ಮಹಾಭಾರತದ ವಿರಳ ಕಥೆಗಳು (ಭಾಗ ೧೯) - ಕಪಿಧ್ವಜ
ಮಹಾಭಾರತದ ಕುರುಕ್ಷೇತ್ರ ಯುದ್ಧದ ಸಂದರ್ಭದಲ್ಲಿ ಶ್ರೀಕೃಷ್ಣ ಅರ್ಜುನನ ರಥದ ಸಾರಥಿಯಾದ ವಿಷಯ ನಿಮಗೆಲ್ಲಾ ತಿಳಿದೇ ಇದೆ. ಆದರೆ ಅರ್ಜುನನ ರಥದ ಮೇಲೆ ಹಾರಾಡುವ ಧ್ವಜದಲ್ಲಿ ಹನುಮಂತನ ಚಿತ್ರವಿರುವುದು ಏಕೆ ಎಂಬ ಸಂಗತಿ ನಿಮಗೆ ತಿಳಿದಿದೆಯೇ? ತ್ರೇತಾಯುಗದ ರಾಮಭಕ್ತ ಹನುಮಂತ ದ್ವಾಪರಾಯುಗದಲ್ಲಿ ಅರ್ಜುನನ ರಥದ ಧ್ವಜವನ್ನೇರಿ ವಿರಾಜಮಾನವಾದದ್ದು ಏಕೆಂದು ಗೊತ್ತೇ? ಆದರ ಹಿಂದೆ ಒಂದು ಸ್ವಾರಸ್ಯಕರವಾದ ಕಥೆಯಿದೆ. ಬನ್ನಿ ತಿಳಿದುಕೊಳ್ಳೋಣ.
ಒಮ್ಮೆ ಅರ್ಜುನನು ಶ್ರೀಕೃಷ್ಣನ ಅಣತಿಯಂತೆ ಈಶ್ವರನನ್ನು ಕುರಿತು ತಪಸ್ಸು ಮಾಡಿ, ಅವನನ್ನು ಪ್ರಸನ್ನಗೊಳಿಸುತ್ತಾನೆ. ಈಶ್ವರನು ಅರ್ಜುನನಿಗೆ ಅತ್ಯಂತ ಶಕ್ತಿಯುತವಾದ ಪಾಶುಪತಾಸ್ತ್ರವನ್ನು ವರವಾಗಿ ನೀಡುತ್ತಾನೆ. ಈ ಅಸ್ತ್ರವನ್ನು ಪಡೆದ ಬಳಿಕ ಅರ್ಜುನನಿಗೆ ಅಹಂಕಾರ ಬರುತ್ತದೆ. ಪ್ರಪಂಚದಲ್ಲೇ ತಾನು ಶ್ರೇಷ್ಟ. ನನ್ನನ್ನು ಜಯಿಸುವವರು ಯಾರೂ ಇಲ್ಲ ಎಂಬ ಗರ್ವ ತಲೆದೋರುತ್ತದೆ. ಶ್ರೀಕೃಷ್ಣನಿಗೆ ಇದರ ಅರಿವಾಗುತ್ತದೆ. ದೊಡ್ದ ದೊಡ್ದ ವೀರರು ತಮ್ಮ ಅಹಂಕಾರದಿಂದಲೇ ನಾಶವಾಗಿ ಹೋಗಿದ್ದಾರೆ ಎಂಬ ಸತ್ಯ ಪರಮಾತ್ಮನಿಗೆ ತಿಳಿದಿರುತ್ತದೆ. ಅವನು ಅರ್ಜುನನಿಗೆ ಬುದ್ಧಿ ಕಲಿಸಬೇಕೆಂದು ನಿರ್ಧರಿಸಿ ರಾಮೇಶ್ವರಕ್ಕೆ ಯಾತ್ರೆ ಹೋಗಿ ಬರುವಂತೆ ತಿಳಿಸುತ್ತಾನೆ.
ಶ್ರೀಕೃಷ್ಣನ ಸಲಹೆಯಂತೆ ಅರ್ಜುನನು ತನ್ನ ರಥವನ್ನೇರಿ ರಾಮೇಶ್ವರಕ್ಕೆ ಹೋಗುತ್ತಾನೆ. ಅಲ್ಲಿನ ಸಮುದ್ರದಲ್ಲಿ ಸ್ನಾನ ಮಾಡಿ ಹೊರ ಬಂದಾಗ ಒಂದು ಕಪಿಯು ರಾಮನಾಮ ಸ್ಮರಣೆ ಮಾಡುವುದು ಕಂಡು ಬರುತ್ತದೆ. ಕುತೂಹಲದಿಂದ ಅರ್ಜುನನು ಅದರ ಬಳಿ ‘ಹೇ ಕಪಿಯೇ, ನೀನು ಯಾರು? ಇಲ್ಲೇಕೆ ರಾಮ ಸ್ಮರಣೆ ಮಾಡುತ್ತಿರುವೆ?’ ಎನ್ನುತ್ತಾನೆ. ಅದಕ್ಕೆ ಆ ಕಪಿ ‘ಅಯ್ಯಾ, ನಾನು ಪ್ರಭು ಶ್ರೀರಾಮನ ಭಕ್ತ ಹನುಮಂತ. ನಾವು ಕಪಿಗಳೆಲ್ಲಾ ಸೇರಿ ರಾಮನಿಗೆ ಲಂಕೆಗೆ ಹೋಗಲು ಕಲ್ಲುಗಳಿಂದ ಸೇತುವೆಯನ್ನು ನಿರ್ಮಾಣ ಮಾಡಿದ್ದೆವು. ಆ ನೆನಪಿನಲ್ಲಿ ರಾಮ ನಾಮ ಮಾಡುತ್ತಿದ್ದೇನೆ' ಎನ್ನುತ್ತದೆ. ತಾನೇ ಶ್ರೇಷ್ಟ ಎಂಬ ಅಹಂಕಾರದಿಂದ ಮೆರೆಯುತ್ತಿದ್ದ ಅರ್ಜುನ ಹನುಮಂತನನ್ನು ನೋಡಿ ವ್ಯಂಗ್ಯವಾಗಿ ನಕ್ಕು ‘ನೀವೆಲ್ಲಾ ಕಪಿಗಳು ಬುದ್ಧಿಹೀನರು. ನಾನಾಗಿದ್ದರೆ, ಕಷ್ಟ ಪಟ್ಟು ಕಲ್ಲಿನ ಸೇತುವೆ ಮಾಡುವ ಬದಲು ನಿಮಿಷಾರ್ಧದಲ್ಲಿ ನನ್ನ ಬಾಣಗಳಿಂದ ಸೇತುವೆಯನ್ನು ನಿರ್ಮಿಸಿ ಬಿಡುತ್ತಿದ್ದೆ. ಸುಮ್ಮನೇ ನೀವು ಸಮಯವನ್ನು ವ್ಯರ್ಥ ಮಾಡಿ ಬಿಟ್ಟಿರಿ' ಎನ್ನುತ್ತಾನೆ.
ಹನುಮಂತನಿಗೆ ಅರ್ಜುನನ ಮಾತಿನಲ್ಲಿರುವ ಅಹಂಭಾವದ ಅರಿವಾಗುತ್ತದೆ. ಅವನಿಗೆ ತಕ್ಕುದಾದ ಬುದ್ಧಿ ಕಲಿಸಬೇಕೆಂದು ‘ಅಯ್ಯಾ ಅರ್ಜುನ, ಬಾಣದ ಸೇತುವೆ ವಾನರ ಸೇನೆಯ ಭಾರವನ್ನು ತಡೆದುಕೊಳ್ಳುತ್ತಿರಲಿಲ್ಲ, ಮುರಿದು ಬೀಳುತ್ತಿತ್ತು' ಎಂದನು. ಇದರಿಂದ ಇನ್ನಷ್ಟು ಕೆರಳಿದ ಅರ್ಜುನ ನನ್ನ ಬಾಣಗಳು ಅಭೇಧ್ಯ, ಅವುಗಳು ಮುರಿದು ಬೀಳಲು ಸಾಧ್ಯವೇ ಇಲ್ಲ' ಬೇಕಾದರೆ ನಾನು ಈಗಲೇ ಒಂದು ಬಾಣಗಳ ಸೇತುವೆಯನ್ನು ನಿರ್ಮಿಸಿ ಬಿಡುವೆ. ನೀನು ಪರೀಕ್ಷಿಸಿ ನೋಡು ‘ ಎನ್ನುತ್ತಾನೆ. ಇದೇ ಅರ್ಜುನನ ಅಹಂಕಾರವನ್ನು ಮುರಿಯಲು ಸರಿಯಾದ ಸಮಯವೆಂದು ಅರಿತ ಹನುಮಂತ ‘ಹಾಗೆಯೇ ಆಗಲಿ, ಅದು ನನ್ನ ಒಂದು ಪಾದದ ಭಾರವನ್ನೂ ತಾಳಿಕೊಳ್ಳಲಾರದು' ಎನ್ನುತ್ತಾನೆ. ಅರ್ಜುನ ಹೇಳುತ್ತಾನೆ ‘ನಿನ್ನ ಪಾದ ಸ್ಪರ್ಷದಿಂದ ನನ್ನ ಬಾಣದ ಸೇತುವೆ ಮುರಿದುಬಿದ್ದಲ್ಲಿ ನಾನು ಸೋಲನ್ನು ಒಪ್ಪಿ ಅಗ್ನಿ ಪ್ರವೇಶ ಮಾಡಿಕೊಳ್ಳುವೆ' ಎನ್ನುತ್ತಾನೆ.
ತಕ್ಷಣ ಅರ್ಜುನ ತನ್ನ ಬಿಲ್ಲು ಬಾಣದ ಸಹಾಯದಿಂದ ಲಂಕೆಯವರೆಗೆ ಒಂದು ಗಟ್ಟಿಯಾದ ಬಾಣದ ಸೇತುವೆಯನ್ನು ನಿರ್ಮಾಣ ಮಾಡುತ್ತಾನೆ. ಹನುಮಂತ ಆ ಸೇತುವೆಯ ಮೇಲೆ ಕಾಲನ್ನು ಇರಿಸುತ್ತಲೇ ಸೇತುವೆ ಮುರಿದು ಸಮುದ್ರಕ್ಕೆ ಬೀಳುತ್ತದೆ. ಅರ್ಜುನನ ಅಹಂಕಾರಕ್ಕೂ ಏಟು ಬೀಳುತ್ತದೆ. ದುಃಖ ಹಾಗೂ ಅಪಮಾನದಿಂದ ಅರ್ಜುನ ತಾನು ಆಡಿದ ಮಾತಿನಂತೆ ಅಗ್ನಿ ಪ್ರವೇಶ ಮಾಡಲು ತಯಾರಾಗುತ್ತಾನೆ. ಅದೇ ಸಮಯಕ್ಕೆ ಓರ್ವ ಮುನಿ ಅಲ್ಲಿಗೆ ಆಗಮಿಸುತ್ತಾರೆ. ವಿಷಯವೇನೆಂದು ಕೇಳಿದಾಗ, ಈರ್ವರೂ ತಮ್ಮ ತಮ್ಮ ಸಂಗತಿಗಳನ್ನು ಹೇಳಿಕೊಳ್ಳುತ್ತಾರೆ. ಆಗ ಮುನಿ ‘ನಾನೊಮ್ಮೆ ನಿಮ್ಮ ಇಬ್ಬರ ಸಾಮರ್ಥ್ಯವನ್ನು ಪರೀಕ್ಷಿಸುವೆ. ಅರ್ಜುನ, ನೀನು ಮತ್ತೊಮ್ಮೆ ಬಾಣಗಳ ಸೇತುವೆಯನ್ನು ನಿರ್ಮಿಸು' ಎನ್ನುತ್ತಾರೆ. ಮುನಿಗಳ ಮಾತಿನಂತೆ ಅರ್ಜುನ ಮತ್ತೆ ಬಾಣಗಳ ಸೇತುವೆಯನ್ನು ನಿರ್ಮಾಣ ಮಾಡುತ್ತಾನೆ.
ಮುನಿ ಹನುಮಂತನಿಗೆ ಸೇತುವೆಯ ಮೇಲೆ ಕಾಲಿಡಲು ಹೇಳುತ್ತಾರೆ. ಈ ಬಾರಿ ಹನುಮಂತ ಕಾಲಿರಿಸಿದಾಗ ಸೇತುವೆ ಮುರಿದು ಬೀಳುವುದಿಲ್ಲ. ಹನುಮಂತ ತನ್ನ ಎರಡೂ ಕಾಲುಗಳನ್ನು ಸೇತುವೆಯ ಮೇಲೆ ಇರಿಸುತ್ತಾನೆ. ಆಗಲೂ ಸೇತುವೆ ಒಂದಿಂಚೂ ಅಲುಗಾಡುವುದಿಲ್ಲ. ಸೇತುವೆಯ ಮೇಲೆ ಕುಪ್ಪಳಿಸಿ ನೋಡಿದರೂ ಸೇತುವೆ ಜಗ್ಗುವುದಿಲ್ಲ. ‘ನಾನು ಸೋತೆ’ ಎನ್ನುತ್ತಾನೆ ಹನುಮಂತ. ಅರ್ಜುನನಿಗೆ ಅಚ್ಚರಿಯಾಗುತ್ತದೆ. ಮುನಿಗಳ ಬಳಿ ‘ನೀವು ಯಾರು? ಈ ಘಟನೆಯ ಹಿಂದಿನ ಮರ್ಮವೇನು ತಿಳಿಸುವ ಕೃಪೆ ಮಾಡಬೇಕು' ಎಂದು ಹೇಳುತ್ತಾನೆ. ಆಗ ಮುನಿಗಳು ತಮ್ಮ ಋಷಿಯ ವೇಷವನ್ನು ಕಳಚುತ್ತಾರೆ. ಶ್ರೀಕೃಷ್ಣನೇ ಆ ಮುನಿಯ ವೇಷದಲ್ಲಿ ಬಂದಿರುತ್ತಾನೆ. ‘ಅರ್ಜುನ, ನಿನಗಿಂತ ಶ್ರೇಷ್ಟರಿಲ್ಲ ಎಂಬ ಅಹಂಕಾರದಿಂದ ನೀನು ಹನುಮಂತ ಹಾಗೂ ಅವನ ವಾನರ ಸೈನ್ಯದ ರಾಮ ಭಕ್ತಿಯ ಮೇಲೆ ಸಂಶಯ ವ್ಯಕ್ತ ಪಡಿಸಿದೆ, ಆ ಕಾರಣದಿಂದಲೇ ನೀನು ಮೊದಲು ಕಟ್ಟಿದ ಸೇತುವೆ ಹನುಮಂತನ ಪಾದ ಸ್ಪರ್ಷವಾಗುತ್ತಲೇ ಮುರಿದು ಬಿತ್ತು. ಮತ್ತೊಮ್ಮೆ ಸೇತುವೆ ಕಟ್ಟಿ, ಹನುಮಂತ ಪಾದವನ್ನಿಟ್ಟಾಗ ನಾನು ನನ್ನ ಸುದರ್ಶನ ಚಕ್ರವನ್ನು ಆ ಸೇತುವೆಯ ಕೆಳಗೆ ಇರಿಸಿದೆ. ಆದುದರಿಂದ ಸೇತುವೆ ಮುರಿದು ಬೀಳಲಿಲ್ಲ.’ ಎಂದು ತನ್ನ ಸುದರ್ಶನ ಚಕ್ರವನ್ನು ಸೇತುವೆಯ ಅಡಿಯಿಂದ ಹೊರತೆಗೆಯುತ್ತಾನೆ. ಆಗ ಸೇತುವೆ ಮತ್ತೊಮ್ಮೆ ಮುರಿದು ಬೀಳುತ್ತದೆ. ಅದರ ಜೊತೆಗೆ ಅರ್ಜುನನ ಅಹಂಕಾರವೂ ಮುರಿದು ಬೀಳುತ್ತದೆ. ಅವನು ಶ್ರೀಕೃಷ್ಣ ಹಾಗೂ ಹನುಮಂತನ ಬಳಿ ಕ್ಷಮೆಯನ್ನು ಕೋರುತ್ತಾನೆ.
ಹನುಮಂತ ಅರ್ಜುನನ ಕ್ಷಮಾಗುಣವನ್ನು ಮೆಚ್ಚಿಕೊಳ್ಳುತ್ತಾನೆ ಮತ್ತು ಅವನಿಗೆ ಒಂದು ಉಡುಗೊರೆ ನೀಡುತ್ತಾನೆ. ‘ಅರ್ಜುನಾ, ನಿನ್ನ ಪರಾಕ್ರಮವನ್ನು ನಾನು ಮೆಚ್ಚಿಕೊಳ್ಳುತ್ತೇನೆ. ನಿನ್ನ ರಥದ ಮೇಲಿರುವ ಧ್ವಜದಲ್ಲಿ ನಾನು ಬಿಂಬವಾಗಿ ನಿಲ್ಲುತ್ತೇನೆ. ನಿನ್ನ ಹಾಗೂ ರಥದ ಸಮಸ್ತ ರಕ್ಷಣೆಯ ಜವಾಬ್ದಾರಿ ನನ್ನದು.’ ಎಂದು ಹನುಮಂತ ಆಶೀರ್ವಾದ ಮಾಡುತ್ತಾನೆ. ನಂತರ ಅರ್ಜುನನ ರಥದ ಮೇಲಿನ ಧ್ವಜದಲ್ಲಿ ಹನುಮಂತನ ಚಿತ್ರ ಕಂಡು ಬರುತ್ತದೆ. ಇದನ್ನು ‘ಕಪಿಧ್ವಜ' ಎಂದು ಕರೆಯುತ್ತಾರೆ. (ಕಪಿ = ವಾನರ, ಮಂಗ)
ಪೂರಕ ಮಾಹಿತಿ: ಮಹಾಭಾರತದ ಕಥೆಗಳಲ್ಲಿ ಕೆಲವು ಕಡೆ ಭೀಮನಿಗೆ ಹನುಮಂತನು ಆಶೀರ್ವಾದ ಮಾಡಿ ತನ್ನ ಬಿಂಬ ಇರುವ ಧ್ವಜವನ್ನು ನೀಡಿದುದಾಗಿಯೂ ಮಾಹಿತಿ ಇದೆ. ಅದರ ಪ್ರಕಾರ ಭೀಮ ಒಮ್ಮೆ ಹೋಗುತ್ತಿರುವಾಗ ಮುದಿ ವಾನರವೊಂದು ತನ್ನ ಬಾಲವನ್ನು ದಾರಿಗೆ ಅಡ್ಡವಾಗಿಟ್ಟು ಮಲಗಿತ್ತು. ಭೀಮ ಅದರ ಬಳಿ ತನ್ನ ಬಾಲವನ್ನು ಸರಿಸಲು ತಿಳಿಸಿದಾಗ ಅದು ತಾನು ಬಲಹೀನನಾಗಿದ್ದೇನೆ. ನೀನೇ ಅದನ್ನು ಪಕ್ಕಕ್ಕಿಟ್ಟು ಹೋಗು ಎನ್ನುತ್ತದೆ. ತನ್ನ ಸಾಮರ್ಥ್ಯದ ಮೇಲೆ ಬಹಳ ಅಹಂಕಾರವಿದ್ದ ಭೀಮ ಬಾಲವನ್ನು ಎಷ್ಟೇ ಸರಿಸಲು ಪ್ರಯತ್ನಿಸಿದರೂ ಒಂದಿಂಚೂ ಅಲುಗಾಡುವುದಿಲ್ಲ. ಗರ್ವಭಂಗವಾದ ಭೀಮ ಆ ವಾನರನ ಬಳಿ ಕ್ಷಮೆಯನ್ನು ಕೇಳಿದಾಗ ಅದು ತನ್ನ ನಿಜ ರೂಪವನ್ನು ತೋರಿಸುತ್ತದೆ. ಅದು ಬೇರೆ ಯಾರೂ ಅಲ್ಲ. ಹನುಮಂತ. ಹನುಮಂತನ ತಂದೆ ಹಾಗೂ ಭೀಮನ ತಂದೆ ವಾಯುದೇವ ಒಬ್ಬರೇ ಆಗಿರುವುದರಿಂದ ಅವರಿಬ್ಬರೂ ಸಹೋದರರಾಗಿರುತ್ತಾರೆ. ಹನುಮಂತ ಭವಿಷ್ಯದಲ್ಲಿ ಬರುವ ಯುದ್ಧಕ್ಕಾಗಿ ಭೀಮನಿಗೆ ಹಲವಾರು ಯುದ್ಧ ತಂತ್ರಗಳನ್ನು ತಿಳಿಸಿಕೊಡುತ್ತಾರೆ. ನಂತರ ಆಶೀರ್ವಾದ ರೂಪದಲ್ಲಿ ನಿನ್ನ ರಥದ ಧ್ವಜದಲ್ಲಿ ನಾನು ಬಿಂಬವಾಗಿ ಸದಾ ಇರುತ್ತೇನೆ ಎನ್ನುತ್ತಾರೆ. ಹೀಗೆ ಬೇರೆ ಬೇರೆ ಮಹಾಭಾರತದ ಕಥೆಗಳಲ್ಲಿ ಪಾಂಡವರಿಗೆ ‘ಕಪಿಧ್ವಜ' ದೊರೆತ ಬಗ್ಗೆ ವಿವಿಧ ನಿರೂಪಣೆಗಳಿವೆ.
(ಸುಳಿವು: ‘ಕಪಿಧ್ವಜ' ಪುಸ್ತಕ)
ಚಿತ್ರ ಕೃಪೆ: ಅಂತರ್ಜಾಲ ತಾಣ