ಮಹಾಭಾರತದ ಕಥೆಗಳು - ಸುಧಾಮ ಹೇಳಿದ ಸುಳ್ಳು

ಮಹಾಭಾರತದ ಕಥೆಗಳು - ಸುಧಾಮ ಹೇಳಿದ ಸುಳ್ಳು

ನಮಗೆಲ್ಲಾ ತಿಳಿದೇ ಇರುವಂತೆ ಕೃಷ್ಣ ಮತ್ತು ಸುಧಾಮ ಆಪ್ತ ಗೆಳೆಯರು. ಸಾಂದೀಪನಿ ಗುರುಕುಲದಲ್ಲಿ ಕೃಷ್ಣ ಬಲರಾಮರ ಜೊತೆ ಸುಧಾಮ ಸಹ ಕಲಿಯುತ್ತಿದ್ದ. ಸುಧಾಮ ಬಡ ಬ್ರಾಹ್ಮಣ ಹುಡುಗ. ಕೃಷ್ಣ ಮತ್ತು ಬಲರಾಮರು ರಾಜ ಮನೆತನದಲ್ಲಿ ಹುಟ್ಟಿದವರು. ಆದರೂ ಗುರುಕುಲದ ನಿಯಮದ ಪ್ರಕಾರ ಒಟ್ಟಿಗೇ ಸಹಬಾಳ್ವೆ ನಡೆಸುತ್ತಿದ್ದರು. 

ಒಂದು ದಿನ ಸೌದೆಯನ್ನು ತರಲು ಕೃಷ್ಣ ಬಲರಾಮರು ಕಾಡಿಗೆ ಹೋಗುತ್ತಾರೆ. ಅವರು ಹೊರಡುವಾಗ ತಿನ್ನಲು ಏನೂ ತೆಗೆದುಕೊಳ್ಳದೇ ಹೋಗಿರುವುದನ್ನು ಗಮನಿಸಿದ ಸಾಂದೀಪನಿ ಋಷಿಯ ಪತ್ನಿ ಅವರಿಗಾಗಿ ಸ್ವಲ್ಪ ನೆಲಕಡಲೆಯನ್ನು ಸುಧಾಮನ ಹತ್ತಿರ ಕಳಿಸಿಕೊಡುತ್ತಾರೆ. ಸುಧಾಮನಿಗೆ ಕಾಡಿನಲ್ಲಿ ಕೃಷ್ಣ ಬಲರಾಮರು ಸಿಕ್ಕಿದರೂ ತಾನು ಕಡಲೆಕಾಳು ತಂದ ವಿಚಾರವನ್ನು ಹೇಳುವುದಿಲ್ಲ. ಮರವನ್ನು ಕಡಿದು ಕಟ್ಟಿಗೆ ಮಾಡಿ ಆಯಾಸವಾಗಿದ್ದುದರಿಂದ ಕೃಷ್ಣ ಸುಧಾಮನ ಬಳಿ ನೀರು ಕೊಡಲು ಕೇಳುತ್ತಾನೆ. ಅದಕ್ಕೆ ಸುಧಾಮ ‘ಹೊಟ್ಟೆ ಖಾಲಿ ಇರುವಾಗ ತಕ್ಷಣ ನೀರು ಕುಡಿಯುವುದು ಒಳ್ಳೆಯದಲ್ಲ, ಆಯಾಸ ಬೇರೆ ಆಗಿದೆ. ಮೊದಲು ವಿಶ್ರಾಂತಿ ತೆಗೆದುಕೋ, ನಂತರ ಎದ್ದು ನೀರು ಕುಡಿಯುವಿಯಂತೆ' ಎನ್ನುತ್ತಾನೆ. ಅದರಂತೆ ಕೃಷ್ಣ ಸುಧಾಮನ ತೊಡೆಯ ಮೇಲೆ ತಲೆಯಿಟ್ಟು ಮಲಗುತ್ತಾನೆ. ಆಯಾಸವಾಗಿದ್ದುದರಿಂದ ಸೊಗಸಾದ ನಿದ್ರೆ ಬೀಳುತ್ತದೆ. ಅದೇ ಸಮಯ ನೋಡಿಕೊಂಡು ಸುಧಾಮ ಋಷಿ ಪತ್ನಿ ಕೊಟ್ಟಿದ್ದ ಕಡಲೇಕಾಳುಗಳನ್ನು ಒಂದೊಂದಾಗಿ ತಿನ್ನಲು ಪ್ರಾರಂಭ ಮಾಡುತ್ತಾನೆ. ಸ್ವಲ್ಪ ಸಮಯ ಕಳೆದಾಗ ಕೃಷ್ಣನಿಗೆ ಎಚ್ಚರವಾಗುತ್ತದೆ. ಎದ್ದು ನೋಡುವಾಗ ಸುಧಾಮನು ಏನೋ ತಿನ್ನುತ್ತಿರುವಂತೆ ಕಾಣಿಸುತ್ತದೆ. ಆತನ ಬಳಿ ‘ಏನು ತಿನ್ನುತ್ತಿರುವೆ ಸುಧಾಮ?’ ಎಂದು ಕೇಳಿದಾಗ ಸುಧಾಮ “ಏನಿಲ್ಲ, ತಿನ್ನಲು ಏನಿದೆ ಇಲ್ಲಿ? ಇಲ್ಲಿಯ ಚಳಿಗೆ ನಡುಗಿ ನನ್ನ ಹಲ್ಲುಗಳು ಪರಸ್ಪರ ಕಡಿಯಲಾರಂಭಿಸಿವೆ' ಎಂದು ಸುಳ್ಳು ಹೇಳುತ್ತಾನೆ.

ಸಕಲವೂ ಬಲ್ಲ ಕೃಷ್ಣ ಸುಧಾಮನಿಗೆ “ ಹೌದಾ, ಇರಲಿ ಬಿಡು, ನಾನು ಈಗ ಮಲಗಿದ್ದಾಗ ಒಂದು ಕನಸು ಬಿತ್ತು. ಅದರಲ್ಲಿ ಇಬ್ಬರು ಗೆಳೆಯರು ಇದ್ದರು. ಒಬ್ಬ ಗೆಳೆಯ ತಿಂಡಿಯನ್ನು ಇನ್ನೊಬ್ಬನಿಗೆ ಕೊಡದೇ ತಿನ್ನುತ್ತಿದ್ದ. ಇನ್ನೊಬ್ಬ ಕೇಳಿದಾಗ ‘ ತಿನ್ನುವುದಕ್ಕೆ ಏನಿದೆ ಮಣ್ಣು’ ಎಂದ. ಮತ್ತೊಬ್ಬ ತಥಾಸ್ತು ಎಂದ. ಆಗ ತಿನ್ನುತ್ತಿದ್ದ ತಿಂಡಿ ಮಣ್ಣಾಗಿ ಹೋಯ್ತು. ಇದೇ ನಾನು ಕಂಡ ಕನಸು ಎಂದ ಕೃಷ್ಣ. ಈ ಕಥೆ ಕೇಳಿದ ಸುಧಾಮನಿಗೆ ತನ್ನ ತಪ್ಪಿನ ಅರಿವಾಗುತ್ತದೆ. ಆತನ ಮುಖ ಕಳೆಗುಂದಿದನ್ನು ನೋಡಿ ಕೃಷ್ಣ ‘ಹೇ ಗೆಳೆಯಾ, ನಾನು ಹೇಳಿದ್ದು ಕನಸಿನ ವಿಚಾರ, ಸತ್ಯ ಅಲ್ಲ. ನನಗೆ ಗೊತ್ತು ನೀನು ನನ್ನನ್ನು ಬಿಟ್ಟು ತಿನ್ನುವುದಿಲ್ಲ ಎಂದು' ಅನ್ನುತ್ತಾನೆ. 

ಗೆಳೆಯನನ್ನು ಬಿಟ್ಟು ಕಡಲೇಕಾಯಿ ತಿಂದ ಪಾಪಪ್ರಜ್ಞೆಯು ಸುಧಾಮನ ಮನಸ್ಸಿನಲ್ಲಿ ಹಾಗೇ ಉಳಿದು ಬಿಡುತ್ತದೆ. ಗುರುಕುಲ ಶಿಕ್ಷಣ ಮುಗಿಸಿ ತಮ್ಮ ತಮ್ಮ ಊರಿಗೆ ಮರಳಿದರೂ ಸುಧಾಮನಿಗೆ ತಾನು ಕೃಷ್ಣನಿಗೆ ಹೇಳಿದ ಸುಳ್ಳು ಕಾಡುತ್ತಲೇ ಇರುತ್ತದೆ. ಮನೆಯಲ್ಲಿನ ಬಡತನವನ್ನು ತಾಳಲಾರದೇ ಕೃಷ್ಣನ ಬಳಿಯೇ ಪರಿಹಾರ ಕೇಳುವ ಎಂದು ಹೋದಾಗ ಆತ ತಂದ ಅವಲಕ್ಕಿಯನ್ನು ಕೃಷ್ಣ ತಿಂದಾಗ ಸುಧಾಮ ಅಂದು ಮಾಡಿದ ಪಾಪವು ಪರಿಹಾರವಾಗುತ್ತದೆ. ಆತ ಕದ್ದು ಕಡಲೇಕಾಳು ತಿಂದು ಸುಳ್ಳು ಹೇಳಿದ ಪಾಪದಿಂದ ಬಿಡುಗಡೆ ಸಿಗುತ್ತದೆ. ನಂತರದ ದಿನಗಳಲ್ಲಿ ಸುಧಾಮ ಮತ್ತು ಆತನ ಸಂಸಾರ ಸುಖ ಸಮೃದ್ಧಿಯಿಂದ ಬಾಳಿ ಬದುಕುತ್ತದೆ.

ಚಿತ್ರ ಕೃಪೆ: ಅಂತರ್ಜಾಲ ತಾಣ