ಮಹಾರಾಷ್ಟ್ರದ 22 ಹಳ್ಳಿಗಳಲ್ಲಿ 120 ದೇಸಿ ತಳಿಗಳ ಸಂರಕ್ಷಣೆ

ಮಹಾರಾಷ್ಟ್ರದ 22 ಹಳ್ಳಿಗಳಲ್ಲಿ 120 ದೇಸಿ ತಳಿಗಳ ಸಂರಕ್ಷಣೆ

ಫಕ್ಕನೆ ನೋಡಿದರೆ ಹಳ್ಳಿಗುಡ್ಡಕ್ಕೆ ಅಲೆದಾಡಲು ಹೋದ ಮಕ್ಕಳು ಆಟಕ್ಕಾಗಿ ಸಂಗ್ರಹಿಸುವ ಹುಲ್ಲಿನ ಬೀಜಗಳಂತಿವೆ ಆ ಕಡುಕಂದು ಬಣ್ಣದ ಬಿಜಗಳು. ಆದರೆ ಅವು ಆಟದ ಬೀಜಗಳಲ್ಲ, ಬದಲಾಗಿ ಅಪರೂಪದ ಪೋಷಕಾಂಶಭರಿತ ಸಿರಿಧಾನ್ಯದ ಬೀಜಗಳು.

ಆ ಸಿರಿಧಾನ್ಯದ ಹೆಸರು “ಬಾಟು." ಮಹಾರಾಷ್ಟ್ರದ ಅಹ್ಮದ್‌ನಗರ ಜಿಲ್ಲೆಯ ಕೃಷಿ ಇಲಾಖೆಯಲ್ಲಿ ಇದರ ಬಗ್ಗೆ ಯಾವ ದಾಖಲೆಯೂ ಇಲ್ಲ! ಅಲ್ಲಿನ ಕೃಷಿ ವಿಶ್ವವಿದ್ಯಾಲಯಗಳಿಗೆ ಇದಕ್ಕೊಂದು ಸಸ್ಯಶಾಸ್ತ್ರೀಯ ಹೆಸರು ಕೊಡಲಿಕ್ಕೂ ಸಾಧ್ಯವಾಗಿಲ್ಲ!

ಈ ಸಿರಿಧಾನ್ಯ ಕಣ್ಮರೆಯಾಗಿ ಹೋಗುತ್ತಿತ್ತು. ಆದರೆ, "ಲೋಕ ಪಂಚಾಯತ್” ಎಂಬ ಸ್ಥಳೀಯ ಲಾಭರಹಿತ ಸಂಸ್ಥೆಗೆ 2009ರಲ್ಲಿ ಇದರ ಸುಳಿವು ಸಿಕ್ಕಿತು. ಆದ್ದರಿಂದ ಈ ಸಿರಿಧಾನ್ಯ ನಾಶವಾಗದೆ ಉಳಿಯಿತು. 1995ರಿಂದೀಚೆಗೆ ಇಂತಹ 120 ದೇಸಿ ತಳಿಗಳನ್ನು ಉಳಿಸುವ ಸಾರ್ಥಕ ಕೆಲಸವನ್ನು ಲೋಕ ಪಂಚಾಯತ್ ಮಾಡಿದೆ - ಸಂಗಂನೇರ್ ಮತ್ತು ಅಕೋಲೆ ತಾಲೂಕುಗಳ 22 ಹಳ್ಳಿಗಳ ಬುಡಕಟ್ಟು ಸಮುದಾಯಗಳಿಗೆ ಮಾರ್ಗದರ್ಶನ ನೀಡುವ ಮೂಲಕ. ಹಾಗೆ ಉಳಿಸಿದ ಬೆಳೆಗಳಲ್ಲಿ ಭತ್ತ, ಸಿರಿಧಾನ್ಯ, ಬೀನ್ಸ್, ಎಣ್ಣೆಕಾಳುಗಳು ಮತ್ತು ತರಕಾರಿಗಳ ತಳಿಗಳು ಸೇರಿವೆ. ಆದರೆ ಬುಡಕಟ್ಟು ಜನರನ್ನು ಈ ಕೆಲಸಕ್ಕಾಗಿ ಪ್ರೇರೇಪಿಸುವುದು ಸುಲಭವಾಗಿರಲಿಲ್ಲ.

ಲೋಕ ಪಂಚಾಯತ್‌ನ ಮುಖ್ಯಸ್ಥ ಸಾರಂಗ ಪಾಂಡೆ ತಾವು ಎದುರಿಸಿದ ಸವಾಲನ್ನು ವಿವರಿಸುವುದು ಹೀಗೆ: “ನೀರಾವರಿಯ ಅನುಕೂಲ ಸಿಕ್ಕಿದ್ದರಿಂದಾಗಿ, ಬುಡಕಟ್ಟು ಜನರು ದೇಸಿ ಆಹಾರ ಬೆಳೆಗಳ ಕೃಷಿ ಕೈಬಿಟ್ಟರು. ಬದಲಾಗಿ, ಟೊಮೆಟೊ, ಈರುಳ್ಳಿ ಮತ್ತು ಆಹಾರಧಾನ್ಯಗಳ ಹೈಬ್ರಿಡ್ ತಳಿಗಳನ್ನು ಬೆಳೆಸಲು ಶುರು ಮಾಡಿದರು. ಕೆಲವೇ ವರುಷಗಳಲ್ಲಿ ಪ್ರಧಾನ ದೇಸಿ ಆಹಾರ ಬೆಳೆಗಳು ಕಣ್ಮರೆಯಾಗುವ ಪರಿಸ್ಥಿತಿ ಎದುರಾಯಿತು. ಅಂದರೆ ದಿಯೋಥಾನ್ ಕಿರಿಜೋಳ, ಕಾಲ್‌ಬಾತ್ ಮುಂತಾದ ಭತ್ತದ ತಳಿಗಳು, ಖಾಂಡ್ಯ ಎಂಬ ನೆಲಗಡಲೆ ತಳಿ, ಹಲವು ಬೀನ್ಸ್ ತಳಿಗಳು ಇತ್ಯಾದಿ.”

ದೇಸಿ ಆಹಾರಬೆಳೆಗಳನ್ನು ಸಂರಕ್ಷಿಸುವ ಬಗ್ಗೆ ಬುಡಕಟ್ಟು ಜನರಿಗೆ ಮನವರಿಕೆ ಮಾಡಿಕೊಡಲು ಅವರು ಬಹಳ ತ್ರಾಸ ಪಡಬೇಕಾಯಿತು. ಯಾಕೆಂದರೆ, ರೊಕ್ಕದ ಬೆಳೆಗಳಿಂದ ಸಿಗುವ ಆದಾಯ ಬಳಸಿ, ಮಾರುಕಟ್ಟೆಯಿಂದ ಸುಲಭವಾಗಿ ಆಹಾರಧಾನ್ಯ ಖರೀದಿಸಬಹುದು ಎಂಬುದು ಆ ರೈತರ ಲೆಕ್ಕಾಚಾರ. “ಇಲ್ಲಿನ ರೈತರಿಗೆ ಆಹಾರಕ್ಕಿಂತ ಹಣವೇ ಮುಖ್ಯವೆನಿಸಿತು" ಎನ್ನುತ್ತಾರೆ ಪಾಂಡೆ. ಕ್ರಮೇಣ ಅಲ್ಲಿನ ಬುಡಕಟ್ಟು ಕುಟುಂಬಗಳಿಗೆ ಅರ್ಥವಾಯಿತು: ಹೈಬ್ರಿಡ್ ತಳಿಗಳ ಕಾಳುಗಳ ರುಚಿ ದೇಸಿ ತಳಿಗಳ ಕಾಳುಗಳ ರುಚಿಯಷ್ಟು ಚೆನ್ನಾಗಿರಲಿಲ್ಲ. ಅದಲ್ಲದೆ, ಪಾರಂಪರಿಕವಾಗಿ ಉಳಿಸಿದ್ದ ಹಲವಾರು ದೇಸಿ ತಳಿಗಳ ಭಂಡಾರವೇ ಕಳೆದುಹೋಗುತ್ತಿದೆ. ಮುಂಚೆ ಯಾವತ್ತೂ ಬಾಧಿಸಿರದ ರಕ್ತಹೀನತೆಯ ಆರೋಗ್ಯ ಸಮಸ್ಯೆ ಹೆಚ್ಚೆಚ್ಚು ಕಾಡತೊಡಗಿದೆ. ಅದೇನಿದ್ದರೂ, ಅಲ್ಲಿನ ರೈತರು ಹೊಸದಾಗಿ ಕಂಡುಕೊಂಡ ರೊಕ್ಕದ ಬೆಳೆಗಳ ಲಾಭ ಕಳೆದುಕೊಳ್ಳಲು ತಯಾರಿರಲಿಲ್ಲ.

ಆದ್ದರಿಂದ, ಲೋಕ ಪಂಚಾಯತ್ ಮಧ್ಯಮ-ಮಾರ್ಗ ಅನುಸರಿಸಲು ನಿರ್ಧರಿಸಿತು. ರೊಕ್ಕದ ಬೆಳೆಗಳನ್ನು ಬೆಳೆಯಿರಿ; ಜೊತೆಗೆ ಒಂದಷ್ಟು ಜಾಗದಲ್ಲಿ ಸ್ಥಳೀಯ ಬೆಳೆಗಳನ್ನೂ ಬೆಳೆಯಿರಿ ಎಂದು ರೈತರನ್ನು ಒತ್ತಾಯಿಸಿತು.

ಈ ಸಲಹೆಗೆ ಕಿವಿಗೊಟ್ಟ ಮೊದಲಿಗರಲ್ಲಿ ಒಬ್ಬರು ಸಂಗಂನೇರ್ ತಾಲೂಕಿನ ಫುಕ್ರಿ ಬಾಲೇಶ್ವರ್ ಗ್ರಾಮದ ನವನಾಥ್ ಕಾಳೆ. ತಮ್ಮ ಐದೆಕ್ರೆ ಜಮೀನಿನಲ್ಲಿ ಕಾಳೆ ಬೆಳೆಯುತ್ತಿದ್ದದ್ದು ಈರುಳ್ಳಿ, ಟೊಮೆಟೋ ಮತ್ತು ಹೈಬ್ರಿಡ್ ಕಿರಿಜೋಳ. ತನ್ನ ಜಮೀನಿನ ಒಂದೆಕ್ರೆಯಲ್ಲಿ ದಿಯೋಥಾನ್ ಕಿರಿಜೋಳ ಬಿತ್ತಿ, ಅದು ಕೊಯ್ಲಿಗೆ ಬಂದಾಗ ಅವರ ಮುಖದಲ್ಲಿ ಮಂದಹಾಸ.

“ದಿಯೋಥಾನ್ ಕಿರಿಜೋಳದ ರುಚಿಯನ್ನು ಹೈಬ್ರಿಡ್ ಕಿರಿಜೋಳದ ರುಚಿಗೆ ಹೋಲಿಸಲಿಕ್ಕೂ ಸಾಧ್ಯವಿಲ್ಲ. ಅದು ಅಷ್ಟು ಚೆನ್ನಾಗಿದೆ. ಅದನ್ನು ಉಣ್ಣ ತೊಡಗಿದ ನಂತರ, ನಮ್ಮನ್ನು ಕಾಡುತ್ತಿದ್ದ ಸುಸ್ತು, ಮೈಕೈನೋವು, ಜೋಂಪು ಮತ್ತು ನಿಶ್ಶಕ್ತಿ ಇಂತಹ ಆರೋಗ್ಯ ಸಮಸ್ಯೆಗಳು ತನ್ನಿಂತಾನೇ ಕಣ್ಮರೆಯಾದವು” ಎನ್ನುತ್ತಾರೆ ಕಾಳೆ. ಇದರ ಇಳುವರಿ ಕಡಿಮೆಯಾದರೂ ಇದರಿಂದ ಸಿಗುವ ಮೇವು ಜಾಸ್ತಿಯೆಂದು ತಿಳಿಸುತ್ತಾರೆ ಕಾಳೆ. ಕ್ರಮೇಣ ಎರಡೆಕ್ರೆ ಜಮೀನಿನಲ್ಲಿ ಆ ಕಿರಿಜೋಳ, ದೇಸಿ ಬೀನ್ಸ್ ಮತ್ತು ಹುಲ್ಗಾ ಎಂಬ ದೇಸಿ ಕಡಲೆ ತಳಿ ಬೆಳೆಯತೊಡಗಿದರು. ಇವರ ಅನುಭವದಿಂದ ಪಾಠ ಕಲಿತ ಹಲವು ರೈತರು ರೊಕ್ಕದ ಬೆಳೆಗಳ ಜೊತೆಗೆ ದೇಸಿ ತಳಿಗಳನ್ನು ಬೆಳೆಯಲು ಶುರು ಮಾಡಿದರು.

ಅಕೋಲೆ ತಾಲೂಕಿನ ಶಿರ್-ಪುಂಜೆ ಖುರ್-ಡ್ ಮತ್ತು ಧಮನ್‌ವಾನ್ ಗ್ರಾಮಗಳಲ್ಲಿ ಪರಂಪರೆಯ ಹಾದಿಯಲ್ಲಿ ರೈತರು ಪುನಃ ಹೆಜ್ಜೆಯಿಟ್ಟದ್ದು ಕಾಲ್‌ಬಾತ್ ಭತ್ತ ಬೆಳೆಯುವ ಮೂಲಕ. ಸುವಾಸನೆಭರಿತ ಕಾಲ್‌ಬಾತ್ ಭತ್ತದ ಸಿಪ್ಪೆಯಲ್ಲಿ ಕಪ್ಪು ಛಾಯೆ. “ಕಾಲ್‌ಬಾತ್ ತಳಿಯ ಇಳುವರಿ ತುಸು ಕಡಿಮೆ. ಆದರೆ ಇದು ಕಡಿಮೆ ಅವಧಿಯ ಬರನಿರೋಧ ತಳಿ. ಸಾಧಾರಣ ಮಣ್ಣಿನಲ್ಲಿಯೂ ರಾಸಾಯನಿಕ ಗೊಬ್ಬರವಿಲ್ಲದೆಯೂ ಚೆನ್ನಾಗಿ ಬೆಳೆಯುತ್ತದೆ’ ಎನ್ನುತ್ತಾರೆ ಧಮನ್‌ವಾನ್‌ನ ರೈತ ಅಂಜನಾಭಾಯಿ ರೆಂಗ್‌ಡೆ.

ಲೇಖನದ ಆರಂಭದಲ್ಲಿ ತಿಳಿಸಿದ "ಬಾಟು' ಸಹಿತ ಇಂತಹ ತಳಿಗಳು ಸಿಕ್ಕಿದ್ದು ಕೆರೆವಾಡಿ ಗ್ರಾಮದ ಮಹಿಳೆಯರ ಬೀಜದ ಬುಟ್ಟಿಗಳಲ್ಲಿ. ದೇಸಿ ತಳಿಗಳ ಪಾರಂಪರಿಕ ಖಜಾನೆ ಯಾಕೆ ಉಳಿಸಬೇಕು? ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ, ಅಲ್ಲವೇ?

ಪ್ರಾತಿನಿಧಿಕ ಫೋಟೋ: ಸಿರಿಧಾನ್ಯಗಳು … ಕೃಪೆ: ಸ್ಮಾರ್ಟ್ ಫುಡ್.ಆರ್ಗ್