ಮಹಾಭಾರತದ ಕಥೆಗಳು - ದ್ರೋಣರ ಅರ್ಜುನ ಪ್ರೀತಿ

ಮಹಾಭಾರತದ ಕಥೆಗಳು - ದ್ರೋಣರ ಅರ್ಜುನ ಪ್ರೀತಿ

ಮಹಾಭಾರತದ ಕಥೆಗಳಲ್ಲಿ ಪ್ರಮುಖವಾಗಿ ಕಂಡು ಬರುವ ಗುರು ಶಿಷ್ಯ ಸಂಬಂಧವೆಂದರೆ ಗುರು ದ್ರೋಣಾಚಾರ್ಯರು ಹಾಗೂ ಶಿಷ್ಯ ಅರ್ಜುನ. ಹಸ್ತಿನಾಪುರದ ರಾಜಕುಮಾರರಾದ ಪಾಂಡವರಿಗೆ ಹಾಗೂ ಕೌರವರಿಗೆ ಯುದ್ಧ ವಿದ್ಯೆಯನ್ನು ಕಲಿಸುವ ಗುರುತರವಾದ ಜವಾಬ್ದಾರಿ ದ್ರೋಣಾಚಾರ್ಯರ ಮೇಲಿತ್ತು. ಅವರು ಪ್ರತಿಯೊಬ್ಬ ಶಿಷ್ಯನಿಗೂ ಆತನ ಆಯ್ಕೆಗೆ ತಕ್ಕ ವಿದ್ಯೆಯನ್ನು (ಉದಾ: ಭೀಮ, ದುರ್ಯೋಧನನಿಗೆ ಗಧೆ, ಅರ್ಜುನನಿಗೆ ಬಿಲ್ಲುಬಾಣ) ಕಲಿಸಿದರು. ಅವರು ಕಲಿಸಿದ ವಿದ್ಯೆಯನ್ನು ಶಿರಸಾವಹಿಸಿ ಕಲಿತು ಪಟ್ಟ ಶಿಷ್ಯನಾದದ್ದು ಪಾಂಡವರಲ್ಲಿ ಓರ್ವನಾದ ಅರ್ಜುನ. 

ಅರ್ಜುನನಂತೆ ಬಿಲ್ವಿದ್ಯೆಯನ್ನು ಬಲ್ಲವರು ಕೌರವರ ಪಕ್ಷದಲ್ಲಿ ಯಾರೂ ಇರಲಿಲ್ಲ. ಈ ಕಾರಣದಿಂದಲೇ ಬಹುಷಃ ದುರ್ಯೋಧನನು ಕರ್ಣನನ್ನು ತನ್ನ ತೆಕ್ಕೆಗೆ ಎಳೆದದ್ದು. ಬಿಲ್ವಿದ್ಯೆಯ ಪ್ರದರ್ಶನದ ಸಮಯದಲ್ಲಿ ಅರ್ಜುನ ಮರದಲ್ಲಿ ಕುಳಿತಿದ್ದ ಮರದ ಹಕ್ಕಿಯ ಕಣ್ಣಿಗೆ ಗುರಿಯಿಟ್ಟು ಬಾಣ ಹೂಡಿದ ಕಥೆ ನಿಮಗೆಲ್ಲಾ ಗೊತ್ತೇ ಇದೆ. ಅರ್ಜುನ ಮಾತ್ರ ಆ ಹಕ್ಕಿಯ ಕಣ್ಣಿಗೆ ಗುರಿ ಇಡುವಲ್ಲಿ ಸಫಲನಾಗುತ್ತಾರೆ. ಇದರಿಂದ ಇನ್ನಷ್ಟು ಆನಂದಿತರಾದ ದ್ರೋಣಾಚಾರ್ಯರು ಅರ್ಜುನನಿಗೆ ಅನೇಕ ದಿವ್ಯಾಸ್ತ್ರಗಳ ಬಳಕೆ ಹಾಗೂ ಅವುಗಳನ್ನು ಬಳಸಲು ಬೇಕಾದ ಮಂತ್ರಗಳನ್ನು ಕಲಿಸುತ್ತಾರೆ. ಇವೆಲ್ಲವನ್ನೂ ಏಕಾಗ್ರತೆಯಿಂದ ಕಲಿತ ಅರ್ಜುನ ದ್ರೋಣಾಚಾರ್ಯರಿಗೆ ಇನ್ನಷ್ಟು ಆತ್ಮೀಯ ಶಿಷ್ಯನಾಗುತ್ತಾನೆ. 

ದ್ರೋಣಾಚಾರ್ಯರಿಗೆ ತನ್ನ ಶಿಷ್ಯ ಅರ್ಜುನನಿಗಿಂತ ಲೋಕದಲ್ಲಿ ಯಾರೂ ದೊಡ್ಡ ಬಿಲ್ವಿದ್ಯೆಯಲ್ಲಿ ಪ್ರವೀಣರಾಗಬಾರದು ಎಂಬ ಸ್ವಾರ್ಥವಿರುತ್ತದೆ. ಈ ಕಾರಣದಿಂದ ತಮ್ಮನ್ನು ಮನದಲ್ಲೇ ಗುರುವನ್ನಾಗಿ ಸ್ವೀಕರಿಸಿ ಬಿಲ್ಗಾರಿಕೆಯನ್ನು ಕಲಿತ ಏಕಲವ್ಯನೆಂಬ ಹುಡುಗನ ಪ್ರತಿಭೆಯನ್ನು ಅವರು ಸಹಿಸಲಾರದೇ ಹೋಗುತ್ತಾರೆ. ಈತನನ್ನು ಬೆಳೆಯಲು ಬಿಟ್ಟರೆ ತನ್ನ ಮೆಚ್ಚಿನ ಶಿಷ್ಯ ಅರ್ಜುನನನ್ನೇ ಮೀರಿ ಬೆಳೆದು ಬಿಟ್ಟಾನು ಎಂಬ ಅಸೂಯೆ ದ್ರೋಣರಲ್ಲಿ ಮೂಡುತ್ತದೆ. ಅದಕ್ಕಾಗಿಯೇ ಗುರು ದಕ್ಷಿಣೆಯ ರೂಪದಲ್ಲಿ ಏಕಲವ್ಯನ ಬಲಗೈ ಹೆಬ್ಬೆರಳನ್ನು ಪಡೆದುಕೊಳ್ಳುತ್ತಾರೆ. ಈ ಕಾರಣದಿಂದ ಅತ್ಯಂತ ಉತ್ತಮ ಬಿಲ್ಲುಗಾರನಾಗುವ ಅವಕಾಶದಿಂದ ಏಕಲವ್ಯ ವಂಚಿತನಾಗುತ್ತಾನೆ.

ಅರ್ಜುನ ದ್ರೋಣರ ಮೆಚ್ಚಿನ ಶಿಷ್ಯ ಎನಿಸಿಕೊಳ್ಳುವುದಕ್ಕೆ ಮತ್ತೊಂದು ಘಟನೆಯೂ ಇದೆ. ಒಂದು ದಿನ ರಾತ್ರಿ ಆಶ್ರಮದಲ್ಲಿ ಊಟ ಮಾಡುತ್ತಿದ್ದಾಗ ಜೋರಾದ ಗಾಳಿ ಬೀಸಿ ದೀಪವು ಆರಿ ಹೋಗುತ್ತದೆ. ಆದರೆ ಊಟ ಮಾಡುತ್ತಿರುವವರು ಅಭ್ಯಾಸದ ಬಲದಿಂದ ಕೈಯಿಂದ ತುತ್ತು ಅವರವರ ಬಾಯಿಗೇ ಹೋಗುತ್ತಿತ್ತು. ಅರ್ಜುನ ಈ ಘಟನೆಯಿಂದ ‘ಸತತ ಅಭ್ಯಾಸದಿಂದ ಅಸಾಧ್ಯವಾದದ್ದನ್ನೂ ಸಾಧಿಸಬಹುದು' ಎಂಬ ಸತ್ಯವನ್ನು ಅರಿತುಕೊಂಡ. ನಂತರ ಆತ ತಡಮಾಡಲಿಲ್ಲ. ಅದೇ ರಾತ್ರಿ ಕತ್ತಲಿನಲ್ಲಿ ಬಿಲ್ಲುಗಾರಿಕೆಯ ಅಭ್ಯಾಸ ಪ್ರಾರಂಭಿಸಿದ. ಕತ್ತಲಿನಲ್ಲೇ ಗುರಿಯನ್ನು ಹೇಗೆ ಬಾಣದಿಂದ ಬೇಧಿಸಬಹುದು ಎಂಬುದನ್ನು ಅಭ್ಯಾಸ ಮಾಡತೊಡಗಿದ. ಒಂದು ದಿನ ರಾತ್ರಿ ಬಿಲ್ಲಿನ ಶಬ್ದ ಕೇಳಿ ದ್ರೋಣಾಚಾರ್ಯರು ಎದ್ದು ಹೊರ ಬಂದು ನೋಡುವಾಗ ಅರ್ಜುನನು ಏಕಾಗ್ರತೆಯಿಂದ ಕತ್ತಲಿನಲ್ಲೇ ಬಿಲ್ಲುಗಾರಿಕೆಯ ಅಭ್ಯಾಸ ಮಾಡುತ್ತಿದ್ದುದನ್ನು ನೋಡುತ್ತಾರೆ. ಕಲಿಯುವ ಹಂಬಲವಿರುವವನು ಮಾತ್ರ ಉತ್ತಮ ಶಿಷ್ಯನಾಗುತ್ತಾನೆ ಎಂದು ದ್ರೋಣರು ಅರಿಯುತ್ತಾರೆ. ದ್ರೋಣರು ತಮ್ಮ ಉಳಿದ ಶಿಷ್ಯರಲ್ಲಿ ಹೇಳುತ್ತಾರೆ “ಕಲಿಕೆಯ ಹಸಿವು ಯಾವಾಗಲೂ ಇರಬೇಕು. ಇದರಿಂದ ಮಾತ್ರ ನೀವು ಅಸಾಧ್ಯವಾದುದನ್ನು ಸಾಧಿಸಿತೋರಿಸಬಹುದು. ಗುರುಗಳು ಎಷ್ಟು ಕಲಿಸುತ್ತಾರೆ ಅಷ್ಟನ್ನು ಮಾತ್ರ ಕಲಿಯುವುದಲ್ಲ. ಹೊಸ ಹೊಸ ವಿದ್ಯೆಯನ್ನು ಕಲಿಯುವ ದಾರಿಯನ್ನು ಕಂಡುಕೊಳ್ಳಬೇಕು. ಆಗಲೇ ನೀವು ಬಯಸಿದ ಗುರಿಯನ್ನು ಮುಟ್ಟಬಹುದು.” 

ಮತ್ತೊಂದು ದಿನ ದ್ರೋಣಾಚಾರ್ಯರು ತಮ್ಮ ಎಲ್ಲಾ ಶಿಷ್ಯರನ್ನು ಕರೆದು ಹೇಳುತ್ತಾರೆ “ ನಾನು ಬಹು ಸಮಯದಿಂದ ನಿಮಗೆ ಶಸ್ತ್ರ ವಿದ್ಯೆಯನ್ನು ಕಲಿಸುತ್ತಾ ಬಂದಿದ್ದೇನೆ. ಆ ಕಾರಣದಿಂದ ನಾನಿಂದು ನಿಮ್ಮಲ್ಲಿ ಗುರು ದಕ್ಷಿಣೆ ಕೇಳಲಿದ್ದೇನೆ. ಗುರು ದಕ್ಷಿಣೆ ನೀಡಲು ಬಯಸುವವರು ಮುಂದೆ ಬನ್ನಿ" . ಗುರುಗಳ ಮಾತಿಗೆ ಅರ್ಜುನ ಮಾತ್ರ ಮುಂದೆ ಬರುತ್ತಾನೆ. ಉಳಿದವರು “ ನೀವು ಏನು ಗುರುದಕ್ಷಿಣೆ ಬೇಕೆಂದು ಹೇಳಿದರೆ, ಯೋಚಿಸಿ ನಾವು ಸಮ್ಮತಿಸುತ್ತೇವೆ. ಏಕೆಂದರೆ ನಮಗೆ ಕೊಡಲು ಅಸಾಧ್ಯವಾದದ್ದನ್ನು ನೀವು ಕೇಳಿದರೆ ನಾವು ಮಾತಿಗೆ ತಪ್ಪಿದ ಶಿಷ್ಯಂದಿರಾಗುತ್ತೇವೆ. ಅದು ತಪ್ಪಲ್ಲವೇ?” ಎನ್ನುತ್ತಾರೆ. ಆಗ ಅರ್ಜುನ “ ಶಿಷ್ಯರಿಗೆ ಅಸಾಧ್ಯವಾದ ಗುರು ದಕ್ಷಿಣೆಯನ್ನು ಗುರುಗಳು ಕೇಳುವುದಿಲ್ಲ ಎಂಬ ನಂಬಿಕೆ ನನಗಿದೆ. ಈ ಕಾರಣದಿಂದಲೇ ನಾನು ಮುಂದೆ ಬಂದಿರುವುದು" ಎನ್ನುತ್ತಾನೆ. ಅರ್ಜುನನ ಮಾತಿನಿಂದ ದ್ರೋಣರು ಇನ್ನಷ್ಟು ಪ್ರಭಾವಿತರಾಗುತ್ತಾರೆ. ಹೀಗೆ ತನ್ನ ಕಲಿಕೆಯ ಪ್ರತಿಯೊಂದು ಹಂತದಲ್ಲಿ ಚಾಣಾಕ್ಷತನವನ್ನು ಪ್ರದರ್ಶಿಸಿದ ಕಾರಣದಿಂದ ದ್ರೋಣಾಚಾರ್ಯರಿಗೆ ಅರ್ಜುನನು ಪ್ರಿಯ ಶಿಷ್ಯನಾಗುತ್ತಾನೆ.

ಚಿತ್ರ ಕೃಪೆ: ಅಂತರ್ಜಾಲ ತಾಣ