ಮಹಾಭಾರತದ ಕಥೆಗಳು (ಭಾಗ ೨೨) - ವಿದುರನ ಜನ್ಮ ರಹಸ್ಯ

ಮಹಾಭಾರತದ ಕಥೆಗಳು (ಭಾಗ ೨೨) - ವಿದುರನ ಜನ್ಮ ರಹಸ್ಯ

ಮಹಾಭಾರತದ ಕಥೆಗಳಲ್ಲಿ ಕಂಡು ಬರುವ ಪ್ರಮುಖ ಪಾತ್ರಗಳಲ್ಲಿ ಒಂದು- ವಿದುರ. ಈತ ಹಸ್ತಿನಾಪುರದ ಮಹಾರಾಜ ಧೃತರಾಷ್ಟ್ರನ ಮಲ ಸಹೋದರ ಹಾಗೂ ಮಹಾ ಮಂತ್ರಿ. ವಿದುರ ಅಂದರೆ ಬುದ್ಧಿವಂತ, ಚತುರ, ಕುಶಲಮತಿ ಎಂಬ ಅರ್ಥವಿದೆ. ನಿಮಗೆಲ್ಲಾ ಧೃತರಾಷ್ಟ್ರ, ಪಾಂಡು ಹಾಗೂ ವಿದುರನ ಜನ್ಮದ ಬಗ್ಗೆ ತಿಳಿದೇ ಇರುತ್ತದೆ. ಆದರೆ ವಿದುರ ಹೀಗೆ ದಾಸಿಯ ಮಗನಾಗಿ ಹುಟ್ಟಲು ಏನು ಕಾರಣ. ಆತ ಯಾರ ಶಾಪದ ಫಲ? ಶಾಪಗ್ರಸ್ಥನಾದ ವ್ಯಕ್ತಿ ಯಾರು? ಎಂಬೆಲ್ಲಾ ಸಂಗತಿ ಬಹಳಷ್ಟು ಮಂದಿಗೆ ತಿಳಿದಿರಲಾರದು. 

ಹಸ್ತಿನಾಪುರದ ರಾಜನಾಗಿದ್ದ ವಿಚಿತ್ರ ವೀರ್ಯನಿಗೆ ಅಂಬಿಕೆ ಹಾಗೂ ಅಂಬಾಲಿಕೆ ಎಂಬ ಇಬ್ಬರು ಪತ್ನಿಯರಿದ್ದರೂ ಸಂತಾನ ಭಾಗ್ಯವಿರುವುದಿಲ್ಲ. ಕ್ಷಯ ರೋಗದಿಂದ ಆತ ಸಂತಾನಹೀನನಾಗಿ ಮೃತ ಪಟ್ಟಾಗ ಆತನ ತಾಯಿ ಸತ್ಯವತಿಗೆ ತಮ್ಮ ರಾಜ್ಯವನ್ನು ಆಳುವವರು ಯಾರು ಎಂಬ ಚಿಂತೆ ಕಾಡತೊಡಗುತ್ತದೆ. ಈ ಕಾರಣದಿಂದಾಗಿ ಆಕೆ ತನ್ನ ಮತ್ತೊರ್ವ ಪುತ್ರ ವ್ಯಾಸನನ್ನು ಕರೆದು ವಿಚಿತ್ರವೀರ್ಯನ ಪತ್ನಿಯರಿಗೆ ಸಂತಾನ ಭಾಗ್ಯ ಕರುಣಿಸು ಎಂದು ವಿನಂತಿ ಮಾಡಿಕೊಳ್ಳುತ್ತಾಳೆ. (ಆಗಿನ ಕಾಲದಲ್ಲಿ ಅಣ್ಣನ ಅಥವಾ ತಮ್ಮನ ಪತ್ನಿಯರಿಗೆ ಮಕ್ಕಳು ಇಲ್ಲದೇ ಇದ್ದಾಗ ಆತನ ಸಹೋದರನು ‘ನಿಯೋಗ' ಕ್ರಮದ ಮೂಲಕ ಸಂತಾನ ಭಾಗ್ಯವನ್ನು ಕರುಣಿಸಬಹುದಾಗಿತ್ತು) ವ್ಯಾಸ ಮುನಿಯನ್ನು ಕಂಡು ಹೆದರಿ ತನ್ನ ಕಣ್ಣುಗಳನ್ನು ಮುಚ್ಚಿಕೊಂಡ ಕಾರಣ ಅಂಬಿಕೆಗೆ ಕುರುಡ ಮಗು ಹುಟ್ಟುತ್ತದೆ. ಆತನೇ ಧೃತರಾಷ್ಟ್ರ. ವ್ಯಾಸನನ್ನು ಕಂಡು ಗಾಬರಿ ಪಟ್ಟು ಅಂಬಾಲಿಕೆಯ ಮೈಬಣ್ಣ ಬಿಳಚಿಹೋಗುತ್ತದೆ. ಅವಳಿಗೆ ಹುಟ್ಟಾ ಚರ್ಮ ರೋಗವನ್ನು ಪೀಡಿತ ಪಾಂಡು ಹುಟ್ಟುತ್ತಾನೆ. ಇದರಿಂದ ಸತ್ಯವತಿಗೆ ಬಹಳ ನೋವಾಗುತ್ತದೆ. ರಾಜ್ಯವನ್ನು ಆಳಲು ಓರ್ವ ಬಲಿಷ್ಟ ಮಗು ಇಲ್ಲವಲ್ಲಾ ಎಂದು. ಅದಕ್ಕಾಗಿ ಆಕೆ ಅಂಬಿಕೆ ಹಾಗೂ ಅಂಬಾಲಿಕೆಯರಿಗೆ ಮತ್ತೊಮ್ಮೆ ವ್ಯಾಸನ ಬಳಿ ಹೋಗಲು ಅಪ್ಪಣೆ ನೀಡುತ್ತಾಳೆ. ಆದರೆ ಅವರು ತಾವು ಮತ್ತೆ ವ್ಯಾಸರ ಬಳಿಗೆ ಹೋಗಲು ಹೆದರಿ ತಮ್ಮ ದಾಸಿಯಾದ ಪರಿಶ್ರಮಿಯನ್ನು ಕಳುಹಿಸುತ್ತಾರೆ. 

ಪರಿಶ್ರಮಿಯು ಬಹಳ ಧೈರ್ಯದಿಂದ ವ್ಯಾಸರ ಬಳಿಗೆ ಹೋಗುತ್ತಾಳೆ. ಆಕೆ ಹೆದರದೇ ಇದ್ದ ಕಾರಣ ಬಹಳ ಬುದ್ಧಿವಂತ, ಚತುರ ಮಗು ಹುಟ್ಟುತ್ತದೆ. ಈತನೇ ವಿದುರ. ವಿದುರ ರಾಜ ಮನೆತನಕ್ಕೆ ಸೇರದ ವ್ಯಕ್ತಿಯಾದ ಕಾರಣ ದಾಸಿಯ ಪುತ್ರನೆಂದು ನಿರ್ಲಕ್ಷ್ಯಕ್ಕೆ ಒಳಗಾದರೂ ಆತನ ಬುದ್ಧಿವಂತಿಕೆಯನ್ನು ಗಮನಿಸಿ ಹಸ್ತಿನಾಪುರದ ಮಹಾಮಂತ್ರಿಯಾಗಿ ಆಯ್ಕೆಯಾಗುತ್ತಾನೆ. ಈತನಿಗೆ ಸುಲಭ ಎಂಬ ಹೆಸರಿನ ಪತ್ನಿ, ಅನುಕೇತು ಎಂಬ ಮಗ ಹಾಗೂ ಅಂಬಾವತಿ ಎಂಬ ಮಗಳು ಇರುತ್ತಾರೆ. ಈತ ಯುದ್ಧ ನಿಪುಣ, ಎಲ್ಲಾ ಬಗೆಯ ಶಸ್ತ್ರಾಸ್ತ್ರಗಳನ್ನು ಬಲ್ಲವನಾಗಿದ್ದ. ಈ ವಿಷಯ ಬಹುತೇಕರಿಗೆ ತಿಳಿದದ್ದೇ. ಹಾಗಾದರೆ ನಿಜಕ್ಕೂ ವಿದುರ ಯಾರು? ಬನ್ನಿ ತಿಳಿದುಕೊಳ್ಳುವ…

ಬಹಳ ಸಮಯದ ಹಿಂದೆ ಮಾಂಡವ್ಯ ಎಂಬ ಮುನಿಯು ಪ್ರಶಾಂತ ವಾತಾವರಣದಲ್ಲಿ ಆಶ್ರಮ ಕಟ್ಟಿ ವಾಸ ಮಾಡುತ್ತಿದ್ದರು. ಅವರು ದಿನದ ಬಹು ಸಮಯ ಧ್ಯಾನಾಸಕ್ತರಾಗಿರುತ್ತಿದ್ದರು. ಆ ಸಮಯದಲ್ಲಿ ಅವರು ಮೌನವೃತಧಾರಿಯಾಗಿರುತ್ತಿದ್ದರು. ಒಮ್ಮೆ ರಾಜನ ಅರಮನೆಯಿಂದ ಕಳ್ಳರು ಬೆಲೆಬಾಳುವ ವಸ್ತುಗಳನ್ನು ಕದ್ದು ಓಡಿ ಹೋಗುತ್ತಿರುವುದನ್ನು ರಾಜಭಟರು ನೋಡಿ ಅವರ ಬೆನ್ನು ಹತ್ತಿದರು. ಭಟರನ್ನು ನೋಡಿದ ಕಳ್ಳರು ಗಾಭರಿಯಿಂದ ಆ ವಸ್ತುಗಳನ್ನು ಮಾಂಡವ್ಯ ಮುನಿಯ ಆಶ್ರಮದ ಬಳಿ ಬಿಸಾಕಿ ಹೋದರು. ಅಲ್ಲಿಗೆ ಬಂದ ರಾಜಭಟರು ಆ ವಸ್ತುಗಳ ಬಗ್ಗೆ ಮುನಿಗಳ ಬಳಿ ವಿಚಾರಿಸಿದರು. ಮುನಿ ಮೌನ ವೃತಸ್ಥರಾಗಿದ್ದುದರಿಂದ ಭಟರಿಗೆ ಯಾವ ಉತ್ತರವನ್ನೂ ನೀಡಲಿಲ್ಲ. ಮುನಿಗಳ ಆಶ್ರಮದಲ್ಲಿ ಕಳ್ಳತನವಾದ ವಸ್ತುಗಳು ಸಿಕ್ಕಿದುದರಿಂದ ಅವರೂ ಕಳ್ಳರ ಜೊತೆ ಶಾಮೀಲಾಗಿದ್ದಾರೆಂದು ಭಟರು ಅಂದಾಜಿಸಿದರು. ಅವರು ಕಳ್ಳರ ಜೊತೆ ಮುನಿಗಳನ್ನೂ ಬಂಧಿಸಿ ರಾಜರ ಬಳಿಗೆ ಕರೆತಂದರು.

ರಾಜನು ವಿಚಾರಣೆಯನ್ನು ಮಾಡದೇ ಕಳ್ಳರ ಸಂಗಡ ಮುನಿಯನ್ನೂ ಶೂಲಕ್ಕೇರಿಸಲು ಆಜ್ಞೆ ನೀಡಿದನು. (ಶೂಲವೆಂದರೆ ಉದ್ದವಾದ ಕೋಲಿನ ಚೂಪಾದ ತುದಿ) ಇದಕ್ಕೆ ಕಳ್ಳರನ್ನು ಹಾಗೂ ಮಾಂಡವ್ಯ ಮುನಿಗಳನ್ನು ಕಟ್ಟಲಾಯಿತು. ಮುನಿಗಳ ಜೊತೆ ಶೂಲಕ್ಕೇರಿಸಿದ ಕಳ್ಳರು ಕೆಲವೇ ದಿನಗಳಲ್ಲಿ ಸತ್ತು ಹೋದರೂ, ಇವರು ತಮ್ಮ ತಪಸ್ಸಿನ ಫಲದಿಂದ ಬದುಕಿ ಉಳಿದರು. ಅವರು ಶೂಲದ ತುದಿಯಲ್ಲೇ ಪದ್ಮಾಸನ ಹಾಕಿ ಕುಳಿತುಕೊಂಡು ಧ್ಯಾನ ಮಾಡಿದರು. ತಮಗಾದ ಈ ನೋವಿಗೆ ಅವರು ಯಾರನ್ನೂ ದೂಷಿಸಲಿಲ್ಲ. ತಮ್ಮ ಪೂರ್ವ ಜನ್ಮದ ಕರ್ಮಗಳೇ ಇದಕ್ಕೆ ಕಾರಣವೆಂದು ನಂಬಿದರು. ಮುನಿಗಳ ನಿರಂತರ ಧ್ಯಾನದ ಪ್ರಭಾವದಿಂದ ಅಪಾರ ತೇಜಸ್ಸು ಅವರ ಮುಖದಲ್ಲಿ ಕಾಣತೊಡಗಿತು. ರಾಜ್ಯದ ಎಲ್ಲಾ ಸಾಧು ಸಂತರು ಅವರನ್ನು ಬಂಧಮುಕ್ತಗೊಳಿಸಬೇಕೆಂದು ರಾಜರಲ್ಲಿ ಮನವಿ ಮಾಡಿದರು. ರಾಜನೂ ಮುನಿಗಳ ತೇಜಸ್ಸು ಕಂಡು ಅವರನ್ನು ಆ ಶೂಲದಿಂದ ಕೆಳಕ್ಕೆ ಇಳಿಸಲು ಆಜ್ಞೆ ಮಾಡಿದ, ಆತನೇ ಖುದ್ದಾಗಿ ಮುನಿಗಳ ಬಳಿ ತೆರಳಿ ಕ್ಷಮಾಪಣೆ ಕೇಳಿದ. ಮುನಿಗಳನ್ನು ಇಳಿಸುವ ಸಂದರ್ಭದಲ್ಲಿ ಶೂಲವನ್ನು ಕತ್ತರಿಸುವಾಗ ಅದರ ಸ್ವಲ್ಪ ಭಾಗ ಮುನಿಗಳ ದೇಹದ ಒಳಗೇ ಉಳಿದು ಬಿಟ್ಟಿತು. ಈ ಕಾರಣದಿಂದ ಮಾಂಡವ್ಯ ಮುನಿಗಳು ನಡೆಯುವಾಗ ಸ್ವಲ್ಪ ಓರೆಕೋರೆಯಾಗಿ ನಡೆಯುತ್ತಿದ್ದರು. ಅವರನ್ನು ಆಣಿ (ಶೂಲ) ಮಾಂಡವ್ಯ ಮುನಿ ಎಂದೇ ಕರೆಯಲು ಆರಂಭಿಸಿದರು. ತದನಂತರ ಮಾಂಡವ್ಯ ಮುನಿಗಳು ನಿರಂತರ ತಪಸ್ಸನ್ನು ಮಾಡುತ್ತಾ ತನ್ನ ಜೀವಿತಾವಧಿಯನ್ನು ಕೊನೆಗೊಳಿಸಿ ಪರಲೋಕಕ್ಕೆ ತೆರಳಿದರು.

ಯಮಲೋಕದಲ್ಲಿ ಮಾಂಡವ್ಯ ಮುನಿಗಳಿಗೆ ಯಮರಾಜನ ದರ್ಶನವಾಗುತ್ತದೆ. ಆಗ ಮುನಿಗಳು  “ತಾನು ಶೂಲಕ್ಕೇರಲು ಏನು ಕಾರಣ? ತಾನು ಯಾವ ತಪ್ಪೂ ಮಾಡಿಲ್ಲವಲ್ಲಾ?” ಎನ್ನುತ್ತಾನೆ. ಯಮರಾಜ ಹೇಳುತ್ತಾನೆ “ ನೀವು ಬಾಲ್ಯದಲ್ಲಿ ಪುಟ್ಟ ಹುಡುಗನಾಗಿದ್ದಾಗ ಒಂದು ಪುಟ್ಟ ಕೀಟಕ್ಕೆ ಹಿಂಸೆ ಮಾಡಿದ್ದೀರಿ. ಆ ಕಾರಣದಿಂದ ನಿಮಗೆ ಈ ಶಿಕ್ಷೆ ಪ್ರಾಪ್ತವಾಯಿತು" ಇದನ್ನು ಆಲಿಸಿದ ಮುನಿಗಳಿಗೆ ಬಹಳ ಕೋಪ ಬರುತ್ತದೆ. “ ಯಮರಾಜಾ, ನೀನು ಇಷ್ಟೊಂದು ತಿಳಿದವನಾಗಿದ್ದೂ ಈ ತಪ್ಪು ಮಾಡಬಹುದೇ? ೧೪ ವರ್ಷದ ಕೆಳಗಿನ ಮಕ್ಕಳು ತಿಳಿಯದೇ ಮಾಡುವ ತಪ್ಪುಗಳನ್ನು ಪರಿಗಣನೆಗೆ ತೆಗೆದುಕೊಳ್ಳುವಂತಿಲ್ಲ ಎಂಬುದಾಗಿ ಶಾಸ್ತ್ರಗಳೇ ಹೇಳಿವೆಯಲ್ಲಾ? ಆದರೂ ನೀನು ನನಗೆ ಘೋರ ಶಿಕ್ಷೆ ನೀಡಿರುವೆ. ಇದಕ್ಕಾಗಿ ನೀನು ಪ್ರಾಯಶ್ಚಿತ್ತ ಮಾಡಲೇ ಬೇಕು.” ಎಂದು ಶಾಪ ನೀಡುತ್ತಾನೆ. ಆ ಶಾಪದ ಪ್ರಕಾರ ಯಮನು ಭೂಮಿಯಲ್ಲಿ ಜನ್ಮ ತಾಳಿ, ಅವಮಾನಗಳನ್ನು ಸಹಿಸಿ ಬದುಕು ಸವೆಸಬೇಕಾಗಿ ಬರುತ್ತದೆ. 

ಯಮನ ಒಂದು ಅಂಶವು ವಿದುರನಾಗಿ ಜನ್ಮ ತಾಳುತ್ತದೆ. ಹುಟ್ಟುವಾಗಲೇ ದಾಸಿಯ ಮಗ ಎಂದು ಅವಮಾನವನ್ನು ಕಟ್ಟಿಕೊಂಡು ಬೆಳೆಯುವ ಈತ ಜೀವನಪರ್ಯಂತ ರಾಜನ ಅಡಿಯಾಳಾಗಿ, ದುರ್ಯೋಧನನ ಕೆಟ್ಟ ಮಾತುಗಳನ್ನು ಕೇಳುತ್ತಾ ಬದುಕು ಸವೆಸಬೇಕಾಗುತ್ತದೆ. ಅತ್ಯಂತ ಧೀರ ಯೋಧನಾಗಿದ್ದರೂ ಆತನಿಗೆ ತನ್ನ ಶೌರ್ಯವನ್ನು ತೋರಿಸುವ ಯಾವುದೇ ಅವಕಾಶ ಸಿಗುವುದಿಲ್ಲ. ಪಾಂಡವರ ಕಡೆ ನಿಜಕ್ಕೂ ಧರ್ಮವಿದೆ ಎಂಬ ಅರಿವಿದ್ದರೂ ಈತ ಕೌರವರೆಡೆಗೇ ನಿಷ್ಟೆಯನ್ನು ತೋರಿಸಬೇಕಾಗುತ್ತದೆ. ವಿದುರ ಎಲ್ಲಾ ಯುದ್ಧ ತಂತ್ರ ಹಾಗೂ ಶಸ್ತ್ರಾಸ್ತ್ರಗಳಲ್ಲಿ ಪರಿಣತಿಯನ್ನು ಹೊಂದಿದ್ದ, ಆದರೂ ಆತ ಯಾಕೆ ಕುರುಕ್ಷೇತ್ರ ಯುದ್ಧದಲ್ಲಿ ಪಾಲ್ಗೊಳ್ಳಲಿಲ್ಲ? ಗೊತ್ತೇ?

ವಿದುರನ ಬಳಿ ಮಹಾವಿಷ್ಣು ನೀಡಿದ ಅದ್ಭುತವಾದ ಬಿಲ್ಲೊಂದಿತ್ತು. ಆ ಬಿಲ್ಲಿನ ಜೊತೆ ಯುದ್ಧ ಮಾಡಿದರೆ ವಿದುರನನ್ನು ಸೋಲಿಸುವವರು ಯಾರೂ ಇರಲಿಲ್ಲ. ಒಂದೊಮ್ಮೆ ವಿದುರ ಕುರುಕ್ಷೇತ್ರ ಯುದ್ಧದಲ್ಲಿ ಪಾಲ್ಗೊಂಡಿದ್ದರೆ ಪಾಂಡವರು ಖಂಡಿತಾ ಸೋಲುತ್ತಿದ್ದರು. ಆದರೆ ಒಮ್ಮೆ ಮಾತಿನ ಭರದಲ್ಲಿ ದುರ್ಯೋಧನ ವಿದುರನನ್ನು ಅವಮಾನಿಸುತ್ತಾನೆ. ಇದರಿಂದ ಕ್ರೋಧಿತನಾದ ವಿದುರ ತನ್ನ ಬಳಿ ಇದ್ದ ದಿವ್ಯವಾದ ಬಿಲ್ಲನ್ನು ಮುರಿದು ಹಾಕುತ್ತಾನೆ. ದುರ್ಯೋಧನನ ಕುಟಿಲತೆಯ ಅರಿವಿದ್ದ ಈತ ಯುದ್ಧದಲ್ಲಿ ಪಾಲ್ಗೊಳ್ಳುವುದಿಲ್ಲ. ಆದರೆ ದುರ್ಯೋಧನನಿಗೆ ಸದಾ ಕಾಲ ಬುದ್ದಿ ಹೇಳುತ್ತಾನೆ. ಆದರೆ ಆತ ವಿದುರನ ಮಾತಿಗೆ ಬೆಲೆಕೊಡದೇ ಎಲ್ಲರ ಸಾವಿಗೂ ಕಾರಣನಾಗುತ್ತಾನೆ.

ಯುದ್ಧದಲ್ಲಿ ಪಾಂಡವರು ಗೆದ್ದ ಬಳಿಕ ಯುಧಿಷ್ಟಿರ ರಾಜನಾಗುತ್ತಾನೆ. ಧೃತರಾಷ್ಟ್ರ, ಗಾಂಧಾರಿ ಹಾಗೂ ಕುಂತಿಯವರು ವಾನಪ್ರಸ್ಥಾಶ್ರಮಕ್ಕೆ ತೆರಳುವಾಗ ವಿದುರನೂ ಅವರ ಸಂಗಡ ಹೋಗುತ್ತಾನೆ. ಹೀಗೆ ಮಾಂಡವ್ಯ ಮುನಿಯ ಶಾಪದ ಕಾರಣ ಯಮನು ಭೂಮಿಯಲ್ಲಿ ಜನಿಸಿ, ಪಡಬಾರದ ಅವಮಾನಗಳನ್ನು ಅನುಭವಿಸುತ್ತಾನೆ ಎಂದು ಪುರಾಣಗಳಲ್ಲಿ ಉಲ್ಲೇಖಿತವಾಗಿದೆ.

ಚಿತ್ರ ಕೃಪೆ: ಅಂತರ್ಜಾಲ ತಾಣ