ಮಹಾಶಿವರಾತ್ರಿ ಮಹಿಮೆ

ಮಹಾಶಿವರಾತ್ರಿ ಮಹಿಮೆ

ಕಣ್ಣಿಗೆ ಕಾಣುವುದನ್ನು ನಾವು ಹಿಡಿಯಬಹುದು. ಕಣ್ಣಿಗೆ ಕಾಣದ, ಹಿಡಿಯಲಾಗದ ಮಹಾನ್ ಶಕ್ತಿ, ಜಗದ ಜೀವರ ತಂದೆ, ನಿರಾಕಾರ, ನಿರ್ಗುಣ , ನಂಬಿದವರಿಗೆ ಇಂಬನ್ನು ನೀಡುವ, ಆಶ್ರಯಿಸಿ ಬಂದವರನ್ನು ಪೊರೆಯುವ ಮಹಾದೇವಾದಿದೇವ, ಅವನೇ ಪರಶಿವ, ಪರಮೇಶ್ವರ. ಭಯನಿವಾರಕ ಶಿವ.ಭಸ್ಮದ ಮಹತ್ವವನ್ನು ಸಾರಿದವನು.

ಅಹಂ ನಿರ್ವಿಕಲ್ಪೋ ನಿರಾಕಾರ ರೂಪೋ/

ವಿಭುತ್ವಾಚ್ಚ ಸರ್ವತ್ರ ಸರ್ವೇಂದ್ರಿಯಾಣಾಮ್/

ನ ಚಾಸಂಗಂತಂ ನೈವ ಮುಕ್ತಿರ್ನ ಬಂಧಃ/

ಚಿದಾನಂದರೂಪಃ ಶಿವೋಹಂ ಶಿವೋಹಂ//

ಪರಮೇಶ್ವರನ ಆರಾಧನೆಗೆ ಪ್ರಶಸ್ತವಾದ ದಿನವೇ ಮಹಾಶಿವರಾತ್ರಿ. ಕೃಷ್ಣ ಪಕ್ಷದ ಚತುರ್ದಶಿ ರಾತ್ರಿ ಕತ್ತಲು. ಈ ರಾತ್ರಿ ಸಂಧಿಕಾಲದ ರಾತ್ರಿಯಾದ ಕಾರಣ ಅಮಂಗಳ, ಅಶುಭ ಎಂಬ ಪ್ರತೀತಿ ಇದೆ. ಈ ದಿನ ಸಚ್ಚಿದಾನಂದ ಸ್ವರೂಪಿಯಾದ, ಮಂಗಳಕರನಾದ, ಸ್ವಯಂ ಜ್ಯೋತಿ ಸ್ವರೂಪಿಯಾದ ಮಹಾಶಕ್ತಿ ಯಾದ ಶಿವನನ್ನು ಪೂಜಿಸುವುದರಿಂದ ಪವಿತ್ರವಾಗುತ್ತದೆ, ಸನ್ಮಂಗಲವುಂಟಾಗುತ್ತದೆ ಎಂಬ ನಂಬಿಕೆ.

ಶಿವನಿಗೆ ಅತ್ಯಂತ ಪ್ರಿಯವಾದ ರಾತ್ರಿ ಶಿವರಾತ್ರಿ. ಪರಮೇಶ್ವರನಿಗೆ ಅತಿಪ್ರಿಯ ಬಿಲ್ವಪತ್ರೆ. ಭಕ್ತಿಯಿಂದ ಒಂದು ಬಿಲ್ವಪತ್ರೆಯನ್ನು ಶಿವನಿಗೆ ಅರ್ಪಿಸಿದರೂ ಸಾಕು, ಪ್ರಸನ್ನನಾಗುವನು ಎಂದು ಪ್ರತೀತಿ. ಮೂರು ದಳಗಳುಳ್ಳ ಬಿಲ್ವಪತ್ರೆ ಬ್ರಹ್ಮ, ವಿಷ್ಣು, ಮಹೇಶ್ವರರೆಂಬ ತ್ರಿಮೂರ್ತಿಗಳ ಪ್ರತೀಕ. ಮೂರು ದಳಗಳು ಮೂರು ಕಣ್ಣುಗಳ ಸಂಕೇತ. ಸತ್ವ, ತಮ, ರಜ  ತ್ರಿಗುಣಗಳನ್ನು ಪ್ರತಿನಿಧಿಸುತ್ತದೆ. ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಮಹಾಮಹಿಮನ ಸೇವೆಯನ್ನು ಉಪವಾಸ, ವ್ರತ, ಭಜನೆ ಮುಂತಾದವುಗಳಿಂದ ಆಚರಿಸಿ ಧನ್ಯರಾಗೋಣ. ಆದಷ್ಟೂ ಮೌನವಾಗಿ ಶಿವಧ್ಯಾನದಲಿ ನಿರತರಾಗಿ ಧನ್ಯತೆಯ ಪಡೆಯೋಣ. ಶಿವ ಪಂಚಾಕ್ಷರಿ ಮಂತ್ರವನ್ನು ಜಪಿಸಿ ಪಾವನರಾಗೋಣ. ಉಪ ಎಂದರೆ *ಹತ್ತಿರ* ವಾಸ ಎಂದರೆ *ಇರುವುದು* ಎಂದು ಅರ್ಥ. ಆದಷ್ಟೂ ಭಗವಂತನ ಸಮೀಪ ಇರುವುದು. ಶಂಕರಾಚಾರ್ಯರು ಒಂದೆಡೆ 'ಶಿವನ ಸಾಮಿಪ್ಯ ಒದಗಲು *ಪೂಜೆ, ಉಪವಾಸ, ಜಾಗರಣೆ, ಧ್ಯಾನ* ಮಾಡಿ ಶಿವಸಾಕ್ಷಾತ್ಕಾರ ಮಾಡಿಕೊಳ್ಳಿ 'ಎಂಬುದಾಗಿ ಕರೆಯಿತ್ತಿದ್ದಾರೆ.

ಓಂ ನಮಃ ಶಿವಾಯ

(ವಿವಿಧ ಮೂಲಗಳಿಂದ ಸಂಗ್ರಹ)

-ರತ್ನಾ ಕೆ ಭಟ್, ತಲಂಜೇರಿ.

ಚಿತ್ರ ಕೃಪೆ: ಇಂಟರ್ನೆಟ್ ತಾಣ