್ಧ ಮಾಡುವ ಮನಸ್ಸಾಗುವುದಿಲ್ಲ. ಅವನು ಶ್ರೀಕೃಷ್ಣನನ್ನು ಭೇಟಿಯಾಗುತ್ತಾನೆ. ‘ಪ್ರಭುವೇ, ನಾನು ಈ ರಣರಂಗಕ್ಕೆ ಬಂದು ನೋಡುವಾಗ ಪರಸ್ಪರ ಸಹೋದರರ ದಾಯಾದಿ ಕಲಹದಿಂದ ಕಾದಾಡಿ ಸಾಯುವುದನ್ನು ನನ್ನಿಂದ ನೋಡಲಾಗದು. ನೀವು ಅಪ್ಪಣೆ ನೀಡಿದರೆ ಎರಡೂ ಬದಿಯವರಿಗೆಲ್ಲಾ ನಾನು ಮತ್ತು ನನ್ನ ಸೈನಿಕರು ಅಡುಗೆಯನ್ನು ಮಾಡಿ ಬಡಿಸುತ್ತಾರೆ. ನೀವು ಅನುಮತಿ ನೀಡಿ' ಎಂದು ಕೋರಿಕೊಳ್ಳುತ್ತಾನೆ. ಶ್ರೀಕೃಷ್ಣನೂ ಆಲೋಚನೆ ಮಾಡುತ್ತಾನೆ. ಇಷ್ಟೊಂದು ಸೈನಿಕರಿಗೆ ಸರಿಯಾಗಿ ಊಟೋಪಚಾರ ನೀಡಲು ಶಕ್ತಿ ಇರುವುದು ಭೀಮಸೇನನಿಗೆ ಮಾತ್ರ. ಆದರೆ ಅವನು ಯುದ್ಧದಲ್ಲಿ ಪಾಲ್ಗೊಳ್ಳುವುದು ಅನಿವಾರ್ಯ. ಆದುದರಿಂದ ಅಡುಗೆಯಲ್ಲಿ ಅವನಷ್ಟೇ ಸಾಮರ್ಥ್ಯವಿರುವ ಉಡುಪಿ ರಾಜ ಎರಡೂ ಕಡೆಯವರಿಗೆ ಊಟವನ್ನು ತಯಾರಿಸಲಿ ಎಂದು ಅನುಮತಿಯನ್ನು ನೀಡುತ್ತಾನೆ. ಇದಕ್ಕೆ ಕೌರವರೂ, ಪಾಂಡವರೂ ಒಪ್ಪುತ್ತಾರೆ.

    ಹೀಗೆ ಯುದ್ಧದಲ್ಲಿ ಭಾಗವಹಿಸುವ ಎಲ್ಲಾ ಸೈನಿಕರಿಗೆ ಭೋಜನದ ವ್ಯವಸ್ಥೆ ಮಾಡುವ ಹೊಣೆ ಹೊತ್ತುಕೊಳ್ಳುತ್ತಾರೆ. ಉಡುಪಿಯ ಮಹಾರಾಜ ಯುದ್ಧ ನಡೆದ ಹದಿನೆಂಟು ದಿನವೂ ಒಂದೇ ಒಂದು ಅನ್ನದ ಅಗಳು ವ್ಯರ್ಥವಾಗದಂತೆ ಭೋಜನದ ವ್ಯವಸ್ಥೆ ಮಾಡುತ್ತಾರೆ. ಮೊದಲ ದಿನ ಯುದ್ಧದಲ್ಲಿ ಭಾಗವಹಿಸಿದ ಯೋಧರ ಸಂಖ್ಯೆ ನಂತರದ ದಿನಗಳಲ್ಲಿ ಕಮ್ಮಿಯಾಗುತ್ತಾ ಬರುತ್ತಿತ್ತು, ಆದರೂ ಉಡುಪಿ ರಾಜನು ಮಾಡಿದ ಅಡುಗೆಯು ಅಧಿಕವಾಗಿ ವ್ಯರ್ಥವಾಗುತ್ತಿರಲಿಲ್ಲ ಹಾಗೆಯೇ ಯಾರಿಗೂ ಕಮ್ಮಿಯೂ ಆಗುತ್ತಿರಲಿಲ್ಲ. ಇದರ ಬಗ್ಗೆ ಎಲ್ಲಾ ಸೈನಿಕರೂ ತಲೆಕೆಡಿಸಿಕೊಂಡರೂ ಅವರಿಗೆ ಪರಿಹಾರ ಸಿಗಲಿಲ್ಲ. ಅಷ್ಟೊಂದು ಸಂಖ್ಯೆಯ ಸೈನಿಕರಿಗೆ ಭೋಜನ ವ್ಯವಸ್ಥೆ ಮಾಡುವುದೇ ಒಂದು ದೊಡ್ಡ ಸವಾಲು ಅದರಲ್ಲೂ ಒಂದು ದಾನ್ನದ ಅಗಳೂ ವ್ಯರ್ಥವಾಗದಂತೆ ಅಡುಗೆ ಮಾಡುವ ಚಮತ್ಕಾರ ಯಾವುದು ಎಂಬುವುದು ಎಲ್ಲರ ಪ್ರಶ್ನೆ ಆಗಿತ್ತು.

೧೮ ದಿನಗಳ ಯುದ್ಧ ಮುಗಿಯಿತು. ಪಾಂಡವರು ಜಯಗಳಿಸಿ ಯುದಿಷ್ಟಿರನಿಗೆ ಹಸ್ತಿನಾಪುರದ ಮಹಾರಾಜನಾಗಿ ಪಟ್ಟಾಭಿಷೇಕ ಮಾಡುವ ದಿನ ಬಂದೇ ಬಿಟ್ಟಿತು. ಈ ಭೋಜನದ ವ್ಯವಸ್ಥೆಯ ಬಗ್ಗೆ ಧರ್ಮರಾಯನಿಗೂ ತಿಳಿದುಕೊಳ್ಳುವ ಕುತೂಹಲವಿತ್ತು. ಅವನು ಉಡುಪಿಯ ರಾಜನನ್ನು ಬರಹೇಳಿ ಕೇಳುತ್ತಾನೆ. ‘ರಾಜರೇ, ನಿಮ್ಮ ಭೋಜನದ ಅದ್ಭುತ ವ್ಯವಸ್ಥೆಯಿಂದ ಯುದ್ಧದ ಎಲ್ಲಾ ದಿನಗಳಲ್ಲೂ ಯಾರಿಗೂ ಊಟದ ಸಮಸ್ಯೆಯಾಗಲಿಲ್ಲ. ಆದರೆ ನನ್ನ ಮನದಲ್ಲಿ ಒಂದು ಸಂದೇಹವಿದೆ. ಅದನ್ನು ಪರಿಹರಿಸಿ. ನೀವು ಪ್ರತೀ ದಿನ ಎಷ್ಟು ಮಂದಿಗೆ ಅಡುಗೆಯನ್ನು ಮಾಡಬೇಕೆಂದು ಹೇಗೆ ನಿರ್ಧಾರ ಮಾಡುತ್ತಿದ್ದೀರಿ? ಏಕೆಂದರೆ ನೀವು ಮಾಡಿದ ಅಡುಗೆಯು ಒಂದು ಚೂರೂ ವ್ಯರ್ಥವಾಗುತ್ತಿರಲಿಲ್ಲ. ಅದಕ್ಕೆ ಕಾರಣವೇನು?’   

ಅದಕ್ಕೆ ಉಡುಪಿ ರಾಜನು ವಿನಮ್ರದಿಂದ ನಮಿಸಿ ಹೇಳುತ್ತಾನೆ,’ ಮಹಾರಾಜ, ನೀವು ಯುದ್ಧದಲ್ಲಿ ಗೆಲ್ಲಲು ಯಾರು ಸಹಾಯ ಮಾಡಿದರೋ ಅವರೇ ನನಗೂ ಈ ವಿಚಾರದಲ್ಲಿ ಮಾರ್ಗದರ್ಶನ ಮಾಡಿದರು. ಶ್ರೀಕೃಷ್ಣನು ನಿಮಗೆಲ್ಲಾ ಯುದ್ಧದಲ್ಲಿ ಮಾರ್ಗದರ್ಶನ ನೀಡಿ ಹೇಗೆ ಗೆಲ್ಲಿಸಿದರೋ ಹಾಗೆಯೇ ನನಗೂ ಸಹಾಯ ಮಾಡಿದರು. ನಾನು ಪ್ರತೀ ದಿನ ರಾತ್ರಿ ಕೃಷ್ಣನ ಬಳಿ ನೆಲಕಡಲೆ ಬೀಜಗಳನ್ನು ಬೇಯಿಸಿ ಕಳಿಸಿಕೊಡುತ್ತಿದ್ದೆ. ಶ್ರೀಕೃಷ್ಣನಿಗೆ ಅವು ಬಹಳ ಪ್ರಿಯ. ಕೃಷ್ಣನು ಕಡಲೇ ಬೀಜಗಳನ್ನು ಬಿಡಿಸಿ ತಿಂದ ಬಳಿಕ ಬಿಸಾಕಿದ ಸಿಪ್ಪೆಯನ್ನು ನಾನು ಲೆಕ್ಕ ಮಾಡಿ ನೋಡುತ್ತಿದ್ದೆ. ಅವುಗಳ ಸಂಖ್ಯೆ ಎಷ್ಟು ಇರುತ್ತಿತ್ತೋ ಅದರ ಸಹಸ್ರ ಸಂಖ್ಯೆಯಲ್ಲಿ ಮರುದಿನದ ಯುದ್ಧದಲ್ಲಿ ಸೈನಿಕರು ಸಾಯುತ್ತಾರೆ ಎಂದು ನನಗೆ ತಿಳಿಯುತ್ತಿತ್ತು. ಉದಾಹರಣೆಗೆ ಕೃಷ್ಣನು ೫೦ ಕಡಲೇಕಾಯಿಗಳನ್ನು ತಿಂದರೆ ಅದರ ಸಾವಿರ ಪಟ್ಟು ಅಂದರೆ ಐವತ್ತು ಸಾವಿರ ಸೈನಿಕರು ಮರುದಿನ ಕಡಿಮೆಯಾಗುತ್ತಾರೆ ಎಂದು ತಿಳಿದು ನಾನು ಭೋಜನದ ಏರ್ಪಾಡು ಮಾಡುತ್ತಿದ್ದೆ. ಆ ಕಾರಣದಿಂದಲೇ ನಾನು ಮಾಡಿದ ಅಡುಗೆ ವ್ಯರ್ಥವಾಗುತ್ತಿರಲಿಲ್ಲ. ಕೃಷ್ಣ ಪರಮಾತ್ಮನ ಕೃಪೆಯಿಂದಲೇ ನಾನು ಈ ಕಾರ್ಯದಲ್ಲಿ ಸಫಲನಾದೆ.' ಎನ್ನುತ್ತಾನೆ. ಈ ಉತ್ತರದಿಂದ ಯುದಿಷ್ಟಿರನಿಗೆ ತೃಪ್ತಿಯಾಗುತ್ತದೆ. ಅವನು ಉಡುಪಿ ರಾಜನನ್ನು ಸನ್ಮಾನಿಸಿ ಬೀಳ್ಕೊಳ್ಳುತ್ತಾನೆ.

ಅಂದಿನ ಉಡಿಪಿ ಅಥವಾ ಉಡುಪಿಯೇ ಇಂದಿನ ನಮ್ಮ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಶ್ರೀಕೃಷ್ಣನ ದೇವಸ್ಥಾನಕ್ಕೆ ಖ್ಯಾತಿ ಪಡೆದ ಉಡುಪಿ ಎಂದು ನಂಬುತ್ತಾರೆ. ಆ ಕಾರಣದಿಂದಲೇ ವಿಶ್ವದಾದ್ಯಂತ ಹೋಟೇಲ್ ಉದ್ದಿಮೆಯಲ್ಲಿ ‘ಉಡುಪಿ ಹೋಟೇಲ್' ಖ್ಯಾತಿ ಪಡೆದಿದೆಯಂತೆ. ಉಡುಪಿ ಹೋಟೇಲ್ ನ ಖಾದ್ಯಗಳು ರುಚಿಕರವಾಗಿರುತ್ತದೆ. ಉಡುಪಿ ಮಠದಲ್ಲಿ ಈ ಕಥೆಯನ್ನು ಹೇಳಲಾಗುತ್ತದೆಯಂತೆ. ಉಡುಪಿ ರಾಜನೇ ಶ್ರೀಕೃಷ್ಣ ಮಠವನ್ನು ಕಟ್ಟಲು ಪ್ರಾರಂಭಿಸಿದರು ನಂತರ ಮಧ್ವಾಚಾರ್ಯರು ಅದನ್ನು ಪೂರ್ಣಗೊಳಿಸಿ ಶ್ರೀಕೃಷ್ಣನ ವಿಗ್ರಹವನ್ನು ಪ್ರತಿಷ್ಟಾಪಿಸಿದರೆಂದು ಕೆಲವು ಕತೆಗಳು ಹೇಳುತ್ತವೆ. ಏನೇ ಇರಲಿ ಉಡುಪಿ ರಾಜನ ಭೋಜನದ ಖ್ಯಾತಿ ಈಗಲೂ ಉಡುಪಿ ಹೋಟೇಲ್ ಗಳಿಂದ ಪಸರಿಸುತ್ತಿದೆ ಎನ್ನುವುದಂತೂ ಸತ್ಯ.

ಚಿತ್ರ ಕೃಪೆ: ಅಂತರ್ಜಾಲದಿಂದ