ಮಹಾಭಾರತದ ವಿರಳ ಕಥೆಗಳು (ಭಾಗ ೨೦) -ಕರ್ಣನ ಎಡಗೈ ದಾನ
ಮಹಾಭಾರತದಲ್ಲಿ ಅತ್ಯಂತ ಅದೃಷ್ಟಹೀನ ವ್ಯಕ್ತಿ ಎಂದರೆ ಕರ್ಣ. ನಿಮಗೆ ತಿಳಿದೇ ಇರುವ ಹಾಗೆ ಕುಂತಿಗೆ ಮದುವೆಯಾಗುವ ಮೊದಲು ಸೂರ್ಯ ದೇವನ ಕೃಪೆಯಿಂದ ಜನಿಸಿದ ಮಗುವೇ ಕರ್ಣ. ಹುಟ್ಟುವಾಗಲೇ ಕವಚ-ಕುಂಡಲದೊಂದಿಗೆ ಹುಟ್ಟಿದ ತೇಜಸ್ವಿ ಮಗು ಈತ. ಆದರೆ ಸಮಾಜಕ್ಕೆ ಹೆದರಿ ಕುಂತಿ ಅವನನ್ನು ತ್ಯಜಿಸುತ್ತಾಳೆ. ನೀರಿನಲ್ಲಿ ತೇಲಿ ಬಿಟ್ಟ ಮಗು ಹಸ್ತಿನಾಪುರದ ಮಹಾರಾಜ ಧೃತರಾಷ್ಟ್ರನ ರಥದ ಸಾರಥಿ ಅಧಿರಥನಿಗೆ ಸಿಕ್ಕಿತು. ಅವನು ಅದನ್ನು ತನ್ನ ಪತ್ನಿ ರಾಧೆಗೆ ನೀಡಿದ. ಅಧಿರಥ-ರಾಧೆ ದಂಪತಿಗಳು ಸೂತರಾಗಿದ್ದುದರಿಂದ ಕರ್ಣನಿಗೆ ‘ಸೂತ ಪುತ್ರ' ಎಂಬ ಹೆಸರು ಬಂತು. ರಾಧೆ ಸಾಕಿ ಬೆಳೆಸಿದ್ದರಿಂದ ‘ರಾಧೇಯ' ಎಂಬ ಹೆಸರೂ ಅವನಿಗಿದೆ.
ಬಿಲ್ವಿದ್ಯೆಯನ್ನು ಕಲಿಯುವ ಆಸೆಯಿಂದ ಗುರುವನ್ನು ಹುಡುಕುವಾಗ ಕ್ಷತ್ರಿಯನಲ್ಲದ ಇವನಿಗೆ ಯಾರೂ ವಿದ್ಯೆಯನ್ನು ಕಲಿಸಲಿಲ್ಲ. ಕ್ಷತ್ರಿಯರನ್ನು ವಿರೋಧಿಸುತ್ತಿದ್ದ ಪರಶುರಾಮರ ಬಳಿ ತಾನು ಬ್ರಾಹ್ಮಣ ಎಂದು ಹೇಳಿ ವಿದ್ಯೆಯನ್ನು ಕಲಿಯುತ್ತಾನೆ. ಆದರೆ ಅಲ್ಲೂ ಅವನ ವಿಧಿ ಅವನನ್ನು ವಂಚಿಸುತ್ತದೆ. ಒಂದು ಘಟನೆಯಿಂದ ಪರಶುರಾಮರ ಶಾಪಕ್ಕೆ ಗುರಿಯಾಗುತ್ತಾನೆ. ಹಸ್ತಿನಾಪುರಕ್ಕೆ ಬಂದು ತನ್ನ ಶಸ್ತ್ರ ಕೌಶಲ್ಯಗಳ ಪರಿಚಯ ನೀಡುವಾಗ ‘ಸೂತಪುತ್ರ’ ಎಂದು ಅಪಹಾಸ್ಯಕ್ಕೆ ಗುರಿಯಾಗುತ್ತಾನೆ. ಇದನ್ನು ಕಂಡು ದುರ್ಯೋಧನ ಈತನನ್ನು ಅಂಗರಾಜ್ಯಕ್ಕೆ ರಾಜನನ್ನಾಗಿ ಮಾಡುತ್ತಾನೆ. ಇದರಿಂದ ಕರ್ಣನಿಗೆ ‘ಅಂಗ ರಾಜ' ಎಂಬ ಹೆಸರೂ ಇದೆ. ತನ್ನ ಜನ್ಮದ ರಹಸ್ಯವನ್ನು ಶ್ರೀಕೃಷ್ಣನಿಂದ ತಿಳಿದು ಕೊಂಡರೂ, ಪಾಂಡವರ ಪೈಕಿ ಹಿರಿಯವನಾಗಿದ್ದೂ, ಇಡೀ ರಾಜ್ಯವನ್ನು ಆಳುವ ಅಧಿಕಾರ ಎಲ್ಲವನ್ನೂ ತಾನು ನಂಬಿದ ಸಿದ್ಧಾಂತ ಮತ್ತು ದುರ್ಯೋಧನನ ಜೊತೆಗಿನ ಸ್ನೇಹಕ್ಕಾಗಿ ತ್ಯಜಿಸುತ್ತಾನೆ. ಕರ್ಣ ಯಾವತ್ತಿದ್ದರೂ ಅಮರ ಸ್ನೇಹದ ಪ್ರತೀಕ ಎನ್ನಬಹುದು. ತನ್ನ ನಂಬಿದ ಗೆಳೆಯ ದುರ್ಯೋಧನನನ್ನು ಅವನು ಯಾವತ್ತೂ ಕೈಬಿಡಲಿಲ್ಲ.
ದಾನಕ್ಕೆ ಹೆಸರುವಾಸಿಯಾಗಿದ್ದ ಕರ್ಣನಿಂದ ‘ಒಮ್ಮೆ ತೊಟ್ಟ ಬಾಣವನ್ನು ಮತ್ತೆ ತೊಡಲಾರೆ' ಹಾಗೂ ಪಾಂಡವರಲ್ಲಿ ಅರ್ಜುನನ ಜೊತೆಗೆ ಮಾತ್ರ ಯುದ್ಧ ಮಾಡುವೆ ಎಂಬ ಮಾತಿನ ದಾನವನ್ನು ಕುಂತಿಗೂ, ತನ್ನ ಅಭೇಧ್ಯ ಕವಚ-ಕುಂಡಲವನ್ನು ಇಂದ್ರ (ಅರ್ಜುನನ ತಂದೆ) ನಿಗೂ ದಾನವಾಗಿ ನೀಡುತ್ತಾನೆ. ತನ್ನ ಈ ದಾನಗಳಿಂದ ಜೀವಕ್ಕೆ ಅಪಾಯವಿದೆ ಎಂದು ತಿಳಿದರೂ ದಾನ ಮಾಡುವ ಪ್ರತಿಜೆಯನ್ನು ನೆರವೇರಿಸಲು ಬಯಸುತ್ತಾನೆ. ಈ ಕಾರಣದಿಂದಲೇ ಕರ್ಣ ಇಂದಿಗೂ ‘ದಾನಶೂರ' ಎಂದೇ ಹೆಸರುವಾಸಿಯಾಗಿದ್ದಾನೆ. ಅಂತಹ ಒಂದು ಕರ್ಣನ ದಾನದ ಬಗ್ಗೆ ಇಲ್ಲಿ ಉಲ್ಲೇಖ ಮಾಡುತ್ತಿರುವೆ. ಇದು ಬಹಳ ವಿರಳವಾದ ಕಥೆ. ಒಮ್ಮೆ ಓದಿ.
ಒಂದು ಬಾರಿ ಕರ್ಣ ಅಭ್ಯಂಗನ ಸ್ನಾನ ಮಾಡುವ ಬಯಕೆಯಿಂದ ತಲೆಗೆ ಹಾಗೂ ಮೈಗೆ ಎಣ್ಣೆಯನ್ನು ಹಚ್ಚಿಕೊಳ್ಳುತ್ತಿದ್ದ. ಎಡಗೈಯಲ್ಲಿ ನವರತ್ನ ಖಚಿತವಾದ ಚಿನ್ನದ ಬಟ್ಟಲಿನಲ್ಲಿದ್ದ ಎಣ್ಣೆಯನ್ನು ಬಲಗೈಯಿಂದ ತೆಗೆದುಕೊಂಡು ತಲೆ ಹಾಗೂ ಮೈಗೆ ಹಚ್ಚಿಕೊಳ್ಳುತ್ತಿದ್ದ. ಅದೇ ಸಮಯ ಶ್ರೀಕೃಷ್ಣ ಅಲ್ಲಿಗೆ ಬಂದ. ಶ್ರೀಕೃಷ್ಣ ಅಲ್ಲಿಗೆ ಬಂದುದನ್ನು ಗಮನಿಸಿದ ಕರ್ಣ ಕೂಡಲೇ ಗೌರವ ಸೂಚಿಸಲು ಎದ್ದು ನಿಂತ. ಪರಸ್ಪರ ಕುಶಲೋಪರಿ ವಿನಿಮಯದ ಬಳಿಕ ಕೃಷ್ಣ ಹೇಳಿದ “ಕರ್ಣಾ, ಆ ಎಣ್ಣೆಯಿರುವ ನವರತ್ನ ಖಚಿತವಾದ ಚಿನ್ನದ ಬಟ್ಟಲನ್ನು ನನಗೆ ಕೊಡುವಿಯಾ? ಎಂದು ಕೇಳಿದ.
ಕರ್ಣನಿಗೆ ಅಚ್ಚರಿಯಾಯಿತು. ಮೂರೂ ಲೋಕದ ಸ್ವಾಮಿಯಾದ ಕೃಷ್ಣನಿಗೆ ನನ್ನ ಬಳಿ ಇರುವ ಈ ಬಟ್ಟಲಿನ ಮೇಲೆ ಏಕೆ ಮೋಹವಾಗಿದೆ? ಅವನು ಮನಸ್ಸು ಮಾಡಿದರೆ ಕುಬೇರನ ಖಜಾನೆಯಿಂದಲೇ ಇದಕ್ಕಿಂತ ಆಕರ್ಷಕ ಬಟ್ಟಲನ್ನು ತರಿಸಿಕೊಳ್ಳಬಹುದಿತ್ತಲ್ಲವೇ? ಆದರೂ ನನ್ನ ಬಳಿಯೇ ಕೇಳಿರುವನೆಂದರೆ ಏನೋ ಗೂಢಾರ್ಥವಿರಬೇಕು. ಏನಾದರಾಗಲಿ ಯಾರಾದರೂ ಏನಾದರೂ ಕೇಳಿದರೆ ಅದನ್ನು ಪ್ರತಿಫಲಾಪೇಕ್ಷೆಯಿಲ್ಲದೇ ಕೊಡುವುದಷ್ಟೇ ನನ್ನ ಕೆಲಸ.
ಕೂಡಲೇ ಅವನು ಬಟ್ಟಲನ್ನು ಹಿಡಿದುಕೊಂಡಿದ್ದ ಎಡಗೈಯಿಂದಲೇ ಅದನ್ನು ಕೃಷ್ಣನ ಬಲಗೈಗೆ ಕೊಟ್ಟುಬಿಟ್ಟ. ಕೃಷ್ಣ ಕೂಡಲೇ ಅವನನ್ನು ಕೇಳಿಯೇ ಬಿಟ್ಟ “ನೀವು ದೊಡ್ಡ ದಾನಶೂರ ಎಂದು ಎಲ್ಲರೂ ಹೇಳುತ್ತಾರೆ, ಆದರೆ ಕರ್ಣ, ನೀನು ನನಗೆ ಬಟ್ಟಲನ್ನು ದಾನ ನೀಡುವಾಗ ಎಡಗೈಯಿಂದ ಏಕೆ ನೀಡಿದೆ. ಎಡಗೈಯಿಂದ ದಾನವನ್ನು ನೀಡಬಹುದೇ? “
ಕರ್ಣ ಕೃಷ್ಣನ ಬಳಿ ಕ್ಷಮೆಯಾಚಿಸುತ್ತಾ ಹೀಗೆ ನುಡಿದ “ನಿನಗೆ ತಿಳಿಯದ್ದು ಏನಿದೆ ಪರಮಾತ್ಮಾ, ನನ್ನ ಬಲಗೈಗೆ ಎಣ್ಣೆಯಾಗಿದೆ. ನಾನು ಅದನ್ನು ತೊಳೆದುಕೊಂಡು ಬರಲು ಹೋಗಬೇಕು. ಹಾಗೆ ಹೋಗಿ ತೊಳೆದುಕೊಳ್ಳುವಾಗ ನನ್ನ ಮನಸ್ಸು ಯಾವುದೋ ಕಾರಣಕ್ಕೆ ಆ ಬಟ್ಟಲನ್ನು ನಿನಗೆ ದಾನವಾಗಿ ನೀಡಲು ಒಪ್ಪದೇ ಹೋದರೆ? ಮನಸ್ಸು ತುಂಬಾ ಚಂಚಲ. ಯಾವ ಕ್ಷಣಕ್ಕೆ ಯಾವ ರೀತಿ ವರ್ತಿಸುವುದೆಂದು ತಿಳಿಯಲಾಗದು. ಅದಕ್ಕೇ ಹಿರಿಯರು ‘ಮನಸ್ಸನ್ನು ಮರ್ಕಟ'ಕ್ಕೆ ಹೋಲಿಸುತ್ತಾರೆ. ನನ್ನ ಮನಸ್ಸು ಬದಲಾಗಿ ನಾನು ದಾನ ಕೊಡದೇ ಹೋದರೆ ಅದು ದೊಡ್ದ ತಪ್ಪಾಗುತ್ತದೆ. ಅದೇ ಕಾರಣಕ್ಕೆ, ಎಡಗೈಯಿಂದ ದಾನ ನೀಡುವುದು ಸರಿಯಾದ ಕ್ರಮ ಅಲ್ಲವಾದರೂ ನಾನು ಮನಸ್ಸಿನ ಚಂಚಲತೆಗೆ ಅಂಜಿ ದಾನ ಮಾಡಿದೆ. ನನ್ನಿಂದ ಅಪಚಾರವಾದರೆ ಕ್ಷಮಿಸಬೇಕು. ಆದರೆ ದಾನ ನೀಡುವ ನನ್ನ ಉದ್ದೇಶದಲ್ಲಿ ಯಾವುದೇ ದುರಾಲೋಚನೆ ಇಲ್ಲವೆಂದು ನೀವು ಮನಗಾಣಬೇಕು' ಎಂದ.
ಅವನ ಈ ಮಾತನ್ನು ಶ್ರೀಕೃಷ್ಣ ಮನಸಾರೆ ಒಪ್ಪಿಕೊಂಡ. ನಿಜಕ್ಕೂ ಮನಸ್ಸು ಚಂಚಲವೇ, ಈ ಕ್ಷಣ ಇದ್ದ ಮನಸ್ಸು ಇನ್ನೊಂದು ಕ್ಷಣದಲ್ಲಿ ಬದಲಾಗುತ್ತದೆ. ಕೃಷ್ಣನು ಕರ್ಣನು ಎಡಗೈಯಿಂದ ನೀಡಿದ ದಾನವನ್ನು ಸ್ವೀಕರಿಸಿದ. ಸತತವಾದ ಅಭ್ಯಾಸದಿಂದ ಹಾಗೂ ಸಕಲ ಐಶ್ವರ್ಯಗಳು ನಶ್ವರ ಎಂಬ ವೈರಾಗ್ಯ ಭಾವನೆಯಿಂದ ನಾವು ಮನಸ್ಸನ್ನು ತಹಬಂದಿಗೆ ತರಬಹುದು ಎಂಬ ಪಾಠವನ್ನು ಕರ್ಣನಿಗೆ ಬೋಧಿಸಿದ.
***
ಕೆಲವು ಲೇಖಕರ ಮಹಾಭಾರತ ಕತೆಗಳಲ್ಲಿ ಸಾವಿನ ಸಮಯದಲ್ಲೂ ಕರ್ಣ ನೀಡಿದ ದಾನದ ಕುರಿತಾದ ವಿವರಣೆಗಳಿವೆ. ಮಹಾಭಾರತದ ಯುದ್ಧದ ಸಮಯದಲ್ಲಿ ಅರ್ಜುನನ ಬಾಣಕ್ಕೆ ಕರ್ಣ ನೆಲಕ್ಕುರುಳಿ ತನ್ನ ಅಂತಿಮ ಕ್ಷಣಗಳನ್ನು ಎಣಿಸುತ್ತಿರುತ್ತಾನೆ. ಆ ಸಮಯದಲ್ಲಿ ಅವನನ್ನು ಪರೀಕ್ಷಿಸಲು ಮತ್ತೊಮ್ಮೆ ಇಂದ್ರ ಬ್ರಾಹ್ಮಣನ ವೇಷ ಧರಿಸಿ ಬರುತ್ತಾನೆ. ರಕ್ತದ ಮಡುವಿನಲ್ಲಿ ಮಲಗಿದ್ದ ಕರ್ಣನ ಬಳಿ ಬಂದು ಏನಾದರೂ ದಾನ ನೀಡು ಎನ್ನುತ್ತಾನೆ. ‘ನನ್ನ ಬಳಿ ಈಗ ನಿಮಗೆ ದಾನ ನೀಡಲು ಏನೂ ಇಲ್ಲ, ನಾನು ಅಸಮರ್ಥನಾಗಿದ್ದೇನೆ' ಎನ್ನುತ್ತಾನೆ ಕರ್ಣ. ಆಗ ಬ್ರಾಹ್ಮಣ ‘ನಿನ್ನ ಬಳಿ ಈಗಲೂ ದಾನ ನೀಡಲು ಒಂದು ವಸ್ತು ಇದೆ. ನಿನ್ನ ಬಂಗಾರ ಭರಿತ ಹಲ್ಲುಗಳನ್ನು ನೀನು ದಾನವಾಗಿ ನೀಡಬಹುದಲ್ಲವೇ ಕರ್ಣ?’ ಎನ್ನುತ್ತಾನೆ. ಅದನ್ನು ಕೇಳಿದ ಕರ್ಣ ‘ಖಂಡಿತವಾಗಿ ನೀಡುವೆ ವಿಪ್ರೋತ್ತಮರೇ’ ಎಂದು ತನ್ನ ದಂತಗಳನ್ನು ಕಿತ್ತು ಕೊಡುತ್ತಾನೆ. ಕರ್ಣನ ಕೈಯಲ್ಲಿ ರಕ್ತವಿದ್ದುದರಿಂದ ಆ ದಾನ ಅಪವಿತ್ರವಾಗಿದೆ ಎನ್ನುತ್ತಾನೆ ಬ್ರಾಹ್ಮಣ. ಕರ್ಣ ಕೂಡಲೇ ಅಲ್ಲೇ ಇದ್ದ ಬಾಣವನ್ನು ನೆಲಕ್ಕೆ ಚುಚ್ಚಿ ತನ್ನ ಮಾತೆಯಾದ ಗಂಗೆಯನ್ನು ಸ್ಮರಿಸುತ್ತಾನೆ. ಆಗ ಅಲ್ಲಿ ಗಂಗೋದ್ಭವವಾಗುತ್ತದೆ. ಆ ನೀರಿನಲ್ಲಿ ತನ್ನ ಹಲ್ಲನ್ನು ತೊಳೆದು ಬ್ರಾಹ್ಮಣನಿಗೆ ನೀಡುತ್ತಾನೆ.
ಬ್ರಾಹ್ಮಣ ವೇಷದಲ್ಲಿದ್ದ ಇಂದ್ರ ತನ್ನ ಮೂಲ ರೂಪಕ್ಕೆ ಮರಳಿ ‘ಭಲೇ, ಕರ್ಣಾ ನೀನು ನಿಜಕ್ಕೂ ಅಪ್ರತಿಮ ಯೋಧ ಮಾತ್ರವಲ್ಲ, ದಾನಶೂರನೂ ಹೌದು, ನಿನ್ನ ಬದುಕಿನ ಕೊನೆಯ ಕ್ಷಣದಲ್ಲೂ ನೀನು ದಾನ ನೀಡಲು ಹಿಂದು ಮುಂದು ಯೋಚನೆ ಮಾಡಲಿಲ್ಲ. ನಿನಗೆ ಕಲ್ಯಾಣವಾಗಲಿ’ ಎಂದು ಹಾರೈಸಿ ತನ್ನ ಇಂದ್ರಲೋಕಕ್ಕೆ ಮರಳುತ್ತಾನೆ. ಹೀಗಿತ್ತು ದಾನಶೂರ ಕರ್ಣನ ಮಹಿಮೆ.
(ಆಧಾರ)
ಚಿತ್ರ ಕೃಪೆ: ಅಂತರ್ಜಾಲ ತಾಣ