ಮಹಾಮಂಡಲೇಶ್ವರಿ ರಾಣಿ ಚೆನ್ನಭೈರಾದೇವಿ

ಮಹಾಮಂಡಲೇಶ್ವರಿ ರಾಣಿ ಚೆನ್ನಭೈರಾದೇವಿ

ಪುಸ್ತಕದ ಲೇಖಕ/ಕವಿಯ ಹೆಸರು
ನಾಡೋಜ ಪ್ರೊ.ಕಮಲಾ ಹಂಪನಾ
ಪ್ರಕಾಶಕರು
ಸಪ್ನ ಬುಕ್ ಹೌಸ್, ಗಾಂಧಿನಗರ, ಬೆಂಗಳೂರು
ಪುಸ್ತಕದ ಬೆಲೆ
ರೂ.೧೨೦.೦೦, ಮುದ್ರಣ: ಅಕ್ಟೋಬರ್ ೨೦೧೬

ಮಹಾಮಂಡಲೇಶ್ವರಿ ರಾಣಿ ಚೆನ್ನಭೈರಾದೇವಿ ಮತ್ತು ಇತರ ಕರಾವಳಿ ರಾಣಿಯರು ಎಂಬ ಪುಸ್ತಕವನ್ನು ಕಮಲಾ ಹಂಪನಾ ಇವರು ಬರೆದಿದ್ದಾರೆ. ಅವರು ತಮ್ಮ ‘ಮೊದಲ ಮಾತು’ ಎಂಬ ಮುನ್ನುಡಿಯಲ್ಲಿ ಉಲ್ಲೇಖಿಸಿರುವಂತೆ “ಸ್ವಾತಂತ್ರ್ಯ ಪೂರ್ವದಲ್ಲಿ ತುಳುನಾಡು ಮದರಾಸು ಪ್ರಾಂತ್ಯಕ್ಕೆ ಸೇರಿತ್ತು. ಭಾಷಾವಾರು ಪ್ರಾಂತ್ಯ ರಚನೆಯ ಪುನರ್ ವಿಂಗಡಣೆ ಸಂದರ್ಭದಲ್ಲಿ ‘(ಅವಿಭಜಿತ) ದಕ್ಷಿಣ ಕನ್ನಡ ಜಿಲ್ಲೆ’ ಎಂಬ ಹೆಸರಿನಿಂದ ಕನ್ನಡ ನಾಡಿನಲ್ಲಿ ವಿಲೀನವಾಯಿತು. ಮತ್ತೆ ಇತ್ತೀಚೆಗೆ ೨೦೦೨ರಲ್ಲಿ ಜಿಲ್ಲೆಗಳ ಮರುಜೋಡಣೆ ಸಂದರ್ಭದಲ್ಲಿ, ದಕ್ಷಿಣ ಕನ್ನಡ ಅಥವಾ ಮಂಗಳೂರು ಜಿಲ್ಲೆ ಮತ್ತು ಉಡುಪಿ ಜಿಲ್ಲೆ ಎಂದು ಎರಡು ಹೋಳುಗಳಾದವು. ಇದರ ಪಕ್ಕದಲ್ಲಿಯೇ ಕಡಲದಂಡೆಯುದ್ದಕ್ಕೂ ಚಾಚಿದೆ ಉತ್ತರ ಕನ್ನಡ ಅಥವಾ ಕಾರವಾರ ಜಿಲ್ಲೆ. ವಾಸ್ತವವಾಗಿ ಈಗಿನ ಈ ಮೂರೂ ಜಿಲ್ಲೆಗಳನ್ನು ‘ಕರಾವಳಿ ಕರ್ನಾಟಕ’ ಎಂದು ಕರೆಯಬೇಕು. ಈ ಪುಸ್ತಕದಲ್ಲಿ ನಾನು ಕರಾವಳಿ ರಾಣಿಯರನ್ನು ಮಾತ್ರ ಉಲ್ಲೇಖಿಸಿದ್ದೇನೆ. 

ಈ ಪಶ್ಚಿಮ ಕರಾವಳಿಯನ್ನು ವಿಜಯನಗರ ಮಹಾಸಾಮ್ರಾಜ್ಯದ ಮಹಾ ಮಾಂಡಲಿಕರು ಆಳಿದ ಅವಧಿಯಲ್ಲಿ ಕರಾವಳಿಯ ಕೆಲವು ರಾಣಿಯರು ಮಹತ್ತರವಾದ ಸಾಧನೆ ಮಾಡಿದರು. ಅವರಲ್ಲಿ ಮಹಾಮಂಡಲೇಶ್ವರ (ರಿ) ಎನಿಸಿದ ಅರಸಿಯರ ಆಳ್ವಿಕೆ ಚರಿತ್ರಾರ್ಹ. ಮಹಾಮಂಡಲೇಶ್ವರಿಯರೆನಿಸಿದ ಪದುಮಲದೇವಿ, ಚೆನ್ನಾ ದೇವಿ ಮತ್ತು ಚೆನ್ನಭೈರಾದೇವಿಯರಲ್ಲದೆ ಹಿರಿಯ-ಕಿರಿಯ ರಾಣಿ ಅಬ್ಬಕ್ಕದೇವಿಯರ ಆಡಳಿತ ಮರೆಯಲಾಗದ್ದು. ಈ ಎಲ್ಲ ಕರಾವಳಿ ರಾಣಿಯರ ನೀಳಾಳಿಕೆಯ ಕೊಡುಗೆ ಏನೆಂಬುದನ್ನು ಬಿಡಿಯಾಗಿಯೂ ಇಡಿಯಾಗಿಯೂ ನೋಡುವುದರಿಂದ ಸ್ಪಷ್ಟ ಚಿತ್ರ ಸಿಗುತ್ತದೆ.

‘ಮಹಾಮಂಡಲೇಶ್ವರ' ಎಂಬುದು ಪುಲ್ಲಿಂಗ ರೂಪ. ಆದರೆ ಶಾಸನಗಳಲ್ಲಿ ಆಳಿದ ರಾಣಿಯರಿಗೂ ಮಹಾಮಂಡಲೇಶ್ವರ ಎಂದೇ ಅನ್ವಯಿಸಿರುವುದು ಕುತೂಹಲಕಾರವಾಗಿದೆ ; ಶ್ರೀಮನ್ಮಹಾಮಂಡಲೇಶ್ವರ ಪದುಮಲದೇವಿ ಇತ್ಯಾದಿ. ನಾನು ಇದನ್ನು  ಸ್ತ್ರೀಲಿಂಗ ಶಬ್ಧವಾಗಿಸಲು ‘ಮಹಾಮಂಡಲೇಶ್ವರಿ' ಎಂದು ಬಳಸಿದ್ದೇನೆ. ಅಲ್ಲದೆ ರಾಣಿಯರನ್ನು ಅಥವಾ ಹೆಂಗಸನ್ನು ಪರಿಚಯಿಸುವಾಗ, ಅವರು ಕೈಗೊಂಡ ಕಾಳಗಾದಿಗಳನ್ನೂ ಮಾಡಿದ ಸಾಧನೆಗಳನ್ನು ಹೇಳುವಾಗ, ಹೋದಳು, ಬಂದಳು, ಕಂಡಳು, ಕೇಳಿದಳು, ಹೇಳಿದಳು-ಎಂದು ಮುಂತಾಗಿ ಏಕವಚನದಿಂದ ಹೇಳುವ ಬದಲು ಹಲವಾರು ಕಡೆ ಬಹುಚನಪ್ರತ್ಯಯ ಬಳಸಿ ಹೋದರು, ಬಂದರು, ಕಂಡರು, ಹೇಳಿದರು, ಕೇಳಿದರು-ಎಂದು ಬರೆದಿದ್ದೇನೆ. ಅದರಂತೆಯೇ ಅವಳು-ಇವಳು ಶಬ್ಧಗಳ ಬದಲಾಗಿ ಆಕೆ-ಈಕೆ ಎಂಬ ರೂಪಗಳನ್ನು ಬಳಸಿದ್ದೇನೆ. ನಾನು ಈ ಗ್ರಂಥಕ್ಕೆ ಬಳಸಿರುವ ಶಾಸನಗಳಲ್ಲಿರುವ ಶಕ ಸಂವತ್ಸರ ಯಾವುದೆಂಬುದು ಅನುಬಂಧದಲ್ಲಿ ಉದಾಹರಿಸಿರುವ ಶಾಸನ ಪಾಠಗಳಲ್ಲಿ ಸಿಗುತ್ತದೆ. ಆದರೆ ಗ್ರಂಥಗಳಲ್ಲಿ ಶಾಸನಗಳನ್ನು ಪ್ರಸ್ತಾಪಿಸುವಾಗ ಆಯಾ ತೇದಿಗೆ ಸಮಾನವಾದ ಕ್ರಿ.ಶ.ಇಸವಿಯನ್ನು ಹೇಳಿದ್ದೇನೆ.”

ಪುಸ್ತಕದ ಪರಿವಿಡಿಯಲ್ಲಿ ಗೇರುಸೊಪ್ಪೆಯ ಹುಟ್ಟು-ಬೆಳವಣಿಗೆ, ಕವಯತ್ರಿ ರಾಣಿ ನಾಗಲದೇವಿ, ಪಟ್ಟದ ರಾಣಿ ವೀರಾದೇವಿ, ರಾಣಿ ಪದುಮಲಾದೇವಿ, ರಾಣಿ ಚೆನ್ನಾದೇವಿ, ರಾಣಿ ಚೆನ್ನಭೈರಾದೇವಿ, ಉಲ್ಲಾಳದ ರಾಣಿಯರು, ಕಿರಿಯ ರಾಣಿ ಅಬ್ಬಕ್ಕ, ಪೋರ್ಚುಗೀಸರ ಪಾರುಪತ್ಯ ಎಂಬ ಹಲವಾರು ಅಧ್ಯಾಯಗಳಿವೆ. ಸುಮಾರು ೧೬೦ ಪುಟಗಳ ಈ ಪುಸ್ತಕವು ನಾವು ತಿಳಿಯದೇ ಇರುವ ಇತಿಹಾಸದ ರಾಣಿಯರ ಬಗ್ಗೆ ಮಾಹಿತಿಯನ್ನು ತಿಳಿಸಿಕೊಡುತ್ತದೆ.