ಮಹಾಭಾರತದ ಕಥೆಗಳು - ಭೀಮ ‘ಬಲ’ಭೀಮನಾದ್ದು ಹೇಗೆ?

ಮಹಾಭಾರತದ ಕಥೆಗಳು - ಭೀಮ ‘ಬಲ’ಭೀಮನಾದ್ದು ಹೇಗೆ?

ಮಹಾಭಾರತದಲ್ಲಿ ಪಂಚ ಪಾಂಡವರಲ್ಲಿ ಎರಡನೇಯವನಾದ ಭೀಮನ ಬಗ್ಗೆ ತಿಳಿದೇ ಇದೆ. ಆದರೆ ಭೀಮನಿಗೆ ಸಾವಿರ ಆನೆಗಳ ಬಲ ಬಂದು ಆತ ಬಲಭೀಮನಾದ ಕಥೆ ನಿಮಗೆ ಗೊತ್ತೇ? 

ಬಾಲ್ಯದಿಂದಲೂ ಪಾಂಡು ರಾಜನ ಮಕ್ಕಳಾದ ಪಾಂಡವರಿಗೂ ಮತ್ತು ಆತನ ಅಣ್ಣ ಧೃತರಾಷ್ಟ್ರನ ಮಕ್ಕಳಾದ ಕೌರವರಿಗೂ ಜಗಳ ನಡೆಯುತ್ತಲೇ ಇತ್ತು. ನ್ಯಾಯಯುತವಾಗಿ ಪಾಂಡು ರಾಜನ ಮೊದಲ ಮಗ ಯುಧಿಷ್ಟಿರನು ಎಲ್ಲರಿಗಿಂತ ಹಿರಿಯನಾದುದರಿಂದ ಆತನು ಯುವರಾಜನಾಗಬೇಕಿತ್ತು. ಆದರೆ ಬಾಲ್ಯದಿಂದಲೂ ಕೌರವರ ನೂರು ಮಂದಿಯಲ್ಲಿ ಹಿರಿಯನಾದ ದುರ್ಯೋಧನನಿಗೆ ಪಾಂಡವರ ಮೇಲೆ ಇನ್ನಿಲ್ಲಿದ ದ್ವೇಷ. ಅವರನ್ನು ಕೊಲ್ಲಲು ಆತ ಹಲವಾರು ಬಾರಿ ಪ್ರಯತ್ನಿಸುತ್ತಾನೆ ಮತ್ತೆ ವಿಫಲನಾಗುತ್ತಾನೆ. ಆತನ ಈ ಕುಟಿಲ ಕಾರ್ಯಗಳಿಗೆ ಬೆಂಬಲ ನೀಡುತ್ತಿದ್ದದ್ದು ಆತನ ಸೋದರ ಮಾವ ಶಕುನಿ. ಇನ್ನಿಲ್ಲದ ಕಟ್ಟು ಕಥೆಗಳನ್ನು ಹೇಳಿ ದುರ್ಯೋಧನನ ತಲೆಯನ್ನು ಹಾಳು ಮಾಡಿ ಪಾಂಡವರ ಮೇಲೆ ದ್ವೇಷ ಬರುವಂತೆ ಮಾಡಿದ್ದ. ಬಾಲ್ಯದಿಂದಲೂ ದುರ್ಯೋಧನನಿಗೂ, ಭೀಮನಿಗೂ ದ್ವೇಷ ಬೆಳೆದು ಬಂದಿದ್ದು ಇದೇ ಕಾರಣದಿಂದಾಗಿ.

ಭೀಮನದ್ದು ಬಾಲ್ಯದಿಂದಲೂ ಧೃಢಕಾಯ ಶರೀರ. ಆತನ ಶಕ್ತಿಯೂ ಎಲ್ಲರಿಗಿಂತಲೂ ಅಧಿಕ. ಈ ಕಾರಣದಿಂದ ಕೌರವ-ಪಾಂಡವರ ನಡುವೆ ಕಲಹಗಳಾಗುತ್ತಿರುವಾಗ ಪಾಂಡವರೇ ಜಯ ಗಳಿಸುತ್ತಿದ್ದರು. ಭೀಮನು ತಿನ್ನುವುದರಲ್ಲಿಯೂ ಮುಂದೆ. ಹತ್ತು ಜನರ ಊಟವನ್ನು ಆತನೊಬ್ಬನೇ ಮಾಡಿ ಮುಗಿಸುತ್ತಿದ್ದ. 

ಒಂದು ದಿನ ಭೀಮನನ್ನು ಕೊಲ್ಲಲು ಶಕುನಿಯ ಯೋಜನೆಯಂತೆ ದುರ್ಯೋಧನ ಆತನ ಆಹಾರದಲ್ಲಿ ವಿಷವನ್ನು ಬೆರೆಸುತ್ತಾನೆ. ವಿಷಬೆರೆತ ಆಹಾರವನ್ನು ತಿಳಿಯದೇ ತಿಂದ ಭೀಮ ಪ್ರಜ್ಞಾಹೀನನಾಗುತ್ತಾನೆ. ಪ್ರಜ್ಞಾಹೀನನಾದ ಭೀಮನ ಶರೀರವನ್ನು ಕೈಕಾಲುಗಳನ್ನು ಬಿಗಿಯಾಗಿ ಕಟ್ಟಿ ದುರ್ಯೋಧನ ಮತ್ತು ಆತನ ಸಹೋದರರು ಸೇರಿ ಗಂಗಾ ನದಿಯಲ್ಲಿ ಬಿಸಾಕುತ್ತಾರೆ. ನದಿಯಲ್ಲಿ ಮುಳುಗಿದ ಭೀಮನ ಶರೀರ, ಭಾರವಾಗಿದ್ದುದರಿಂದ ನೇರವಾಗಿ ನದಿಯ ತಳದಲ್ಲಿದ್ದ ನಾಗಲೋಕಕ್ಕೆ ತಲುಪುತ್ತದೆ.

ನಾಗಲೋಕದಲ್ಲಿದ್ದ ಸಾವಿರಾರು ನಾಗಗಳು ಭೀಮನ ಶರೀರವನ್ನು ಕಚ್ಚತೊಡಗುತ್ತವೆ. ಅವುಗಳ ಕಚ್ಚುವಿಕೆಯಿಂದ ಭೀಮನ ಶರೀರಕ್ಕೆ ನಾಗಗಳ ವಿಷ ಸೇರುತ್ತದೆ. ಈ ವಿಷವು ಆತನ ದೇಹದಲ್ಲಿ ಇದ್ದ ವಿಷದ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಒಂದು ರೀತಿಯಲ್ಲಿ ಪ್ರತಿರೋಧಕ ಶಕ್ತಿಯನ್ನು ತುಂಬುತ್ತದೆ. ಇದರಿಂದ ಭೀಮನ ಶರೀರವು ವಿಷಮುಕ್ತವಾಗುತ್ತದೆ. ಆತನಿಗೆ ಪ್ರಜ್ಞೆ ಬರುತ್ತದೆ. ಎದ್ದು ನೋಡಿದಾಗ ತಾನು ನಾಗಲೋಕದಲ್ಲಿರುವ ಅರಿವು ಆತನಿಗಾಗುತ್ತದೆ. 

ಆತನಿಗೆ ಪ್ರಜ್ಞೆ ಬಂದ ಸುದ್ದಿ ನಾಗರಾಜ ವಾಸುಕಿಗೆ ತಿಳಿಯುತ್ತದೆ. ಆತ ತನ್ನ ಪರಿವಾರದೊಡನೆ ಭೀಮನು ಇದ್ದಲ್ಲಿಗೆ ಬರುತ್ತಾನೆ. ಭೀಮನು ನಾಗಗಳ ಜೊತೆ ಹೋರಾಡುತ್ತಿರುವುದನ್ನು ನೋಡಿ ‘ನಿಲ್ಲಿಸಿ ನಿಮ್ಮ ಹೋರಾಟವನ್ನು..' ಎಂದು ವಾಸುಕಿ ಆಜ್ಞೆ ಮಾಡುತ್ತಾನೆ. ಭೀಮನು ತನ್ನ ಹೋರಾಟವನ್ನು ನಿಲ್ಲಿಸುತ್ತಾನೆ. ಅಷ್ಟರಲ್ಲಿ ವಾಸುಕಿಯ ಪರಿವಾರದಲ್ಲಿದ್ದ ಆರ್ಯಕನೆಂಬ ನಾಗನು ಭೀಮನ ಗುರುತು ಹಿಡಿಯುತ್ತಾನೆ. ವಾಸ್ತವದಲ್ಲಿ ಆತ ಭೀಮನ ತಾಯಿ ಕುಂತಿಯ ತಂದೆಯ ಮುತ್ತಾತನಾಗಿದ್ದ. ಆರ್ಯಕ ಭೀಮನ ಬಗ್ಗೆ, ಆತನ ತಾಯಿ-ತಂದೆ ಬಗ್ಗೆ ನಾಗರಾಜ ವಾಸುಕಿಗೆ ವಿವರವಾಗಿ ತಿಳಿಸುತ್ತಾನೆ. ಈ ವಿಚಾರ ತಿಳಿದ ವಾಸುಕಿ ಭೀಮನಿಗೆ ವಜ್ರ-ವೈಡೂರ್ಯ, ಉತ್ತಮ ಬಟ್ಟೆಗಳನ್ನು ನೀಡಿ ಗಂಗಾ ನದಿಯಿಂದ ಹೊರಗೆ ಕರೆದುಕೊಂಡು ಹೋಗಿ ಬಿಡಲು ಆಜ್ಞೆ ಮಾಡುತ್ತಾನೆ. ಆಗ ಆರ್ಯಕ ಹೇಳುತ್ತಾನೆ “ ರಾಜಾ, ಈ ಬಗೆಯ ಸಂಪತ್ತು ಭೀಮನಿಗೆ ಏನೂ ಪ್ರಯೋಜನಕ್ಕೆ ಬರಲಾರದು. ಏಕೆಂದರೆ ಅವನ ಸಾಮ್ರಾಜ್ಯದಲ್ಲಿ ಧನ-ಕನಕಗಳಿಗೇನೂ ಕೊರತೆಯಿಲ್ಲ. ಆದರೆ ಭವಿಷ್ಯದಲ್ಲಿ ಪಾಂಡವರಿಗೆ ಮತ್ತು ಕೌರವರಿಗೆ ಯುದ್ಧ ನಡೆಯುವ ಸಾಧ್ಯತೆ ಇರುವುದರಿಂದ ಭೀಮನಿಗೆ ಉಪಯೋಗವಾಗುವಂತಹ ಬಹುಮಾನ ನೀಡಬೇಕಾಗಿ ನನ್ನ ಕೋರಿಕೆ" ಎನ್ನುತ್ತಾನೆ.

ಸ್ವಲ್ಪ ಆಲೋಚನೆ ಮಾಡಿದ ವಾಸುಕಿ ಆತನಿಗೆ ಸಾವಿರ ಆನೆಯ ಬಲ ನೀಡುವ ರಸಕುಂಡವನ್ನು ಹೊಟ್ಟೆ ತುಂಬುವಷ್ಟು ಕುಡಿಸಲು ಆಜ್ಞೆ ಮಾಡುತ್ತಾನೆ. ಮೊದಲೇ ಹೊಟ್ಟೆ ಬಾಕ ‘ವೃಕೋದರ' (ಭೀಮನ ಮತ್ತೊಂದು ಹೆಸರು) ಒಂದಾದ ಮೇಲೆ ಒಂದರಂತೆ ಎಂಟು ರಸಕುಂಡಗಳನ್ನು ಕುಡಿಯುತ್ತಾನೆ. ನಂತರ ಹೊಟ್ಟೆ ತುಂಬಿತು ಅನ್ನುತ್ತಾನೆ. ಈ ರೀತಿ ಭೀಮನಿಗೆ ಸಾವಿರಾರು ಆನೆಗಳ ಬಲ ಬಂದು ಆತ ‘ಬಲಭೀಮ' ನಾಗುತ್ತಾನೆ. ಆ ಬಳಿಕ ಆತನನ್ನು ಗೌರವ ಪೂರ್ವಕವಾಗಿ ವಾಸುಕಿಯ ಆಜ್ಞೆಯಂತೆ ಗಂಗಾ ನದಿಯ ತಟಕ್ಕೆ ತಂದು ಬಿಡಲಾಗುತ್ತದೆ. ಸಾವಿರಾರು ಆನೆಗಳ ಬಲವನ್ನು ಪಡೆದ ಭೀಮ ನಂತರ ನಡೆದ ಕುರುಕ್ಷೇತ್ರ ಯುದ್ಧದಲ್ಲಿ ಇಡೀ ಕೌರವ ಸೈನ್ಯವನ್ನು ನುಚ್ಚುನೂರು ಮಾಡಿ ಬಿಡುತ್ತಾನೆ.

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ