ಮಹಾಭಾರತದ ಜೀವನ ಸಂದೇಶ

ಮಹಾಭಾರತದ ಜೀವನ ಸಂದೇಶ

ಪುಸ್ತಕದ ಲೇಖಕ/ಕವಿಯ ಹೆಸರು
ಚಂದ್ರಕಾಂತ್ ಕೆ.ಎಸ್.
ಪ್ರಕಾಶಕರು
ಹರಿವು ಬುಕ್ಸ್, ಬಸವನಗುಡಿ, ಬೆಂಗಳೂರು -೫೬೦೦೦೪
ಪುಸ್ತಕದ ಬೆಲೆ
ರೂ. ೧೨೫.೦೦, ಮುದ್ರಣ : ೨೦೨೩

ಚಂದ್ರಕಾಂತ್ ಕೆ.ಎಸ್. ಇವರು ‘ಮಹಾಭಾರತದ ಜೀವನ ಸಂದೇಶ' ಎಂಬ ಪುಟ್ಟ ಪುಸ್ತಕದಲ್ಲಿ ನಮ್ಮ ಜೀವನಕ್ಕೆ ಅಗತ್ಯವಾದ ಹಲವಾರು ವಿಷಯಗಳನ್ನು ಕಟ್ಟಿಕೊಟ್ಟಿದ್ದಾರೆ. ಸುಮಾರು ೮೬ ಪುಟಗಳ ಈ ಪುಸ್ತಕಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಲೇಖಕರಾದ ಜಗದೀಶ ಶರ್ಮಾ ಇವರು. ಇವರು ತಮ್ಮ ಮುನ್ನುಡಿಯಲ್ಲಿ ಬರೆದ ವಿಷಯಗಳನ್ನು ಆಯ್ದು ಇಲ್ಲಿ ನೀಡಲಾಗಿದೆ. ಓದುವಿರಾಗಿ...

“ಮಹಾಭಾರತವನ್ನು ವಿಶ್ವಕೋಶ ಎಂದು ಕರೆಯಬೇಕು. ಅದರಲ್ಲಿ ಅಷ್ಟು ವಿಷಯಗಳು ಆಡಕವಾಗಿವೆ. ವಿಶೇಷವೆಂದರೆ ಅಂದೆಂದೋ ರಚಿತವಾದ ಆ ಕೃತಿ ಇಂದಿಗೂ ಸಮೃತವಾಗುವಂತಿದೆ. ಹಾಗಾಗಿಯೇ ಇದು ಮುಂದಕ್ಕೂ ಸಲ್ಲುತ್ತದೆ. ಮಹಾಭಾರತದ ಈ ಗುಣವೇ ಅದು ಇಂದಿಗೂ ಅಸ್ತಿತ್ವದಲ್ಲಿ ಉಳಿಯುವುದಕ್ಕೆ ಕಾರಣ. ಭಾರತದ ಉದ್ದಗಲದ ಮಾತುಕತೆಗಳಲ್ಲಿ, ಸಾಹಿತ್ಯದಲ್ಲಿ ಇವತ್ತೂ ಮಹಾಭಾರತದವಿದೆ. ಅಲ್ಲಿಯ ವ್ಯಕ್ತಿಗಳು ಮತ್ತು ಪ್ರಸಂಗಗಳು ಮತ್ತೆ ಮತ್ತೆ ನೆನಪಾಗುತ್ತಾರೆ, ಪ್ರಕೃತದ ಸಂದರ್ಭಕ್ಕೆ ಬಳಕೆಯಾಗುತ್ತಾರೆ.

ಭಾರತೀಯ ಸಾಹಿತ್ಯ ಪ್ರಪಂಚವಂತೂ ಮಹಾಭಾರತವನ್ನು ಪುನಃ ಪುನಃ ಸೃಷ್ಟಿಸುತ್ತಲೇ ಸಾಗಿದೆ. ಅನುವಾದ, ಅದರ ಕಥೆಗಳನ್ನು ಆಧರಿಸಿದ ಕಥೆ-ಕವನ-ನಾಟಕ- ಕಾದಂಬರಿಗಳು, ವಿಮರ್ಶಾತ್ಮಕ ಕೃತಿಗಳು ಹೀಗೆ ಭಿನ್ನ-ವಿಭಿನ್ನವಾಗಿ ಮಹಾಭಾರತ ಭಾರತೀಯ ಸಾಹಿತ್ಯವನ್ನು ಇಂದಿಗೂ ತುಂಬುತ್ತಲೇ ಇದೆ. ಅಂಥದ್ದೊಂದು ಹೊಸ ಕೃತಿ ಇದೀಗ ನಮ್ಮ ಓದಿಗೆ ಸಿಕ್ಕಿದೆ. ಡಾ.ಚಂದ್ರಕಾಂತ ಅವರು ಮಹಾಭಾರತವನ್ನು ನೋಡುವ ಬಗೆಯೊಂದನ್ನು ಇಲ್ಲಿ ಪ್ರಸ್ತುತಪಡಿಸಿದ್ದಾರೆ.

ಭಾರತ ಆಧ್ಯಾತ್ಮನಿಷ್ಠ. ಆದರ ವೈಶಿಷ್ಟ್ಯವಿರುವುದೇ ಆಧ್ಯಾತ್ಮದ ಶೋಧದಲ್ಲಿ. ಪೂರ್ವಭಾರತೀಯರ ಅಂತಃಶೋಧನೆಯ ಫಲಿತವರು. ಭಾರತದ ಉಸಿರುಸಿರೂ ಆಧ್ಯಾತ್ಮವೇ. ಹಾಗಾಗಿಯೇ ಭಾರತದ ಎಲ್ಲದಕ್ಕೂ ಆಧ್ಯಾತ್ಮದ ನಂಟಿರುತ್ತದೆ. ಇಲ್ಲಿಯ ಉಪಾಸನೆ, ಊಟ, ಬಟ್ಟೆ, ಆಭರಣ, ನಿರ್ಮಾಣ, ಮಾತು, ವ್ಯವಹಾರ, ಕೃಷಿ, ಆಚರಣೆ... ಹೀಗೆ ಬದುಕಿನ ಯಾವುದನ್ನು ಪರಿಶೀಲಿಸಿದರೂ ಆದು ಅಧ್ಯಾತ್ಮಕ್ಕೆ ಕೊಂಡೊಯ್ದು ನಿಲ್ಲಿಸುತ್ತದೆ. ಒಬ್ಬ ಸಾಮಾನ್ಯ ವ್ಯಕ್ತಿಯ ಸಹಜ ಮಾತೂ ಇಲ್ಲಿ ಆಧ್ಯಾತ್ಮವನ್ನು ಹೇಳುತ್ತದೆ. ಬದುಕಿನ ಕಷ್ಟ-ನಷ್ಟಗಳಿಗೆ ಈ ದೇಶದ ಅನಕ್ಷರಸ್ಥನೂ ಬದುಕಿನ ನಶ್ವರತೆಯ ಅನುಸಂಧಾನದಲ್ಲಿ ಸಮಾಧಾನ ಕಾಣುತ್ತಾನೆ. ಇದಕ್ಕೆ ಭಾರತದ ಸಾಹಿತ್ಯವೂ ಹೊರತಲ್ಲ. ವೇದಗಳಿಂದ ಆರಂಭಿಸಿ, ಜನಪದದಲ್ಲಿ ಹುಟ್ಟಿಕೊಳ್ಳುವ ಹಾಡಿನ ಸಾಲಿನವರೆಗೂ ಇಲ್ಲಿ ಆಧ್ಯಾತ್ಮದ ಪ್ರಸಕ್ತಿ ಇರುತ್ತದೆ.

ಹೀಗಿರುವಾಗ ಭಾರತೀಯರ ಅತ್ಯಂತ ಗೌರವಾನ್ವಿತ ಗ್ರಂಥ ಮಹಾಭಾರತ ಇದರಿಂದ ಹೊರತಾಗಿರುವುದು ಹೇಗೆ? ಅದರಲ್ಲೂ ಅಧ್ಯಾತ್ಮದ ಮೇರು ಎನ್ನಿಸಿಕೊಂಡಿರುವ ಭಗವದ್ಗೀತೆಯನ್ನು ತನ್ನಲ್ಲಿ ಒಳಗೊಂಡಿರುವ ಕೃತಿ ಆಧ್ಯಾತ್ಮವನ್ನಲ್ಲದೆ ಬೇರೇನನ್ನು ಧ್ವನಿಸಲು ಸಾಧ್ಯ? ಹಾಗಾಗಿ ಇಲ್ಲಿ ಲೇಖಕರು ಮಹಾಭಾರತವನ್ನು ಆಧ್ಯಾತ್ಮಿಕವಾಗಿ ನೋಡುತ್ತಾರೆ. ಮಹಾಭಾರತದ ವ್ಯಕ್ತಿಗಳನ್ನು ಆಧ್ಯಾತ್ಮದೊಂದಿಗೆ ಸಮನ್ವಯ ಮಾಡುವ ಕಾರ್ಯವನ್ನು ಹಿಂದೆಯೂ ವಿದ್ವಾಂಸರು ಮಾಡಿದ್ದಿದೆ. ಆದರೆ ಇಲ್ಲಿ ಅದರ ಜೊತೆಗೆ ಅಲ್ಲಿಯ ಘಟನೆಗಳನ್ನು ಆಧ್ಯಾತ್ಮದ ಸಾಧನೆಯ ಜೊತೆ ಸಮೀಕರಿಸಿ ನೋಡಲಾಗಿದೆ. ಅದಕ್ಕೆ ಪ್ರಧಾನವಾಗಿ ಭಗವದ್ಗೀತೆಯನ್ನು ಅವಲಂಬಿಸಿದ್ದಾರೆ. ಕೆಲವೆಡೆ ಉಪನಿಷತ್ತುಗಳ ಉಲ್ಲೇಖವೂ ಇದೆ.

ಭಗವದ್ಗೀತೆಯ ಸೊಲ್ಲುಗಳನ್ನು ಇಡಿಯ ಮಹಾಭಾರತಕ್ಕೆ ಅನ್ವಯಿಸಿದ್ದು ಕುತೂಹಲವನ್ನು ಮೂಡಿಸುತ್ತದೆ. ಕೃಷ್ಣ ಹೇಳುವ ಆ ಸೂತ್ರಗಳಿಗೆ ಅನುಸಾರವಾಗಿಯೂ ವಿರುದ್ಧವಾಗಿಯೂ ಘಟನೆಗಳು ಹೇಗೆ ನಡೆದಿವೆ ಎನ್ನುವುದರ ಅಧ್ಯಯನ ಈ ಕೃತಿಯಲ್ಲಿದೆ. ಇದರ ಜೊತೆ ನಮ್ಮ ಬದುಕನ್ನು ಅಧ್ಯಾತ್ಮದ ಹಾದಿಯಲ್ಲಿ ನಡೆಸಲು ಅವು ಹೇಗೆ ಸಹಕಾರಿ ಎನ್ನುವುದರ ವಿವರಣೆಯೂ ಇಲ್ಲಿ ಲಭ್ಯ. ಇದು ಕೃತಿಯನ್ನು ಹೆಚ್ಚು ಪ್ರಸ್ತುತವಾಗಿಸುತ್ತದೆ.

ಭಗವದ್ಗೀತೆ ಮಹಾಭಾರತದ ಅಂಗ, ಅದಿಲ್ಲದ ಮಹಾಭಾರತ ಪೂರ್ಣವೇ ಅಲ್ಲ. ಹಾಗೆ ನೋಡಿದರೆ ಭಗವದ್ಗೀತೆಯನ್ನು ಹೇಳಲೆಂದೇ ಮಹಾಭಾರತ ನಡೆಯಿತು, ಭಗವದ್ಗೀತೆಯನ್ನು ಪ್ರಚುರಪಡಿಸಲೆಂದೇ ಅದನ್ನು ಬರೆಯಲಾಯಿತು. ಎನ್ನುವಷ್ಟಿದೆ ಭಗವದ್ಗೀತೆಯ ಎತ್ತರ. ಆಚಾರ್ಯತ್ರಯರೂ ಸೇರಿದಂತೆ ಗಾಂಧಿ ಗೋಖಲೆವರೆಗೆ, ಅಥವಾ ಈ ಕಾಲದ ಹಲವು ಪ್ರಾಜ್ಞರವರೆಗೆ ಗೀತೆಗೆ ಕೊಟ್ಟ ಮಹತ್ವವನ್ನು ಗಮನಿಸಿದಾಗ ಇಲ್ಲಿ ಗೀತೆಯೇ ಕೇಂದ್ರ ಎನಿಸುತ್ತದೆ. ಚಂದ್ರಕಾಂತರ ಭಾವವೂ ಇದೇ ಆಗಿದೆ ಎನ್ನುವುದಕ್ಕೆ ಈ ಕೃತಿಯ ರಚನೆಯೇ ಸಾಕ್ಷಿ. ತಾತ್ವಿಕತೆಯನ್ನು ಕಥೆಗಳ ಮೂಲಕ ಮತ್ತು ಐತಿಹಾಸಿಕ ಘಟನೆಗಳ ಮೂಲಕ ಪ್ರಸ್ತುತಪಡಿಸುವುದು ನಮ್ಮ ಹಿಂದಿನವರು ಅನುಸರಿಸಿಕೊಂಡುಬಂದ ಕ್ರಮ. ಹಾಗಾಗಿಯೂ ಮಹಾಭಾರತವನ್ನು ಭಗವದ್ಗೀತೆಯ ತಾತ್ವಿಕಭೂಮಿಯಲ್ಲಿ ನೋಡಬೇಕು ಎನ್ನುವುದು ಸರಿಯೇ.

ಚಂದ್ರಕಾಂತರು ಇಲ್ಲಿ ಮಹಾಭಾರತದ ಪ್ರಸಿದ್ಧ ಕಥೆಗಳನ್ನು ಅನುಸರಿಸುತ್ತಾರೆ. ಕರ್ಣನಿಗೆ ತನಗೆ ಅನ್ಯಾಯವಾಗಿದೆ ಎಂಬ ಭಾವವಿತ್ತು, ಯುಧಿಷ್ಠಿರನಿಗೆ ಜೂಜಿನ ಗೀಳಿತ್ತು, ಅಭಿಮನ್ಯುವಿಗೆ ಚಕ್ರವ್ಯೂಹದಿಂದ ಹೊರಬರುವುದು ಹೇಗೆಂದು ಗೊತ್ತಿರಲಿಲ್ಲ. ಎನ್ನುವ ಅಂಶಗಳು; ಮಹಾಭಾರತವನ್ನು ಗಣೇಶ ಬರೆದ, ದೌಪದಿಯ ವಸ್ತ್ರಾಪಹರಣದ ಸಂದರ್ಭದಲ್ಲಿ ಶ್ರೀಕೃಷ್ಣ ಆಕ್ಷಯಾಂಬರವಿತ್ತ ಎನ್ನುವ ಘಟನೆಗಳೆಲ್ಲ ಅಂಥವು. ಇವೆಲ್ಲ ಮೂಲ ಮಹಾಭಾರತದಲ್ಲಿ ಇರದ ಸಂಗತಿಗಳಾದರೂ ಈ ಕೃತಿಯ ಉದ್ದೇಶ ಮತ್ತು ಸ್ವರೂಪದ ದೃಷ್ಟಿಯಿಂದ ಇವುಗಳ ಬಳಕೆಯಲ್ಲಿ ಅಸಂಬದ್ಧತೆ ಕಾಣಿಸದು. ಯಾಕೆಂದರೆ ಲೇಖಕರು ಈ ಘಟನೆಗಳಲ್ಲಿ ಬದುಕಿಗೆ ಬೇಕಾದ ಸಂದೇಶವನ್ನು ಗುರುತಿಸುತ್ತಾರೆ. ಆ ಅಂಶಗಳು ಚೆನ್ನಾಗಿಯೇ ಇವೆ. ಆಧ್ಯಾತ್ಮದ ದೃಷ್ಟಿಕೋನದಲ್ಲಿ ಬದುಕನ್ನು ನೋಡುವುದೇ ಭಾರತೀಯತೆಯ ಸೊಗಸು. ಆ ದೃಷ್ಟಿಯಿಂದಾಗಿ ಈ ಕೃತಿ ಮಹತ್ವದ್ದು ಎನಿಸುತ್ತದೆ.”