ಮಹಾ ದಾರ್ಶನಿಕ ಆದಿಗುರು ಶ್ರೀಶಂಕರಾಚಾರ್ಯರು
ಕೇರಳದ ಕಾಲಟಿ (ಕಾಲಡಿ) ಎಂಬಲ್ಲಿ ಕ್ರಿ.ಶ.೭೮೮ರಲ್ಲಿ, ವೈಶಾಖ ಶುದ್ಧ ಪಂಚಮಿಯಂದು ಶಿವಗುರು ಮತ್ತು ಆರ್ಯಾಂಬೆ ದಂಪತಿಗಳಿಗೆ ಜನಿಸಿದ ಮಹಾನ್ ದಿವ್ಯ ಚೇತನ *ಶ್ರೀ ಆದಿ ಶಂಕರಾಚಾರ್ಯರು*. ಸಣ್ಣವರಿರುವಾಗ ತಂದೆಯನ್ನು ಕಳಕೊಂಡರು. ಅಮ್ಮನೇ ಸರ್ವಸ್ವವೂ ಅವರಿಗೆ. ತಮ್ಮ ಅದ್ಭುತ ಪ್ರತಿಭೆ, ಅಮೋಘ ಜ್ಞಾನ, ತಿಳುವಳಿಕೆಯಿಂದಾಗಿ ತನ್ನ ೮ ನೇ ವಯಸ್ಸಿಗೆ ಓಂಕಾರೇಶ್ವರದಲ್ಲಿ ಗೌಡಪಾದರ ಶಿಷ್ಯರಾದ ಗೋವಿಂದ ಭಗವತ್ಪಾದರಿಂದ ಸನ್ಯಾಸ ಸ್ವೀಕಾರ ಮಾಡಿದರು.ಎಲ್ಲವೂ ಸಾಕ್ಷಾತ್ ಪರಶಿವನೇ ಎಂದು ಪ್ರತಿಪಾದಿಸಿದವರು.
*ಜಗತ್ ಮಿಥ್ಯಾ ಬ್ರಹ್ಮ್ಯೆವ ಸತ್ಯಂ ಸಂದೇಶ* ಎಂದವರು. ಉಪನಿಷತ್, ಭಗವದ್ಗೀತೆ, ಬ್ರಹ್ಮಸೂತ್ರ ಇದಕ್ಕೆ ಭಾಷ್ಯವನ್ನು ಬರೆದವರು. ದಾರ್ಶನಿಕರೂ, ಲೋಕಕ್ಕೆ ಅರ್ಥವತ್ತಾದ ಧಾರ್ಮಿಕ ತತ್ವ ಚಿಂತನೆಗಳನ್ನು, ನೀಡಿದ ಮಹಾನುಭಾವರು. ಧರ್ಮ ಜಾಗೃತಿ ಮೂಡಿಸಿದವರು. ಸಮಾಜ ಸುಧಾರಕರು, ಮಹಾಸಂತರು, ಅನುಭವಿಗಳು, ಹಿಂದೂಧರ್ಮದ ಮುಕುಟ ಪ್ರಾಯರು, ಜೊತೆಗೆ ಅನ್ಯಧರ್ಮಕ್ಕೂ ನ್ಯಾಯ ಒದಗಿಸಿದವರು, ಜ್ಞಾನಿ, ಸಂಘಟಕರು. ನಾಲ್ಕು ವೇದಗಳನ್ನು ಕರಗತ ಮಾಡಿಕೊಂಡವರು.
ತಮ್ಮ ೧೨ನೇ ವಯಸ್ಸಿಗೆ ಸರ್ವಶಾಸ್ತ್ರ ಪಂಡಿತರು. ೧೬ನೇ ವಯಸ್ಸಿಗೆ ಭಾಷ್ಯವನ್ನು ಬರೆದ ಜ್ಞಾನಿಗಳು. ಮನುಕುಲದ ಉದ್ಧಾರಕ್ಕಾಗಿ ಬಂದ ಭಗವಂತನ ಅವತಾರವೇ ಇವರು. ಧರ್ಮ ಸ್ಥಾಪನೆಗಾಗಿ ತ್ಯಾಗ, ವೈರಾಗ್ಯ, ಆದರ್ಶಪ್ರಾಯರಾಗಿ ಮೆರೆದವರು.
ಮಠಾಧಿಪತಿಗಳು ಧರ್ಮದ ಚೌಕಟ್ಟಿನಲ್ಲಿ ಉತ್ತಮ ಕೆಲಸಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದವರು. ಧಾರ್ಮಿಕ ಪ್ರತಿನಿಧಿಗಳಾಗಿ ದುಡಿಯಬೇಕು, ಚಿಂತನ ಮಂಥನ ಮಾಡಬೇಕು, ಧರ್ಮ ಬೋಧನೆ ಮಾಡಬೇಕು ಎಂದವರು.
ಹಿಂದೂ ಧರ್ಮಕ್ಕೆ ಸತ್ಯಯುಗದಲ್ಲಿ ಬ್ರಹ್ಮ ದೇವ, ತ್ರೇತಾಯುಗದಲ್ಲಿ ವಸಿಷ್ಠರು, ದ್ವಾಪರದಲ್ಲಿ ವ್ಯಾಸರು, ಕಲಿಯುಗದಲ್ಲಿ ಬುದ್ಧ-ಶಂಕರ-ವಿವೇಕಾನಂದರು ಮಾರ್ಗದರ್ಶಿಗಳು. ಶೃಂಗೇರಿ, ಕಾಶ್ಮೀರ, ಪುರಿ, ದ್ವಾರಕಾಗಳಲ್ಲಿ ಮಠಗಳನ್ನು ಸ್ಥಾಪಿಸಿದರು.
ಶೃಂಗೇರಿಯಲ್ಲಿ ಇವರು ಮಠ ಕಟ್ಟಲು ಮುಂದಾಗಲು ಕಾರಣ ಅಲ್ಲಿ ಅವರಿಗೆ ಕಂಡ ಆ ದೃಶ್ಯ. ಪಾದಯಾತ್ರೆ ಮಾಡುತ್ತಾ ಶೃಂಗೇರಿಯ ತುಂಗಾ ತೀರದತ್ತ ಬರುವಾಗ ಅವರಿಗೆ ನಾಗರ ಹಾವೊಂದು ಗರ್ಭಿಣಿ ಕಪ್ಪೆಯೊಂದಕ್ಕೆ ನೆರಳು ನೀಡಲು ಹೆಡೆ ಎತ್ತಿ ನಿಂತಿರುವುದನ್ನು ನೋಡಿ ಆಶ್ಚರ್ಯ ಚಕಿತರಾಗುತ್ತಾರೆ. ಹಾವು ತನ್ನ ಆಹಾರವಾದ ಕಪ್ಪೆಗೆ ಈ ಸ್ಥಳದಲ್ಲಿ ತನ್ನ ವೈರತ್ವ ಮರೆತು ಆಸರೆ ನೀಡುತ್ತಿರುವುದು ಈ ಪುಣ್ಯ ಸ್ಥಳದ ಮಹಿಮೆ ಎಂದು ತಿಳಿದುಕೊಂಡು ಅಲ್ಲೇ ತಮ್ಮ ಮಠವನ್ನು ಸ್ಥಾಪಿಸುತ್ತಾರೆ. (ನೀವು ಶೃಂಗೇರಿಗೆ ಹೋದಾಗ ಈಗಲೂ ನದಿ ತೀರದಲ್ಲಿ ಈ ಹಾವು ಮತ್ತು ಕಪ್ಪೆಯ ಮೂರ್ತಿಗಳನ್ನು ಗಮನಿಸಬಹುದು.)
ಶಿಷ್ಯರೆಂದರೆ ಸದ್ಗುರು ಸೇವಾತತ್ಪರರಾಗಿರಬೇಕು, ಸಾಧಕರಾಗಿರಬೇಕು, ಭಕ್ತಿಯಿಂದ ಆರಾಧನೆ ಮಾಡುವವರಾಗಿರಬೇಕು ಮುಖ್ಯವಾಗಿ ನಿಷ್ಠೆ ಇರಬೇಕು. ಸಕಲ ವ್ಯವಹಾರಗಳಿಂದ ದೂರವಿದ್ದು, ಎಲ್ಲ ಭೋಗಲಲಾಸೆಗಳನ್ನು ತ್ಯಜಿಸಿ, ಅಹಂಕಾರ ವನ್ನು ಬಿಟ್ಟವರು, ವೇದಾಂತ ಚಿಂತಕರು, ಆತ್ಮಾನುಸಂಧಾನ ಮಾಡುವವರು, ಮುಕ್ತಿ,, ಬ್ರಾಹ್ಮೀಸ್ಥಿತಿ, ಕೈವಲ್ಯ ಅಥವಾ ಅಮೃತತ್ವ ಇರುವಂಥವನೇ ಯತಿವರೇಣ್ಯ ಎನಿಸಿಕೊಳ್ಳಲು ಯೋಗ್ಯನು.
*ನ ಜಾಯತೇ ಮ್ರಿ ಯತೇವಾ
ಕದಾಚಿನ್ನಾಹಂ ಭೂತ್ವಾ ಭವಿತಾವಾನ ಭೂಯಃ/
ಅಜೋ ನಿತ್ಯಃ ಶಾಶ್ವತೋ ಯಂ ಪುರಾಣೋ
ನಹನ್ಯತೇ ಹನ್ಯಮಾನೇ ಶರೀರೇ//*
ಈ ಆತ್ಮವು ಹುಟ್ಟುವುದೂ ಇಲ್ಲ, ಸಾಯುವುದೂ ಇಲ್ಲ. ಶರೀರ ಸತ್ತರೂ ಆತ್ಮ ಸಾಯುವುದಿಲ್ಲ. ಆತ್ಮವನ್ನು ಆತ್ಮಾವಲೋಕನ ಮಾಡಿ ಅರಿಯಿರಿ, ಅದುವೇ ಪರಮಾತ್ಮ. ಈ ಜಗತ್ತಿಗೆ ತಂದೆ ಈಶ್ವರ. ಅವನ ಅನುಗ್ರಹ ಬೇಕೇ ಬೇಕು. ಧರ್ಮ ಈಶ್ವರನ ಕಟ್ಟಳೆ. ಧರ್ಮವನ್ನು ಪಾಲಿಸಿದರೆ ಈಶ್ವರ ಕೃಪೆಗೆ ಒಳಗಾಗುತ್ತೇವೆ. ಎಲ್ಲಿ *ಆತ್ಮಜ್ಞಾನ ಇದೆಯೋ ಅಲ್ಲಿ ಮೋಕ್ಷ, ಮುಕ್ತಿ ಖಂಡಿತ* ಎಂದು ಸಾರಿದರು.
ಇಂಥ ಮಹಿಮರಾದ ಶ್ರೀ ಆದಿ ಶಂಕರಾಚಾರ್ಯರು ತಮ್ಮ ೩೨ನೆಯ ಎಳೆಯ ವಯಸ್ಸಿನಲ್ಲಿ (ಕ್ರಿ.ಶ. ೮೨೦) ಇಹಲೋಕ ತ್ಯಜಿಸಿದರು. ಶಂಕರಾಚಾರ್ಯರು ಎಲ್ಲಾ ಯತಿಗಳಿಗೂ ಮೂಲಪುರುಷರು. ಭಾಷ್ಯಕಾರ ಶ್ರೀ ಶಂಕರರಿಗೆ ನಮೋ ನಮಃ
ಇಂದು (ಮೇ ೧೭) ಶಂಕರಜಯಂತಿಯ ಅಂಗವಾಗಿ ಈ ಕಿರು ಲೇಖನ.
-ರತ್ನಾ ಕೆ.ಭಟ್, ತಲಂಜೇರಿ
ಆಕರ ಗ್ರಂಥ: * ಉಪದೇಶಾಮೃತ ಮತ್ತು ವಂದೇ ಶಂಕರ ಸದ್ಗುರುಮ್ *
ಚಿತ್ರ ಕೃಪೆ: ಫೇಸ್ಬುಕ್ ಜಾಲತಾಣ