ಮಹಾಭಾರತದ ಕಥೆಗಳು - ಗಾಂಧಾರಿಯ ಶಾಪ
ಕುರುಕ್ಷೇತ್ರದ ಯುದ್ಧದ ಪರಿಣಾಮಗಳ ಬಗ್ಗೆ ನಿಮಗೆಲ್ಲಾ ತಿಳಿದೇ ಇದೆ. ೧೮ ದಿನಗಳ ಯುದ್ಧದಲ್ಲಿ ಕೌರವರ ಪರವಾಗಿ ಹೋರಾಡಿದ್ದ ಎಲ್ಲಾ ಅತಿರಥ-ಮಹಾರಥರು ಸಾವನ್ನಪ್ಪಿ, ಪಾಂಡವರ ವಿಜಯವಾಗಿತ್ತು. ವಿಜಯದ ಬಳಿಕ ಯುಧಿಷ್ಟಿರನು ತನ್ನ ತಮ್ಮಂದಿರ ಜೊತೆಗೂಡಿ, ಶ್ರೀಕೃಷ್ಣನ ಸಹಿತವಾಗಿ ಹಸ್ತಿನಾಪುರಕ್ಕೆ ಬಂದ. ಅನಿವಾರ್ಯವಾಗಿ ರಾಜ ಗದ್ದುಗೆಯನ್ನು ಪಾಂಡವರಿಗೆ ಬಿಟ್ಟುಕೊಡಲೇ ಬೇಕಾದ ಅನಿವಾರ್ಯತೆ ಧೃತರಾಷ್ಟ್ರನಿಗೆ ಒದಗಿ ಬಂದಿತ್ತು. ಒಂದೆಡೆ ತನ್ನ ನೂರು ಮಕ್ಕಳನ್ನು ಕಳೆದುಕೊಂಡ ದುಃಖ, ಮತ್ತೊಂದೆಡೆ ತನ್ನ ರಾಜ ಪಟ್ಟವನ್ನು ಬಿಟ್ಟುಕೊಡಬೇಕಾದ ಅನಿವಾರ್ಯತೆಗೆ ಸಿಕ್ಕ ಧೃತರಾಷ್ಟ್ರನಿಗೆ ಆ ಸಮಯದಲ್ಲೂ ನೆನಪಾದದ್ದು ತನ್ನ ಜೇಷ್ಟ ಪುತ್ರ ದುರ್ಯೋಧನ. ದುರ್ಯೋಧನನಂತಹ ಯೋಧನನ್ನು ಕೊಂದ ಭೀಮನ ಬಗ್ಗೆ ಬಹಳ ಸಿಟ್ಟು ಬಂದಿತು. ಪಾಂಡವರು ತನ್ನ ಆಶೀರ್ವಾದ ತೆಗೆದುಕೊಳ್ಳುತ್ತಿರುವಾಗ ಭೀಮನನ್ನು ಬಿಗಿದಪ್ಪಿ ಕೊಂದೇ ಬಿಡಬೇಕು ಎನ್ನುವ ಧೃತರಾಷ್ಟ್ರನ ಯೋಚನೆ ಶ್ರೀಕೃಷ್ಣನಿಗೆ ಅರ್ಥವಾಗಿ ಬಿಡುತ್ತದೆ. ಅದಕ್ಕೆ ಭೀಮನ ಬದಲು ಆತನ ಮೂರ್ತಿಯನ್ನು ಧೃತರಾಷ್ಟ್ರನ ಬಗಲಿಗೆ ಹಾಕಿ ಬಿಡುತ್ತಾನೆ.
ಕ್ರೋಧಿತ ಧೃತರಾಷ್ಟ್ರ ಆ ಮೂರ್ತಿಯನ್ನು ಬಲವಾಗಿ ಆಲಂಗಿಸಿಕೊಳ್ಳುತ್ತಾನೆ. ಆತನದ್ದು ನೂರು ಆನೆಗಳ ಶಕ್ತಿ. ಆ ಲೋಹದ ಮೂರ್ತಿ ಆತನ ಆಲಿಂಗನದ ಶಕ್ತಿಗೆ ಪುಡಿ ಪುಡಿಯಾಗಿ ಬಿಡುತ್ತದೆ. ಆಗ ಧೃತರಾಷ್ಟ್ರನ ಮನಸ್ಸು ರೋಧಿಸುತ್ತದೆ. ನಾನೇ ನನ್ನ ಕೈಯಾರೆ ಭೀಮನನ್ನು ಕೊಂದುಬಿಟ್ಟೆನಲ್ಲಾ ಎಂದು ಪಶ್ಚಾತ್ತಾಪ ಪಡುತ್ತಾನೆ. ಕೃಷ್ಣ ನಿಜ ವಿಷಯವನ್ನು ಅರುಹಿ ಆತನನ್ನು ಸಮಾಧಾನ ಮಾಡುತ್ತಾನೆ.
ಗಾಂಧಾರಿಯೂ ತನ್ನ ನೂರು ಪುತ್ರರ ಮರಣದಿಂದ ಶೋಕದಿಂದಿದ್ದಳು. ಆದರೆ ಆಕೆಗೆ ಕೋಪವಿದ್ದದ್ದು ಪಾಂಡವರ ಮೇಲಲ್ಲ, ಬದಲಾಗಿ ಶ್ರೀಕೃಷ್ಣನ ಮೇಲೆ. ಆತ ಮನಸ್ಸು ಮಾಡಿದ್ದಿದ್ದರೆ ಖಂಡಿತವಾಗಿಯೂ ಎಲ್ಲರನ್ನೂ ಉಳಿಸಬಹುದಿತ್ತು ಎಂಬ ಯೋಚನೆ ಅವಳದ್ದಾಗಿತ್ತು. ಆ ಕಾರಣದಿಂದಲೇ ಪಾಂಡವರೆಲ್ಲಾ ಆಶೀರ್ವಾದವನ್ನು ಪಡೆದುಕೊಂಡ ಬಳಿಕ ಆಕೆ ಕೃಷ್ಣನ ಬಳಿ ಕೋಪದಿಂದ ತನ್ನ ಹೃದಯದಲ್ಲಿ ಅಡಗಿದ್ದ ನೋವನ್ನು ಬಿಚ್ಚಿಡುತ್ತಾಳೆ.
“ಹೇ, ಕೃಷ್ಣಾ ನಿನ್ನ ದಿವ್ಯದೃಷ್ಟಿಯನ್ನು ಬಳಸಿ ಒಮ್ಮೆ ಕುರುಕ್ಷೇತ್ರದ ಯುದ್ಧ ಭೂಮಿಯನ್ನು ನೋಡು. ಅತಿರಥ ಮಹಾರಥರು ಸತ್ತು ಬಿದ್ದಿದ್ದಾರೆ. ಅವರ ಪತ್ನಿಯರು ಮಕ್ಕಳು ಅನಾಥರಾಗಿ ಶವದ ಎದುರು ಕೂತು ರೋಧಿಸುತ್ತಿದ್ದಾರೆ. ಶವಗಳನ್ನು ತಿನ್ನಲು ನಾಯಿ, ನರಿಗಳು ಕಾಯುತ್ತಿವೆ. ರಣಹದ್ದುಗಳು ಆಗಸದಲ್ಲಿ ಹಾರಾಡುತ್ತಿವೆ. ಇದಕ್ಕೆಲ್ಲಾ ಕಾರಣ ಯಾರು ಗೊತ್ತೇ? ನೀನು. ಅಗೋ, ಅಲ್ಲಿ ನೋಡು, ತೊಡೆ ಮುರಿದುಕೊಂಡು ಸತ್ತು ಬಿದ್ದಿದ್ದ ದುರ್ಯೋಧನನ ಬಳಿ ಕುಳಿತು ಅಳುತ್ತಿರುವ ಭಾನುಮತಿಯನ್ನು ಯಾರು ಸಮಾಧಾನ ಮಾಡುವರು? ಇಲ್ಲಿ ನೋಡು, ಭೀಮನಿಂದ ಎದೆ ಬಗೆಯಲ್ಪಟ್ಟು ಸತ್ತ ದುಶ್ಯಾಸನ ಶವದ ಎದುರು ಕೂತು ಅಳುತ್ತಿರುವ ಆತನ ಪತ್ನಿಯನ್ನು ಗಮನಿಸುವವರಾರು? ಅದೇ ರೀತಿ ಕರ್ಣ, ವಿಕರ್ಣ, ಶಕುನಿ, ದ್ರೋಣ ಮುಂತಾದವರ ಸಂಬಂಧಿಕರ ಗೋಳನ್ನು ಕೇಳುವವರು ಯಾರು? ಇದನ್ನೆಲ್ಲಾ ನೀನು ನಿಲ್ಲಿಸಬಹುದಿತ್ತು.
ಆದರೆ ನೀನು ಪಾಂಡವರ ಪರ ಪಕ್ಷಪಾತಿಯಾದೆ. ದಾಯಾದಿಗಳು ಪರಸ್ಪರ ಹೊಡೆದಾಡಿಕೊಂಡು ಸಾಯುವುದನ್ನು ನೀನು ಕಣ್ಣಾರೆ ನೋಡುತ್ತಾ ನಿಂತೆಯೇ ವಿನಹ ಅದನ್ನು ತಡೆಯುವ ಪ್ರಯತ್ನ ಮಾಡಲಿಲ್ಲ. ನನ್ನ ನೂರು ಮಂದಿ ಮಕ್ಕಳು ಸತ್ತು ಹೋದರು. ನಿನ್ನ ಮೇಲೆ ಉಕ್ಕಿ ಬರುತ್ತಿರುವ ಕೋಪವನ್ನು ನಿಗ್ರಹಿಸಲು ನಿನಗೆ ಶಾಪವನ್ನು ನೀಡದೇ ನನಗೆ ಬೇರೆ ಮಾರ್ಗವೇ ಇಲ್ಲ ಕೃಷ್ಣಾ... ಇದೋ ನಿನಗೆ ನಾನು ಶಾಪ ನೀಡುತ್ತಿದ್ದೇನೆ...ನಿನ್ನ ಯಾದವ ಕುಲದವರೂ ನಿನ್ನ ಕಣ್ಣೆದುರಿಗೇ ಹೊಡೆದಾಡಿ ಸಾಯುವಂತಹ ಪರಿಸ್ಥಿತಿ ಒದಗಿ ಬರಲಿ. ನಿನ್ನ ಕನಸಿನ ದ್ವಾರಕೆಯ ಅರಮನೆ ನಗರ ನೀರಿನಲ್ಲಿ ಮುಳುಗಿ ಹೋಗಲಿ, ನಿನ್ನಿಂದ ಅದನ್ನು ತಡೆಯಲು ಸಾಧ್ಯವಾಗದೇ ನಿನ್ನ ಅರಮನೆ ದ್ವಾರಕೆಯನ್ನು ಬಿಟ್ಟು ಕಾಡು ಅಲೆಯುವಂತಾಗಲಿ. ಯೋಧನಿಗೆ ಸಿಗುವ ಧೀರವಾದ ಯುದ್ಧ ಭೂಮಿಯ ಮರಣ ನಿನಗೆ ದೊರಕದೇ ಹೋಗಲಿ... ಇದು ನನ್ನ ಶಾಪ.” ಎಂದಳು ಕೋಪದಿಂದ ಗಾಂಧಾರಿ.
ಗಾಂಧಾರಿಯ ಎಲ್ಲಾ ಮಾತುಗಳನ್ನು ಕೃಷ್ಣ ಮೌನದಿಂದ ಕೇಳುತ್ತಿದ್ದ. ಆತನಿಗೆ ಗೊತ್ತಿತ್ತು, ಗಾಂಧಾರಿ ಅತ್ಯಂತ ಪತಿವೃತ ಸ್ತ್ರೀ. ಆಕೆಯ ಶಾಪ ಎಂದಿಗೂ ಹುಸಿಯಾಗದು. ಆದರೆ ಆತನಿಗೆ ತಿಳಿದಿತ್ತು, ದ್ವಾಪರಾಯುಗದ ಅಂತ್ಯ ಕಾಲ ಬಂದಿದೆ. ಇದಕ್ಕೆ ಗಾಂಧಾರಿಯ ಶಾಪ ಕೇವಲ ನೆಪ ಮಾತ್ರವಾಗಿತ್ತು. ಗಾಂಧಾರಿಯ ಕೋಪದ ಮತ್ತು ಶಾಪದ ಮಾತುಗಳನ್ನು ಶಾಂತ ರೀತಿಯಿಂದ ಆಲಿಸಿದ ಶ್ರೀಕೃಷ್ಣನ ಮುಖದಲ್ಲಿ ಸಣ್ಣ ಮಂದಹಾಸವಿತ್ತು.
ಅದೇ ಮಂದಹಾಸ ಭರಿತ ವದನದಿಂದ ಆತ ಹೇಳಿದ “ಮಹಾ ಮಾತೆ ಗಾಂಧಾರಿಗೆ ನಮನಗಳು. ನಿಮ್ಮ ಶಾಪವನ್ನು ನಾನು ಆಶೀರ್ವಾದದ ರೀತಿಯಲ್ಲಿ ಪಡೆದುಕೊಳ್ಳುವೆ. ಆದರೆ ನೀವು ಮಾಡಿದ ಆರೋಪಗಳಿಗೆ ನಾನು ಉತ್ತರಿಸದೇ ಹೋದರೆ ಅದು ದೊಡ್ಡ ತಪ್ಪಾಗುತ್ತದೆ. ಮಾತೇ, ಇಲ್ಲಿ ಕೇಳು...ಯಾವಾಗ ತನ್ನನ್ನು ವರಿಸಲಿರುವ ವರ ಹುಟ್ಟು ಕುರುಡ ಎಂಬ ವಿಷಯ ಕೇಳಿ ನೀನು ಕಣ್ಣಿಗೆ ಪಟ್ಟಿ ಕಟ್ಟಿಕೊಂಡಿಯೋ ಅದೇ ನೀನು ಮಾಡಿದ ದೊಡ್ಡ ತಪ್ಪು. ನೀನು ಅಂದು ಗಂಡನಿಗಿಲ್ಲದ ದೃಷ್ಟಿ ಭಾಗ್ಯ ನನಗೆ ಏಕೆ ಎಂದು ಹಠದಿಂದ ಪಟ್ಟಿ ಕಟ್ಟಿಕೊಂಡು ಬಿಟ್ಟೆ. ನಿನಗೆ ಮಹಾ ಪತಿವೃತೆಯ ಪಟ್ಟ ಅನಾಯಾಸವಾಗಿ ದೊರೆತ ಬಳಿಕ ನೀನು ಪಟ್ಟಿಯನ್ನು ಬಿಚ್ಚಲಾರದೇ ಹೋದೆ. ದೃಷ್ಟಿಹೀನ ಗಂಡನನ್ನು ಸರಿಯಾದ ದಾರಿಯನ್ನು ನಡೆಸಬೇಕಾದ ಕರ್ತವ್ಯ ನಿನ್ನದಾಗಿರಬೇಕಿತ್ತು ತಾಯಿ, ನೀನು ನಿನ್ನ ಕರ್ತವ್ಯವನ್ನು ಮಾಡದೇ ಹಿಂದೆ ಸರಿದೆ.
ನಿನ್ನ ನೂರು ಮಂದಿ ಮಕ್ಕಳನ್ನು ಸರಿಯಾದ ದಾರಿಯಲ್ಲಿ ಮುನ್ನಡೆಸಬೇಕಾಗಿತ್ತು. ಅವರು ತಪ್ಪು ಮಾಡಿದಾಗಲೆಲ್ಲಾ ಅವರನ್ನು ಗದರಿಸಿ, ಬೆದರಿಸಿ ಸರಿ ದಾರಿಗೆ ತರಬೇಕಾಗಿತ್ತು. ಆದರೆ ನೀನು ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ಅವರ ಎಲ್ಲಾ ಅನಾಚರಗಳನ್ನು ನೋಡಲಾರದೇ ಹೋದೆ. ಬಾಲ್ಯದಲ್ಲಿ ದುರ್ಯೋಧನ ಭೀಮನನ್ನು ನೀರಿನಲ್ಲಿ ಮುಳುಗಿಸಿ ಕೊಲ್ಲ ಬಯಸಿದ ವಿಷಯ ನಿನಗೆ ತಿಳಿದಿರಲಿಲ್ಲವೇ? ನಿನ್ನ ಸಹೋದರ ಶಕುನಿಯ ಕುತಂತ್ರದ ಅರಿವು ನಿನಗೆ ಇರಲಿಲ್ಲವೇ? ದ್ರೌಪದಿಯನ್ನು ನಿನ್ನ ಮಗ ದುಶ್ಯಾಸನ ಕೇಶರಾಶಿಯಲ್ಲಿ ಹಿಡಿದು ರಾಜಸಭೆಗೆ ಎಳೆದು ತಂದು ಸೀರೆಯನ್ನು ಎಳೆದು ವಿವಸ್ತ್ರನಾಗಿಸ ಹೊರಟಾಗ ನಿನ್ನ ಪ್ರಜ್ಞೆ ಎಲ್ಲಿತ್ತು ತಾಯಿ? ನೀನು ಹಸ್ತಿನಾಪುರದ ರಾಜನ ಪತ್ನಿ. ರಾಜ ಮಾತೆ. ನೀನು ಅಂದೇ ಆಜ್ಞೆ ಮಾಡಿ ದುಶ್ಯಾಸನ ಹಾಗೂ ಶಕುನಿಯನ್ನು ಸೆರೆಮನೆಗೆ ಹಾಕಬಹುದಿತ್ತು. ಆದರೆ ನೀನು ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ಸುಮ್ಮನೇ ಕುಳಿತುಕೊಂಡು ಬಿಟ್ಟೆ. ಪಾಂಡವರಿಗೆ ವನವಾಸವಾದಾಗಲೂ ನೀನು ಮಾತನಾಡಲಿಲ್ಲ. ನಿನ್ನ ಮಕ್ಕಳು ಮಾಡಿದ ಯಾವುದೇ ತಪ್ಪುಗಳಿಗೆ ನೀನು ಕರೆದು ಬುದ್ಧಿವಾದ ಹೇಳಲೇ ಇಲ್ಲ.
ಯಾವಾಗ ನಿನ್ನ ೯೯ ಮಕ್ಕಳು ಸತ್ತು ದುರ್ಯೋಧನ ಮಾತ್ರ ಉಳಿದಾಗ, ಆತನನ್ನು ರಕ್ಷಿಸಲು ನಿನ್ನ ಪ್ರತಿಜ್ಞೆಯನ್ನೂ ಮರೆತು ಕಣ್ಣಿನ ಪಟ್ಟಿಯನ್ನು ತೆಗೆದುಬಿಟ್ಟೆಯಲ್ಲಾ? ಆಗೆಲ್ಲಿ ಹೋಗಿತ್ತು ನಿನ್ನ ಧರ್ಮ? ನಾನು ಧರ್ಮವನ್ನು ರಕ್ಷಿಸಲು ಪ್ರಯತ್ನಿಸಲಿಲ್ಲ ಎಂದು ನಿನ್ನ ಆರೋಪವಲ್ಲವೇ? ಯುದ್ಧ ನಿರ್ಧಾರವಾದ ಬಳಿಕವೂ ನಾನು ಸಂಧಾನಕಾರನಾಗಿ ಬಂದಿದ್ದೆನಲ್ಲಾ, ಆಗ ನನ್ನನ್ನೇ ಬಂಧಿಸಲು ನೋಡಿದ ನಿನ್ನ ಮಗನದ್ದು ಧರ್ಮದ ರಾಜಕಾರಣವೇ? ರಾಯಭಾರಿಗಳನ್ನು ಬಂಧಿಸಬಾರದು ಎಂಬ ನಿಯಮವೇ ಇರುವಾಗ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿದ ನಿನ್ನ ಮಗನನ್ನು ನೀನು ಯಾವ ರೀತಿಯಾಗಿ ಸಮರ್ಥಿಸಿಕೊಳ್ಳುವಿ? ನಾನು ಅಂದು ಮನಸ್ಸು ಮಾಡಿದ್ದಿದ್ದರೆ ನಿನ್ನ ಎಲ್ಲಾ ಮಕ್ಕಳನ್ನು ನನ್ನ ಸುದರ್ಶನ ಚಕ್ರದಿಂದ ಒಂದೇ ನಿಮಿಷದಲ್ಲಿ ನಾಶ ಮಾಡಿ ಬಿಡಬಹುದಿತ್ತು. ಆದರೆ ನಾನು ಅವರಿಗೆಲ್ಲಾ ಬುದ್ಧಿ ಕಲಿಯಲು ಅವಕಾಶಗಳನ್ನು ನೀಡಿದೆ. ಆದರೆ ಅವರು ಯಾರೂ ಧರ್ಮದ ಪಕ್ಷದಲ್ಲಿರಲಿಲ್ಲ. ಈ ಕಾರಣದಿಂದ ಭೀಮ, ದ್ರೋಣಾಚಾರ್ಯ, ಕರ್ಣ ಅವರೆಲ್ಲರ ನಾಶ ಅನಿವಾರ್ಯವಾಯಿತು. ಹುಟ್ಟಿದ ಎಲ್ಲಾ ಜೀವಿಗಳಿಗೂ ಮರಣ ಶತಃ ಸಿದ್ಧ. ಎಲ್ಲವೂ ಒಂದಲ್ಲಾ ಒಂದು ದಿನ ಅಳಿಯಲೇ ಬೇಕು. ಅದೇ ರೀತಿ ನಿನ್ನ ಶಾಪದ ಕಾರಣ ನಮ್ಮ ಯಾದವ ಕುಲವೂ ಅಳಿಯುತ್ತದೆ. ದ್ವಾರಕೆ ನೀರಿನಲ್ಲಿ ಮುಳುಗುತ್ತದೆ. ಕಾಡಿನಲ್ಲಿ ಅಲೆಯುತ್ತಾ ನಾನು ಸಾವನ್ನಪ್ಪುವೆ. ನನಗೆ ಇದರಿಂದ ಯಾವ ನೋವೂ ಇಲ್ಲ ತಾಯೀ, ಹೋಗಿ ಬರುವೆ, ವಂದನೆಗಳು.” ಎನ್ನುತ್ತಾ ಶ್ರೀಕೃಷ್ಣ ಪಾಂಡವರನ್ನು ಕರೆದುಕೊಂಡು ಗಾಂಧಾರಿಯ ಅಂತಃಪುರದಿಂದ ಹೊರಡುತ್ತಾನೆ.
ಗಾಂಧಾರಿಗೆ ಶ್ರೀಕೃಷ್ಣನ ಒಂದೊಂದು ಮಾತುಗಳು ಬಾಣದಂತೆ ಚುಚ್ಚುತ್ತವೆ. ಆದರೆ ಕಾಲ ಮಿಂಚಿ ಆಗಿತ್ತು. ಶಾಪವನ್ನೂ ನೀಡಿ ಆಗಿತ್ತು. ಗಾಂಧಾರಿ ತನ್ನ ಮಾತುಗಳಿಗೆ ಬೇಸರ ಪಟ್ಟುಕೊಳ್ಳುತ್ತಾಳೆ. ಧೃತರಾಷ್ಟ್ರ ಕಾಡಿಗೆ ತೆರಳುವಾಗ ಆತನ ಜೊತೆ ಆಕೆಯೂ ಕುಂತಿಯೊಂದಿಗೆ ತೆರಳುತ್ತಾಳೆ.
ಚಿತ್ರ ಕೃಪೆ: ಅಂತರ್ಜಾಲ ತಾಣ