ಮಹಾರಾಷ್ಟ್ರ ಬುದ್ಧಿ ಕಲಿಯುವುದೆಂದು?

ಮಹಾರಾಷ್ಟ್ರ ಬುದ್ಧಿ ಕಲಿಯುವುದೆಂದು?

ಶಾಂತಿ, ಸಾಮರಸ್ಯದ ನೆಲೆವೀಡಾಗಿದ್ದ ಬೆಳಗಾವಿಯ ಗಡಿಯಲ್ಲಿ ಅನಗತ್ಯ ತಂಟೆಗೆ ಮುಂದಾಗಿರುವ ಮಹಾರಾಷ್ಟ್ರಕ್ಕೆ ರಾಜ್ಯದ ಕಾನೂನು ಸುವ್ಯವಸ್ಥೆ ತಕ್ಕ ಪಾಠ ಕಲಿಸಿದೆ. ನಿಷೇಧವಿದ್ದರೂ ಬೆಳಗಾವಿಗೆ ಬಂದೇ ತೀರುತ್ತೇವೆ ಇಂದು ಗೊಡ್ಡು ಬೆದರಿಕೆಯೊಡ್ಡಿದ್ದ ಮಹಾರಾಷ್ಟ್ರ ಸಚಿವರು ಕರ್ನಾಟಕಕ್ಕೆ ಕಾಲಿಡಲು ಸಾಧ್ಯವಾಗದಂತೆ ಮಾಡುವಲ್ಲಿ ಸಫಲವಾಗಿರುವುದು ಹೆಗ್ಗಳಿಕೆ ವಿಚಾರವೇ ಆದರೂ ಮರಾಠಿ ಸಂಘಟನೆಗಳೂ ಇನ್ನೂ ಪುಂಡಾಟಿಕೆ ಮುಂದುವರೆಸಿರುವುದು ಅತ್ಯಂತ ನಾಚಿಕೆಗೇಡಿನ ವಿದ್ಯಮಾನ.

ನಿಷೇಧದ ನಡುವೆಯೂ ಬೆಳಗಾವಿಗೆ ನುಗ್ಗುತ್ತೇವೆ ಎಂದಿದ್ದ ಮಹಾರಾಷ್ಟ್ರದ ಉನ್ನತ ಶಿಕ್ಷಣ ಸಚಿವ ಚಂದ್ರಕಾಂತ್ ಪಾಟೀಲ್ವೆ, ಅಬಕಾರಿ ಸಚಿವ ಶಂಭುರಾಜ ದೇಸಾಯಿ ಮತ್ತು ಸಂಸದ ಧೈರ್ಯಶೀಲ ಮಾನೆ ಅವರ ಪ್ರವೇಶಕ್ಕೆ ಬೆಳಗಾವಿ ಜಿಲ್ಲಾಧಿಕಾರಿ ಖಡಕ್ಕಾಗಿ ನಿರಾಕರಿಸಿದ್ದು ದಿಟ್ಟ ನಡೆ. ಅಶಾಂತಿಗೆ ಪ್ರೇರೇಪಿಸುವಂಥ ಎಂಇಎಸ್ ನ ಮನವಿಗೂ ಸೊಪ್ಪು ಹಾಕದೆ ಕನ್ನಡನೆಲದ ಕಾನೂನಿನ ಬಿಸಿಯನ್ನು ಡಿಸಿ ಮನದಟ್ಟು ಮಾಡಿಸಿರುವುದು ಅಭಿನಂದನೀಯ.

ಅದಾಗಿಯೂ ಬುದ್ಧಿ ಕಲಿಯದ ಎಂಇಎಸ್, ಶಿವಸೇನೆ ಕಾರ್ಯಕರ್ತರು ಮಹಾರಾಷ್ಟ್ರದಲ್ಲಿ ಕನ್ನಡಿಗರನ್ನು ಟಾರ್ಗೆಟ್ ಮಾಡಿರುವುದು ನಿಜಕ್ಕೂ ಖಂಡನಾರ್ಹ ವಿಚಾರ. ಕರ್ನಾಟಕದ ಬಸ್ಸುಗಳ ಮೇಲೆ ಕಲ್ಲು ತೂರಾಡುವುದು, ಜೈ ಮಹಾರಾಷ್ಟ್ರ ಎಂದು ಬರೆದು ಕನ್ನಡಿಗರ ಭಾವನೆಗಳನ್ನು ಕೆರಳಿಸುವ ಈ ದುಷ್ಟ ಮನಸ್ಥಿತಿಗೆ ಧಿಕ್ಕಾರವಿರಲಿ. ಬೆಳಗಾವಿ ಕುರಿತಾದ ಮರಾಠಿಗರ ಚಳುವಳಿ., ಹೋರಾಟ ರಾಷ್ಟ್ರೀಯ ಭದ್ರತೆಗೆ ಮಾರಕ ಎನ್ನುವಷ್ಟರಮಟ್ಟಿಗೆ ಅವರು ನಡೆಸಿದ ಹಿಂಸಾತ್ಮಕ ಪ್ರತಿಭಟನೆಗಳಿಗೆ ಗಡಿ ಸಾಕ್ಷಿಯಾಗಿದೆ. ಎಂಇಎಸ್ ನಂಥ ಸಂಘಟನೆಗಳ ಯಾವ ಪುಂಡಾಟಿಕೆ ವಿರುದ್ಧವೂ ಹಿಂಸಾತ್ಮಕ ಹಾದಿ ತುಳಿಯದ ಕನ್ನಡಿಗರ ಸಂಯಮವನ್ನು ಮಹಾರಾಷ್ಟ್ರ ಗೌರವದಿಂದ ಕಾಣಬೇಕಿದೆ.

ಇವೆಲ್ಲಕ್ಕೂ ಮುನ್ನ ಮಹಾರಾಷ್ಟ್ರ ಸರಕಾರಕ್ಕೆ ಏನು ಮಾಡುತ್ತಿದ್ದೇವೆ ಎಂಬ ಅರಿವು ಮುಖ್ಯ. ಮಹಾಜನ್ ವರದಿಯನ್ನು ಜಾರಿಗೊಳಿಸಲು ತಾನೇ ಮೊದಲು ಉತ್ಸುಕತೆ ತೋರಿ, ಬಳಿಕ ಅದರ ಅಂತಿಮ ವರದಿಗೆ ಬೆನ್ನು ಹಾಕುತ್ತಿರುವ ಅಲ್ಲಿನ ಆಡಳಿತದ ಮನೋಭಾವ ಅತ್ಯಂತ ಗೊಂದಲದಿಂದ ಕೂಡಿದೆ. ಕನ್ನಡ ಭಾಷಾ ಪ್ರಾಬಲ್ಯವಿರುವ ಹಳ್ಳಿಗಳನ್ನು ಮೈಸೂರು ರಾಜ್ಯಕ್ಕೆ ಸೇರಿಸಲು ಪ್ರಸ್ತಾವ ಸಲ್ಲಿಸಿದ್ದ ಮಹಾರಾಷ್ಟ್ರ ಇಂದು ಭಾಷಾಭಿಮಾನದ ಅಮಲಿನಲ್ಲಿ ಚಿತ್ರವಿಚಿತ್ರವಾಗಿ ವರ್ತಿಸುತ್ತಾ, ಒಕ್ಕೂಟ ವ್ಯವಸ್ಥೆಯ ಸಾಮರಸ್ಯ ಹದಗೆಡಿಸಲು ಯತ್ನಿಸುತ್ತಿರುವುದು ಶೋಚನೀಯ.

ಸಮಸ್ಯೆಯಲ್ಲದ ಸಮಸ್ಯೆಯನ್ನು ಸುಪ್ರೀಂಕೋರ್ಟ್ ಅಂಗಳಕ್ಕೆ ತಂದು ನಿಲ್ಲಿಸಿರುವ ಮಹಾರಾಷ್ಟ್ರದ ಧೋರಣೆಯನ್ನು ಘನ ನ್ಯಾಯಾಲಯ ಕೂಡ ಅಷ್ಟೇ ದೂರವಿಡಲು ಯತ್ನಿಸುತ್ತಿದೆ. ರಾಜ್ಯಗಳ ನಿರ್ಮಾಣ, ಗಡಿ ಬದಲಾವಣೆ- ಇತ್ಯಾದಿ ವಿಚಾರಗಳೆಲ್ಲ ಸಂಸತ್ತಿನ ವ್ಯಾಪ್ತಿಗೆ ಬರುವಂತದ್ದು. ಇದನ್ನು ಕರ್ನಾಟಕ ಕೂಡ ದಶಕಗಳಿಂದ ವಾದಿಸುತ್ತಲೇ ಬಂದಿದೆ. ೨೦೦೬ ರಲ್ಲಿ ಸೋರಿಕೆಯಾದ ಕೇಂದ್ರ ಸರಕಾರದ ಅಫಿದವಿಟ್ ಕೂಡ ಇದನ್ನೇ ಪ್ರತಿಪಾದಿಸುತ್ತದೆ. ಇವೆಲ್ಲ ಸತ್ಯಗಳು ತಿಳಿದಿದ್ದರೂ ಮಹಾ ಗಡಿ ತಂಟೆ ಹಿಂದೆ ಯಾವ ಹಿತಾಸಕ್ತಿ ಅಡಗಿದೆ ಎಂಬುದೇ ಯಕ್ಷ ಪ್ರಶ್ನೆ.

ಗಡಿ ಜನರ ಭಾವನೆಗಳನ್ನು ಗೌರವಿಸುವ, ಅವರಿಗೆ ಸೂಕ್ತ ಮೂಲ ಸೌಲಭ್ಯ ಒದಗಿಸಿ, ಜೀವನ ಭದ್ರತೆ ಒದಗಿಸುವಂಥ ಸದಾಲೋಚನೆಗಳತ್ತ ಉಭಯ ರಾಜ್ಯಸರ್ಕಾರಗಳು ಗಮನಹರಿಸಬೇಕಾಗಿದೆ. ಗಡಿ ವಿಚಾರವು ರಾಜಕಾರಣಕ್ಕೆ ವಸ್ತುವಾಗಲು ಬಿಡುವುದೇ ದೊಡ್ಡ ದುರಂತ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ, ಮಹಾರಾಷ್ಟ್ರಕ್ಕೆ ಬುದ್ದಿ ಹೇಳುವುದು ಸೂಕ್ತ.

ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೦೭-೧೨-೨೦೨೨