ಮಹಾಭಾರತದ ಕಥೆಗಳು (ಭಾಗ ೨೩) -ವೃಷಕೇತು
ಮಹಾಭಾರತದ ಕಥೆಗಳ ಹಿಂದಿನ ಭಾಗಗಳನ್ನು ಓದಿದವರಿಗೆ ‘ವೃಷಕೇತು' ಎಂಬ ಹೆಸರಿನ ವ್ಯಕ್ತಿಯ ಅಲ್ಪ ಪರಿಚಯ ಇರುತ್ತದೆ. ವೃಷಕೇತು ಕರ್ಣನ ಮಗ. ಕರ್ಣನ ಒಂಬತ್ತು ಮಕ್ಕಳಲ್ಲಿ ಮಹಾಭಾರತದ ಕುರುಕ್ಷೇತ್ರ ಯುದ್ಧದ ಬಳಿಕ ಬದುಕುಳಿದ ಏಕೈಕ ಪುತ್ರ. ಈತನ ಬಗ್ಗೆ ವಿವಿಧ ರೀತಿಯ ಕಥೆಗಳಿವೆ. ನಿಮಗೆ ಈಗಾಗಲೇ ತಿಳಿದಿರುವಂತೆ ಕರ್ಣನಿಗೆ ಇಬ್ಬರು ಪತ್ನಿಯರು. ವೃಶಾಲಿ ಮತ್ತು ಸುಪ್ರಿಯಾ. ಬಂಗಾಳದಲ್ಲಿ ಸುಪ್ರಿಯಾಳನ್ನು ‘ಪದ್ಮಾವತಿ’ ಎಂಬ ಹೆಸರಿನಿಂದ ಕರೆಯುತ್ತಾರೆ ಎನ್ನುವ ಬಗ್ಗೆ ಉಲ್ಲೇಖಗಳು ಇದೆ.
ಕರ್ಣನಿಗೆ ಇಬ್ಬರು ಪತ್ನಿಯರಿಂದ ೯ ಮಂದಿ ಮಕ್ಕಳು ಇದ್ದರು. ವೃಷಸೇನ, ಚಿತ್ರಸೇನ, ಸತ್ಯಸೇನ, ಸುಶೇನ, ಶತ್ರುಂಜಯ, ದ್ವಿಪಾದ, ಸುಶರ್ಮ, ಪ್ರಸೇನ ಹಾಗೂ ವೃಷಕೇತು. ಇವರಲ್ಲಿ ಪ್ರಸೇನನನ್ನು ಸಾತ್ಯಕಿ ಎಂಬಾತ ಕೊಲ್ಲುತ್ತಾನೆ. ಉಳಿದ ೮ ಮಂದಿ ಮಕ್ಕಳಲ್ಲಿ ಏಳು ಜನ ಕುರುಕ್ಷೇತ್ರ ಯುದ್ಧದಲ್ಲಿ ಪಾಲ್ಗೊಳ್ಳುತ್ತಾರೆ. ವೃಷಕೇತು ಈ ಯುದ್ಧದಲ್ಲಿ ಪಾಲ್ಗೊಳ್ಳುವುದಿಲ್ಲ. ಕಾರಣವೆಂದರೆ ಈತ ಕರ್ಣನ ಕೊನೆಯ ಪುತ್ರನಾಗಿದ್ದು ಆತನಿಗೆ ಯುದ್ಧದಲ್ಲಿ ಪಾಲ್ಗೊಳ್ಳುವಷ್ಟು ವಯಸ್ಸಾಗಿರುವುದಿಲ್ಲ. ಯುದ್ಧದ ಸಮಯದಲ್ಲಿ ಈತ ತನ್ನ ಅಜ್ಜಿಯ ಮನೆಯಲ್ಲಿರುತ್ತಾನೆ ಎಂದು ಕೆಲವು ಮಹಾಭಾರತದ ಕಥೆಗಳು ತಿಳಿಸುತ್ತವೆ. ಯುದ್ಧವೆಲ್ಲಾ ಮುಗಿದಾಗ ಕರ್ಣನ ಮಕ್ಕಳೆಲ್ಲಾ ಸತ್ತು, ವೃಷಕೇತು ಮಾತ್ರ ಬದುಕಿ ಉಳಿಯುತ್ತಾನೆ.
ಕರ್ಣನು ಸತ್ತ ಬಳಿಕ ಆತನ ಜನ್ಮ ರಹಸ್ಯವು ಜಗತ್ತಿಗೇ ತಿಳಿಯುತ್ತದೆ. ಆದರೆ ಅಜ್ಜಿಯ ಮನೆಯಲ್ಲಿದ್ದ ವೃಷಕೇತುವಿಗೆ ಈ ವಿಚಾರ ತಿಳಿದಿರುವುದಿಲ್ಲ. ಆತನಿಗೆ ತನ್ನ ತಂದೆಯನ್ನು ಕೊಂದ ಅರ್ಜುನನ ಮೇಲೆ ತುಂಬಾ ದ್ವೇಷ ಹುಟ್ಟುತ್ತದೆ. ಅರ್ಜುನನನ್ನು ವಧಿಸುವ ಉದ್ದೇಶದಿಂದ ಆತ ಹಸ್ತಿನಾಪುರಕ್ಕೆ ಪ್ರಯಾಣ ಬೆಳೆಸುತ್ತಾನೆ. ದಾರಿಯ ಮಧ್ಯದಲ್ಲಿ ಆತ ಒಂದು ನದಿ ತೀರದಲ್ಲಿ ವಿಶ್ರಾಂತಿ ಪಡೆಯುತ್ತಿರುವಾಗ ಅಲ್ಲಿಗೆ ಅರ್ಜುನನೂ ಬಂದಿರುತ್ತಾನೆ. ಅರ್ಜುನನನ್ನು ವೃಷಕೇತು ಅಲ್ಲಿಯ ತನಕ ಪ್ರತ್ಯಕ್ಷವಾಗಿ ಕಂಡಿರುವುದಿಲ್ಲ. ಅರ್ಜುನ ತುಂಬಾ ದುಃಖಿತನಾಗಿರುವುದನ್ನು ಕಂಡು ವೃಷಕೇತು ಅವನ ದುಃಖದ ಸಂಗತಿಯನ್ನು ಕೇಳುತ್ತಾನೆ.
ಅರ್ಜುನ “ಕರ್ಣನು ತನ್ನ ಅಣ್ಣನೆಂದು ತಿಳಿಯದೇ ತಾನು ಆತನನ್ನು ವಧೆ ಮಾಡಬೇಕಾಗಿ ಬಂತು, ಈ ನೋವಿನಿಂದ ನಾನು ಎಂದೂ ಹೊರ ಬರಲಾರೆ” ಎಂದು ದುಃಖಿಸುತ್ತಾ ಕರ್ಣನ ಜನ್ಮ ರಹಸ್ಯವನ್ನು ವೃಷಕೇತುವಿನ ಬಳಿ ಹೇಳುತ್ತಾನೆ. ಇದರಿಂದ ವೃಷಕೇತುವಿಗೆ ಅರ್ಜುನನ ಮೇಲೆ ಇದ್ದ ದ್ವೇಷದ ಛಾಯೆ ಮರೆಯಾಗಿ ಬಿಡುತ್ತದೆ. ಪಾಂಡವರಿಗೆ ಕರ್ಣ ತಮ್ಮ ಅಣ್ಣನೆಂದು ತಿಳಿದಿದ್ದರೆ, ಅವರು ಖಂಡಿತವಾಗಿಯೂ ಆತನ ಹತ್ಯೆ ಮಾಡುತ್ತಿರಲಿಲ್ಲ ಎಂಬ ವಿಚಾರ ತಿಳಿಯುತ್ತದೆ. ಆತ ಅರ್ಜುನನಲ್ಲಿ ತನ್ನ ಪರಿಚಯ ಹೇಳಿ ಕೊಂಡಾಗ ಅರ್ಜುನ ಬಹಳ ಸಂತಸ ಪಡುತ್ತಾನೆ. ಸ್ವತಃ ಕರ್ಣನೇ ತನ್ನ ಎದುರು ಬಂದು ನಿಂತ ಭಾವನೆ ಅವನಲ್ಲಿ ಮೂಡುತ್ತದೆ. ಆತ ವೃಷಕೇತುವನ್ನು ಕರೆದುಕೊಂಡು ಹಸ್ತಿನಾಪುರಕ್ಕೆ ಕರೆದುಕೊಂಡು ಹೋಗುತ್ತಾನೆ.
ಯುಧಿಷ್ಟಿರನಿಗೂ ಕರ್ಣನ ಪುತ್ರ ವೃಷಕೇತುವನ್ನು ಕಂಡು ಬಹಳ ಆನಂದವಾಗುತ್ತದೆ. ಆತನಿಗೆ ಹಸ್ತಿನಾಪುರದಲ್ಲೇ ನೆಲೆಸಲು ವ್ಯವಸ್ಥೆ ಮಾಡಿಕೊಡುತ್ತಾನೆ. ಚಿಕ್ಕಪ್ಪಂದಿರ ಪ್ರೀತಿಯನ್ನು ಕಂಡ ವೃಷಕೇತು ಮೂಕನಾಗುತ್ತಾನೆ. ಆತ ಅಲ್ಲೇ ವಾಸ ಮಾಡಲು ಪ್ರಾರಂಭಿಸುತ್ತಾನೆ. ಅರ್ಜುನ ಆತನಿಗೆ ಬಿಲ್ವಿದ್ದೆಯ ಹಲವಾರು ಪಟ್ಟುಗಳನ್ನು ಹೇಳಿಕೊಡುತ್ತಾನೆ. ಬ್ರಹ್ಮಾಸ್ತ್ರದಂತಹ ಅಪಾಯಕಾರಿ ಆದರೆ ಮಹತ್ವದ ವಿದ್ಯೆಯನ್ನೂ ಆತ ಕಲಿಯುತ್ತಾನೆ. ಬ್ರಹ್ಮಾಸ್ತ್ರದಂತಹ ವಿದ್ಯೆ ವೃಷಕೇತುವಿನ ಬಳಿ ಇರುವುದು ಭವಿಷ್ಯದಲ್ಲಿ ಅಪಾಯಕಾರಿಯಾದೀತು ಎಂದು ಶ್ರೀಕೃಷ್ಣನಿಗೆ ಅರಿವಾಗುತ್ತದೆ.
ಕೃಷ್ಣ ವೃಷಕೇತುವಿನ ಬಳಿಗೆ ತೆರಳಿ ಆತನಲ್ಲಿ ಒಂದು ಬೇಡಿಕೆಯನ್ನು ಮಂಡಿಸುತ್ತಾನೆ. ‘ನಾನು ಕೇಳುವ ಒಂದು ಮಾತನ್ನು ನಿನಗೆ ನೆರವೇರಿಸಿ ಕೊಡಲು ಸಾಧ್ಯವೇ?’ ಎಂದು ಕೇಳುತ್ತಾನೆ. ವೃಷಕೇತು ಹೇಳುತ್ತಾನೆ ‘ ಭಗವಾನ್, ನಾನು ದಾನಶೂರ ಕರ್ಣನ ಪುತ್ರ, ನೀವು ನನ್ನ ಜೀವವನ್ನೇ ಕೇಳಿದರೂ ನಾನು ಕೊಡಲು ಸಿದ್ಧನಿದ್ದೇನೆ’ ಎನ್ನುತ್ತಾನೆ. ಕೃಷ್ಣ ಆತನಿಂದ ಬ್ರಹ್ಮಾಸ್ತ್ರದ ವಿದ್ಯೆಯನ್ನು ಭವಿಷ್ಯದಲ್ಲಿ ಯಾರಿಗೂ ಕಲಿಸದಿರುವಂತೆ ಪ್ರಮಾಣ ಮಾಡುವಂತೆ ಕೇಳಿಕೊಳ್ಳುತ್ತಾನೆ. ವೃಷಕೇತು ಹಾಗೇ ಮಾಡುತ್ತಾನೆ.
ನಂತರದ ದಿನಗಳಲ್ಲಿ ಯುಧಿಷ್ಟಿರ ಅಶ್ವಮೇಧ ಯಾಗ ಮಾಡಲು ಸಂಕಲ್ಪ ಮಾಡುತ್ತಾನೆ. ಆ ಮೂಲಕ ಯಾಗದ ಕುದುರೆಯನ್ನು ಓಡಲು ಬಿಡಲಾಗುತ್ತದೆ. ಈ ಕುದುರೆಯು ಮಣಿಪುರ ಎಂದ ದೇಶವನ್ನು ತಲುಪಿದಾಗ ಅಲ್ಲಿಯ ರಾಜ ಬಭ್ರುವಾಹನನು (ಅರ್ಜುನ-ಚಿತ್ರಾಂಗದರ ಮಗ) ಈ ಕುದುರೆಯನ್ನು ಕಟ್ಟಿ ಹಾಕುತ್ತಾನೆ. ಆತನ ಜೊತೆ ಯುದ್ಧ ಮಾಡಲು ಅರ್ಜುನ ಹೊರಟಾಗ ಅವನ ಜೊತೆ ವೃಷಕೇತುವೂ ಹೊರಡುತ್ತಾನೆ. ಅರ್ಜುನ ತನ್ನ ತಂದೆಯೆಂದು ತಿಳಿಯದ ಬಭ್ರುವಾಹನ ಆತನ ಜೊತೆ ಯುದ್ಧ ಮಾಡುತ್ತಾನೆ. ಆತ ಯುದ್ಧದಲ್ಲಿ ವೃಷಕೇತು ಮತ್ತು ಅರ್ಜುನ ಇಬ್ಬರನ್ನೂ ಹತ್ಯೆ ಮಾಡುತ್ತಾನೆ. ಅರ್ಜುನನನ್ನು ಆತನ ಪತ್ನಿ ಉಲೂಪಿ ‘ನಾಗಮಣಿ' ಯ ಸಹಾಯದಿಂದ ಬದುಕಿಸುತ್ತಾಳೆ. ಈ ಯುದ್ದದಲ್ಲಿ ಕರ್ಣನ ಬದುಕುಳಿದ ಏಕೈಕ ಪುತ್ರನೂ ಅರ್ಜುನನ ಮಗನಾದ ಬಭ್ರುವಾಹನನ ಕೈಯಿಂದ ಹತನಾಗುತ್ತಾನೆ.
ಅಪಾಯಕಾರೀ ಶಸ್ತ್ರಾಸ್ತ್ರಗಳಾದ ಬ್ರಹ್ಮಾಸ್ತ್ರ, ವಾಯು ಅಸ್ತ್ರ, ವರುಣ ಅಸ್ತ್ರ, ನಾಗಾಸ್ತ್ರ, ಪಾಶುಪತಾಸ್ತ್ರ, ಅಗ್ನಿಯಾಸ್ತ್ರ ಮೊದಲಾದವುಗಳನ್ನು ಪ್ರಯೋಗಿಸುವ ಮಂತ್ರಗಳನ್ನು ತಿಳಿದಿದ್ದ ಕೊನೆಯ ವ್ಯಕ್ತಿ (ಪಾಂಡವರನ್ನು ಹೊರತು ಪಡಿಸಿ) ವೃಷಕೇತು ಎಂದು ಕೆಲವೆಡೆ ಬರೆದಿದ್ದಾರೆ. ಪಾಂಡು ಪುತ್ರರ ವಂಶಸ್ಥನಾಗಿರದ ಕಾರಣ (ಕರ್ಣ ಕುಂತಿಯ ಪುತ್ರನಾಗಿದ್ದರೂ ತಂದೆ ಪಾಂಡುವಾಗಿರಲಿಲ್ಲ ) ವೃಷಕೇತುವಿಗೆ ಹಸ್ತಿನಾಪುರದ ಯುವರಾಜ ಪಟ್ಟವೂ ಒದಗಿ ಬರುವುದಿಲ್ಲ. ಆ ಪಟ್ಟವು ಅಭಿಮನ್ಯು-ಉತ್ತರೆಯ ಮಗ ಪರೀಕ್ಷಿತನಿಗೆ ಸಿಗುತ್ತದೆ. ನಂತರದ ದಿನಗಳಲ್ಲಿ ಪರೀಕ್ಷಿತನು ಹಸ್ತಿನಾಪುರದ ಮಹಾರಾಜನಾಗಿ ಪಟ್ಟಾಭಿಶಕ್ತನಾಗುತ್ತಾನೆ.
ಪೂರಕ ಮಾಹಿತಿ: ಕೆಲವೊಂದು ಮಹಾಭಾರತದ ಕಥೆಗಳಲ್ಲಿ ಕೃಷ್ಣನು ಉಲೂಪಿಯ ‘ನಾಗಮಣಿ’ಯ ಸಹಾಯದಿಂದ ವೃಷಕೇತುವನ್ನೂ ಬದುಕಿಸುವಂತೆ ಕೇಳಿಕೊಂಡು, ಆತನು ಬದುಕಿ ಬಂದ ಬಳಿಕ ಆತನನ್ನು ಕರ್ಣನು ರಾಜನಾಗಿದ್ದ ಅಂಗದೇಶಕ್ಕೆ ಹಾಗೂ ಇಂದ್ರಪ್ರಸ್ತಕ್ಕೆ ರಾಜನನ್ನಾಗಿ ಮಾಡುತ್ತಾನೆ ಎಂಬ ಬಗ್ಗೆ ಮಾಹಿತಿಗಳು ದೊರೆಯುತ್ತವೆ.
ಚಿತ್ರ ಕೃಪೆ: ಅಂತರ್ಜಾಲ ತಾಣ