ಮಹಾಹಠ-ಛಲದ-ಮಹಿಳೆ, ವೆಂಕಟಲಕ್ಷಮ್ಮನವರು !
ವೆಂಕಟಲಕ್ಷಮ್ಮನವರು, ನಮ್ಮ ಗೋಪಾಲ್ ರಾವ್ ಮೇಸ್ಟ್ರ ತಾಯಿ. ಅವರ ಸೊಸೆ ಪುಟ್ಟಕ್ಕ. ನಾಗಮ್ಮ, ಸುಂದರ, ಶಂಕರ. ಮೊಮ್ಮಕ್ಕಳು. ವೆಂಕಟಲಕ್ಷಮ್ಮನವರು, ಅನೇಕವೇಳೆ ನಮ್ಮಮ್ಮನ ಹತ್ತಿರ ತಮ್ಮ ಮನದ ಇಂಗಿತವನ್ನು ತೋಡಿಕೊಂಡ ಕೆಲವು ಮಾತುಗಳು ಇನ್ನೂ ಅಸ್ಪಷ್ಟವಾಗಿ ನನ್ನ ಕಿವಿಯಲ್ಲಿ ತೇಲುತ್ತಿವೆ. ಆ ಮಾತುಗಳೇನೆ ಇರಲಿ, ಅವು ಹೇಳುವುದಿಷ್ಟೆ ಎಂಬುದನ್ನು ನನ್ನ ಹಲವು ವರ್ಷಗಳ ಒಡನಾಟದಿಂದ ಅರಿತಿದ್ದೇನೆ. ’ಯಾರೋ ನನಗೆ ಹೀಗಂದೃ’. ’ನಾನ್ ಸುಮ್ನಿರೋಳಲ್ಲಪ್ಪ ನಾನೂ ಝಾಡ್ಸಿ ಮಾತಾಡ್ಬಿಟ್ಟೆ ರಾಧಮ್ನೋರೆ, ನೀವೇನಾದೃ ತಿಳ್ಕೊಳ್ಳಿ’, ’ಅದೆಲ್ಲಾ ನನಗ್ ಸರಿಹೋಗಲ್ಲಪ್ಪ. ಅವರ್ ದೊಡ್ಡಸ್ತಿಕೆ ಇದ್ರೇ ಅವರ್ಹತ್ರಾ ನಮ್ಗೇನ್ಬಂತು ನೀವೇ ಹೇಳಿ" ಅನ್ನೋರು, ವೆಂಕಟ್ಲಕ್ಷಮ್ನೋರು ! ಈ ಮಾತುಗಳ ಹಿನ್ನೆಲೆಯಲ್ಲಿ ಒಂದು ಘಟನೆ, ನಮ್ಮ ವಠಾರದಲ್ಲಿ ನಡೀತು ನೋಡಿ. ಬಾಲ್ಯದ ಅದೊಂದು ಘಟನೆಯ ಅನುಭವ ನನ್ನ ನೆನಪಿನಲ್ಲಿ ಅತ್ಯಂತ ಗಟ್ಟಿಯಾಗಿ ಉಳಿದಿರುವ ಸಂಗತಿಗಳಲ್ಲೊಂದು. ಅದ್ಯಾಕೊ ನನಗೆ ಆಕೆಯ ಛಲ ಅಷ್ಟು ಮುಖ್ಯವೇ ಅಥವಾ ನಾವು ಜೀವನದಲ್ಲಿ ಛಲವಂತರಾಗಿರಬೇಕು, ಎನ್ನುವ ವಿಷಯ ಬಂದಾಗಿ ಇದನ್ನು ಉದಾಹರಿಸಬಹುದೆ ಎನ್ನುವ ವಿಷಯ ಗಳಲ್ಲಿ ಗೊಂದಲವೇ ಆಗಿತ್ತು. ಒಟ್ಟಿನಲ್ಲಿ ಈ ಒಂದು ಚಿಕ್ಕ ಘಟನೆ ನನ್ನ ಮನಸ್ಸಿನಾಳದಲ್ಲಿ ಉಳಿಯಿತು. ನಮ್ಮ ಮಾತುಗಳು, ಹಾಗೂ ನಾವು ಮಾಡುವ ಕಾರ್ಯಗಳೂ ನಾವು ಹೇಳಿದಂತೆ ಅರ್ಥಪೂರ್ಣವಾಗಿರಬೇಕು.
ಇದನ್ನು ನಾವು ನಮ್ಮ ಮಹಾಗ್ರಂಥ, ಮಹಾಭಾರತ, ರಾಮಾಯಣಗಳಲ್ಲಿ ಕಾಣುತ್ತೇವೆ. ಮಹಾಭಾರತದಲ್ಲಿ ಪಾಂಡವರು ತಾವು ಗೆದ್ದು ಬಂದಿರುವ ಅಮೂಲ್ಯ ಉಪಹಾರದ ಬಗ್ಗೆ ಅವರ ಅಮ್ಮ, ಕುಂತಿಗೆ ಹೇಳಿದಾಗ, ಕೆಲಸದ ಒತ್ತಡದಲ್ಲಿದ್ದ ಆಕೆ, ಒಳ್ಳೆಯದು ಮಕ್ಕಳೇ, ಎಲ್ಲರೂ ಸಮನಾಗಿ ಹಂಚಿಕೊಳ್ಳಿಯೆಂದು ಹೇಳಿದ್ದರ ಔಚಿತ್ಯತೆಯ ಬಗೆಗೆ ನನಗೆ ಸದಾ ಅಳುಕು, ಬೇಸರ, ಒಂದು ತರಹದ ಮಾನಸಿಕ ವೇದನೆಯಾಗಿತ್ತು. ಅಮ್ಮನ ಮಾತನ್ನು ಪಾಲಿಸುವುದು ಒಂದು ಕಡೆ. ಆದರೆ, ಆಕೆಗೆ ಗೊತ್ತಿಲ್ಲದೆ ನುಡಿದ ಅನೃತವನ್ನೂ ಸಮಯ, ಹಾಗೂ ಸಂದರ್ಭಕ್ಕೆ ತಾಳೆಹಾಕಿನೋಡದೆ ಕಣ್ಣು ಮುಚ್ಚಿಕೊಂಡು ತೆಗೆದುಕೊಂಡ ನಿರ್ಣಯ ಎಷ್ಟು ಸಮಂಜಸ ಎನ್ನುವ ಮಾತು ಇಂದಿಗೂ ನನ್ನನ್ನು ಕಾಡುತ್ತಿದೆ. ಅಥವಾ ಕುಂತಿ, ವಿಶಾಪಕೊಡುವ ತರಹ, ನಾನು ಹೇಳಿದ ಮಾತು ಇದಕ್ಕೆ ಅನ್ವಯಿಸುವುದಿಲ್ಲ ಎಂದು ಸ್ಪಸ್ಠತೆ ಕೊಡಬಾರದಾಗಿತ್ತೆ. ಮದುವೆ, ವ್ಯಕ್ತಿವ್ಯಕ್ತಿಗೆ ಸಂಬಂಧಿಸಿದ್ದಲ್ಲವೇ. ಪ್ರತಿ ಸನ್ನಿವೇಶಕ್ಕೂ ಯಾವುದೋ ನಿರೂಪಣೆ, ಸಮಾಧಾನ ಪ್ರಜ್ಞಾವಂತರು ಸಮಯೋಚಿತವಾಗಿ ಹೆಣೆದು ಕೊಡುತ್ತಾರೆ. ಅದನ್ನೂ ಆ ಮಹಾತಾಯಿ ಚರ್ಚಿಸಿದಂತಿಲ್ಲ ! ಬೇರೆ ಸನ್ನಿವೇಷಗಳಲ್ಲಿ ನಾವು, ಎತ್ತು ಈಯ್ತು, ಅಂದ್ರೆ ಕೊಟ್ಟಿಗೆ ಕಟ್ಟೊದೇ, ಎಂದು ಜಾಣತನದ ಮಾತಾಡುತ್ತೇವೆ !
ವೆಂಕಟ್ಲಕ್ಷಮ್ನವರು, ಅವರ ಸೊಸೆ, ಮೊಮ್ಮೊಕ್ಕಳು ಮಗ ಎಲೄ ನಮ್ಮ ಮನೆ ಭಾವಿಲೀ ನೀರ್ಸೇದ್ಕೊಂಡ್ ಹೋಗಕ್ಕೆ ಬರೋರು. ಕ್ಷೇತ್ರಪಾಲಯ್ಯನವರ ಭಾವೀಲಿ ಯಾವಾಗ್ಲೂ ಗದ್ದಲ ಜನಸಂದಣಿ, ಸರ್ದಿಗೆ ಕಾಯ್ಬೇಕು ನಮ್ಮಮನೇಲಿ ನಾವು ಮುಂಜಾನೆ ಇಲ್ಲವೇ ಸಾಯಂಕಾಲ ದೀಪ ಮುಡ್ಸೊ ಹೊತ್ತಿಗೆ ನೀರ್ ಸೇದೋರೂಢಿಯಲ್ಲಿತ್ತು. ಚಿಕ್ಕವರಾಗಿದ್ದ ನಾವು, ನೀರು ಸೇದಲು ಅರ್ಹತೆಯನ್ನು ಪಡೆದಿರಲಿಲ್ಲ. ನಮ್ಮಪ್ಪ ಅಮ್ಮ ಜೊತೆಯಲ್ಲಿ ಸೇದೋರು. ನಾಗರಾಜ ಅಮ್ಮ ಇಲ್ಲವೇ ಜೊತೆಯಲ್ಲಿ ಯಾರಾದರೂ ಅಮ್ಮನ-ಗೆಳತಿಯರು ಸಹಾಯಮಾಡೋರು. ಆಗ ಇನ್ನೂ ನಮ್ಮ ಚಿಕ್ಕಪ್ಪ ಸುಬ್ಬಣ್ಣನವರು ಚೆನ್ನಾಗಿದೃ. ಒಂದ್ಸಲ ಯಾಕೋ ಬರೋರು ಹೋಗೋರು ಭಾವಿ ಹತ್ರ ಭಾರಿ ಶಬ್ದ ಮಾಡ್ತಿದ್ರಂತೆ, ನಮ್ಮ ಚಿಕ್ಕಪ್ಪನವರಿಗೆ ರೇಗ್ತು ಅಂತ ಕಾಣ್ಸತ್ತೆ. ಆಷ್ಟೊತ್ಗೆ ವೆಂಕಟ್ಲಕ್ಷಮ್ನೋರೆ ನಮ್ ಚಿಕ್ಕಪ್ಪನ್ ಕಣ್ಗೆ ಕಾಣಿಸ್ಬೇಕೆ ? "ಎಲೄ ಯಾಕ್ ಒಂದೇ ಹೊತ್ಗೆ ಬಂದ್ ನೀರ್ಸೇದ್ತೀರಿ." " ಅಲ್ಲಿ ಇನ್ನೊಂದ್ ಭಾವಿ ಇಲ್ವೆ ಅಲ್ಗ್ಯಾಕ್ ಹೋಗ್ಬಾರ್ದು" ಅಂದ್ರಂತೆ. ಸರಿಹೋಯ್ತು. ತಮಗೇ ಹೇಳ್ತಿದಾರೆ ಅಂದ್ಕೊಂಡ್, ಖಂಡಿತವಾದಿ ವೆಂಕಟಲಕ್ಷಮ್ಮ್ನೋರು, ಸೇದಿದ್ದ ಬಿಂದಿಗೆಯ ನೀರನ್ನು ಭಾವಿಗೆ ಸುರಿದು ’ದಡದಡ’ ಹೊರ್ಟೇ ಹೋದ್ರಂತೆ. ಅವತ್ನಿಂದ, "ನಿಮ್ಮ ವಠಾರದಲ್ಲಿ ನಾವು ನೀರಿಗೆ ಬರಲ್ಲ," ಅಂತ ಘೋಷಿಸಿಯೇಬಿಟ್ರು. ಅಲ್ಗೆ ಮುಗೀತು ಭೀಷ್ಮರ ಶಪಥದ ತರಹ, ಸುಂಕ್ದೋರ್ಮನೆ ನೀರಿನ್ವ್ಯವಹಾರ ! ಅನೇಕ ವರ್ಷಗಳ ಕಾಲ ಅವರ ಮನೆಯವರು ನೀರು ಸೇದಲು ಬರ್ಲೇ ಇಲ್ವಂತೆ. ಆದ್ರೆ. ಬರ್ತಾ ಬರ್ತಾ ನೀರಿನ್ ತಾಪತ್ರಯ ಹೆಚ್ಚಾಗ್ತಾ ಹೋಯ್ತು. ಹಿಂದೆ ಮುಂದೆ ನೋಡ್ತಿದ್ದಾಗ, ಚಿಕ್ಕಮ್ಮ, ಕಿಟ್ಟು ಹೋಗಿ ಅವರ್ನ ಕೇಳ್ಕೊಂಡ್ರಂತೆ. "ಅಜ್ಜಿ, ಹೇಳಿ ; ಯಾರು ನಿಮಗೇನಂದೃ ; ನಮ್ಮುಂದೆ ಹೇಳಿ, ಪರವಾಗಿಲ್ಲ "ಅಂದ್ರೆ. "ಅಯ್ಯೊ ನಮ್ಮಪ್ಪ, ನಾನ್ ಯಾರ್ ಮೇಲೂ ಕಂಪ್ಲೇಂಟ್ ಹೇಳ್ತಿಲ್ಲ." "ಯಾಕೊ ನನ್ನ ಮನಸ್ಸಿಗೆ ಬೇಜಾರ್ ಆಯ್ತು." " ಯಾರ್ ಅಂದೃ ಅದೆಲ್ಲ ನನ್ನ ಮಾತ್ರ ಕೇಳ್ಲೇ ಬೇಡಿ" ಅಂದ್ಬಿಟೃ. " ನೋಡಿ, ಪದ್ದಮ್ಮನೋರ್ ಬಂದ್ ಕೇಳಿದಾರೆ, ಅವರ ಮಾತಿಗೆ ಬೆಲೆಕೊಡೋದ್ ನಮ್ಮ ಧರ್ಮ ಅಲ್ವ" ! "ನಂ ಮಾತ್ನ ಸ್ವಲ್ಪ ಕೇಳಿಸ್ಕೊಳ್ಳಿ, ಪದ್ದಮ್ಮ, ಕಿಟ್ಟಣ್ಣ. " ನನ್ ದೊಂದ್ ಶರತ್ತು. ನಿಮ್ಮಂಗಳ್ದ ಹೊಸ್ಲಿನಿಂದ ಒಳ್ಗೆ ಕಾಲಿಡಲ್ಲ ಅಷ್ಟೆ." " ಬಿಂದ್ಗೇಲಿ ಯಾರಾದೃ ನೀರ್ ತಂಕೊಡಿ, ನಂದೇನ್ ಅಡ್ಡಿಯಿಲ್ಲ." ಅಂತ ಮತ್ತೊಂದ್ ಹೇಳ್ಕೆನ ಕೊಟ್ರಂತೆ. ಅಲ್ಲಿಂದ ಹೊರ್ಗೆ ಬಿಂದ್ಗೆ ನೀರ್ನ ತೊಗೊಂಡ್ ಹೋಗೊದು ನನ್ನ ಜವಾಬ್ದಾರಿ, ಅಂತ ಹೇಳಿದ್ದರು.
ಈ ವ್ಯವಸ್ಥೆ, ಬಹಳದಿನ ನಡೀತು. ಸಮಯದ ಮುಂದೆ ನಾವೆಲ್ಲಾ ಬೊಂಬೆಗಳಲ್ಲವೇ ! ಒಂದು ದಿನ ವೆಂಕಟಲಕ್ಷಮ್ಮನವರು ಹೋಗ್ಬಿಟೃ, ಎಲ್ಲಾರ್ ತರಹ ; ಅವರ ಪರಿವಾರ ಚಿತ್ರದುರ್ಗಕ್ಕೆ ಬದಲಾಯಿಸಿದರು.
’ಹೊಳಲ್ಕೆರೆಯ ಶಾಲಾ ಮಾಸ್ತರುಗಳ ಬಗ್ಗೆ” :
ನನಗೇನಾದರೂ ಹೇಳಲು ಗ್ರಾಸವಿರುವುದೇ ಈ ಕ್ಷೇತ್ರದಲ್ಲಿ. ನನ್ನ ಮೇಷ್ಟ್ರುಗಳನ್ನು ಎರಡು ಭಾಗವಾಗಿ ವಿಂಗಡಿಸಲು ಇಷ್ಟಪಡುತ್ತೇನೆ. ಲಕ್ಕಪ್ಪ ಮೇಷ್ಟ್ರಬಗ್ಗೆ ಬರೆಯದೆ ಇರಲು ಸಾಧ್ಯವೇ ! ನನಗೆ ಈಗಿರುವ ನಾಮಧೇಯವನ್ನು ಸೃಷ್ಟಿಸಿದವರು ಅವರು. ನಮ್ಮಪ್ಪ ನನಗೆ 'ಲಕ್ಷ್ಮೀವೆಂಕಟೇಶ'ನೆಂದು ಹೆಸರಿಟ್ಟಿದ್ದರು. ಮನೆಯಲ್ಲಿ ವೆಂಕಟೇಶ ಎಂದು ಕರೆಯೋರು. ಹೆಚ್ಚಿಗೆ ಸಮಸ್ಯೆಯೇನೂ ಇರಲಿಲ್ಲ.
ಆದ್ರೆ ಸ್ಕೂಲಿನಲ್ಲಿ ನನ್ನ ಹೆಸರು ಕೂಗುವಾಗ ಅಲ್ಲಿನ ಆಗಿನ ನಮ್ಮ ಮುಖ್ಯ ಟೀಚರ್ ಆಗಿದ್ದ ಲಕ್ಕಪ್ಪನವರು, ವೆಂಕ್ಟೇಸ, ಲಕ್ಸ್ಮೀವೆಂಕಟೇಶ ಅಂತ ಅಟೆಂಡೆನ್ಸ್ ರಿಜಿಸ್ಟರ್ ನಲ್ಲಿ ನನ್ನ ಹೆಸರನ್ನು ದಾಖಲಿಸಿದರು. ಈಗ ಕೆಲವು ವರ್ಷಳ ಹಿಂದೆ 'ಮುಂಬೈನ ಮೈಸೂರ್ ಅಸೋಸಿಯೇಷನ್' ಗೆ ಶಿಕ್ಷಣ-ಪ್ರಾಧಿಕಾರದಿಂದ ಡಾ. ಲಕ್ಕಪ್ಪನವರು ಬಂದು ಭಾಷಣಮಾಡಿದ್ದರು. ಅವರ ವಿದ್ವತ್ತು ಭಾಷೆಮೇಲಿನ ಅವರ ಹಿಡಿತ, ಪದಗಳನ್ನು ಬಳಸುವ ತಂತ್ರಗಳು, ಹೇಳುವ ಧಾಟಿ, ಮತ್ತು ಅವರ ನಿಲವುಗಳು ವ್ಯಕ್ತಿತ್ವ ನಮ್ಮನ್ನೆಲ್ಲಾ ಆಕರ್ಶಿಸಿತ್ತು. ಆಗ ನನಗೆ ನನ್ನ ಬಾಲ್ಯದ ಸ್ಕೂಲಿನ ದಿನಗಳ ಲಕ್ಕಪ್ಪಮಾಸ್ತರು ಕಣ್ಣಿನಮುಂದೆ ಬಂದು ಹೋಗಿದ್ದನ್ನು ಅನೇಕಬಾರಿ ಈಗಲೂನೆನಸಿಕೊಳ್ಳುತ್ತೇನೆ. ಅಪ್ಪ, ಮತ್ತು ಅಮ್ಮನನ್ನು ಬಿಟ್ಟು ನನ್ನ ಹೆಸರಿಡಲು ಕಾರಣ ಮತ್ತು ದೇವಾಲಯವಿದ್ದರೆ, ಇಲ್ಲಿದೆ ಎನ್ನುವುದೇ ಕೆಲವರ ಮಾತಿನ ಗ್ರಾಸವಾಗಿತ್ತು. ಯಾವ ದೇವರ ಹೆಸರು ಎಂದು ಕಂಡುಹಿಡಿಯುವುದು ಪರಮ ಕಷ್ಟವಾಗಿತ್ತು. ಆಗಾಗ ರಸ್ತೆಯಲ್ಲಿ ಓಡಾಡುವ ’ಲಕ್ಷ್ಮೀವೆಂಕಟೇಶ್ವರ ಲಾರಿ ಸರ್ವೀಸ್’ ಬಿಟ್ಟರೆ ಬೇರೆಲ್ಲೂ ಈ ಹೆಸರಿನ ವ್ಯಕ್ತಿಯಾಗಲೀ ಜಾಹಿರಾತನ್ನಾಗಲೀ ನಾನು ಹಲವು ದಶಕಗಳ ಕಾಲ ಕಾಣಲಿಲ್ಲವೆಂದು ವಿಶಾದದಿಂದ ಹೇಳಬೇಕಾಗಿದೆ. ಕೊನೆಗೆ ಇದರ ’ರಾಝ್’ ಬಯಲಾಗಿದ್ದು, ಮೊನ್ನೆ, ಅಂದರೆ, ೨,೦೧೦ ರಲ್ಲಿ ನಾನು ಉಡುಪಿಗೆ ಹೋಗಿದ್ದಾಗ ಅಲ್ಲಿನ ದೇವಾಲಯಗಳ ಹೆಸರುಗಳನ್ನು ಕೇಳುತ್ತಾ ಹೋದಾಗ, ಉತ್ತರಕನ್ನಡ ಜಿಲ್ಲೆಯ ಹೆಸರು ಬೆಳಕಿಗೆ ಬಂತು. ಅದು ಎಲ್ಲರಿಗೂ ತಿಳಿದಿತ್ತು. ಆದರೆ ಮೂಢಮತಿಯಾದ ನನಗೆ ಗೋಚರಿಸಿದ್ದು ಆಗಲೇ ! ಬೊಂಬಾಯಿನಲ್ಲಿ ಕೆಲಸಮಾಡುತ್ತಿದ್ದಾಗ, ನನ್ನ ಹೆಸರು ಕೇಳಿದ ತಮಿಳರೂ ಸಹಿತ ಲಕ್ಷ್ಮೀನಾರಾಯಣ, ಲಕ್ಷ್ಮೀ ನರಸಿಂಹ ಕೇಳಿದ್ದೆವು. ಆದರೆ ಇದು ಸ್ವಲ್ಪ ಹೊಸಹೆಸರು ಎನ್ನುವಂತೆ ತಲೆಹಾಕುತ್ತಿದ್ದರು. ನಮ್ಮಪ್ಪನವರು ಅದ್ಯಾಕೆ ಇಂತಹ ಹೆಸರನ್ನು ನನಗೆ ಇಟ್ಟರೋ ಆ ಜಗನ್ನಿಯಾಮಕನ ಆನುಜ್ಞೆಯಂತೆ ಆಗಿರಬೇಕು. ಒಮ್ಮೊಮ್ಮೆ ಲಕ್ಷದಲಿ ಒಬ್ಬರಿರಬಹುದೇನೊ ಎನ್ನುವಷ್ಟು ವಿಶೇಷ ನಾಮಧೇಯವೆನ್ನುವುದು ನಿಧಾನವಾಗಿ ತಿಳಿಯುತ್ತಾ ಹೋಯಿತು. ನಮ್ಮ ಮನೆಹುಡುಕಲು ಹೆಚ್ಚು ಕಷ್ಟವಾಗಲಿಕ್ಕಿಲ್ಲ. ಯಾಕೆಂದರೆ ಆ ಹೆಸರಿನ ಒಬ್ಬ ವ್ಯಕ್ತಿಯೂ ಈ ಕಾಲೊನಿಯಲ್ಲಿಲ್ಲವಲ್ಲ ಎಂದು ನಗೆಯಾಡಿದರು ಅಂಚೆ ಪೇದೆಗಳು !
’ಇಂಟರ್ ನೆಟ್’ ಬಳಸಲು ಕಲಿತಾಗಿನಿಂದ ನಾನು ಈ ಹೆಸರನ್ನು ಸೈಟ್ ಗಳಲ್ಲಿ ಸರ್ಫ್ ಮಾಡಿ, ನನ್ನ ಹೆಸರಿನ ರಹಸ್ಯವನ್ನು ಪತ್ತೆಹಚ್ಚಿದ್ದೇನೆ. ಉತ್ತರ ಕನ್ನಡ ಜಿಲ್ಲೆಯ ಒಂದು ದೇವಸ್ಥಾನದ ಆರಾಧ್ಯದೇವತೆಯ ಹೆಸರು-’ಲಕ್ಷ್ಮೀ ವೆಂಕಟೇಶ ದೇವಾಲಯ’. ಇದೆ ತರಹದ ಮತ್ತೊಂದು ದೇವಾಲಯ ’ಜನಾರ್ಧನ, ಕಾಳಮ್ಮ’. ಇದೂ ನಮಗೆ ಹೊಸದು ನಿಮಗೇನಾದರೂ ತಿಳಿದಲ್ಲಿ ಬರೆಯಿರಿ.
’ಎಂದಿಗೂ ಮರೆಯಲಾರದ ನಮ್ಮ ಕ್ಷೇತ್ರ ಪಾಲಯ್ಯ ಮೇಷ್ಟ್ರು”:
ಇವರು ಹೊಳಲ್ಕೆರೆಯಲ್ಲಿ ನಮ್ಮ ಮನೆಯ ಹತ್ತಿರವೇ ಬೂದಿಹಾಳು ರಾಮಣ್ಣನವರ ಮನೆಯ ಹತ್ತಿರ ವಾಸವಾಗಿದ್ದರು. ಅವರ ಮನೆಯ ಮುಂದಿನ ದೊಡ್ಡ ಭಾವಿ ಸಾರ್ವಜನಿಕರಿಗೆ ನೀರಿನ ವ್ಯವಸ್ಥೆಮಾಡುವ ಒಂದು ಘಟಕವಾಗಿತ್ತು. ಅವರಿಗೆ ತಮ್ಮಂದಿರಿದ್ದರು. ಅವರೆಲ್ಲಾ ಹೊಳಲ್ಕೆರೆ ಹೈಸ್ಕೂಲಿನ ಹಿಂಭಾಗದಲ್ಲಿರುವ ತೋಟದ ಮನೆಯಲ್ಲಿ ವಾಸಿಸುತ್ತಿದ್ದರು. ಅವರ ಮಕ್ಕಳು ಶಾಲೆಗೆ ಹೋಗಲು ಮಾತ್ರ ಹೊಳಲ್ಕೆರೆ ಟೌನ್ ಗೆ ಬರುತ್ತಾರೆ. ಅಣ್ಣನಾಗಿ ಕ್ಷೇತ್ರ ಪಾಲಯ್ಯನವರು, ಸ್ವಲ್ಪ ಗಡುಸಾಗಿಯೇ ವರ್ತಿಸುತ್ತಿದ್ದರು. ಆದರೆ, ಶಾಲೆಯ ಹುಡುಗರಿಗೆ ಅವರು ಭಾರಿ ಯಮರಾಜನಂತೆ ತೋರಿದ್ದರು ಅಂದರೆ ಆಶ್ಚರ್ಯವೇನಿಲ್ಲ. ನಾನೂ ಅದೇ ವರ್ಗದಲ್ಲಿದ್ದೆನಲ್ಲ. ಹಾಗೆ ನನಗೂ ಪರಿಚಯವಾಗಿದೆ. ’ಹೋಂ ವರ್ಕ್’ ಮಾಡದಿರುವರನ್ನು ಖಡಾಖಂಡಿತವಾಗಿ ಮಣೆಯಮೇಲೆ ನಿಲ್ಲಿಸುತ್ತಿದ್ದರು. ಒಮ್ಮೆಮ್ಮೆ ಕಠಿಣ ಸಜವೆಂದರೆ ಒಂದುಕಾಲಿನ ಮೇಲೆ ನಿಲ್ಲಿಸುವುದು. ’ಕಪ್ಪೆತರಹ ಕೂಡಿಸಿ ಬೆನ್ನಿನ ಮೇಲೆ ಗುದ್ದುವುದು, ಇಲ್ಲವೇ ಬಾರಿಸುವುದು’, ಇತ್ಯಾದಿ ಶಿಕ್ಷೆಗಳು ಕೈದಿಯ ಸಜದ ಮಟ್ಟವನ್ನು ಹೇಳುತ್ತವೆ. ಇಂದಿನ ದಿನಗಳಲ್ಲಿ ಅವನ್ನು ನೆನೆಸಿಕೊಳ್ಳುವುದು ಎಷ್ಟು ಅಸಮಂಜಸವೆಂಬುವುದು ನನಗೆ ತಿಳಿದಿದೆ. ಈ ಶಿಕ್ಷೆಗಳು ಅವರ ಬೈಗುಳ ಶಿಕ್ಷೆಗೆ ಹೋಲಿಸಿದರೆ ಏನೇನೂ ಅಲ್ಲ. ಮುಂ...ಮಗನೆ, ರಂ.ಮಗನೆ, ನಿನ್ ಮನೆ ಹಾಳ್....ಇತ್ಯಾದಿ ಇತ್ಯಾದಿಗಳು. ಅದೂ ಹಲ್ಲನ್ನು ಕಚ್ಚಿ, ಅತಿ ವೇದನೆತುಂಬಿದ ಭಾವನೆಗಳನ್ನು ಜೊತೆಮಾಡಿಕೊಂಡು ದೊಡ್ಡ ದನಿಯಲ್ಲಿ ಪಕ್ಕದ ವರ್ಗಕ್ಕೂ ಕೇಳಿಸುವಂತ ಕೂಗುತ್ತಿದ್ದದ್ದು (ಅರಚು) ಅವರ ಸ್ವಭಾವ. ಇದರಿಂದ ಮುಕ್ತಿಸಿಗಬೇಕೆನ್ನುವವರಿಗೆ ಶತಾಯ ಗತಾಯ ಹೋಂವರ್ಕ್ ಮಾಡದೆ ವಿಧಿಯಿರಲಿಲ್ಲ. ನಾವೆಲ್ಲಾ ಅದರಲ್ಲಿ ’ಮಾಹಿರ’ ರಾದ್ದರಿಂದ ಆ ಶಿಕ್ಷೆಗೆ ನಾವೆಂದೂ ಗುರಿಯಾದವರಲ್ಲ !
ಒಟ್ಟಿನಲ್ಲಿ ಕ್ಷೇತ್ರಪಾಪಾಲಯ್ಯನವರ ಮುಖ್ಯೋದ್ಧೇಶ ಮಕ್ಕಳು ಚೆನ್ನಾಗಿ ಕಲಿತು ಮುಂದುಬರಲಿ ಎಂದು. ಆದರೆ ಅವರಿಗೆ ಅದನ್ನು ಹೇಳಿಕೊಡುವ ಮಾರ್ಗ ತಿಳಿದಿರಲಿಲ್ಲ. ಟೀಚರ್ಸ್ ಟ್ರೇನಿಂಗ್ ಮುಂತಾದವುಗಳು ಶುರುವಾಗಿದ್ದು ನಂತರವೇ ! ಬಹುಶಃ ಅವರ ಮಗನೊಬ್ಬನ ಅಕಾಲಿಕ ಮರಣದಿಂದಾಗಿ ಅವರ ಮಾನಸಿಕ ಅಶಾಂತಿಯಿಂದಾಗಿ ಅವರು ಹಾಗೆ ಎಲ್ಲರೊಡನೆ ನಡೆದುಕೊಳ್ಳುವರೆಂದು. ಇರಬಹುದು. ಇದರ ಬಗ್ಗೆ, ಹೆಚ್ಚಿಗೆ ಗೊತ್ತಿಲ್ಲ. (ಸ್ವಲ್ಪ ತಿಂಗಳು ವೆಂಕಟಲಕ್ಷಮ್ಮನವರ ಅತ್ತೆ ಮಾವ ನಮ್ಮ ವಠಾರದಲ್ಲಿ ಬಾಡಿಗೆಗೆ ಇದೃ ; ನರಸಿಂಗರಾಯೃ ಪದ್ಮಾವತಮ್ಮ ಅಂತ). ಅವರು ಬಿಟ್ಟಮೇಲೆ ಅದೇ ಮನೇಲಿ ಪುಟ್ಟ ಲಕ್ಷಮ್ಮ, ನಂತ್ರ ಪೋಸ್ಟ್ ಮನ್, ರಾಜಗೋಪಾಲ್ ಬಾಡಿಗೆಗೆ ಬಂದೃ. ರಾಜಗೋಪಾಲ್ ಬಹುಶ ತಮಿಳು ಅಯ್ಯಂಗಾರ್ ಇದ್ದಿರಬಹುದು. ಅವರ ಹೆಂಡತಿ ಹೊಸದಾಗಿ ಮದುವೆಯಾಗಿ ಬಂದವರು, ನಮ್ಮನಹತ್ತಿರ ಕೆಲಸ ಕಲಿತುಕೊಳ್ಳುವ ನೆಪದಲ್ಲಿ ಬರೊರು. ಸುಮಾರು ಒಂದು ವರ್ಷದಲ್ಲಿ ಅವರು ಬೆಂಗಳೂರಿಗೆ ಹೋದಾಗ ತೀರ್ಕೊಂಡೃ ಅಂತ ನಮಗೆ ತಿಳೀತು. ರಾಮಕೃಷ್ಣನ ಹತ್ತಿರ ಕೆಲಸ ಮಾಡ್ತಿದೃ ; ಅವನೇ ಬೇಕಾದ ಸಹಾಯ ಮಾಡಿರಬೇಕು. ಇದು ಸ್ವಲ್ಪ ನಮಗೆ ಬೇಸರತಂದಿತು. ಸತಿ-ಪತಿಯರು, ನಮ್ಮಗಳ ಹತ್ತಿರ ಚೆನ್ನಾಗಿ ಹೊಂದಿಕೊಂಡು ಇದ್ದರು. ರಾಮುವಿನ ಮೇಷ್ಟ್ರು, ಯೇಳುಕೋಟಿರಾಯರು ಬಂದರು. ಅವರು ಹಿಂದಿ ಹೇಳಿಕೊಡುತ್ತಿದ್ದರು. ಅವರಿಗೆ ನೀರಿನ ಸಹಾಯಮಾಡುತ್ತಾ ನಮ್ಮ ರಾಮಣ್ಣ, ಹಿಂದಿ ಭಾಷೆಕಲಿತು ಹೈಸ್ಕೂಲ್ ನಲ್ಲಿ ಹಿಂದಿ ಪಂಡಿತರಾದರು.. ಕನ್ನಡ ಪಂಡಿತ್, ನರಸಿಂಹ ಶಾಸ್ತ್ರಿಗಳು, ಹೊಂಡದ ಹತ್ತಿರ ಹನುಮಂತಾಚಾರ್ ರವರ ಮನೆಗೆ ಹತ್ತಿರದಲಿ ಇದ್ದರು. ಅವರ ಪರಿವಾರದ ಬಗೆ ಹೊತ್ತಿಲ್ಲ. ಅತಿಯಾಗಿ ಸಂವೇದನಾ ಶೀಲ ವ್ಯಕ್ತಿ. ಯಾರಹತ್ತಿರವೂ ಹೆಚ್ಚಿಗೆ ಸಂಪರ್ಕವಿಲ್ಲದೆ ತಾವಾಯಿತು ತಮ್ಮ ಮನೆಯಾಯಿತು, ಅನ್ನುವ ಮನೋಭಾವದವರು. ಅವರೊಬ್ಬ ನಿಜವಾದ ಕನ್ನಡಾ ಪಂಡಿತರು. ಅವರ ಕ್ಲಾಸಿ ಯಾರೂ ತಪ್ಪಿಸಿಕೊಳ್ಳುತ್ತಿರಲಿಲ್ಲ. ಪಾಠವನ್ನು ಅತ್ಯಂತ ಶ್ರದ್ಧೆಗಳಿದ ಮಾಡುತ್ತಿದ್ದರು. ಕನ್ನಡ ಭಾಷೆಯ ಸೊಗಡನ್ನು ಅರಿಯಲು ಅವರ ಪಾಠಕ್ರಮ ನಮಗೆ ನೆರವಾಯಿತು ಮತ್ತೊಬ್ಬ ಪ್ರತಿಭಾನ್ವಿತ ಟೀಚರ್ ಸುಬ್ಬರಾಯರು, ಸ್ವಲ್ಪ ದಪ್ಪದಪ್ಪಗೆ ಗುಂಡುಗುಂಡಾಗಿದ್ದರು. ಶಾರೀರ ಚೆನ್ನಾಗಿತ್ತು. ಪಾಠಚೆನ್ನಾಗಿಮಾಡುತ್ತಿದ್ದರು. ಅವರು ನಮಗೆ ಭೂಗೋಳಕ್ಕೆ ಬರುತ್ತಿದ್ದರು. ಅನಂತರಾಮಯ್ಯನವರು, ಸ್ವಲ್ಪ ನಮಗೆ ವಿಚಿತ್ರವಾಗಿ ಕಾಣೋರು. ಆದರೆ ತುಂಬಾಚೆನ್ನಾಗಿ ತಿಳಿದುಕೊಂಡಿದ್ದರು. ಕಣ್ಣುಮಿಟಿಗಿಸುವುದು ಅವರಿಗೆ ರೂಢಿಯಾಗಿತು. ಒಮ್ಮೆ ಯಾರಾದರೂ ಒಬ್ಬ ಹುಡುಗನನ್ನು ಮೇಲೆದ್ದು ಉತ್ತರಕೊಡೆಂದು ಕೇಳಿ ಅದಾದನಂತ ಕುಳಿತುಕೊ ಎಂದು ಹೇಳುವುದನ್ನು ಮರೆಯುತ್ತಿದ್ದರು. ಕೊನೆಯವರೆಗೆ ನಿಂತೇ ಇರುತ್ತಿದ್ದರು. ಆಮೇಲೆ ಯಾಕಯ್ಯ ನಿಂತಿದಿ ಕೂತ್ಕೊ ಅನ್ನೊರು. ಹುಡುಗರು ನೋಟ್ಸ್ ಕೊಡಿ ಸಾರ್, ಅನ್ನೊರು. ನೀವೆ ಬರ್ಕೊಂಡ್ ಬಂದು ತೋರ್ಸಿ ,ಅನ್ನೊದು ಅವರ ಸ್ಟೈಲ್ ಆಗಿತ್ತು. ಹಿಂದಿ ಪಂಡಿತೃ, ರಾಮಚಂದ್ರರಾವ್, ನಮ್ಮಣ್ಣಾನೆ. ಚೆನ್ನಾಗಿ ಮಾಡೋರು. ತುಂಬಾ ಕಟ್ತುನಿಟ್ತು. ಹೋಂವರ್ಕ್ ಕೊಟ್ಟರೆ ಮಾಡೊವರೆಗು ಬಿಡ್ತಿರ್ಲಿಲ್ಲ. ಆತೇನಪ್ಪ, ಏನ್ ಬರ್ದಿದಿಯ ಜೋರಾಗ್ ಓದು ಅನ್ನೊರು. ಸರಿ ಕೂತ್ಕೊ. ತಾವೇ ಚೆನ್ನಾಗಿ ಮನದಟ್ಟಾಗೊ ರೀತಿ ಬೋಧಸ್ತಿದೃ. ಅವರಿಂದ ಬೊಂಬಾಯಿಗೆ ಬಂದಮೇಲೆ ನನಗೂ ಮತ್ತು ನನ್ನ ಹೆಂಡಾತಿಗೂ ಹಿಂದಿ ಮಾತಾಡಲು ನಮಗೆ ತೊಂದರೆಯೇ ಆಗಲಿಲ್ಲ. ’ಡ್ರಿಲ್ ಟೀಚರ್ ಶಾಬುದ್ದಿನ್”, ಚಿತ್ರದುರ್ಗದಿಂದ ಬರೊರು. ಒಳ್ಳೆ ಮನುಷ್ಯ. ಯಾರಿಗೂ ಶಿಕ್ಷೆಯಿಲ್ಲ. ಕನ್ನಡ ಚೆನ್ನಾಗಿ ಬರ್ತಿತ್ತು. ಡೆಬಲಪ್ ಡೆಬಲಪ್, ಅವರ ಮೆಚ್ಚಿನ ಸ್ಲೋಗನ್. ಅದೇ ದಿನ ಸಾಯಂಕಾಲ ದುರ್ಗಕ್ಕೆ ವಾಪಸ್ಸಾಗುತ್ತಿದರು.
ಎನ್. ಡಿ. ಕೃಷ್ಣನ್, ಜೀವಶಾಸ್ತ್ರ ಪಾಠ ಮಾಡೋರು. ಸ್ವಲ್ಪ ವ್ಯಂಗ್ಯಭರಿತ ಮತ್ತು ತಮಾಷೆ ಮಾಡೊ ಸ್ವಭಾವ ಅವರದು. ಮನೆಯಲ್ಲಿ ಟ್ಯೂಷನ್ ತುಂಬಾ ಕೊಡೊರು. ಮನೆತುಂಬಾ ಹುಡುಗರು. ಆದರೆ ಆರೋಗ್ಯ ಸರಿಯಿಲ್ಲದೆ ಆ ಹಣವನ್ನೆಲ್ಲಾ ಡಾಕ್ಟರ್ ಬಿಲ್ಲುಕೊಡಲು ವಿನಿಯೋಗಿಸುತ್ತಿದ್ದರು. ಅವರ ಅಣ್ಣನ ಮಗ ಒಬ್ಬ ಶ್ರೀವಿವಾಸನ್, ಬೆಂಗಳೂರಿನಲ್ಲಿ ನಾನು ಓದುತ್ತಿದ್ದಾಗ, ನನ್ನ ಕ್ಲಾಸ್ ಮೇಟ್ ಆಗಿದೃ. 'ಎನ್. ಡಿ. ಜಗನ್ನಾಥ', ಅವರ ತಮ್ಮ. ಕೊಳಲು ಚೆನ್ನಾಗಿ ನುಡಿಸೊರು. ಕರ್ನಾಟಕ ಸಂಗೀತವನ್ನು ಹಾಡುತ್ತಿದ್ದರು. ನಮಗೆ ಕರ್ನಾಟಕ ಸಂಗೀತದ ಅರಿವಾಗಿದ್ದೇ ಅವರಿಂದ. ಶಾಸ್ತ್ರೀಯಸಂಗೀತ ಅದುವರೆಗೆ ನಾನು ಕೇಳೇ ಇರಲಿಲ್ಲ. ಒಮ್ಮೆ ನಮ್ಮ ಹೊಳಲ್ಕೆರೆ ಹೈಸ್ಕೂಲ್ ನಿಂದ, ’ಹಂಪೆ”ಮುಂತಾದ ಊರುಗಳಿಗೆ ಪಿಕ್ನಿಕ್ ಹೋಗಲು ಹುಡುಗರಿಗೆ ಕರೆಕೊಟ್ಟರು. ಹಣ ೧೫-೨೦ ರೂಪಾಯಿ ಆಗಬಹುದು. ಉಳಿದ ಹಣವನ್ನು ವಾಪಸ್ ಕೊಡುತ್ತೇವೆ ಎಂದು ಹೇಳಿದರು. ಆದರೆ ನನ್ನ ಹತ್ತಿರ ಅಷ್ಟು ಕೊಡಲು ಹಣವಿರಲಿಲ್ಲ. ಸೂಕ್ಷ್ಮವಾಗಿ ಅಮ್ಮನಿಗೆ ಹೇಳಿದಾಗ ಅದು ಸಾಧ್ಯವೇ ಅಷ್ಟೊಂದು ಹಣ ನನ್ನಹತ್ತಿರವೆಲ್ಲಿ ಬರಬೇಕು. ನಾಗರಾಜನನ್ನು ಕೇಳುತ್ತೇನೆ ಎಂದಿದ್ದರು. ಆಗ ನಾಗರಾಜ ಪಿಕ್ನಿಕ್ಕೂ ಬೇಡ ಏನೂಬೇಡ ಈ ಸರ್ತಿ ಪಬ್ಲಿಕ್ ಪರೀಕ್ಷೆ ಇದೆ. ಚೆನ್ನಾಗ್ ಓದಕ್ಕೇಳು ಅವನಿಗೆ ಅಂದಾಗ ನಾನು ಸುಮ್ಮನಾದೆ. ಹುಡುಗರೆಲ್ಲಾ ಪಿಕ್ನಿಕ್ ನಂತರ ಹೋದ ಕಡೆಯ ವರ್ಣನೆ ಮಾಡಿದಾಗ, ಬಾಯಿಬಿಟ್ಟು ಕೇಳುವುದೊದು ಬಿಟ್ಟರೆ, ನನಗೆ ಏನೂ ಗೊತ್ತಾಗಲಿಲ್ಲ. ’ಹೌದು, ನಾನು ಎಸ್. ಎಸ್. ಎಲ್.ಸಿಯಲ್ಲಿ ಚೆನ್ನಾಗಿ ಅಂಕಗಳನ್ನು ಗಳಿಸಿದರೆ ಮಾತ್ರ ಜೀವನದಲ್ಲಿ ಏನಾದರೂ ಸಾಧಿಸಬಲ್ಲೆ. ಇಲ್ಲವಾದರೆ ಎಲ್ಲವೂ "ಶೂನ್ಯ "ವೆಂಬುದು ನನ್ನ ಮನಸ್ಸಿನಲ್ಲಿ ನಾಟಿತು’.
ಕೇರಂ, ಹಾಗೂ ಚೈನಬೋರ್ಡ್ :
ಸ್ವತಃ ಟೀಚರ್ ಆಗಿದ್ದ ಗೋಪಾಲರಾವ್ ಮೇಷ್ಟ್ರು, ಮನೆಗೆ ಆಗಾಗ ಕೇರಂ ಚೈನಬೋರ್ಡ್ ತರೋರು. ಆಗ ನಾವು ಅವರಮನೆಗೆ ಹೋಗಿ ಆಡ್ತಿದ್ವಿ. ಒಣ್ದು ಕೇರಂಬೋರ್ಡ್ ಮನೆಗೆ ಕೊಂಡು ತರಬಹುದಾಗಿತ್ತು. ನಮಗೆ ಹೇಳಲು ಧರ್ಯವಿಲ್ಲ. ಅಪ್ಪ ಯಾಕೊ ಇಂತಹ ಕಡೆ ಗಮನ ಕೊಡುತ್ತಿರಲಿಲ್ಲ. ಅಮ್ಮ ಒದಿ ಮುಂದೆ ಬನ್ನಿ ಆಮೇಲೆ ಇವನ್ನೆಲ್ಲಾ ಕೊಳ್ಳುವುದೇನೂ ಕಷ್ಟವಿಲ್ಲವೆನ್ನುವ ಮಾತನ್ನು ಪದೇ ಪದೇ ಹೇಳುತ್ತಿದ್ದಳು ಹೊಳಲ್ಕೆರೆಯಲ್ಲಿ ಕೆಲಸದವರು ಸಿಗುವುದು ಬಹಳ ಕಷ್ಟ. ಸಿಕ್ಕರೂ ಅಮ್ಮ ಆ ಸುಟ್ಟ ಪಾತ್ರೆನ ನಾವು ತೊಳ್ಯಲ್ಲಾ ಕಂಡ್ರವ್ವ, ಅನ್ನೊರು. ಊರಿನಲ್ಲಿ ಮನೆ-ಕೆಲಸಕ್ಕೆ ಹೆಣ್ಣುಮಕ್ಕಳು ಬರುತ್ತಿರಲಿಲ್ಲ. ಬಂದರೂ ಬಿಟ್ಟು ಹೋಗುತ್ತಿದ್ದರು. ಅವರೆಲ್ಲ ಮುಖ್ಯ ಕಸುಬು ಬೇಸಾಯ. ಬಿಡುವಿದ್ದಾಗ ನಾಲ್ಕುಕಾಸು ದುದಿಯಲು ಮಾತ್ರ ಬರುತ್ತಿದ್ದರು. ಅಮ್ಮನೆ ಮನೆಯ ಪಾತ್ರೆಗಳನ್ನೆಲ್ಲಾ ತಾನೇ ತೊಳೆಯುತ್ತಿದ್ದಳು ಅವಳು ಹೊರಗಾದಾಗ ಅಪ್ಪ ಮಾಡೊರು. ನಾವು ಸ್ವಲ್ಪ ಸಹಕರಿಸುತ್ತಿದ್ದೆವು. ಹಿತ್ತಲಿನಲ್ಲಿ ಒಮ್ಮೆ ಅಮ್ಮ ಪಾತ್ರೆತೊಳೆಯುತ್ತಿರುವಾಗ, " ಅಧ್ಯಾಗ್ ಅವ್ರೆಲ್ಲಾ ರ್ಯಾಂಕ್ ಬರ್ತಾರೊಪ್ಪ. ನನಗಂತೂ ಗೊತ್ತಾಗಲ್ಲ." "ಅವರಮ್ಮ ಅಪ್ಪ ಅದೇನ್ ಪುಣ್ಯ ಮಾಡಿದಾರೊ," ಅಂತ ಹೆಳೋರು. ನಮ್ಮ ದೂರದ ದಾಯಾದಿಗಳ ಪೈಕಿ, ಒಬ್ಬ ಹುಡುಗ, ಎಸ್. ಎಸ್.ಎಲ್. ಸಿಯಲ್ಲಿ ಪ್ರಥಮ ರ್ಯಾಂಕ್ ಬಂದನೆಂದು ನಾವೆಲ್ಲಾ ಪಾಪರ್ ಓದಿ ತಿಳಿದುಕೊಂಡೆವು. ಚಿತ್ರದುರ್ಗದ ಪ್ರತಿಯೊಬ್ಬರ ಬಾಯಿನಲ್ಲೂ ತಿಂಗಳುಗಟ್ಟಲೆ ಅದೇ ಸಮಾಚಾರ. ಅಮ್ಮನೂ ಅದನ್ನೆ ನೆನೆಸಿಕೊಂಡು, ಎಂದಾದರೂ ನಮ್ಮಮಕ್ಕಳೇನಾದರು ಆ ಸಂಭ್ರಮವನ್ನು ತಂದುಕೊಡುವರೆ ಎಂದಾಗ, ಅಲ್ಲೇ ಆಟವಾಡುತ್ತಿದ ನನ್ನ ತಮ್ಮ ಚಂದ್ರ, ಬಿಡಮ್ಮ ನಾನ್ ಆ ತರಹ ರ್ಯಾಂಕ್ ಬಂದು ನಿನಗೆ ತೋರಿಸ್ತೀನಿ, ಯಾಕ್ ಒದ್ದಾಡ್ತಿ ಎಂದಿದ್ದು ನನ್ನ ಕಿವಿಗಳಲ್ಲಿ ಘೋಶಿಸುತ್ತಿತ್ತು. "ಸರಿಹೋಯ್ತು, ನಿಮಗೆಲ್ಲಾ ಅವೆಲ್ಲಾ ಸಧ್ಯವೇ" "ಅದ್ ಹ್ಯಾಗ್ ಓದ್ತೀರೊ, ಏನಾಗ್ತೀರೊ ದೇವ್ರಿಗೇ ಗೊತ್ತು." "ಇವರೇನೂ ಅವವೆಲ್ಲಾ ತಲೆಗೆ ಹಾಕ್ಕೊತಿಲ್ಲ," ಅಂತ ಅಪ್ಪನ ಬಗ್ಗೆ ಪೇಚಾಡ್ಕೊಳ್ಳೋಳು !
ನಮ್ಮ ಊರಿನಲ್ಲಿ ಹೆಚ್ಚು ಪ್ರಚಲಿತದಲ್ಲಿದ್ದ ದಿನ ಪತ್ರಿಕೆ :
ಕೆಲವು ವರ್ಷಗಳಲ್ಲಿ ಅಮ್ಮನ ಕನಸು ನನಸಾಗುವ ದಿನ ಬಂತು.’ಸಂಯುಕ್ತ ಕರ್ನಾಟಕ ಪೇಪರ್ ನ” ಮೊದಲನೆಯ ಪುಟದಲ್ಲೇ ಚಂದ್ರನ ಫೋಟೊ ಪ್ರಕಟವಾಗಿ, ’ ಹೊಳಲ್ಕೆರೆಗ ಪ್ರಥಮ ಸ್ಥಾನವೆಂಬ ಶೀರ್ಷಿಕೆ ಬಂದಿತ್ತು. ಚಂದ್ರನ ಭಾವಚಿತ್ರ, ಹಾಗೂ ಅವನ ಪೂರ್ವೋತ್ತರಗಳ ಬಗ್ಗೆ ಬಹುದೊಡ್ಡ ಲೇಖನ ಪ್ರಕಟವಾಗಿತ್ತು. ಊರಿನ ಜನರೆಲ್ಲಾ ಹರ್ಷೋದ್ಗಾರದಿಂದ ಹುಚ್ಚರಾಗಿ ಕುಣಿದಿದ್ದರು. ಚಂದ್ರ ತನ್ನ ಕಠಿಣ ಪರಿಶ್ರಮ, ಶ್ರದ್ಧೆ ಮತ್ತು ಆದರ್ಶಗಳಿಂದ ಈ ಪರಿಕ್ರಮವನ್ನು ಸಾಧಿಸಿದ್ದ. ಅಮ್ಮನನ್ನು ಹಿಡಿಯಲು ಸಾಧ್ಯವಾಗದಷ್ಟು ಸಂತೋಷಪಟ್ಟಿದ್ದಳು. ಅಮ್ಮನ ಬಾಯಿನಲ್ಲಿ ಚಂದ್ರ, " ಚಂದ್ರಣ್ಣ "ನಾಗಿದ್ದ ! ಅಂದಿನಿಂದ ನಮ್ಮ ಮನೆಯ ಹಿರಿ-ಕಿರಿಯರೂ ಚಂದ್ರನನ್ನು 'ಚಂದ್ರಣ್ಣ'ನೆಂದೇ ಕೂಗೋರು. ನಮ್ಮಪ್ಪ ಇದ್ದಿದ್ದರೆ, ಅದೇನ್ ಸಂತೋಷ ಪಡ್ತಿದ್ರೋ ! ಹಿಂದೆ, ರಾಮಕೃಷ್ಣ ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾದಾಗ, ಅಪ್ಪ ಮನೆಗೆ ಓಡಿಬಂದು ಅಮ್ಮನಿಗೆ ಮತ್ತು ನಾಗರಾಜನಿಗೆ, ನಮಗೆ ವಿಷಯ ಹೇಳಿ, ಸಂಭ್ರಮಿಸಿದ್ದರು. ಆ ದಿನಗಳಲ್ಲಿ ಪರೀಕ್ಷೆಗಳ ಫಲಿತಾಂಶಗಳು ದೈನಿಕ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದವು.
ಒಂದು ವಿಷಾದದ ಸಂಗತಿಯೆಂದರೆ, ದಿನಪತ್ರಿಕೆಯ ಫಲಿತಾಂಶ ಬಂದ ದಿನವೇ ಏನಿಲ್ಲ ಅಂದರೂ ೨-೩ ಆತ್ಮ ಹತ್ಯೆಯ ಪ್ರಕರಣಗಳು ಪ್ರಕಟವಾಗುತ್ತಿದ್ದವು. ಆದರೆ ಅಚಾತುರ್ಯದಿಂದ ತಪ್ಪು ಮಾಹಿತಿ ಪ್ರಕಟವಾಗಿ ಮಾರನೆದಿನ 'ತಪ್ಪೊಪ್ಪಿಗೆ' ಪ್ರಕಟವಾಗುವ ಹೊತ್ತಿಗಾಗಲೇ ಪರಲೋಕ ಸೇರಿದ ವರದಿಗಳು ನಮ್ಮನ್ನು ಕಂಗೆಡಿಸುತ್ತಿದ್ದವು !