ಮಹಾಭಾರತದ ಕಥೆಗಳು - ಸ್ವರ್ಗಕ್ಕೇರದ ದ್ರೌಪದಿ !

ಕುರುಕ್ಷೇತ್ರ ಯುದ್ಧ ಮುಗಿದು ಯುಧಿಷ್ಟಿರನು ಹಸ್ತಿನಾಪುರದ ರಾಜನಾಗಿ ಹಲವಾರು ವರ್ಷಗಳ ಕಾಲ ರಾಜ್ಯಭಾರ ಮಾಡುತ್ತಾನೆ. ಎಷ್ಟೇ ವರ್ಷಗಳ ಕಾಲ ನ್ಯಾಯ ನಿಷ್ಟೆ-ಧರ್ಮದಿಂದ ರಾಜ್ಯಭಾರ ಮಾಡಿ ಪ್ರಜೆಗಳ ಸುಖ ಶಾಂತಿ ನೆಮ್ಮದಿಗೆ ಕಾರಣನಾದರೂ ಯುಧಿಷ್ಟಿರನ ಮನಸ್ಸಿನಿಂದ ಕುರುಕ್ಷೇತ್ರ ಯುದ್ಧದ ಕರಾಳ ನೆನಪುಗಳು ಮಾಸಿ ಹೋಗುವುದೇ ಇಲ್ಲ. ತನ್ನ ಅಜ್ಜ ಭೀಷ್ಮ, ಗುರುಗಳಾದ ದ್ರೋಣಾಚಾರ್ಯ, ಕೃಪಾಚಾರ್ಯರ ಹತ್ಯೆಯ ಪಾಪದ ಕರ್ಮ ತನ್ನನ್ನು ಕಾಡದೇ ಬಿಡುವುದೇ ಇಲ್ಲ ಎಂಬ ಭಾವನೆ ಆತನಲ್ಲಿ ಕಾಡುತ್ತದೆ. ಶ್ರೀಕೃಷ್ಣನು ಆತನಿಗೆ ಅಧರ್ಮದ ನಾಶ ಮಾಡುವುದು ಅತ್ಯಂತ ಅವಶ್ಯವಾಗಿತ್ತು ಮತ್ತು ದ್ರೋಣ, ಭೀಷ್ಮಾದಿಗಳು ಅಧರ್ಮದ ಪಕ್ಷದಲ್ಲಿದ್ದರು. ಈ ಕಾರಣದಿಂದ ಅವರ ಹತ್ಯೆ ಅನಿವಾರ್ಯವಾಗಿತ್ತು ಎಂಬ ಸತ್ಯವನ್ನು ಹಲವಾರು ಬಾರಿ ಹೇಳಿದರೂ ಧರ್ಮರಾಯನಿಗೆ ಸಮಾಧಾನವಾಗುತ್ತಿರಲಿಲ್ಲ. ಕಡೆಗೂ ದ್ವಾಪರಾಯುಗದ ಅಂತ್ಯ ಕಾಲ ಸಮೀಪಿಸುತ್ತಿದೆ ಎಂದು ಯುಧಿಷ್ಟಿರನಿಗೆ ಅನಿಸತೊಡಗುತ್ತದೆ.
ಶ್ರೀಕೃಷ್ಣ, ಬಲರಾಮರ ಭೂಲೋಕದಿಂದ ನಿರ್ಗಮನವಾದ ಬಳಿಕ ತಮಗೆ ಇನ್ನು ಇಲ್ಲಿ ಮಾಡಲೇನೂ ಉಳಿದಿಲ್ಲ ಎಂದು ತನ್ನ ಸಹೋದರರು ಹಾಗೂ ಪತ್ನಿ ದ್ರೌಪದಿ ಜೊತೆ ಹಿಮಾಲಯದ ಆರೋಹಣ ಮಾಡುವ ಮೂಲಕ ಸ್ವರ್ಗ ಲೋಕಕ್ಕೆ ಪ್ರಯಾಣ ಬೆಳೆಸಲು ಯೋಚಿಸುತ್ತಾನೆ. ಒಂದು ಶುಭದಿನದಂದು ರಾಜ ಪೀಠವನ್ನು ತ್ಯಜಿಸಿ ತನ್ನ ಮೊಮ್ಮಗನಾದ ಪರೀಕ್ಷಿತನಿಗೆ ರಾಜ್ಯಾಭಿಷೇಕ ಮಾಡಿ ಹಿಮಾಲಯದತ್ತ ಹೊರಡುತ್ತಾನೆ. ಈತನ ಜೊತೆ ಭೀಮ, ಅರ್ಜುನ, ನಕುಲ , ಸಹದೇವರೂ ಇವರ ಪತ್ನಿಯಾದ ದ್ರೌಪದಿಯೂ ಹೊರಡುತ್ತಾರೆ.
ಹಿಮಾಲಯದ ದಾರಿಯಲ್ಲಿ ನಾಯಿಯೊಂದು ಇವರಿಗೆ ಜೊತೆಯಾಗುತ್ತದೆ. ಹಾಗೇ ಮುಂದಕ್ಕೆ ಸಾಗುವಾಗ ಸುಮೇರು ಪರ್ವತ ಎದುರಾಗುತ್ತದೆ. ಈ ಕಡಿದಾದ ಪರ್ವತವನ್ನು ದಾಟಲು ಪ್ರಯತ್ನಿಸುತ್ತಿರುವಾಗ ದ್ರೌಪದಿಯು ಕಾಲು ಜಾರಿ ಪ್ರಪಾತಕ್ಕೆ ಬಿದ್ದು ಸಾವನ್ನಪ್ಪುತ್ತಾಳೆ. ಯುಧಿಷ್ಟಿರನನ್ನು ಹೊರತು ಪಡಿಸಿ ಉಳಿದ ನಾಲ್ವರೂ ಆಕೆಯ ಸಾವಿಗೆ ಮರುಗುತ್ತಾರೆ. ಆದರೆ ಯುಧಿಷ್ಟಿರನು ಎಂದಿನಂತೆ ಸಮಚಿತ್ತ ಮನೋಭಾವವನ್ನೇ ಮುಖದಲ್ಲಿ ವ್ಯಕ್ತಪಡಿಸುತ್ತಾನೆ. ಇದರಿಂದ ಉಳಿದ ಸಹೋದರರಿಗೆ ಬೇಸರವಾಗುತ್ತದೆ. “ಅಣ್ಣಾ, ಎಲ್ಲರಂತೆ ದ್ರೌಪದಿ ನಿಮಗೂ ಪತ್ನಿಯಾಗಿದ್ದಳು. ಆಕೆಯ ಸಾವು ನಿಮಗೇಕೆ ನೋವು ತಂದಿಲ್ಲ?” ಎಂದು ಕೇಳುತ್ತಾರೆ.
ಆಗ ಯುಧಿಷ್ಟಿರ ಹೇಳುತ್ತಾನೆ “ಉಸಿರಿರುವ ತನಕ ಮಾತ್ರ ಒಬ್ಬ ವ್ಯಕ್ತಿಗೆ ಅಸ್ತಿತ್ವ ಇರುತ್ತದೆ. ಭೂಲೋಕದ ಋಣ ತೀರಿದ ಬಳಿಕ ಯಾವ ಬಂಧನಗಳೂ ಉಳಿಯುವುದಿಲ್ಲ. ಆಗಿ ಹೋದ ಕಾರ್ಯಕ್ಕೆ ಶೋಕಿಸಿ ಪ್ರಯೋಜನವಿಲ್ಲ. ನಮ್ಮ ಶೋಕ ಹೋದ ಜೀವವನ್ನು ಹಿಂದಕ್ಕೆ ತರಲಾರದು. ವ್ಯಕ್ತಿಯ ವ್ಯಕ್ತಿತ್ವಕ್ಕೆ ಬೆಲೆ ನೀಡಬೇಕೇ ಹೊರತು ಆತನ ಮೃತ ಶರೀರಕ್ಕಲ್ಲ. ಸತ್ತ ಮೇಲೆ ಉಳಿದ ಪಾರ್ಥಿವ ಶರೀರ ಜಗತ್ತಿನ ಪಾಲಿಗೆ ಬರೇ ತ್ಯಾಜ್ಯ ವಸ್ತುವಾಗಿಯೇ ಉಳಿದು ಬಿಡುತ್ತದೆ"
ಈ ಮಾತಿನಿಂದ ಸಹೋದರರು ಸಮಾಧಾನಗೊಳ್ಳುತ್ತಾರೆ. ಆದರೂ ಅವರು ಕೇಳುತ್ತಾರೆ “ದ್ರೌಪದಿ ಮಹಾ ಪತಿವೃತೆಯಾಗಿದ್ದಳು. ಈ ಕಾರಣದಿಂದ ಆಕೆ ಸ್ವರ್ಗಕ್ಕೆ ಹೋಗಬೇಕಿತ್ತಲ್ಲವೇ? ದಾರಿಯ ಮಧ್ಯೆಯೇ ಹೇಗೆ ನಿಧನ ಹೊಂದುತ್ತಾಳೆ? ಅವಳು ಮಾಡಿದ ಪಾಪವಾದರೂ ಏನು ಅಗ್ರಜ?”
“ಧರ್ಮಶಾಸ್ತ್ರದ ಪ್ರಕಾರ ನಮ್ಮ ಐವರಿಗೂ ದ್ರೌಪದಿ ಪತ್ನಿ. ಈ ಕಾರಣದಿಂದ ಆಕೆ ನಮ್ಮ ಐವರನ್ನೂ ಸಮಾನ ರೀತಿಯಲ್ಲಿ ಪ್ರೀತಿಸಬೇಕಿತ್ತು. ಆದರೆ ಆಕೆಗೆ ಅರ್ಜುನನ ಮೇಲೆ ಸ್ವಲ್ಪ ಜಾಸ್ತಿಯೇ ಮಮಕಾರವಿತ್ತು. ಈ ಕಾರಣದಿಂದ ಇದು ಓರ್ವ ಪತ್ನಿಯಾಗಿ ಆಕೆ ಮಾಡಿದ ದ್ರೋಹವೆಂದೇ ಪರಿಗಣಿಸಲ್ಪಡುತ್ತದೆ. ನಾವು ತೋರಿದ ಒಲವಿಗೆ ಮೋಸ ಮಾಡಿದಂತೆ ಆಗುತ್ತದೆ. ಈ ಕಾರಣದಿಂದ ಆಕೆಗೆ ಸ್ವರ್ಗಕ್ಕೆ ಪ್ರವೇಶ ದೊರೆಯಲಿಲ್ಲ.” ಎಂದ ಧರ್ಮರಾಯ.
ಯುಧಿಷ್ಟಿರನ ಉತ್ತರದಿಂದ ಸಮಾಧಾನಗೊಂಡ ನಾಲ್ವರೂ ಸಹೋದರರೂ ಮುನ್ನಡೆಯುತ್ತಾರೆ. ದಾರಿ ಸವೆದಂತೆ ಭೀಮ, ಅರ್ಜುನ, ನಕುಲ, ಸಹದೇವರು ಒಬ್ಬೊಬ್ಬರಾಗಿ ಕುಸಿದು ಮರಣಹೊಂದಿ ಸ್ವರ್ಗವನ್ನು ತಲುಪುತ್ತಾರೆ. ಯುಧಿಷ್ಟಿರನು ಮಾಡಿದ ಧರ್ಮದ ಕಾರ್ಯಗಳಿಂದಾಗಿ ಆತನನ್ನು ಸಶರೀರವಾಗಿ ಸ್ವರ್ಗಕ್ಕೆ ಕರೆತರಲು ಇಂದ್ರನು ಐರಾವತದ ಮೇಲೆ ಕುಳಿತು ಬರುತ್ತಾನೆ. ‘ಧರ್ಮರಾಯ, ನಿನ್ನ ಪುಣ್ಯ ಕಾರ್ಯಗಳ ನಿಮಿತ್ತ ನಿನ್ನನ್ನು ಸಶರೀರವಾಗಿ ಕರೆದೊಯ್ಯಲು ನಾನು ಬಂದಿರುವೆ, ಬಾ” ಎನ್ನುತ್ತಾನೆ.
“ನನ್ನನ್ನು ನಂಬಿ ನನ್ನ ಜೊತೆ ಬಂದಿರುವ ಈ ನಾಯಿಯನ್ನೂ ಕರೆದುಕೊಂಡು ಹೋಗಿ ಇಂದ್ರ ದೇವಾ” ಎನ್ನುತ್ತಾನೆ ಧರ್ಮರಾಯ. ಸ್ವರ್ಗದ ಬಾಗಿಲಿನಲ್ಲೂ ತನ್ನ ಧರ್ಮ ನಿಷ್ಟೆಯನ್ನು ಮರೆಯದ ಯುಧಿಷ್ಟಿರನನ್ನು ಮನಸಾರೆ ಮೆಚ್ಚಿಕೊಳ್ಳುತ್ತಾನೆ ಇಂದ್ರ. ಆತನ ಜೊತೆಗೆ ನಾಯಿಯನ್ನೂ ಸ್ವರ್ಗಕ್ಕೆ ಕರೆದುಕೊಂಡು ಹೋಗುತ್ತಾನೆ. ಆ ನಾಯಿಯು ಬೇರೆ ಯಾರೂ ಆಗಿರದೆ, ನರಕದ ಅಧಿಪತಿ ಯಮರಾಜನಾಗಿರುತ್ತಾನೆ. ಈ ಕಾರಣಕ್ಕೆ ಈಗಲೂ ಭೂಮಿಯಲ್ಲಿ ನಾಯಿಯನ್ನು ಚೆನ್ನಾಗಿ ಸಾಕುವುದರಿಂದ ಸ್ವರ್ಗದಲ್ಲಿ ಬಾಗಿಲು ನಿಮಗಾಗಿ ತೆರೆಯಲ್ಪಡುತ್ತದೆ ಎಂಬ ನಂಬಿಕೆ ಇದೆ.
(ಆಧಾರ)
ಕೃಪೆ: ಅಂತರ್ಜಾಲ ತಾಣ