ಮಹಾರಾಣಿ ಕ್ಲಿಯೋಪಾತ್ರಳ ಬದುಕು-ಬವಣೆ

ಮಹಾರಾಣಿ ಕ್ಲಿಯೋಪಾತ್ರಳ ಬದುಕು-ಬವಣೆ

ಪುರಾತನ ಈಜಿಪ್ಟ್ ದೇಶವನ್ನು ಆಳಿದವರಲ್ಲಿ ಪ್ರಮುಖಳೆಂದರೆ ರಾಣಿ ಕ್ಲಿಯೋಪಾತ್ರ. ಇವಳ ಬದುಕು ಬಹಳ ರೋಚಕವೂ ಹಾಗೂ ಅಂತ್ಯ ದುರಂತವೂ ಆಗಿತ್ತು. ಅತ್ಯಂತ ಕಿರಿಯ ವಯಸ್ಸಿನಲ್ಲಿ ಈಜಿಪ್ಟ್ ನ ಮಹಾರಾಣಿಯಾಗಿ ಅಧಿಕಾರ ವಹಿಸಿಕೊಂಡ ಈಕೆ ಬದುಕಿದ್ದು ಕೇವಲ ೩೯ ವರ್ಷ ಮಾತ್ರ. ಈಜಿಪ್ಟ್ ಅನ್ನು ಆಳಿದವರ ವಂಶದಲ್ಲಿ ಹಲವಾರು ಮಂದಿ ಕ್ಲಿಯೋಪಾತ್ರ ಎಂಬ ಹೆಸರಿನವರಿದ್ದರು ಎಂಬ ಸಂಗತಿ ಅನೇಕ ಜನರಿಗೆ ತಿಳಿದಿರಲಾರದು. ನಮಗೆ ಗೊತ್ತಿರುವ ಈ ರಾಣಿ ಏಳನೇ ಕ್ಲಿಯೋಪಾತ್ರ. ಇವಳ ತಾಯಿಯ ಹೆಸರೂ ಐದನೇ ಕ್ಲಿಯೋಪಾತ್ರ. 

ಅಲೆಕ್ಸಾಂಡರನು ಕ್ರಿ.ಪೂ.೩೩೨ರ ಇಸವಿಯಲ್ಲಿ ತನ್ನ ಅಧೀನದಲ್ಲಿದ್ದ ಈಜಿಪ್ಟ್ ಅನ್ನು ತನ್ನ ಅತ್ಯಾಪ್ತ ಜನರಲ್ ಆಗಿದ್ದ ಟೋಲಮಿ ಅಥವಾ ಟಾಲಮಿ (Ptolemy)ಗೆ ಒಪ್ಪಿಸಿದ. ಆ ಬಳಿಕ ಈಜಿಪ್ಟ್ ನಲ್ಲಿ ಟೋಲಮಿ ವಂಶಸ್ಥರೇ ರಾಜ್ಯಭಾರವನ್ನು ನಡೆಸಿಕೊಂಡು ಬಂದರು. ಈಜಿಪ್ಟ್ ನ ರಾಜನಾಗಿದ್ದ ೧೨ನೆಯ ಟೋಲಮಿಯ ಪುತ್ರಿಯೇ ಏಳನೇ ಕ್ಲಿಯೋಪಾತ್ರ. ಈಕೆ ಕ್ರಿ.ಪೂ. ೬೯ನೆಯ ವರ್ಷದಲ್ಲಿ ಹುಟ್ಟಿದಳೆಂದು ಇತಿಹಾಸದ ದಾಖಲೆಗಳು ತಿಳಿಸುತ್ತವೆ. 

ತನ್ನ ೧೭ನೆಯ ವಯಸ್ಸಿನಲ್ಲೇ ಅವಳು ಈಜಿಪ್ಟ್ ನ ರಾಣಿಯಾಗಿ ಕ್ರಿ.ಪೂ. ೫೧ರಲ್ಲಿ ಅಧಿಕಾರ ವಹಿಸಿಕೊಳ್ಳುತ್ತಾಳೆ. ಈಜಿಪ್ಟ್ ನ ಸಂಪ್ರದಾಯದಂತೆ ಅವಳು ತನ್ನ ಸಹೋದರ ೧೩ನೆಯ ಟೋಲಮಿಯನ್ನು ವಿವಾಹವಾಗುತ್ತಾಳೆ. ಆದರೆ ಇವರ ನಡುವಿನ ವೈಮನಸ್ಸಿನಿಂದ ಮೂರು ವರ್ಷದಲ್ಲೇ ಇವರು ಬೇರೆಯಾಗುತ್ತಾರೆ. ಕ್ಲಿಯೋಪಾತ್ರಳು ವಿದ್ಯಾವಂತೆಯೂ, ಬಹುಭಾಷಾ ಪಾರಂಗತಳೂ ಆಗಿದ್ದಳು. ಇವಳಿಗೆ ಸುಮಾರು ಏಳು ಭಾಷೆಗಳು ಬರುತ್ತಿದ್ದುವಂತೆ. ಈಜಿಪ್ಟ್ ನ ಸ್ಥಳೀಯ ಭಾಷೆಯನ್ನು ಮಾತನಾಡಲು ಕಲಿತಿದ್ದ ಏಕೈಕ ರಾಣಿ ಈಕೆ. ಕ್ಲಿಯೋಪಾತ್ರ ಬಹಳ ಚತುರೆಯೂ, ದೇಶಭಕ್ತೆಯೂ ಆಗಿದ್ದಳು.

ಕ್ಲಿಯೋಪಾತ್ರ ಬಹು ಜನರಿಗೆ ನೆನಪಿನಲ್ಲಿ ಉಳಿಯಲು ಎರಡು ಕಾರಣಗಳಿವೆ. ರೋಮ್ ನ ಆಡಳಿತ ನಡೆಸುತ್ತಿದ್ದ ಜ್ಯೂಲಿಯಸ್ ಸೀಸರ್ ಜೊತೆಗಿನ ಪ್ರಣಯ ಸಂಬಂಧ ಹಾಗೂ ಕ್ಲಿಯೋಪಾತ್ರಳ ಮಾದಕ ಸೌಂದರ್ಯ. ಕ್ಲಿಯೋಪಾತ್ರ ಅಷ್ಟೇನೂ ದೊಡ್ಡ ಸೌಂದರ್ಯವತಿಯಾಗಿಲ್ಲದಿದ್ದರೂ, ಅವಳಿಗೆ ಪುರುಷರನ್ನು ಆಕರ್ಷಿಸುವ ಕಲೆ ಕರಗತವಾಗಿತ್ತು. ಅವಳು ತನ್ನ ಸೌಂದರ್ಯವನ್ನು ವೃದ್ಧಿಸಿಕೊಳ್ಳಲು ಕತ್ತೆಯ ಹಾಲಿನಿಂದ ಸ್ನಾನ ಮಾಡುತ್ತಿದ್ದಳು ಎಂದು ಹೇಳುತ್ತಾರೆ. 

ಜ್ಯೂಲಿಯಸ್ ಸೀಸರ್ ಜೊತೆಗಿನ ಅನುಬಂಧದ ಕಥೆ ಬಹಳ ರೋಚಕವಾದದ್ದು. ರಾಣಿಯಾಗಿದ್ದ ಕ್ಲಿಯೋಪಾತ್ರ ನೇರವಾಗಿ ಸೀಸರ್ ಅನ್ನು ಭೇಟಿಯಾಗುವಂತಿರಲಿಲ್ಲ. ಅದಕ್ಕಾಗಿ ಆಕೆಯನ್ನು ದೊಡ್ಡದಾದ ನೆಲಹಾಸು(ಕಾರ್ಪೆಟ್) ಒಂದರಲ್ಲಿ  ಸುತ್ತಿ ಸೀಸರ್ ನ ಅರಮನೆಗೆ ತೆಗೆದುಕೊಂಡು ಹೋಗಲಾಗುತ್ತಿತ್ತು. ಮೊದಲ ಬಾರಿ ನೆಲಹಾಸನ್ನು ಬಿಡಿಸಿ ನೋಡಿದ ಸೀಸರ್ ಸಹಾ ಇವಳ ವಿಪರೀತ ಬುದ್ಧಿವಂತಿಗೆಗೆ ದಂಗಾಗಿ ಹೋಗಿದ್ದ. ಕ್ಲಿಯೋಪಾತ್ರ ಹಾಗೂ ಸೀಸರ್ ಸಂಬಂಧದಿಂದ ಸೀಸರಿನ್ ಎಂಬ ಪುತ್ರ ಹುಟ್ಟಿದ. ಆದರೆ ಅವಳು ಎಲ್ಲೂ ತನ್ನ ಹಾಗೂ ಸೀಸರ್ ಜೊತೆಗಿನ ಸಂಬಂಧದ ಪರಿಣಾಮ ಹುಟ್ಟಿದ ಮಗು ಎಂದು ಹೇಳುವುದಿಲ್ಲ. ಆ ಮಗುವನ್ನು ಈಜಿಪ್ಟ್ ಗೆ ತೆಗೆದುಕೊಂಡು ಹೋಗಿ ತಮ್ಮ ಕುಟುಂಬದ ಹೆಸರು (ಟೊಲೆಮಿ ಸೀಸರಿನ್) ನೀಡಿ ಅವನನ್ನು ರಾಜ ಕುಮಾರ ಎಂದು ಘೋಷಿಸುತ್ತಾಳೆ. 

ಕ್ರಿ.ಪೂ. ೪೪ರಲ್ಲಿ ಜ್ಯೂಲಿಯಸ್ ಸೀಸರ್ ನ ಕೊಲೆಯಾದಾಗ ರೋಮ್ ನಲ್ಲಿ ಅವನ ಪ್ರಭಾವ ನಿಧಾನವಾಗಿ ನಶಿಸುತ್ತಿರುವುದನ್ನು ಗಮನಿಸಿ ಕ್ಲಿಯೋಪಾತ್ರ ಚಿಂತಾಕ್ರಾಂತಳಾಗುತ್ತಾಳೆ. ಸೀಸರ್ ನಂತರ ರಾಜನಾದ ಅವನ ಸಂಬಂಧಿ ಮಾರ್ಕ್ ಆಂಟೋನಿ ಜೊತೆ ಕ್ಲಿಯೋಪಾತ್ರ ಸಂಬಂಧ ಬೆಳೆಸುತ್ತಾಳೆ. ಆಂಟೋನಿಯಿಂದ ಅವಳಿಗೆ ಅವಳಿ ಮಕ್ಕಳು ಹುಟ್ಟುತ್ತಾರೆ. ಈ ಮಕ್ಕಳಿಗೆ ಅವಳು ಅಲೆಕ್ಸಾಂಡರ್ ಹೆಲಿಯೋಸ್ ಹಾಗೂ ಕ್ಲಿಯೋಪಾತ್ರ ಸೆಲಿನ್ ಎಂಬ ಹೆಸರಿಡುತ್ತಾಳೆ. ಕ್ರಿ.ಪೂ.೩೭ರ ಸುಮಾರಿಗೆ ಅವಳು ಆಂಟೋನಿ ಜೊತೆ ಮದುವೆಯಾಗುತ್ತಾಳೆ. ಆಂಟೋನಿ ರೋಮ್ ನ ಕೆಲವು ಪ್ರಾಂತ್ಯಗಳನ್ನು ಕ್ಲಿಯೋಪಾತ್ರಳ ವಶಕ್ಕೆ ನೀಡುತ್ತಾನೆ. 

ಆಂಟೋನಿಯ ಸಂಬಂಧಿಕನೇ ಆಗಿದ್ದ ಆಕ್ಟೇವಿಯನ್ ಜೊತೆ ವೈಮನಸ್ಸು ಉಂಟಾದ ಪರಿಣಾಮವಾಗಿ ಆಕ್ಟೇವಿಯನ್ ಆಂಟೋನಿ ಹಾಗೂ ಕ್ಲಿಯೋಪಾತ್ರ ಮೇಲೆ ಯುದ್ಧವನ್ನು ಸಾರುತ್ತಾನೆ. ಈ ಯುದ್ಧದಲ್ಲಿ ಆಂಟೋನಿ ಸೋತ ಪರಿಣಾಮ ಅವನು ಅವಮಾನಕ್ಕೀಡಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಕ್ಲಿಯೋಪಾತ್ರ ಹಾಗೂ ಅವಳ ಮಕ್ಕಳನ್ನು ಆಕ್ಟೇವಿಯನ್ ಸೆರೆಮನೆಯಲ್ಲಿಡುತ್ತಾನೆ. ಇದರಿಂದ ತೀವ್ರವಾಗಿ ನೊಂದುಕೊಳ್ಳುವ ಕ್ಲಿಯೋಪಾತ್ರ ತನ್ನ ಆಪ್ತ ಸಹಾಯಕರಿಂದ ಹಣ್ಣಿನ ಬುಟ್ಟಿಯಲ್ಲಿ ವಿಷದ ಹಾವನ್ನು ತರಿಸಿಕೊಂಡು ಅದರಿಂದ ಕಚ್ಚಿಸಿಕೊಂಡು ಸಾಯುತ್ತಾಳೆ. ತನ್ನ ಪ್ರಜೆಗಳಲ್ಲಿ ತನ್ನ ಬಗ್ಗೆ ಅನುಕಂಪದ ಅಭಿಪ್ರಾಯ ಮೂಡಬೇಕು ಮತ್ತು ತಾನೆಷ್ಟು ಧೈರ್ಯವಂತಳು ಎಂದು ತಿಳಿಯಬೇಕು ಎಂದು ಉದ್ದೇಶದಿಂದ ಹಾವಿನಿಂದ ಕಚ್ಚಿಸಿಕೊಂಡು ಸಾಯುವ ಯೋಜನೆ ಮಾಡಿಕೊಂಡಿರಬೇಕು ಎಂದು ಇತಿಹಾಸಕಾರರು ಅಭಿಪ್ರಾಯ ಪಡುತ್ತಾರೆ. 

ಕ್ಲಿಯೋಪಾತ್ರಳ ಸಾವಿನಿಂದಾಗಿ ಟೊಲೆಮಿ ವಂಶಸ್ಥರ ಆಡಳಿತ ಈಜಿಪ್ಟ್ ನಲ್ಲಿ ಕೊನೆಗೊಳ್ಳುತ್ತದೆ. ಆದರೆ ಅತ್ಯಂತ ಸಣ್ಣ ವಯಸ್ಸಿನಲ್ಲಿ ರಾಜ್ಯಭಾರ ಮಾಡಿ, ಹಲವಾರು ಸಂಕಷ್ಟಗಳನ್ನು ಎದುರಿಸಿದ ಕೀರ್ತಿ ಕ್ಲಿಯೋಪಾತ್ರಳಿಗೆ ಸಲ್ಲುತ್ತದೆ. ಕ್ಲಿಯೋಪಾತ್ರ ಬಗ್ಗೆ ಹಾಲಿವುಡ್ ನಲ್ಲಿ ಹಲವಾರು ಚಲನಚಿತ್ರಗಳೂ ಬಂದಿವೆ. ಏನೇ ಆದರೂ ಕ್ಲಿಯೋಪಾತ್ರಳ ವರ್ಣರಂಜಿತ ಬದುಕಿಗೆ ಇತಿಹಾಸದ ಪುಟದಲ್ಲಿ ಪ್ರಮುಖ ಸ್ಥಾನವಂತೂ ಇದ್ದೇ ಇದೆ.

ಚಿತ್ರ: ಬರ್ಲಿನ್ ನ ಆಲ್ವೆಸ್ ಮ್ಯೂಜಿಯಂನಲ್ಲಿರುವ ಏಳನೇ ಕ್ಲಿಯೋಪಾತ್ರಳ ಚಹರೆ ಎಂದು ನಂಬಲಾಗಿರುವ ಪ್ರತಿಮೆ 

ಚಿತ್ರ ಕೃಪೆ: ವೀಕಿಪೀಡಿಯಾ ಜಾಲ ತಾಣ