ಮಹಾಭಾರತದ ಕಥೆಗಳು (ಭಾಗ ೨೧) - ಶಕುನಿಯ ದಾಳಗಳು

ಮಹಾಭಾರತದಲ್ಲಿ ಕುರುಕ್ಷೇತ್ರ ಯುದ್ಧಕ್ಕೆ ಕಾರಣೀಭೂತನಾದ ಪ್ರಮುಖ ವ್ಯಕ್ತಿ ಶಕುನಿ. ಗಾಂಧಾರ ದೇಶದ ರಾಜನಾಗಿದ್ದ ಶಕುನಿ ದುರ್ಯೋಧನನ ಸೋದರ ಮಾವ, ಅಂದರೆ ಗಾಂಧಾರಿಯ ಸಹೋದರ. ಶಕುನಿಯ ಕೈಯಲ್ಲಿ ಯಾವಾಗಲೂ ಪಗಡೆಯಾಟದ ದಾಳಗಳು ಇದ್ದೇ ಇರುತ್ತಿದ್ದವು. ಈ ದಾಳಗಳ ಸಹಾಯದಿಂದಲೇ ಆತ ಕೌರವರಿಗೂ ಪಾಂಡವರ ನಡುವೆ ನಡೆದ ದ್ಯೂತ ಕ್ರೀಡೆಯಲ್ಲಿ ಪಾಂಡವರನ್ನು ಸೋಲಿಸಿದ್ದ. ಆ ದಾಳಗಳು ಶಕುನಿಯ ಮಾತುಗಳನ್ನು ಕೇಳುತ್ತಿದ್ದುವೇ? ಆತನ ಮಾತುಗಳನ್ನು ಆ ದಾಳಗಳು ಕೇಳಲು ಇರುವ ಕಾರಣವಾದರೂ ಏನು? ಎಂಬುವುದನ್ನು ನಾವಿಂದು ತಿಳಿದುಕೊಳ್ಳುವ.
ಹಸ್ತಿನಾಪುರದ ಯುವರಾಜ ಧೃತರಾಷ್ಟ್ರ ಜನ್ಮತಃ ಅಂಧನಾಗಿದ್ದ. ಆತನಿಗೆ ಮದುವೆ ಮಾಡಿಸಲು ಭೀಷ್ಮ ಗಾಂಧಾರ ದೇಶದ ಮಹಾರಾಜನಾದ ಸುಬಲನನ್ನು ತನ್ನ ಅಪಾರ ಸೇನೆಯ ಜೊತೆಗೆ ಭೇಟಿಯಾಗುತ್ತಾನೆ. ಭೇಟಿಯಲ್ಲಿ ಆತನ ಮಗಳಾದ ಗಾಂಧಾರಿಯನ್ನು ಧೃತರಾಷ್ಟ್ರನಿಗೆ ಧಾರೆ ಎರೆದು ಕೊಡಬೇಕೆಂದು ಮನವಿ ಮಾಡುತ್ತಾನೆ. ಭೀಷ್ಮನ ಮಾತಿಗೆ ಎದುರಾಡುವಂತೆಯೇ ಇರಲಿಲ್ಲ. ಆ ಸಮಯ ಭೀಷ್ಮನನ್ನು ಸೋಲಿಸುವ ವ್ಯಕ್ತಿ ಇಡೀ ಭೂಮಂಡಲದಲ್ಲಿ ಯಾರೂ ಇರಲಿಲ್ಲ. ಹಸ್ತಿನಾಪುರದ ಸೈನ್ಯವೂ ಅವನ ಜೊತೆಗೆ ಬಂದಿದ್ದ ಕಾರಣ ಭೀಷ್ಮನ ಮನವಿಯನ್ನು ಅಲ್ಲಗಳೆಯಲು ಗಾಂಧಾರ ರಾಜನಿಗೆ ಸಾಧ್ಯವಾಗಲಿಲ್ಲ. ಆ ಸಮಯ ಯುವರಾಜ ಶಕುನಿ ಗಾಂಧಾರ ದೇಶದಲ್ಲಿರಲಿಲ್ಲ.
ತಾನು ಮದುವೆಯಾಗುವ ವ್ಯಕ್ತಿ ಕಣ್ಣುಕಾಣದವನು ಎಂದು ತಿಳಿದ ಗಾಂಧಾರಿ ತನ್ನ ಕಣ್ಣಿಗೆ ಪಟ್ಟಿಯನ್ನು ಕಟ್ಟಿಕೊಳ್ಳುತ್ತಾಳೆ. ಮತ್ತು ಜೀವಮಾನವಿಡೀ ಅಂಧಳಾಗಿಯೇ ಬದುಕನ್ನು ಸವೆಸಲು ನಿಶ್ಚಯ ಮಾಡುತ್ತಾಳೆ. ಗಾಂಧಾರಿ ಕಣ್ಣಿಗೆ ಪಟ್ಟಿ ಕಟ್ಟಿಕೊಂಡ ಸಮಯದಲ್ಲಿ ಶಕುನಿಯ ಆಗಮನವಾಗುತ್ತದೆ. ಆತ ತನ್ನ ಸಹೋದರಿಯ ಹತ್ತಿರ ಕಣ್ಣಿಗೆ ಕಟ್ಟಿದ ಪಟ್ಟಿಯನ್ನು ತೆಗೆಯುವಂತೆ ಕೇಳುತ್ತಾನೆ, ಆದರೆ ತನ್ನ ಗಂಡನಾಗುವವನಿಗೆ ಇಲ್ಲದ ಸೌಭಾಗ್ಯ ನನಗೂ ಬೇಕಾಗಿಲ್ಲ ಎನ್ನುತ್ತಾಳೆ ಗಾಂಧಾರಿ. ಇದರಿಂದಾಗಿ ಶಕುನಿಗೆ ಬಹಳ ಬೇಸರವಾಗುತ್ತದೆ. ಆದರೆ ಭೀಷ್ಮನ ಜೊತೆ ಕಾದಾಡುವುದು ಸಾಧ್ಯವಿಲ್ಲದ ಮಾತಾದುದರಿಂದ ಮೌನವಾಗಿ ಮದುವೆಗೆ ಸಮ್ಮತಿ ನೀಡುತ್ತಾನೆ.
ಮದುವೆಯ ಬಳಿಕ ಶಕುನಿ ಗಾಂಧಾರ ದೇಶವನ್ನು ಬಿಟ್ಟು ಹೆಚ್ಚಿನ ಸಮಯ ಹಸ್ತಿನಾಪುರದಲ್ಲೇ ಕಳೆಯುತ್ತಾನೆ. ಶಕುನಿಯು ಯಾಕಾಗಿ ಪಾಂಡವರ ವಿರುದ್ಧ ಕೌರವರನ್ನು ಹೋರಾಡುವಂತೆ ಪ್ರೇರೇಪಿಸಿದ ಎನ್ನುವುದಕ್ಕೆ ಬಲವಾದ ಒಂದು ಕಾರಣವಿದೆ. ಗಾಂಧಾರ ರಾಜ ಸುಬಲನಿಗೆ ನೂರು ಮಂದಿ ಗಂಡು ಮಕ್ಕಳು ಹಾಗೂ ಓರ್ವ ಪುತ್ರಿ (ಗಾಂಧಾರಿ). ಸುಬಲನ ನೂರನೆಯ ಮಗನೇ ಶಕುನಿ. ಶಕುನಿ ತನ್ನ ತೀಕ್ಷ್ಣ ಬುದ್ಧಿ ಹಾಗೂ ಕುಟಿಲತೆಗೆ ಪ್ರಸಿದ್ಧನಾಗಿದ್ದ.
ಗಾಂಧಾರಿಯ ಜೊತೆ ಮದುವೆಯಾಗಿ ನೂರಾ ಒಂದು ಮಕ್ಕಳು ಹುಟ್ಟಿದ ಬಳಿಕ ಒಮ್ಮೆ ಧೃತರಾಷ್ಟ್ರನಿಗೆ ಗಾಂಧಾರಿಗೆ ತನ್ನನ್ನು ಮದುವೆಯಾಗುವ ಮೊದಲೇ ಒಂದು ಮದುವೆಯಾಗಿತ್ತು ಎಂಬ ವಿಷಯ ತಿಳಿದು ಬರುತ್ತದೆ. ಆ ಬಗ್ಗೆ ಆತ ವಿಚಾರಿಸಿದಾಗ ಗಾಂಧಾರಿಯ ಜಾತಕದಲ್ಲಿನ ದೋಷ ನಿವಾರಣೆಗಾಗಿ ಆಡೊಂದರ ಜೊತೆ ಅವಳಿಗೆ ವಿವಾಹ ಮಾಡಿಕೊಡಲಾಗಿತ್ತು. ನಂತರ ಆ ಆಡನ್ನು ವಧೆ ಮಾಡಲಾಗಿತ್ತು. ಹೀಗೆ ಮಾಡಿದ ಕಾರಣದಿಂದ ಆಕೆ ವಿಧವೆಯಾಗಿದ್ದಳು. ತಾನೊಬ್ಬ ವಿಧವೆಯನ್ನು ವಿವಾಹವಾದ ಬಗ್ಗೆ ಧೃತರಾಷ್ಟ್ರನಿಗೆ ಬಹಳ ಸಿಟ್ಟು ಬಂತು. ಈ ವಿಚಾರವನ್ನು ತನ್ನ ಬಳಿ ಹೇಳದ ಕಾರಣಕ್ಕೆ ಗಾಂಧಾರಿಯ ತಂದೆ ಹಾಗೂ ಸಹೋದರರನ್ನು ಬಂಧಿಸಿ ಕತ್ತಲಿನ ಕಾರಾಗೃಹಕ್ಕೆ ತಳ್ಳುತ್ತಾನೆ.
ಅವರನ್ನು ಒಮ್ಮೆಲೇ ಕೊಲ್ಲುವ ಬದಲಾಗಿ ನಿಧಾನವಾಗಿ ಸಾಯುವಂತೆ, ನರಕಯಾತನೆ ಅನುಭವಿಸುವಂತೆ ಮಾಡಲು, ದಿನಾಲೂ ನೂರಾ ಒಂದು ಅನ್ನದ ಅಗಳನ್ನು ಸೆರೆಮನೆಯ ಒಳಗೆ ಎಸೆಯಲಾಗುತ್ತಿತ್ತು. ಒಬ್ಬೊಬ್ಬರು ಒಂದೊಂದು ಅಗಳಿನಂತೆ ತಿಂದರೆ ತಮ್ಮ ಮೇಲಾದ ಅನ್ಯಾಯಕ್ಕೆ ಪ್ರತೀಕಾರ ತಿಳಿಸಲು ಯಾರೊಬ್ಬರೂ ಬದುಕಿ ಉಳಿಯುವುದಿಲ್ಲ ಎಂಬ ಸತ್ಯ ರಾಜ ಸುಬಲನಿಗೆ ಅರ್ಥವಾಗುತ್ತದೆ. ಆತ ತನ್ನೆಲ್ಲಾ ಮಕ್ಕಳನ್ನು ಸೇರಿಸಿ ಅಲ್ಲಿ ಸಿಗುವ ಅನ್ನವನ್ನು ತಮ್ಮಲ್ಲಿ ಬುದ್ಧಿವಂತನಾಗಿರುವ ಶಕುನಿಗೆ ಕೊಡುವುದೆಂದು ತೀರ್ಮಾನಿಸುತ್ತಾನೆ. ಅದರಂತೆ ಎಲ್ಲಾ ಅನ್ನವನ್ನು ಶಕುನಿ ಮಾತ್ರ ತಿನ್ನುತ್ತಾನೆ. ದಿನಂಪ್ರತಿ ತನ್ನ ಸಹೋದರರು ಸಾಯುವುದನ್ನು ಕಾಣುವ ಶಕುನಿಗೆ ಧೃತರಾಷ್ಟ್ರನ ಮೇಲೆ ವಿಪರೀತ ದ್ವೇಷ ಹುಟ್ಟಿಕೊಳ್ಳುತ್ತಾ ಹೋಗುತ್ತದೆ. ಎಲ್ಲಾ ಸಹೋದರರು ಸತ್ತ ಬಳಿಕ ಕೊನೆಗೊಂದು ದಿನ ಆತನ ತಂದೆ ಸುಬಲನೂ ಸಾಯುವ ಸ್ಥಿತಿಗೆ ತಲುಪುತ್ತಾನೆ.
ಆಗ ಆತ ಶಕುನಿಯನ್ನು ಕರೆದು ಹೇಳುತ್ತಾನೆ “ ನಾನು ಸತ್ತ ಬಳಿಕ ನನ್ನ ಬೆನ್ನಿನ ಮೂಳೆಯನ್ನು ತೆಗೆದು ಅದರಿಂದ ಪಗಡೆಯ ದಾಳಗಳನ್ನು ಮಾಡು. ಅದು ನಿನ್ನ ಮಾತು ಕೇಳುತ್ತದೆ. ಆ ದಾಳಗಳನ್ನು ಬಳಸಿ ಉಪಾಯದಿಂದ ಕೌರವರ ನಾಶ ಮಾಡು’. ಈ ಮಾತುಗಳನ್ನು ಹೇಳಿ ಸುಬಲ ಪ್ರಾಣವನ್ನು ತ್ಯಜಿಸುತ್ತಾನೆ. ತನ್ನ ತಂದೆಯ ಶರೀರವನ್ನು ದಹನ ಮಾಡಿದ ಬಳಿಕ ಆತನ ಮೂಳೆಗಳನ್ನು ಸಂಗ್ರಹ ಮಾಡಿ ಅದರಿಂದ ದಾಳಗಳನ್ನು ನಿರ್ಮಿಸಿಕೊಳ್ಳುತ್ತಾನೆ ಶಕುನಿ. ನಂತರದ ದಿನಗಳಲ್ಲಿ ಅವನು ತನ್ನ ಕುಟಿಲ ಬುದ್ಧಿಯಿಂದ ದುರ್ಯೋಧನನ ವಿಶ್ವಾಸವನ್ನು ಗಳಿಸಿ ಆತ ತನ್ನ ಮಾತನ್ನು ಕೇಳುವಂತೆ ಮಾಡುತ್ತಾನೆ. ಆತನಲ್ಲಿ ಪಾಂಡವರ ವಿರುದ್ಧ ದ್ವೇಷವನ್ನು ಹುಟ್ಟಿಸಿ, ದ್ಯೂತ ಕ್ರೀಡೆ ನಡೆಯುವಂತೆ ಮಾಡಿ, ಪಾಂಡವರು ಸೋಲುವಂತೆ ನೋಡಿಕೊಳ್ಳುತ್ತಾನೆ. ಶಕುನಿಯ ದಾಳಗಳು ಆತನ ಮಾತುಗಳನ್ನು ಕೇಳುತ್ತಿದ್ದವು. ಆ ಕಾರಣದಿಂದ ಪಾಂಡವರಿಗೆ ಸೋಲಾಗುತ್ತದೆ. ಆ ಸಂದರ್ಭದಲ್ಲಿ ದ್ರೌಪದಿಯ ವಸ್ತ್ರಾಪಹರಣದ ಘಟನೆ ನಡೆಯುತ್ತದೆ. ಇದರಿಂದ ಪಾಂಡವರಿಗೆ ಕೌರವರ ಮೇಲಿನ ದ್ವೇಷ ಇನ್ನಷ್ಟು ಜಾಸ್ತಿಯಾಗುತ್ತದೆ. ಕೊನೆಯಲ್ಲಿ ಕುರುಕ್ಷೇತ್ರ ಯುದ್ಧ ನಡೆದು ಕೌರವರೆಲ್ಲರ ನಾಶವಾಗುತ್ತದೆ. ಈ ಮೂಲಕ ಪರೋಕ್ಷವಾಗಿ ಶಕುನಿ ತನ್ನ ತಂದೆಗೆ ನೀಡಿದ ಮಾತನ್ನು ಪಾಲಿಸುತ್ತಾನೆ.
ಈ ದಾಳಗಳು ನಾಶವಾದುದು ಹೇಗೆ ಗೊತ್ತೇ?: ದುರ್ಯೋಧನ ಹೊರತು ಪಡಿಸಿ ತನ್ನೆಲ್ಲಾ ಪುತ್ರರು ಯುದ್ಧದಲ್ಲಿ ಮೃತರಾದದ್ದು ಕೇಳಿ ವ್ಯಾಕುಲಗೊಂಡ ಗಾಂಧಾರಿ ದುರ್ಯೋಧನನ ಇಡೀ ಮೈಯನ್ನು ವಜ್ರದಂತೆ ಕಠಿಣವಾಗಿಸುತ್ತೇನೆಂದು ನಿರ್ಧಾರ ಮಾಡುತ್ತಾಳೆ. ಅದಕ್ಕಾಗಿ ತಾನು ಕಣ್ಣಿಗೆ ಕಟ್ಟಿಕೊಂಡ ಪಟ್ಟಿಯನ್ನು ಬಿಚ್ಚಲು ನಿರ್ಧಾರ ಮಾಡುತ್ತಾಳೆ. ಹುಟ್ಟುಡುಗೆ (ಬೆತ್ತಲೆ) ಯಲ್ಲಿ ತನ್ನನ್ನು ನೋಡಲು ಬಾ ಎಂದು ದುರ್ಯೋಧನನಿಗೆ ಹೇಳಿ ಕಳುಹಿಸುತ್ತಾಳೆ. ಈ ವಿಚಾರ ತಿಳಿದ ಶಕುನಿ, ದುರ್ಯೋಧನ ತಾಯಿಯ ಬಳಿ ಹೋಗುವಾಗ ಶ್ರೀಕೃಷ್ಣ ಖಂಡಿತವಾಗಿಯೂ ಮೋಸದಿಂದ ಏನಾದರೂ ಕುತಂತ್ರ ಮಾಡುತ್ತಾನೆ ಎಂದು ಆತನಲ್ಲಿಗೆ ಹೋಗಿ ‘ಕೃಷ್ಣಾ, ನಾವು ಯಾಕೆ ಪಗಡೆಯಾಟವಾಡ ಬಾರದು?” ಎಂದು ಆಹ್ವಾನ ನೀಡುತ್ತಾನೆ. ಕೃಷ್ಣನಿಗೆ ಆತನ ಮನದ ಆಸೆ ತಿಳಿಯುತ್ತದೆ. ಆತ ನಸುನಕ್ಕು ಸಮ್ಮತಿ ಸೂಚಿಸಿ ಆಟದಲ್ಲಿ ತೊಡಗಿ ಸುಮ್ಮನೇ ಕಾಲಹರಣ ಮಾಡುತ್ತಾನೆ. ಅದೇ ಸಮಯ ಕೃಷ್ಣನ ಇನ್ನೊಂದು ಪ್ರತಿರೂಪ ದುರ್ಯೋಧನನ ಬಳಿಗೆ ತೆರಳಿ ಆತ ಬೆತ್ತಲೆಯಾಗಿ ತನ್ನ ತಾಯಿ ಬಳಿಗೆ ಹೋಗದಂತೆ ತಡೆಯುತ್ತಾನೆ. ಇದರಿಂದ ದುರ್ಯೋಧನನ ದೇಹದ ಬಹುಭಾಗ ವಜ್ರದಂತೆ ಗಟ್ಟಿಯಯಾದರೂ ಸೊಂಟದ ಭಾಗ ಮಾತ್ರ ಬಲಹೀನವಾಗುತ್ತದೆ.
ಕೃಷ್ಣ ತನ್ನನ್ನು ಸುಮ್ಮನೇ ಆಟದಲ್ಲಿ ತೊಡಗಿಸಿಕೊಂಡಿದ್ದಾನೆ ಎಂಬ ಸತ್ಯ ಶಕುನಿಗೆ ಅರಿವಾಗುವಾಗ ತುಂಬಾ ತಡವಾಗುತ್ತದೆ. ಆತ ಧಾವಂತದಿಂದ ದುರ್ಯೋಧನ ಬಳಿ ಓಡುತ್ತಾನೆ. ಆ ಸಮಯ ಆತ ತನ್ನ ದಾಳಗಳನ್ನು ಅಲ್ಲೇ ಬಿಟ್ಟು ಹೋಗುತ್ತಾನೆ. ಕೃಷ್ಣ ತನ್ನ ಕೈಯಲ್ಲಿ ಆ ದಾಳಗಳನ್ನು ಹುಡಿ ಮಾಡಿ, ಗಾಳಿಗೆ ಹಾರಿಸಿ ಬಿಡುತ್ತಾನೆ. ಹೀಗೆ ಶಕುನಿಯ ದಾಳಗಳು ಗಾಳಿಯಲ್ಲಿ ಲೀನವಾಗಿ ಹೋಗುತ್ತವೆ. ಕುರುಕ್ಷೇತ್ರ ಯುದ್ಧದ ಕೊನೆಯ ದಿನ ಶಕುನಿಯೂ ಸಹದೇವನ ಕೈಯಿಂದ ಹತನಾಗುತ್ತಾನೆ.
ಚಿತ್ರ ಕೃಪೆ: ಅಂತರ್ಜಾಲ ತಾಣ