ಮಹಾಭಾರತದ ಅಪರೂಪದ ಕಥೆಗಳು (ಭಾಗ ೧೮) - ಕೃಷ್ಣನ ತಲೆನೋವು

ಮಹಾಭಾರತದ ಅಪರೂಪದ ಕಥೆಗಳು (ಭಾಗ ೧೮) - ಕೃಷ್ಣನ ತಲೆನೋವು

ಒಮ್ಮೆ ಶ್ರೀಕೃಷ್ಣನಿಗೆ ಜೋರಾದ ತಲೆ ನೋವು ಕಾಡಿತು. ದ್ವಾರಕೆಯ ಹಲವಾರು ವೈದ್ಯರು, ಪಂಡಿತರು ಬಂದು ಕೃಷ್ಣನಿಗೆ ಮದ್ದು ನೀಡಿದರು. ಕೆಲವರು ಹಣೆಗೆ, ತಲೆಗೆ ವಿಶೇಷ ಲೇಪ, ಎಣ್ಣೆಗಳನ್ನು ಹಚ್ಚಿ ನೋಡಿದರು. ಆದರೆ ಯಾವ ಮದ್ದಿನಿಂದಲೂ ಕೃಷ್ಣನ ತಲೆನೋವು ವಾಸಿಯಾಗಲಿಲ್ಲ. ಅದೇ ಸಮಯ ದ್ವಾರಕೆಗೆ ನಾರದ ಮುನಿಗಳು ಬಂದರು. ಅವರಿಗೂ ಶ್ರೀಕೃಷ್ಣನ ತಲೆನೋವಿನ ಸಂಗತಿ ತಿಳಿದು ಬಹಳ ಅಚ್ಚರಿಯಾಯಿತು. ಸರ್ವ ಲೋಕದ ತಲೆನೋವನ್ನು ನಿವಾರಿಸುವ ಪ್ರಭುವಿಗೇ ತಲೆನೋವು ಬಂದರೆ ಇನ್ನು ಲೋಕದ ಕಥೆ, ಗೋವಿಂದ ಎಂದು ಅಂದು ಕೊಂಡ ನಾರದರು ಕೃಷ್ಣನ ಬಳಿ ಬಂದರು.

ಕೃಷ್ಣ ನಾರದರಲ್ಲಿ, ‘ಮುನಿಗಳೇ ತಾವು ನನ್ನ ತಲೆನೋವು ಹೋಗಲಾಡಿಸಲು ನನಗೊಂದು ಸಹಾಯ ಮಾಡಬಹುದೇ?’ ಎಂದನು. ನಾರದರು ಖುಷಿಯಿಂದ ಒಪ್ಪಿಕೊಂಡರು. ‘ನೀವು ದ್ವಾರಕೆಯಲ್ಲಿರುವ ನನ್ನ ಭಕ್ತರ ಹತ್ತಿರ ಹೋಗಿ, ಅವರ ಪಾದದ ಧೂಳಿಯನ್ನು ಕೇಳಿ ತೆಗೆದುಕೊಂಡು ಬನ್ನಿ, ಆ ಧೂಳಿಯನ್ನು ನನ್ನ ಹಣೆಗೆ ಹಚ್ಚಿದರೆ ನನ್ನ ತಲೆನೋವು ನಿವಾರಣೆಯಾಗಲಿದೆ' ಎಂದು ನುಡಿದನು.

ಕೃಷ್ಣನ ಮಾತಿನಂತೆ ನಾರದರು ಭಕ್ತರ ಬಳಿಗೆ ಬಂದು ‘ಮಾನ್ಯ ಭಕ್ತಾದಿಗಳೇ, ನಿಮ್ಮ ಪ್ರಭುವಿಗೆ ತಲೆನೋವು ಬಂದ ಸಂಗತಿ ನಿಮಗೆ ತಿಳಿದೇ ಇದೆ. ಅದರ ನಿವಾರಣೆಗಾಗಿ ಇರುವ ಏಕೈಕ ಉಪಾಯವೆಂದರೆ ನೀವು ನಿಮ್ಮ ಪಾದ ಧೂಳಿಯನ್ನು ನೀಡುವುದು. ಅದನ್ನು ಹಣೆಗೆ ಹಚ್ಚಿಕೊಂಡರೆ ಕೃಷ್ಣನ ತಲೆನೋವು ನಿವಾರಣೆಯಾಗುತ್ತದೆ.’ ಎಂದರು.

ಅಲ್ಲಿ ಸೇರಿದ ಭಕ್ತರು ಮುಖ ಮುಖ ನೋಡಿಕೊಂಡರು. ‘ಭಗವಂತನ ಹಣೆಗೆ ನಮ್ಮ ಪಾದ ಧೂಳಿಯನ್ನು ಹಚ್ಚಿದರೆ ನಮಗೆ ಘೋರ ನರಕ ಪ್ರಾಪ್ತವಾಗುತ್ತದೆ. ನಾವು ಈ ಪಾಪ ಕಾರ್ಯವನ್ನು ಮಾಡಲಾರೆವು' ಎಂದು ಅವರೆಲ್ಲಾ ನಿರ್ಧಾರ ಮಾಡಿ ನಾರದರ ಬಳಿ ಈ ವಿಷಯವನ್ನು ತಿಳಿಸಿದರು. ನಾರದರು ಬರಿಗೈಯಲ್ಲಿ ಹಿಂದಿರುಗಿದನ್ನು ಗಮನಿಸಿದ ಕೃಷ್ಣನಿಗೆ ಏನು ನಡೆದಿರಬಹುದು ಎಂಬ ಅರಿವಾಯಿತು.

‘ನಾರದರೇ, ಬೇಸರ ಮಾಡಬೇಡಿ. ನೀವು ಈಗ ಮಥುರೆಗೆ ಹೋಗಿ ಅಲ್ಲಿರುವ ಗೋಪಿಕಾ ಸ್ತ್ರೀಯರ ಬಳಿ ಪಾದ ಧೂಳಿಯನ್ನು ಕೇಳಿ. ಅವರೂ ನನ್ನ ಭಕ್ತರೇ, ಅವರು ನಿಮಗೆ ಪಾದ ಧೂಳಿಯನ್ನು ಕೊಡಬಹುದು’ ಎಂದನು ಕೃಷ್ಣ. ನಾರದರು ಮಥುರೆಗೆ ಬಂದರು. ಅಲ್ಲಿದ್ದ ಗೋಪಿಕಾ ಸ್ತ್ರೀಯರ ಬಳಿ ಕೃಷ್ಣನ ತಲೆನೋವಿನ ಬಗ್ಗೆ ತಿಳಿಸಿ, ಅದಕ್ಕಾಗಿ ನಿಮ್ಮ ಪಾದಧೂಳಿಯ ಅಗತ್ಯವಿದೆ ಎಂಬ ವಿಷಯ ತಿಳಿಸಿದರು. ಎಲ್ಲಾ ಗೋಪಿಕಾ ಸ್ತ್ರೀಯರು ಸಂತೋಷದಿಂದ ತಮ್ಮ ಪಾದಧೂಳಿಯನ್ನು ನೀಡಲು ತಯಾರಾದರು. 

ನಾರದರು ಅವರಿಗೆ ‘ ನೀವು ಪಾದಧೂಳಿಯನ್ನು ನೀಡುವುದು ಸಂತಸದ ವಿಷಯವೇ, ಆದರೆ ಈ ಪಾದಧೂಳಿ ಪ್ರಭುಗಳ ಹಣೆಯನ್ನು ಮುಟ್ಟುತ್ತಿದ್ದಂತೆ ನೀವೆಲ್ಲಾ ನರಕಕ್ಕೆ ಹೋಗುವಿರಲ್ಲಾ? ಈ ಬಗ್ಗೆ ನಿಮಗೆ ಭಯವಿಲ್ಲವೇ?’ ಎಂದರು. 

ನಾರದರ ಮಾತಿಗೆ ಗೋಪಿಕಾ ಸ್ತ್ರೀಯರು ನಗುತ್ತಾ ‘ಮುನಿಗಳೇ, ನಮಗೆ ಕೃಷ್ಣನ ಮೇಲಿರುವ ಪ್ರೀತಿ, ಭಕ್ತಿ ಅಚಲ. ಆದುದರಿಂದ ಅವನಿಗಾಗಿ ನಾವು ಯಾವ ನರಕಕ್ಕೂ ಹೋಗಲು ಸಿದ್ಧ. ನೀವು ಅವಶ್ಯವಾಗಿ ನಮ್ಮ ಪಾದಧೂಳಿಯನ್ನು ತೆಗೆದುಕೊಂಡು ಹೋಗಿ' ಎಂದರು.

ಇದನ್ನು ಕೇಳಿ ಅಚ್ಚರಿಯಿಂದ ನಾರದರು ಪಾದಧೂಳಿಯನ್ನು ತೆಗೆದುಕೊಂಡು ಬಂದರು. ನಾರದರ ಬರವಿಕೆಯನ್ನೇ ಕಾದಿದ್ದ ಕೃಷ್ಣ, ಗೋಪಿಕಾ ಸ್ತ್ರೀಯರು ನೀಡಿದ ಪಾದದ ಧೂಳಿಯನ್ನು ಹಣೆಗೆ ಹಚ್ಚಿಕೊಂಡನು. ತಲೆನೋವು ಕೂಡಲೇ ಮಂಗಮಾಯವಾಯಿತು. ನಡೆದ ವಿಷಯವನ್ನು ನಾರದರು ಕೃಷ್ಣನಿಗೆ ಹೇಳಿದಾಗ ‘ಮುನಿಗಳೇ, ಭಕ್ತಿ ಹಾಗೂ ಅಚಲ ಪ್ರೀತಿ ಯಾರೊಬ್ಬರ ಸೊತ್ತೂ ಅಲ್ಲ. ಇಲ್ಲಿಯ ಭಕ್ತರದ್ದು ಕೇವಲ ತೋರಿಕೆಯ ಪ್ರೀತಿ ಮಾತ್ರ. ಅದೇ ಗೋಪಿಕಾ ಸ್ತ್ರೀಯರ ಬಗ್ಗೆ ಜನರಲ್ಲಿ ಸದಭಿಪ್ರಾಯ ಇಲ್ಲವಾದರೂ ಅವರ ಪ್ರೀತಿ ನಿಷ್ಕಳಂಕವಾದದ್ದು. ಅವರು ತಮ್ಮ ಪ್ರಭುವಿಗಾಗಿ ಯಾವ ತ್ಯಾಗವನ್ನೂ ಮಾಡಲು ಸಿದ್ಧರಿದ್ದಾರೆ ಎಂದು ಈ ಘಟನೆಯಿಂದ ತಿಳಿಯಿತಲ್ವಾ?’

ಕೃಷ್ಣನ ಮಾತು ಕೇಳಿದ ನಾರದ ‘ಹೌದು ಮಹಾಪ್ರಭು, ನಿಮ್ಮ ಲೀಲೆ ಅಪಾರ. ಆದರೆ ಈ ಪಾಪಕ್ಕಾಗಿ ಗೋಪಿಕೆಯರು ನರಕಕ್ಕೆ ಹೋಗಲಾರರೇ?’

ಕೃಷ್ಣ ಮುಗುಳ್ನಗುತ್ತಾ ಹೇಳಿದ ‘ ನನ್ನ ತಲೆನೋವು ವಾಸಿ ಮಾಡಿದ ಗೋಪಿಕಾ ಸ್ತ್ರೀಯರು ಹೇಗೆ ಪಾಪವನ್ನು ಹೊಂದುತ್ತಾರೆ. ಇದು ಪುಣ್ಯದ ಕೆಲಸವೇ ಆಯಿತಲ್ವಾ? ಅವರಿಗೆ ಖಂಡಿತವಾಗಿಯೂ ಸ್ವರ್ಗ ಪ್ರಾಪ್ತಿಯಾಗುತ್ತದೆ' ಎಂದರು. ಕೃಷ್ಣನ ಉತ್ತರದಿಂದ ತೃಪ್ತರಾದ ನಾರದರು ‘ನಾರಾಯಣ ನಿನ್ನ ಮಹಿಮೆ ಅಪಾರ' ಎನ್ನುತ್ತಾ ಅಲ್ಲಿಂದ ತೆರಳಿದರು.

ಚಿತ್ರ ಕೃಪೆ: ಅಂತರ್ಜಾಲ ತಾಣ