ಮಹಾರಾಷ್ಟ್ರ ಅಟಾಟೋಪಕ್ಕೆ ಕೇಂದ್ರ ಕಡಿವಾಣ ಹಾಕಲಿ

ಮಹಾರಾಷ್ಟ್ರ ಅಟಾಟೋಪಕ್ಕೆ ಕೇಂದ್ರ ಕಡಿವಾಣ ಹಾಕಲಿ

ಬೆಳಗಾವಿ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಂಧಾನ ಸಭೆ ನಡೆಸಿ, ಶಾಂತಿ ಮಂತ್ರ ಬೋಧಿಸಿದ ಬಳಿಕವೂ ಮಹಾರಾಷ್ಟ್ರದ ಜನನಾಯಕರ ಉದ್ಧಟತನ ಹೇಳಿಕೆಗಳ ಪರ್ವ ನಿಲ್ಲುತ್ತಲೇ ಇಲ್ಲ. ಕರ್ನಾಟಕಕ್ಕೆ ಒಂದಿಂಚೂ ಭೂಮಿಯನ್ನು ಬಿಡುವುದಿಲ್ಲ ಎಂದು ಆ ರಾಜ್ಯದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅಬ್ಬರಿಸುತ್ತಿದ್ದಾರೆ. ಬೆಳಗಾವಿ ಸೇರಿ ಕರ್ನಾಟಕದ ಮರಾಠಿ ಭಾಷಿಕ ಪ್ರದೇಶಗಳನ್ನು ಸುಪ್ರೀಂಕೋರ್ಟ್ ತೀರ್ಪು ಬರುವವರೆಗೂ ಕೇಂದ್ರಾಡಳಿತ ಪ್ರದೇಶ ಮಾಡಿಬಿಡಿ ಎಂದು ಶಿವಸೇನೆ ನಾಯಕ ಉದ್ಭವ್ ಠಾಕ್ರೆ ಆಗ್ರಹಿಸುತ್ತಿದ್ದಾರೆ. ಮಹಾರಾಷ್ಟ್ರದ ಶಾಸಕರು ಬೆಳಗಾವಿಗೆ ಬಂದು ಶಾಂತಿ ಹಾಳುಗೆಡವಲು ಯತ್ನಿಸುತ್ತಿದ್ದಾರೆ. ಮಹಾರಾಷ್ಟ್ರದ ವಿಧಾನ ಸಭೆ ಕರ್ನಾಟಕದ ವಿರುದ್ಧ ನಿರ್ಣಯವನ್ನೇ ಅಂಗೀಕರಿಸಿದೆ. ಪ್ರಜಾಪ್ರಭುತ್ವ ಹೊಂದಿರುವ, ಒಕ್ಕೂಟ ವ್ಯವಸ್ಥೆಯಡಿ ನಡೆಯುತ್ತಿರುವ ದೇಶದಲ್ಲಿ ಇಂತಹ ಧಮಕಿ, ಧಿಮಾಕಿನ ಹೇಳಿಕೆಗಳಿಗೆ ಆಸ್ಪದ ಇಲ್ಲ. ಬೇರೊಂದು ರಾಜ್ಯಕ್ಕೆ ನುಗ್ಗಿ ಶಾಂತಿ ಹಾಳು ಮಾಡುವ ಸಾಮರ್ಥ್ಯ ಹೊಂದಿದ್ದ ಮೇಲೆ ಮಹಾರಾಷ್ಟ್ರ ಏಕೆ ಸುಪ್ರೀಂ ಕೋರ್ಟ್ ಕದ ಬಡಿಯಬೇಕಿತ್ತು? ಕೇಂದ್ರ ಸರಕಾರಕ್ಕೆ ಹತ್ತಾರು ಬಾರಿ ಗಡಿ ವಿವಾದದ ಕುರಿತು ದೂರು ಏಕೆ ನೀಡಬೇಕಿತ್ತು? ಮಹಾಜನ್ ಆಯೋಗವನ್ನು ರಚಿಸಲು ದುಂಬಾಲು ಏಕೆ ಬೀಳಬೇಕಿತ್ತು?

ಕರ್ನಾಟಕಕ್ಕೆ ಒಂದಿಂಚೂ ಭೂಮಿ ಬಿಡುವುದಿಲ್ಲ ಎಂದು ಹೇಳಲು ಫಡ್ನವೀಸ್ ಮನೆಯ ಜಹಗೀರು ಬೆಳಗಾವಿ ಅಲ್ಲ. ರಾಜ್ಯಗಳ ಮರುವಿಂಗಡಣೆ ಪ್ರಕಾರವೇ ಬೆಳಗಾವಿ ಕರ್ನಾಟಕದ್ದಾಗಿದೆ. ಬಾಂಬೆ ಪ್ರೆಸಿಡೆನ್ಸಿಯಲ್ಲಿತ್ತು ಎಂಬ ಕಾರಣಕ್ಕೆ ಬೆಳಗಾವಿ ಮೇಲೆ ಹಕ್ಕು ಮಂಡಿಸುವುದಾದರೆ, ಹಾಗಂತ ಗುಜರಾತ್ ತನ್ನದು ಎಂದು ಮಹಾರಾಷ್ಟ್ರ ಕೇಳಲು ಆಗುತ್ತದೆಯೇ? ಕರ್ನಾಟಕದ ಮರಾಠಿ ಭಾಷಿಕ ಪ್ರದೇಶಗಳನ್ನು ಕೇಂದ್ರಾಡಳಿತ ಪ್ರದೇಶ ಮಾಡಿ ಎನ್ನುವುದಾದರೆ, ಮುಂಬೈಯಲ್ಲಿ ಸರ್ವಭಾಷಿಕ ಜನರಿದ್ದಾರೆ. ಅದನ್ನೇ ಏಕೆ ಕೇಂದ್ರಾಡಳಿತ ಪ್ರದೇಶ ಮಾಡಬಾರದು? ಗಡಿ ವಿಚಾರದಲ್ಲಿ ಕರ್ನಾಟಕದ ವಿರುದ್ಧ ನಿರ್ಣಯ ಅಂಗೀಕರಿಸುವುದಾದರೆ ಸುಪ್ರೀಂಕೋರ್ಟ್ ನಲ್ಲಿ ದಾವೆ ಹೂಡಿದ್ದೇಕೆ? ಮಹಾರಾಷ್ಟ್ರದ ನಡವಳಿಕೆ ಒಟ್ಟಿನಲ್ಲಿ ಕರ್ನಾಟಕದ ನೆಮ್ಮದಿ ಹಾಳು ಮಾಡುವುದಕ್ಕೆ ಸೀಮಿತವಾದಂತಿದೆ. ಅಮಿತ್ ಶಾ ಅವರು ಉಭಯ ರಾಜ್ಯಗಳ ಮಧ್ಯೆ ಸಮನ್ವಯ ಸಮಿತಿ, ಶಾಂತಿ ಕಾಪಾಡಲು ಐಪಿಎಸ್ ಅಧಿಕಾರಿಗಳ ನೇಮಕಕ್ಕೆ ಸಲಹೆ ನೀಡಿದ್ದರು. ಮಹಾರಾಷ್ಟ್ರ ಅದನ್ನು ಜಾರಿಗೆ ತರುವ ಲಕ್ಷಣ ಕಾಣುತ್ತಿಲ್ಲ. ಕೇಂದ್ರ ಸರಕಾರ ಮಹಾರಾಷ್ಟ್ರಕ್ಕೆ ಮೂಗುದಾರ ಹಾಕಬೇಕಿದೆ.

ಕೃಪೆ: ಕನ್ನಡ ಪ್ರಭ, ಸಂಪಾದಕೀಯ, ದಿ: ೨೮-೧೨-೨೦೨೨

ಚಿತ್ರ ಕೃಪೆ: ಇಂಟರ್ನೆಟ್ ತಾಣ