ಮಹಾಭಾರತದ ಕಥೆಗಳು - ಶ್ರೀಕೃಷ್ಣ - ಈಶ್ವರ ಕಾಳಗ

ಮಹಾಭಾರತದ ಕಥೆಗಳು - ಶ್ರೀಕೃಷ್ಣ - ಈಶ್ವರ ಕಾಳಗ

ಪೋನಿತಾಪುರ ಎಂಬ ರಾಜ್ಯವನ್ನು ಬಾಣಾಸುರ ಎಂಬ ಅಸುರನು ಆಳುತ್ತಿದ್ದ. ಈತನಿಗೆ ಜನ್ಮತಃ ಸಾವಿರ ಕೈಗಳು ಇದ್ದುವು. ಈ ಕಾರಣದಿಂದ ಆತನು ಮಹಾ ಪರಾಕ್ರಮಿಯಾಗಿದ್ದನು. ಆತ ರಾವಣನಂತೆ ಬಹುದೊಡ್ಡ ಶಿವ ಭಕ್ತ. ಶಿವ ತಾಂಡವ ನೃತ್ಯ ಮಾಡುವಾಗ ಬಾಣಾಸುರ ತನ್ನ ಸಾವಿರ ಕೈಗಳ ಸಹಾಯದಿಂದ ಅದ್ಭುತವಾಗಿ ಮೃದಂಗವನ್ನು ಬಾರಿಸುತ್ತಿದ್ದ. ಈ ಕಾರಣದಿಂದ ಬಾಣಾಸುರ ಶಿವನ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ. ಈ ವಿಷಯವಾಗಿ ಬಾಣಾಸುರನಿಗೆ ನಿಧಾನವಾಗಿ ಅಹಂಕಾರ ತಲೆ ಎತ್ತಿತು. ಪ್ರಪಂಚದಲ್ಲಿ ತಾನೇ ಶಕ್ತಿವಂತನಾಗಬೇಕು, ಅಮರನಾಗಬೇಕು ಎನ್ನುವ ಮಹದಾಸೆ ತಲೆ ಎತ್ತಿತು. 

ಶಿವನಿಂದ ಅಮರತ್ವದ ವರವನ್ನು ಪಡೆಯುವ ದೃಷ್ಟಿಯಿಂದ ಬಾಣಾಸುರನು ತಪಸ್ಸು ಮಾಡಲು ಪ್ರಾರಂಭಿಸಿದ. ಹಲವಾರು ವರ್ಷಗಳು ಸಂದರೂ ಶಿವನು ಪ್ರತ್ಯಕ್ಷನಾಗಲಿಲ್ಲ. ಇದರಿಂದ ಕ್ರೋಧಿತನಾದ ಬಾಣಾಸುರನು ತನ್ನ ಸಾವಿರ ಕೈಗಳನ್ನು ಒಂದೊಂದಾಗಿ ಕಡಿದು ಅಗ್ನಿಕುಂಡಕ್ಕೆ ಸಮರ್ಪಿಸಲು ಪ್ರಾರಂಭಿಸಿದ. ಇದನ್ನು ಗಮನಿಸಿದ ಈಶ್ವರನು ತಕ್ಷಣವೇ ಬಾಣಾಸುರನ ಮುಂದೆ ಪ್ರತ್ಯಕ್ಷನಾದ. “ಏನು ವರ ಬೇಕು?” ಎಂದು ಶಿವನು ಕೇಳಿದಾಗ ಬಾಣಾಸುರನು ಅಮರತ್ವವನ್ನು ದಯಪಾಲಿಸು ಎಂದು ಕೇಳಿಕೊಂಡ. 

ಆದರೆ ಶಿವನು “ಹುಟ್ಟು ಸಾವುಗಳು ಸೃಷ್ಟಿಯ ಸಹಜ ಪ್ರಕ್ರಿಯೆ. ಇದರ ಹೊರತಾಗಿ ಏನಾದರೂ ಬೇರೆ ವರ ಕೇಳು" ಎಂದ. ಆದರೆ ಬಾಣಾಸುರ ತನ್ನ ಪಟ್ಟು ಸಡಿಲಿಸಲಿಲ್ಲ. “ಮಹದೇವಾ, ನನಗೆ ಅಮರತ್ವವನ್ನು ನೀಡು. ಇದಲ್ಲದೇ ನಾನು ಕಷ್ಟದಲ್ಲಿರುವಾಗ ನಿನ್ನನ್ನು ಕರೆದರೆ ತಕ್ಷಣ ಬಂದು ನನಗೆ ಸಹಾಯ ಮಾಡಬೇಕು" ಎನ್ನುವ ವರವನ್ನು ಬಾಣಾಸುರ ಮತ್ತೆ ಕೇಳಿಕೊಂಡ. ಕೊನೆಗೆ ಶಿವನು ಆತನ ಭಯ ಭಕ್ತಿಗೆ ಮೆಚ್ಚಿ “ತಥಾಸ್ತು" ಎಂದು ವರವನ್ನು ಕರುಣಿಸಿದ. ಈ ಪರಮೇಶ್ವರನ ವರದ ಕಾರಣದಿಂದ ಬಾಣಾಸುರ ಇನ್ನಷ್ಟು ಬಲಿಷ್ಟನಾದ. ಇಂದ್ರನ್ನು ಓಡಿಸಿ ದೇವಲೋಕವನ್ನು ಕಬಳಿಸಿದ. ಆತನ ದುಷ್ಟತನ ಮಿತಿಮೀರಿತು. ದೇವಲೋಕದಲ್ಲಿ ಹಾಹಾಕಾರ ಮೊಳಗಿತು. 

ಬಾಣಾಸುರನಿಗೆ ಅತ್ಯಂತ ಸುಂದರಿಯಾದ ಮಗಳೊಬ್ಬಳು ಇದ್ದಳು. ಆಕೆಯ ಹೆಸರು ಉಷಾ. ಕೆಲವೊಮ್ಮೆ ಆಕೆಯ ಕನಸಿನಲ್ಲಿ ಓರ್ವ ಸುಂದರ ಯುವಕ ಬಂದು ಕಾಡುತ್ತಿದ್ದ. ಈ ವಿಚಾರವನ್ನು ಆಕೆ ತನ್ನ ಅಂತರಂಗದ ಸಖಿ ಚಿತ್ರಲೇಖಾಳಿಗೆ ತಿಳಿಸಿದಳು. ರಾಜಕುಮಾರಿ ಉಷಾ ನೀಡಿದ ವರ್ಣನೆಗಳನ್ನು ಆಧರಿಸಿ ಚಿತ್ರಲೇಖಾ ಸುಂದರವಾದ ಒಂದು ಚಿತ್ರವನ್ನು ರಚಿಸಿದಳು. ಆ ಚಿತ್ರವು ಶ್ರೀಕೃಷ್ಣನನ್ನು ಹೋಲುವಂತಿತ್ತು. ‘ಇವನಲ್ಲ, ಆದರೆ ನಾನು ಕನಸಿನಲ್ಲಿ ಕಂಡ ಯುವಕ ಈ ಚಿತ್ರದಲ್ಲಿರುವ ವ್ಯಕ್ತಿಯನ್ನು ಬಹುಪಾಲು ಹೋಲುತ್ತಾನೆ" ಎಂದಳು ಉಷಾ. ಮತ್ತೆ ಚಿಕ್ತಲೇಖಾ ಚಿತ್ರವನ್ನು ರಚನೆ ಮಾಡಿದಾಗ ಅದು ಶ್ರೀಕೃಷ್ಣನ ಮಗ ಪ್ರದ್ಯುಮ್ನನನ್ನು ಹೋಲುವಂತೆ ಕಂಡು ಬಂತು. ಮೂರನೇ ಬಾರಿ ಚಿತ್ರಲೇಖಾ ಚಿತ್ರವನ್ನು ಬರೆದಾಗ ಉಷಾಳ ಕನಸಿನಲ್ಲಿ ಕಂಡು ಬಂದ ಯುವಕನ ಚಿತ್ರವೇ ಆಗಿತ್ತು. “ಇವನೇ ನನ್ನ ಮನಸ್ಸನ್ನು ಕದ್ದ ಕಳ್ಳ' ಎಂದು ಭಾವಚಿತ್ರವನ್ನು ಅಪ್ಪಿಕೊಂಡು ಸಂತಸ ಪಟ್ಟಳು ಉಷಾ.

ಆ ಚಿತ್ರ ಇನ್ಯಾರದ್ದೂ ಆಗಿರದೇ ಶ್ರೀಕೃಷ್ಣನ ಮೊಮ್ಮಗ, ಪ್ರದ್ಯುಮ್ನನ ಮಗ ಅನಿರುದ್ಧನದಾಗಿತ್ತು. ಮಾಯಾವಿದ್ಯೆಯನ್ನು ಅರಿತಿದ್ದ ಚಿತ್ರಲೇಖಾ ತನ್ನ ರಾಜಕುಮಾರಿಯನ್ನು ಮೆಚ್ಚಿಸಲು ಮಾಯಾರೂಪದಲ್ಲಿ ದ್ವಾರಕೆಗೆ ತೆರಳಿ ಅಲ್ಲಿ ಮಲಗಿದ್ದ ಅನಿರುದ್ಧನನ್ನು ಮಂಚದ ಸಮೇತ ಅಪಹರಿಸಿ ತಂದು ಉಷಾಳ ಅಂತಃಪುರದಲ್ಲಿಟ್ಟಳು. 

ಸ್ವಲ್ಪ ಸಮಯದ ಬಳಿಕ ಅನಿರುದ್ಧನಿಗೆ ಎಚ್ಚರವಾಗಿ ಕಣ್ಣು ತೆರೆದು ನೋಡಿದಾಗ ಆತನಿಗೆ ಉಷಾ ಕಂಡಳು. ಸುಂದರಿಯಾದ ಉಷಾಳನ್ನು ಕಂಡ ಅನಿರುದ್ಧನಿಗೆ ಮೊದಲ ನೋಟದಲ್ಲೇ ಪ್ರೇಮವಾಯಿತು. ಉಷಾಳ ಅಂತಃಪುರದಲ್ಲೇ ಗುಟ್ಟಾಗಿ ವಾಸಿಸತೊಡಗಿದ. ಈ ವಿಚಾರ ಬಾಣಾಸುರನ ಕಿವಿಗೆ ಬಿದ್ದಾಗ ಆತ ಕೆಂಡಾಮಂಡಲವಾದ. ಮಗಳ ಈ ಕೆಲಸದಿಂದ ಸಿಟ್ಟಿಗೆದ್ದು ಆತ ಅನಿರುದ್ಧನನ್ನು ಕಾರಾಗೃಹಕ್ಕೆ ಹಾಕಿದ.

ಇತ್ತ ಕಡೆ ದ್ವಾರಕೆಯಲ್ಲಿ ಕಾಣೆಯಾದ ಅನಿರುದ್ಧನಿಗಾಗಿ ಹುಡುಕಾಟ ನಡೆದಿತ್ತು. ಆತ ಬಾಣಾಸುರನ ಬಂಧನದಲ್ಲಿರುವ ವಿಷಯ ಶ್ರೀಕೃಷ್ಣನಿಗೆ ತಿಳಿಯಿತು. ತಕ್ಷಣವೇ ಆತ ಮತ್ತು ಬಲರಾಮರು ಬಾಣಾಸುರನ ರಾಜ್ಯಕ್ಕೆ ತೆರಳಿ ಯುದ್ಧಕ್ಕೆ ಆಮಂತ್ರಣ ನೀಡಿದರು. ಶಿವನ ವರದಾನದ ಪ್ರಭಾವದಿಂದ ಮಹಾ ಪರಾಕ್ರಮಿಯಾಗಿದ್ದ ಬಾಣಾಸುರನನ್ನು ಮಣಿಸುವುದು ಅಷ್ಟೊಂದು ಸುಲಭವಾಗಿರಲಿಲ್ಲ. ಈ ವಿಷಯವನ್ನು ಮೊದಲೇ ಅರಿತಿದ್ದ ಶ್ರೀಕೃಷ್ಣ ಆತನ ಒಂದೊಂದೇ ಕೈಗಳನ್ನು ಕತ್ತರಿಸಿ ಹಾಕತೊಡಗಿದ. ಎಲ್ಲಾ ಕೈಗಳು ತುಂಡಾಗಿ ಎರಡು ಕೈಗಳು ಮಾತ್ರ ಉಳಿದಾಗ ಬಾಣಾಸುರನಿಗೆ ಶಿವನು ನೀಡಿದ ವರದ ನೆನಪಾಯಿತು. ಶಿವನನ್ನು ತನ್ನ ರಕ್ಷಣೆ ಮಾಡುವಂತೆ ಕರೆದ. ತಾನು ನೀಡಿದ ವರದಂತೆ ಶಿವನು ಬಾಣಾಸುರನ ರಕ್ಷಣೆಗೆ ಹೋಗಲೇ ಬೇಕಾಯಿತು. 

ಬಾಣಾಸುರನ ರಕ್ಷಣೆಗಾಗಿ ಪರಮೇಶ್ವರನು ಶ್ರೀಕೃಷ್ಣನ ವಿರುದ್ಧ ಯುದ್ಧ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು. ಇಬ್ಬರು ಮಹಾನ್ ಶಕ್ತಿಗಳ ನಡುವೆ ಯುದ್ಧ ಪ್ರಾರಂಭವಾದರೆ ಪ್ರಪಂಚವೇ ಅಳಿದು ಹೋಗಲಿದೆ ಎಂಬ ಸಂಗತಿಯನ್ನು ಅರಿತ ದೇವ-ದಾನವರು ಗಾಬರಿ ಪಟ್ಟುಕೊಂಡರು. ಎಲ್ಲರೂ ಶ್ರೀಕೃಷ್ಣ ಮತ್ತು ಶಿವರಲ್ಲಿ ಯುದ್ಧವನ್ನು ನಿಲ್ಲಿಸುವಂತೆ ಮೊರೆ ಇಟ್ಟರು. ಇಷ್ಟೆಲ್ಲಾ ಆಗುವಾಗ ಬಾಣಾಸುರನಿಗೂ ತನ್ನ ತಪ್ಪಿನ ಅರಿವಾಗಿತ್ತು. ಆತ ತನ್ನ ತಪ್ಪಿಗಾಗಿ ಶ್ರೀಕೃಷ್ಣನಲ್ಲಿ ಕ್ಷಮೆಯಾಚಿಸಿದ. 

“ಬಾಣಾಸುರ, ನಿನ್ನನ್ನು ಕೊಲ್ಲುವ ಉದ್ದೇಶ ನನ್ನದಾಗಿರಲಿಲ್ಲ. ನಿನ್ನಲ್ಲಿದ್ದ ಸಾವಿರ ಕೈಗಳು ನಿನ್ನ ಅಹಂಕಾರದ ಪ್ರತೀಕವಾಗಿದ್ದವು. ಇದರೊಂದಿಗೆ ಪರಮೇಶ್ವರನು ನೀಡಿದ ವರದಿಂದ ನಿನ್ನಲ್ಲಿದ್ದ ಅಹಂಕಾರವು ಪರ್ವತದಂತೆ ಎತ್ತರಕ್ಕೇರಿ ನಿಂತಿತ್ತು. ಗರ್ವದ ಪೊರೆ ನಿಮ್ಮ ಕಣ್ಣುಗಳನ್ನು ಆವರಿಸಿತ್ತು. ನಿನ್ನೊಳಗಿನ ಅಹಂಕಾರವನ್ನು ಕೊಲ್ಲುವುದಷ್ಟೇ ನನ್ನ ಉದ್ದೇಶವಾಗಿತ್ತು. ಈಗ ಅದು ನೆರವೇರಿದೆ. ಇನ್ನಾದರೂ ಧರ್ಮದಿಂದ ರಾಜ್ಯವನ್ನಾಳು. ನಿನಗೆ ಮಂಗಳವಾಗಲಿ"ಎಂದು ಶ್ರೀಕೃಷ್ಣ ಬಾಣಾಸುರನಿಗೆ ಆಶೀರ್ವಾದ ಮಾಡಿದ.

ತನ್ನ ತಪ್ಪನ್ನು ತಿದ್ದಿಕೊಂಡ ಬಾಣಾಸುರ ತನ್ನ ಪುತ್ರಿ ಉಷಾಳ ಮದುವೆಯನ್ನು ಕೃಷ್ಣನ ಮೊಮ್ಮಗ ಅನಿರುದ್ಧನ ಸಂಗಡ ಬಹಳ ಆಡಂಬರದಿಂದ ನಡೆಸಿದ. ಈ ಅದ್ದೂರಿ ಮದುವೆಗೆ ಸುರ-ಅಸುರರು ಸಾಕ್ಷಿಯಾಗಿದ್ದರು.

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ