ಮಹಾಭಾರತದ ಅಪರೂಪದ ಪ್ರಸಂಗ (೨೦) - ಭಾನುಮತಿಯ ನುಡಿಗಳು

ಮಹಾಭಾರತದ ಅಪರೂಪದ ಪ್ರಸಂಗ (೨೦) - ಭಾನುಮತಿಯ ನುಡಿಗಳು

ಈಗಾಗಲೇ ನೀವು ಮಹಾಭಾರತದಲ್ಲಿ ಅಪರೂಪವಾಗಿ ಕಂಡು ಬರುವ ಪಾತ್ರವಾದ ದುರ್ಯೋಧನನ ಪತ್ನಿ ಭಾನುಮತಿ ಬಗ್ಗೆ 'ಸಂಪದ' ದಲಿ ಓದಿ ತಿಳಿದಿರುವಿರಿ. ಭಾನುಮತಿ ದುರ್ಯೋಧನನ ಏಕಮಾತ್ರ ಪತ್ನಿಯಾಗಿದ್ದಳು. ನಮಗೆ ಮಹಾಭಾರತದಲ್ಲಿ ಕಂಡಬರುವ ಬಹುತೇಕ ಪುರುಷ ಪಾತ್ರಗಳಿಗೆ ಉಪಪತ್ನಿಯರಿದ್ದಾರೆ. ಆದರೆ ದುರ್ಯೋಧನ ಮಾತ್ರ ಏಕ ಪತ್ನೀವೃತಸ್ಥನಾಗಿದ್ದ. ನಾನು ಈಗ ಹೇಳುವ ಪ್ರಸಂಗ ಕುರುಕ್ಷೇತ್ರ ಯುದ್ಧದ ನಂತರ ನಡೆದದ್ದು. ಇದು ಶ್ರೀಕೃಷ್ಣ ಮತ್ತು ಭಾನುಮತಿಯರ ನಡುವಿನ ಸಂವಾದವೆಂದರೂ ಸರಿಯೇ..

೧೮ ದಿನಗಳ ಕುರುಕ್ಷೇತ್ರ ಯುದ್ಧ ನಡೆದು ಲಕ್ಷಾಂತರ ಮಂದಿ ಸಾವನ್ನಪ್ಪುತ್ತಾರೆ. ಸತ್ತವರ ಚಿತೆಗಳು ಯಮುನಾ ನದಿಯ ತಟದಲ್ಲಿ ಉರಿಯುತ್ತಿವೆ. ಸತ್ತವರ ಸಂಬಂಧಿಕರ ಗೋಳು ಮುಗಿಯಲು ಕೇಳುತ್ತಿಲ್ಲ. ಪಾಂಡವರು ಜಯ ಗಳಿಸಿದರೂ ಅವರ ಕಡೆಯಿಂದ ಉಳಿದದ್ದು ಪಂಚ ಪಾಂಡವರು ಮತ್ತು ಶ್ರೀಕೃಷ್ಣನ ಕೃಪೆಯಿಂದ ಉತ್ತರೆಯ ಮಗ ಪರೀಕ್ಷಿತ ಮಾತ್ರ. ಅವರ ಕಡೆಯಲ್ಲೂ ವಿಧವಾ ಸ್ತ್ರೀಯರ ಗೋಳು ಕೇಳತೀರದ್ದಾಗಿತ್ತು. 

ಶ್ರೀಕೃಷ್ಣ ಈ ಉರಿಯುತ್ತಿರುವ ಚಿತೆಗಳಿಗೆ ಅಂತಿಮ ನಮನ ಸಲ್ಲಿಸುತ್ತಿರುವಾಗ ದೂರದಲ್ಲಿ ಓರ್ವ ಸ್ತ್ರೀ ನದಿಯಲ್ಲಿ ಸ್ನಾನ ಮಾಡಿ ಹೊರಬರುತ್ತಿರುವುದನ್ನು ಗಮನಿಸುತ್ತಾನೆ. ಮಧ್ಯ ವಯಸ್ಕ ಸ್ತ್ರೀಯಂತೆ ಕಾಣುತ್ತಾಳೆ, ಶ್ರೀಮಂತ ಮನೆಯವಳು ಎನ್ನುವುದಕ್ಕೆ ಅವಳು ಧರಿಸಿದ ವಸ್ತ್ರಗಳು, ಅವಳಿಗಾಗಿ ಕಾಯುತ್ತಿದ್ದ ಸಖಿಯರು, ಪಲ್ಲಕ್ಕಿ ಹೇಳುತ್ತಿವೆ. ಶ್ರೀಕೃಷ್ಣನಿಗೆ ತಕ್ಷಣ ಆ ಸ್ತ್ರೀ ಯಾರು ಎಂದು ಗೊತ್ತಾಗಲಿಲ್ಲ.

ಈ ಯುದ್ಧ ಎಂಬುವುದು ಎಷ್ಟೊಂದು ಸ್ತ್ರೀಯರ ಬಾಳು ನರಕ ಮಾಡಿ ಬಿಟ್ಟಿತು ಎಂದು ಯೋಚನೆ ಮಾಡುವಷ್ಟರಲ್ಲಿ ಆಕೆ ಶ್ರೀಕೃಷ್ಣನ ಗುರುತು ಹಿಡಿಯುತ್ತಾಳೆ. ಆಕೆ ಶ್ರೀಕೃಷ್ಣನ ಸಮೀಪ ಬಂದಾಗ ಆತನಿಗೂ ಅವಳ ಗುರುತು ಸಿಗುತ್ತದೆ. ಅವಳು ಮತ್ಯಾರೂ ಅಲ್ಲ, ದುರ್ಯೋಧನನ ಪತ್ನಿ ಭಾನುಮತಿ. ಯುದ್ಧದಲ್ಲಿ ಅಗಲಿದ ತನ್ನ ಗಂಡ ಹಾಗೂ ಮಗನಿಗೆ ಅಂತಿಮ ನಮನ ಸಲ್ಲಿಸುವ ಯೋಜನೆಯಿಂದ ಅಲ್ಲಿಗೆ ಬಂದಿದ್ದಳಾಕೆ.

ಭಾನುಮತಿಯನ್ನು ನೋಡಿದ ಕೃಷ್ಣನು ಸ್ವಲ್ಪ ವಿಚಲಿತನಾಗುತ್ತಾನೆ. ಆಕೆಯ ಪತಿ ಹಾಗೂ ಸಮಸ್ತ ಕೌರವ ಕುಲದ ನಾಶಕ್ಕೆ ಪರೋಕ್ಷವಾಗಿ ತಾನೇ ಕಾರಣನಾದೆನಲ್ಲಾ ಎಂದು ಅವನ ಮನಸ್ಸು ಹೇಳುತ್ತದೆ. ಆದರೆ ಭಾನುಮತಿ ಅದನ್ನು ಯಾವುದನ್ನೂ ಗಮನಕ್ಕೆ ತೆಗೆದುಕೊಳ್ಳುವುದಿಲ್ಲ. ನೇರವಾಗಿ ಬಂದು ಶ್ರೀಕೃಷ್ಣನ ಕಾಲುಗಳಿಗೆ ನಮಸ್ಕಾರ ಮಾಡುತ್ತಾಳೆ. ಕೃಷ್ಣನಿಗೆ ಏನು ಆಶೀರ್ವಾದ ಮಾಡುವುದೆಂದು ತಿಳಿಯದೆ ಗೊಂದಲವಾಗುತ್ತದೆ. ಆಕೆಯ ಸೌಭಾಗ್ಯ, ಮಾಂಗಲ್ಯವನ್ನೆಲ್ಲಾ ಕಿತ್ತುಕೊಂಡ ಬಳಿಕ ‘ಸೌಭಾಗ್ಯವತಿ ಭವಃ’ ಎಂದು ಆಶೀರ್ವಾದ ಮಾಡಲು ಸಾಧ್ಯವೇ? ಅದೇ ಗೊಂದಲದಲ್ಲೇ ಇರುವಾಗ ಆಕೆಯೇ ಮಾತನಾಡಲು ಶುರು ಮಾಡುತ್ತಾಳೆ.

“ಭಗವಂತಾ, ಏನು ಯೋಚನೆ ಮಾಡುತ್ತಿರುವೆ? ನಾನು ಯಾರೆಂದು ತಿಳಿಯದೇ? ನಾನು ಭಾನುಮತಿ, ದುರ್ಯೋಧನನ ಪತ್ನಿ. ನಿನಗೆ ತಿಳಿಯದ್ದು ಏನಿದೆ? ಆದರೂ ಪರಿಚಯ ಹೇಳುವುದು ನನ್ನ ಕರ್ತವ್ಯವಲ್ಲವೇ? “

“ನಿನ್ನ ಗುರುತು ಸಿಕ್ಕಿತು ಭಾನುಮತಿ, ನಿನ್ನಿಂದ ನಾನು ಈ ರೀತಿಯ ಗೌರವವನ್ನು ನಿರೀಕ್ಷೆ ಮಾಡಿಕೊಂಡಿರಲಿಲ್ಲ. ನಿನ್ನ ಪತಿಯನ್ನು ಕೊಂದದಕ್ಕಾಗಿ ನೀನು ನಿನ್ನ ಅತ್ತೆಯಂತೆ (ಗಾಂಧಾರಿ) ನನ್ನನ್ನು ಶಪಿಸುವೆ ಎಂದು ಭಾವಿಸಿದ್ದೆ ನಾನು. ಆದರೆ ನನ್ನ ಎಲ್ಲಾ ಅನಿಸಿಕೆಗಳನ್ನು ನೀನು ಸುಳ್ಳು ಮಾಡಿರುವೆ “ ಅಂದ ಶ್ರೀಕೃಷ್ಣ.

ಆ ಸಮಯ ನಡೆದ ಶ್ರೀಕೃಷ್ಣ ಮತ್ತು ಭಾನುಮತಿಯ ಸಂವಾದ ಬಹಳ ಮಹತ್ತರವಾದದ್ದು. ಅಧರ್ಮದ ಮೇಲೆ ಕೊನೆಯಲ್ಲಿ ಧರ್ಮವೇ ಜಯ ಸಾಧಿಸುತ್ತದೆ ಎಂಬ ಮಾತನ್ನು ಭಾನುಮತಿ ತಿಳಿದುಕೊಂಡಿರುತ್ತಾಳೆ. ಅದನ್ನೇ ಅವಳು ತನ್ನ ಮಾತಿನಲ್ಲಿ ವ್ಯಕ್ತ ಪಡಿಸುತ್ತಾಳೆ. ಒಮ್ಮೆ ಅವರಿಬ್ಬರ ಸಂವಾದವನ್ನು ಓದಿ…

ಭಾನುಮತಿ: “ನಿಮ್ಮನ್ನು ಅರಿಯದವರಾರು ಪ್ರಭು, ನಾನು ಮಾಡಿದ ಕರ್ಮವನ್ನು ನಾನು ಅನುಭವಿಸಲೇ ಬೇಕಲ್ಲವೇ? ಆಗ ಬಹುದಾದ ಯುದ್ಧವನ್ನು ನಿಲ್ಲಿಸಲು ತಾವು ಎಷ್ಟು ಪ್ರಯತ್ನ ಪಟ್ಟಿರುವಿರೆಂದು ನನಗೆ ತಿಳಿದಿದೆ. ನನ್ನ ಅತ್ತೆ ನಿಮಗೆ ನೀಡಿದ ಶಾಪಕ್ಕಾಗಿ, ನಾನು ನಿಮ್ಮಲ್ಲಿ ಕ್ಷಮೆಯಾಚಿಸುವೆ. ಅದು ಅವರ ಪುತ್ರಶೋಕದ ಪರಮಾವಧಿಯಾಗಿರಬಹುದು ಅಲ್ಲವೇ?”

ಶ್ರೀಕೃಷ್ಣ: "ನಿನ್ನ ಪ್ರಜ್ಞಾವಂತಿಕೆಗೆ ಮೆಚ್ಚಿದೆ ದೇವಿ, ಕೌರವರ ಯುವರಾಜ ದುರ್ಯೋಧನನ ಪತ್ನಿ ಇಷ್ಟೊಂದು ವಿವೇಕಿಯಾಗಿರಬಹುದು ಎಂದು ನಾನು ಅಂದುಕೊಂಡಿರಲಿಲ್ಲ. ನಿನ್ನಿಂದ ನಾನು ಇಷ್ಟೊಂದು ತೂಕದ ಮಾತುಗಳನ್ನು ನಿರೀಕ್ಷೆ ಮಾಡಿಕೊಂಡಿರಲಿಲ್ಲ. ನಿನ್ನ ವಿವೇಕದ ಬಗ್ಗೆ ನನಗೆ ಮೊದಲೇ ತಿಳಿದಿರುತ್ತಿದ್ದರೆ ನಾನು ನಿನ್ನ ಮೂಲಕವೇ ಸಂಧಾನ ನಡೆಸಿ, ದುರ್ಯೋಧನ ಯುದ್ಧ ಮಾಡದಂತೆ ತಡೆಯುತ್ತಿದ್ದೆ. ನೀನು ಹೇಳಿದ್ದರೆ ದುರ್ಯೋಧನ ಕೇಳುತ್ತಿದ್ದನೋ ಏನೋ?”

ಭಾನುಮತಿ:  (ದುಃಖಿಸುತ್ತಾ) “ಭಗವಂತಾ, ನಿನಗೆ ತಿಳಿಯದ್ದು ಏನಿದೆ? ರಾಮಾಯಣದಲ್ಲಿ ಮಂಡೋದರಿಯ ಮಾತಿನಿಂದ ರಾವಣನೂ, ತಾರೆಯ ಮಾತಿನಿಂದ ವಾಲಿಯೂ ಯಾರೂ ತಮ್ಮ ತಮ್ಮ ಪತ್ನಿಯ ಮಾತುಗಳನ್ನು ಆಲಿಸಲಿಲ್ಲ. ಒಂದು ವೇಳೆ ಕೇಳಿದ್ದರೆ ಆಗ ರಾಮಾಯಣದ ಯುದ್ಧವೂ ನಡೆಯುತ್ತಿರಲಿಲ್ಲ, ರಾವಣ ಸೀತೆಯನ್ನು ಅಪಹರಿಸುತ್ತಲೂ ಇರಲಿಲ್ಲ. ಎಲ್ಲವೂ ಅವರವರ ಕರ್ಮ ಫಲಗಳು ಅಷ್ಟೇ."

ಶ್ರೀಕೃಷ್ಣ: “ಆದರೂ ನೀನು ಒಮ್ಮೆಯಾದರೂ ನಿನ್ನ ಪತಿಗೆ ಬುದ್ಧಿ ಹೇಳಿರುವೆಯಾ?”

ಭಾನುಮತಿ: “ನಾನು ಹೇಳಲಿಲ್ಲ ಎಂದು ನಿನಗೆ ಹೇಳಿದವರು ಯಾರು? ಯುದ್ಧ ಭೂಮಿಯಲ್ಲಿ ನಡೆಯುತ್ತಿದ್ದ ವಿಷಯಗಳನ್ನು ಮಾತ್ರ ಸಂಜಯ ನನ್ನ ಮಾವನಾದ ಧೃತರಾಷ್ಟ್ರನಿಗೆ ತಿಳಿಸಿದ. ಆತ ಓರ್ವ ಸ್ತ್ರೀಯ ಮನದ ಮಾತುಗಳನ್ನು ತಿಳಿಸಲು ಹೋಗಲೇ ಇಲ್ಲ, ಈಗ ಏನು ಹೇಳಿದರೇನು ಫಲವಿದೆ?”

ಶ್ರೀಕೃಷ್ಣ: “ದೇವೀ, ನಿನ್ನ ವಿವೇಕ ಪೂರ್ಣ ಮಾತುಗಳು ನನ್ನ ಮನಮುಟ್ಟಿವೆ. ಆದರೂ ಒಂದು ಸಂಶಯ. ನೀನ್ಯಾಕೆ ನಿನ್ನ ಪತಿಯ ಶರೀರದ ಜೊತೆ ಸಹಗಮನ ಮಾಡಿಕೊಳ್ಳಲಿಲ್ಲ?”

ಭಾನುಮತಿ: “ಬದುಕಿರುವಾಗ ಅವರ ದಾರಿಯಲ್ಲಿ ಹೋಗದ ನಾನು ಸತ್ತ ಬಳಿಕ ಯಾಕೆ ಹೋಗಲಿ?  ಹೋಗಿ ನಾನು ಸಾಧಿಸುವುದಾದರೂ ಏನು? ಈ ಪ್ರಪಂಚದಲ್ಲಿ ಸ್ತ್ರೀಯರ ಬುದ್ಧಿವಾದವನ್ನು ಯಾರು ಕೇಳಿದ್ದಾರೆ? ನಾನು ಈಗ ವಾನಪ್ರಸ್ಥಾಶ್ರಮಕ್ಕೆ ಹೊರಟು ನಿಂತಿರುವೆ “

ಶ್ರೀಕೃಷ್ಣ: "ಭಾನುಮತಿ, ನಿನ್ನ ಪ್ರಭಾವಶಾಲೀ ಮಾತುಗಳಿಗೆ ನಾನು ಮೆಚ್ಚಿರುವೆ, ನಿನಗೆ ವರವೊಂದನ್ನು ಕೊಡುವ ಇಚ್ಛೆ ನನ್ನದು. ನಿನಗೆ ಬೇಕಾಗುವ ವರವನ್ನು ನೀನು ನನ್ನಿಂದ ಕೇಳಬಹುದು”

ಭಾನುಮತಿ: “ ಎಲ್ಲವನ್ನೂ ಕಳೆದುಕೊಂಡು ಕಾಡಿಗೆ ಹೊರಟು ನಿಂತಿರುವ ನನಗೆ ನಿನ್ನ ವರ ಪ್ರಸಾದದಿಂದ ಆಗುವ ಪ್ರಯೋಜನವಾದರೂ ಏನು? ದ್ರೌಪದಿ, ಸುಭದ್ರೆ ಹಾಗೂ ಉತ್ತರೆಯರ ಬಳಿ ಹೋಗಿ ಕ್ಷಮೆ ಕೋರಿ, ನನ್ನ ಅತ್ತೆ ಮಾವ ಹಾಗೂ ಕುಂತಿ ಮಾತೆಯರ ಸಂಗಡ ವಾನಪ್ರಸ್ಥಕ್ಕೆ ತೆರಳುತ್ತೇನೆ. ನನ್ನ ಗಂಡ ನನ್ನ ಮಾತುಗಳನ್ನು ಕೇಳಲಿಲ್ಲ. ಅದಕ್ಕಾಗಿ ನಾನು ನಿನ್ನ ಹಾಗೂ ಸರ್ವ ಜನರ ಕ್ಷಮೆಯನ್ನು ಕೋರುತ್ತೇನೆ. ಗಂಡನಿಗೆ ಹೆಂಡತಿ ತಿಳಿಹೇಳಬೇಕೆಂದು ಶಾಸ್ತ್ರಗಳು ಹೇಳುತ್ತವೆ. ಈ ವಿಚಾರದಲ್ಲಿ ನಾನು ವಿಫಲಳಾದೆ. ನನ್ನ ಮಾತು ಕೇಳದೆ ಗಂಡ, ದುಷ್ಟ ಶಕುನಿ ಹಾಗೂ ತಮ್ಮಂದಿರ ಮಾತುಗಳನ್ನು ಕೇಳಿ ಹಾಳಾದರು. ಈ ಕಾರಣಕ್ಕಾಗಿಯಾದರೂ ನಾನು ಕ್ಷಮೆ ಕೇಳಲೇ ಬೇಕಾಗಿದೆ"

ಶ್ರೀಕೃಷ್ಣ: ‘ನಿನ್ನ ವಿವೇಕಯುಕ್ತ ಮಾತುಗಳಿಗೆ ನಾನು ಸೋತು ಹೋಗಿರುವೆ ದೇವಿ, ಭೂಲೋಕದ ಎಲ್ಲಾ ಸ್ತ್ರೀಯರೂ ನಿನ್ನ ಹಾಗೇ ಯೋಚಿಸುತ್ತಿದ್ದಿದ್ದರೆ..."

ಭಾನುಮತಿ: “ ನೀವು ಪುರುಷೋತ್ತಮರು, ಹಾಗೆಂದು ಎಲ್ಲಾ ಪುರುಷರು ನಿನ್ನಂತೆಯೇ ಇರಲೆಂದು ಬಯಸಲೇ? ನಮ್ಮಂಥ ಸ್ತ್ರೀಯರ ಕಷ್ಟಗಳಿಗೆ ಮರುಗಲು ಯಾರಾದರೊಬ್ಬರು ಈ ಲೋಕದಲ್ಲಿ ಇದ್ದಾರಲ್ಲಾ ಅದೇ ಸಂತೋಷ ನಮ್ಮಂಥಹ ಸ್ತ್ರೀಯರಿಗೆ... ದ್ರೌಪದಿಯ ಮಾನ ಮುಚ್ಚಿದವನೂ ನೀನೇ ಅಲ್ಲವೇ ಪುರುಷೋತ್ತಮಾ..."

ಶ್ರೀಕೃಷ್ಣ: “ನಾನೊಂದು ವಿಷಯ ಕೇಳಲೇ? ದ್ರೌಪದಿಯ ಮಾನಭಂಗವಾಗುತ್ತಿದ್ದ ಸಮಯದಲ್ಲಿ ನೀನಾದರೂ ಬಂದು ಪ್ರತಿಭಟಿಸಬಹುದಿತ್ತಲ್ವಾ? ನಿನ್ನ ಪತಿ, ಮಾವನಿಗೆ ತಿಳಿ ಹೇಳಬಹುದಿತ್ತಲ್ವಾ?”

ಭಾನುಮತಿ: “ಈ ಸಂಚಿನ ಅರಿವು ನನಗಿರಲಿಲ್ಲ ಪ್ರಭು, ನನ್ನ ಗಮನಕ್ಕೆ ಬರುವಾಗ ನೀನು ರಕ್ಷಣೆ ಮಾಡಿಯಾಗಿತ್ತು. ನಂತರ ಪತಿಯ ಬಳಿ ಈ ವಿಚಾರವನ್ನು ಕೇಳಿದಾಗ ನನಗೆ ಸಿಕ್ಕ ಉತ್ತರ ‘ಬಾಯಿ ಮುಚ್ಚು' ಎಂದಾಗಿತ್ತು. ಇದು ಈ ಲೋಕದ ಸ್ತ್ರೀಯರ ಸ್ಥಿತಿ ಅಷ್ಟೇ. ನಾವು ಬಾಯಿ ಮುಚ್ಚಿಕೊಂಡೇ ಈ ಸ್ಥಿತಿಗೆ ಬಂದು ಮುಟ್ಟಿದ್ದೇವೆ"

ಶ್ರೀಕೃಷ್ಣ: “ನಿನ್ನಂಥಹ ಉದಾತ್ತ ಮನಸ್ಸಿನ ಸ್ತ್ರೀಯರನ್ನು ಹೊಂದಿದ ಈ ಲೋಕವು ಕಲ್ಯಾಣವಾಗುತ್ತದೆ ಎಂಬ ನಂಬಿಕೆ ನನಗಿದೆ ದೇವಿ, ನಿನ್ನಂಥಹ ಸ್ತ್ರೀಯರನ್ನು ರಕ್ಷಿಸಲು ನಾನು ಮತ್ತೆ ಮತ್ತೆ ಅವತಾರಗಳನ್ನು ಎತ್ತಿ ಬರುವೆ.”

ಭಾನುಮತಿ: "ಅಂದರೆ ನೀನು ನಮ್ಮನ್ನು ರಕ್ಷಿಸಬೇಕಾದರೆ ನನ್ನ ಪತಿಯಂತಹವರೂ ಪದೇ ಪದೇ ಹುಟ್ಟಿ ಬರುವರೇ?”

ಶ್ರೀಕೃಷ್ಣ: "ಅದು ಕಾಲದ ಮಹಿಮೆ. ಅಧರ್ಮ ಮೂಡಿದಾಗಲೇ ಧರ್ಮದ ಬೆಲೆ ಗೊತ್ತಾಗುವುದು. ಎಲ್ಲಾ ಕಾಲದಲ್ಲಿ ಒಳ್ಳೆಯವರ ರಕ್ಷಣೆ ಆಗಿಯೇ ಆಗುತ್ತದೆ. ಧರ್ಮ ಗೆದ್ದೇ ಗೆಲ್ಲುತ್ತದೆ. ಅಗೋ, ಸೂರ್ಯ ಮುಳುಗುತ್ತಿದ್ದಾನೆ. ಪಲ್ಲಕ್ಕಿ ಕಾಯುತ್ತಿದೆ. ಬೇಗ ಹೊರಡು" 

ಇಷ್ಟು ಹೇಳಿ ಕೃಷ್ಣ ಭಾನುಮತಿಗೆ ತನ್ನ ವಿಶ್ವರೂಪವನ್ನು ತೋರಿಸುತ್ತಾನೆ. ಶ್ರೀಕೃಷ್ಣನ ವಿಶ್ವರೂಪವನ್ನು ತನ್ನ ಕಣ್ಗಳಿಂದ ನೋಡಿ ಆನಂದ ಚಕಿತಳಾದ ಭಾನುಮತಿ ವಿಶ್ವರೂಪ ದರ್ಶನವೇ ತನ್ನ ಜೀವನದ ಅತೀ ದೊಡ್ಡ ಸೌಭಾಗ್ಯವೆಂದು ತಿಳಿದುಕೊಳ್ಳುತ್ತಾಳೆ.

***

ವಾಟ್ಸ್ ಆಪ್ ಮೂಲಕ ಹಂಚಿಕೊಂಡು ಬಂದ ಮಾಹಿತಿಯನ್ನು ನಾನು ನನ್ನದೇ ಮಾತುಗಳಲ್ಲಿ ವಿವರಿಸಲು ಪ್ರಯತ್ನಿಸಿದ್ದೇನೆ. ದುರ್ಯೋಧನ ತನ್ನ ಬುದ್ಧಿವಂತ ಪತ್ನಿ ಭಾನುಮತಿಯ ಮಾತುಗಳನ್ನು ಆಲಿಸಿದ್ದರೆ, ಈ ಕುರುಕ್ಷೇತ್ರ ಯುದ್ಧ ಆಗುತ್ತಲೇ ಇರಲಿಲ್ಲ. ಆದರೆ ಆಗುವುದನ್ನು ತಡೆಯಲು ಸಾಕ್ಷಾತ್ ಭಗವಂತನ ಅವತಾರವಾಗಿದ್ದ ಶ್ರೀಕೃಷ್ಣನಿಗೂ ಸಾಧ್ಯವಾಗಲಿಲ್ಲ. ಏಕೆಂದರೆ ಆತನೂ ಭೂಮಿಯ ಮೇಲೆ ಜನ್ಮ ತಾಳಿದ್ದ ವಿಷ್ಣುವಿನ ಅವತಾರ ಅಂದರೆ ಮಾನವ ಮಾತ್ರ ಆಗಿದ್ದ. ಯಾವ ಕಾಲಕ್ಕೆ ಏನೇನೂ ಆಗಬೇಕೋ ಅದು ಆಗಿಯೇ ತೀರುತ್ತದೆ. ಅಧರ್ಮದ ಮೇಲೆ ಧರ್ಮದ ವಿಜಯ ಎಲ್ಲಾ ಕಾಲಗಳಲ್ಲೂ ನಡೆದೇ ನಡೆಯುತ್ತದೆ. 

ಚಿತ್ರ ಕೃಪೆ: ಅಂತರ್ಜಾಲ ತಾಣ