ಮಹಾಭಾರತದ ಕಥೆಗಳು - ಶ್ರೀಕೃಷ್ಣನ ಉಪಾಯ

ಮಹಾಭಾರತದ ಕಥೆಗಳು - ಶ್ರೀಕೃಷ್ಣನ ಉಪಾಯ

ಈ ಮಹಾಭಾರತ ಕಥೆ ಅನ್ನೋದು ಒಂದು ಮಹಾ ಸಾಗರವಿದ್ದಂತೆ. ಬದುಕಿನ ಪ್ರತಿ ಸಮಸ್ಯೆಗಳಿಗೂ ಪರಿಹಾರ ನೀಡುವ ಸಂಜೀವಿನಿ ಅನಿಸುತ್ತದೆ. ಅದರಲ್ಲಿಯ ಘಟನೆಗಳನ್ನ ಇಂದಿನ ನಮ್ಮ ಜೀವನಕ್ಕೆ ಮೇಳೈಸಿ, ಅರ್ಥೈಸಿ, ಸಮಾಧಾನದಿಂದ ಯೋಚಿಸಿದಾಗ  ಓ ಹೌದಲ್ವಾ ಎನ್ನುವ ಉದ್ಗಾರ ತಾನಾಗೇ ಬರುತ್ತೆ! ಉದಾಹರಣೆಗೆ ಈ ಕುರುಕ್ಷೇತ್ರ ಯುದ್ಧದ ಸಂದರ್ಭವನ್ನೇ ನೋಡಿ..

ಕುರುಕುಲ ಮಹಾಗುರು ದ್ರೋಣಾಚಾರ್ಯರನ್ನ ರಣರಂಗದಿಂದ ನಿರ್ಗಮಿಸುವಂತೆ ಮಾಡಲು ಶ್ರೀ ಕೃಷ್ಣ ಧರ್ಮರಾಯನಿಂದ "ಅಶ್ವತ್ಥಾಮೋ ಹತ್ಃ .....ಕುಂಜರಃ" ಎಂದು ನುಡಿಸಿ ಕುಟಿಲೋಪಾಯ ಮಾಡಿ ವೀರ ಸ್ವರ್ಗ ಸೇರುವಂತೆ ಮಾಡಿದ.  ಮಹಾಭಾರತದ ಯುದ್ಧದಲ್ಲಿ ತನ್ನ ತಂದೆ ದ್ರೋಣಾಚಾರ್ಯರನ್ನು ಮೋಸದಿಂದ ಕೊಂದಿದ್ದಕ್ಕೆ ಅಶ್ವತ್ಥಾಮನಿಗೆ ಮಹಾ ಕೋಪ ಬಂತು. ಅವನೋ ಮಹಾವೀರ ಸಕಲ ಶಸ್ತ್ರ ಪಾರಂಗತ! ಸುಮ್ಮನಿರುತ್ತಾನೆಯೇ? ಯಾವ ದೇವಾನುದೇವ  ಶ್ರೀ ಕೃಷ್ಣನ ಕೃಪೆಯಿಂದ ಪಾಂಡವರು ಯುದ್ಧೋತ್ಸಾಹದಲ್ಲಿದ್ದರೋ ಅದೇ ವಿಷ್ಣುವಿನ ಮಹಾಶಕ್ತಿ ಹೊಂದಿರುವ ಶ್ರೀ ಮನ್ನಾರಾಯಣಾಸ್ತ್ರವನ್ನು ಪಾಂಡವರ ಸೇನೆಯ ಮೇಲೆ ಪ್ರಯೋಗಿಸಿದ.

ಈ ಅಸ್ತ್ರವನ್ನು ಎದುರಿಸಲು ಯಾರಿಗೂ ಸಾಧ್ಯವಿರಲಿಲ್ಲ. ಏಕೆಂದರೆ ಯಾರ ಬಳಿ ಶಸ್ತ್ರವಿದೆಯೋ ಅವರ ಮೇಲೆ ಈ ಅಸ್ತ್ರ ಬೆಂಕಿ ಸುರಿಸಿ ನಾಶ ಮಾಡುತ್ತಿತ್ತು. ಎಲ್ಲೇ ಶಸ್ತ್ರವಿರಲಿ ಅಲ್ಲಿ ಬೆಂಕಿಯ ಮಳೆ. ಶಸ್ತ್ರಗಳೇ ಇಲ್ಲದೇ ಯುದ್ಧವಾದರೂ ಹೇಗೆ ಮಾಡೋದು? ಪಾಂಡವ ಸೈನ್ಯ ಅಲ್ಲೋಲಕಲ್ಲೋಲವಾಗ ತೊಡಗಿತು. ವೀರಾಧಿವೀರರೆಲ್ಲ ದಿಕ್ಕು ತೋಚದೇ ಕಂಗಾಲಾದರು. ಪಂಚಪಾಂಡವರು ಸೇನಾಧಿಪತಿಗಳು ಶ್ರೀ ಕೃಷ್ಣ ನ ಮೊರೆ ಹೋದರು. 

ಎಲ್ಲಾ ಸಮಸ್ಯೆಗಳಿಗೆ ಶ್ರೀಕೃಷ್ಣನ ಬಳಿ ಪರಿಹಾರವಿದೆ. ಜಾಣ ಶ್ರೀಕೃಷ್ಣ ಎಲ್ಲರಿಗೂ ಶಸ್ತ್ರ ತ್ಯಾಗ ಮಾಡಿ ಸುಮ್ಮನೆ ಕೈ ಮುಗಿದು ನಿಲ್ಲಲು ತಿಳಿಸಿದ. ಮನಸ್ಸಿನಲ್ಲಿ ಕೂಡ ಯುದ್ಧದ ಯೋಚನೆ ಮಾಡಬೇಡಿ ಎಂದ. ಅಶ್ವತ್ಥಾಮ ಹೂಡಿದ ನಾರಾಯಣ ಅಸ್ತ್ರ ಯಾರ ಬಳಿಯೂ ಶಸ್ತ್ರವಿಲ್ಲದೇ ಇದ್ದುದರಿಂದ ತನ್ನ ಶತ್ರುವನ್ನು ಗುರಿಸಲಾಗದೇ ಸ್ವಲ್ಪ ಸಮಯ ಕಳೆದ ಮೇಲೆ ಶಾಂತವಾಯಿತು. ಹೀಗೆ ಪಾಂಡವ ಸೇನೆ ಸುರಕ್ಷಿತವಾಗಿ ಉಳಿಯಿತು.

ಈ ಕಥೆ ಈಗೇಕೆ ಅಂತ ಕೇಳುವಿರಾ? ನಾವಿಂದು ಪ್ರಪಂಚದಾದ್ಯಂತ ಅನುಭವಿಸುತ್ತಿರುವ ಮಹಾಮಾರಿ ಕೊರೋನಾವನ್ನು ತಡೆಗಟ್ಟಲು ಶ್ರೀಕೃಷ್ಣನ ಉಪಾಯವನ್ನೇ ಮಾಡಬೇಕಿದೆ.

ಎಲ್ಲಾ ಕಡೆ, ಎಲ್ಲಾ ಸಮಯ ಯುದ್ದ ಮಾಡಿ ಗೆಲ್ಲಲು ಸಾಧ್ಯವಿಲ್ಲ. ಕರೋನಾದಂತಹ ಪ್ರಕೃತಿಯ ವಿಕೋಪ ತಾಳಲು ನಾವು ಸ್ವಲ್ಪ ದಿನ ಎಲ್ಲಾ ಬಿಟ್ಟು, ಒಳ್ಳೆಯ ಯೋಚನೆ ಮಾಡುತ್ತಾ ಒಂದು ಜಾಗದಲ್ಲಿ ಕುಳಿತರೆ ಸಾಕು. ಹೊರಗೆ ಸುತ್ತಾಡುವ ಚಿಂತೆ ಬೇಡ. ಪ್ರಕೃತಿಯನ್ನು ಗೆಲ್ಲಲು ಸಾಧ್ಯ ಎನ್ನುವ ಹುಚ್ಚು ಸಾಹಸ ಬೇಡ. ಪ್ರಕೃತಿ ತನ್ನದೇ ಆದ ಹಾದಿಯಲ್ಲಿ ಸಾಗುತ್ತದೆ. ಅದರ ನಿಗ್ರಹ ಸಾಧ್ಯವಿಲ್ಲ. ಅದನ್ನು ಹಿಡಿದಿಟ್ಟರೆ, ತೊಂದರೆ ನೀಡಿದರೆ ನಮ್ಮ ನಿರ್ನಾಮ ಶತಃಸಿದ್ಧ. ಸಮಯ ಕಳೆದಂತೆ ಪ್ರಕೃತಿಯ ವಿಕೋಪ ತಣ್ಣಗೆ ಆಗೇ ಆಗುತ್ತದೆ. ಅದೇ ಸಮಯ ಲಸಿಕೆ ಸಿಕ್ಕು ಕರೊನ ಕೂಡ ಶಾಂತವಾಗುತ್ತದೆ. ಅಲ್ಲಿಯವರೆಗೆ ನಮ್ಮ ಓಡಾಟ, ಒಡನಾಟ, ಸಭೆ ಸಮಾರಂಭ, ಹಬ್ಬ ಹರಿದಿನಗಳ ಗುಂಪು ಕೂಟಗಳನ್ನು ಮರೆತು ಸುಮ್ಮನಿದ್ದರೆ ಸಾಕಲ್ಲವೇ? ಶ್ರೀಕೃಷ್ಣ ಮಾಡಿದ ಉಪಾಯವನ್ನು ನಾವೂ ಪಾಲಿಸಿದರೆ ಸಾಕಲ್ಲ!! 

(ಸಾರ ಸಂಗ್ರಹಿತ) ಚಿತ್ರ: ಅಂತರ್ಜಾಲ ತಾಣ ಕೃಪೆ