ಮಹಾ ಧರ್ಮಾತ್ಮ ಕಟ್ಟಾ ನಾಯ್ಡು
ಕಟ್ಟಾ ಸುಬ್ರಹ್ಮಣ್ಯ ನಾಯ್ಡುರವರ ಕುಟುಂಬದ ವಿರುದ್ಧ ಆರೋಪಗಳನ್ನು ಮಾಡುವುದು ತರವಲ್ಲ. ಕುಟುಂಬದ ಯಜಮಾನರಾಗಿರುವ ಕಸುನಾ ಅವರು ಮಹಾನ್ ದೇಶಭಕ್ತ, ಧರ್ಮಾಸಕ್ತ ಮತ್ತು ಸರ್ವಧರ್ಮ ಸಾಮರಸ್ಯಭಾವ ಹೊಂದಿರುವ ಮಹಾತ್ಮ. ೨೦೦೪ರ ವಿಧಾನಸಭಾ ಚುನಾವಣೆಯಲ್ಲಿ ನಾನಿದನ್ನು ಕಣ್ಣಾರೆ ಕಂಡಿದ್ದೇನೆ.
ಶಿವಾಜಿನಗರದಲ್ಲಿ ಶ್ರೀಯುತರ ಚುನಾವಣಾ ಪ್ರಚಾರದ ಮೆರವಣಿಗೆ ಸಾಗಿತ್ತು. ವಾಹನಗಳಲ್ಲಿ ಮಡಿವಂತ ವಿಪ್ರೋತ್ತಮರು ವೇದಮಂತ್ರಘೋಷಗೈಯುತ್ತಿದ್ದರು. ಮುಂದೆ ಕಾಲ್ನಡಿಗೆಯಲ್ಲಿ ಘೋಷಾ ಸ್ತ್ರೀಯರು ಕಸುನಾ ಪಕ್ಷಕ್ಕೆ ಜಯಕಾರ ಹಾಕುತ್ತ ಸಾಗಿದ್ದರು. ಧ್ವನಿವರ್ಧಕದಲ್ಲಿ ದೇಶಭಕ್ತಿಯ ಗೀತೆ ಮೊಳಗುತ್ತಿತ್ತು. ರಸ್ತೆಮೇಲೆ ದೇಶದ ಸಂಸ್ಕೃತಿ ಬಿಂಬಿಸುವ ಕುಣಿತ ಸಾಗಿತ್ತು. ಇಂತಹ ಪರಮ ದೇಶಭಕ್ತ, ಧರ್ಮಾಸಕ್ತ ಹಾಗೂ ಸರ್ವಧರ್ಮಪೋಷಕ ಕಸುನಾ ಮಹಾತ್ಮನನ್ನು ವೃಥಾ ಹಗರಣವೊಂದರಲ್ಲಿ ಸಿಲುಕಿಸಿ ನಾವಿಂದು ದೂರುವುದು ಸರಿಯಲ್ಲ. ಸದಾಶಿವನಗರದ ಕಸುನಾ ಬಂಗ್ಲೆಯ ಒಳಗೂ ಹೊರಗೂ ಸದಾಕಾಲ ನೆರೆದಿರುವ ಜನಸ್ತೋಮವನ್ನು ಕಂಡರೇ ಕಸುನಾ ಜನಪ್ರಿಯತೆಯ ಅರಿವಾಗುತ್ತದೆ. ಇಂತಹ ಜನಪ್ರಿಯ ವ್ಯಕ್ತಿಯನ್ನು ದೂಷಿಸುವುದು ತಪ್ಪು ತಪ್ಪು.
ನಾನು ಕಣ್ಣಾರೆ ಕಂಡಿರುವ ಈ ಎಲ್ಲ ದೃಶ್ಯಗಳ ಒಳಮರ್ಮವನ್ನೂ ಕೊಂಚ ತಿಳಿಸಿಬಿಡುತ್ತೇನೆ.
ಅಂದು ಮೆರವಣಿಗೆಯಲ್ಲಿ ಸಂಸ್ಕೃತ ವೇದಘೋಷಗೈದ ಕನ್ನಡ ಮತ್ತು ತೆಲುಗು ವಿಪ್ರ(?)ರು ಪೇಮೆಂಟ್ ಪಡೆದು ವಾಪಸಾದರು. ರಸ್ತೆಯಲ್ಲಿ ಸಂಸ್ಕೃತಿ ಕುಣಿತ ನಡೆಸಿದ್ದವರು ಅನಂತರದಲ್ಲಿ (ಸೋಮರಸ)ಭಾವತುಂಬಿ ಯದ್ವಾತದ್ವಾ ಕುಣಿದದ್ದು ಹೆಚ್ಚಿನ ಮತದಾರರ ಗಮನಕ್ಕೆ ಬರಲಿಲ್ಲ. ಘೋಷಾ ಸ್ತ್ರೀಯರ ಕಥೆಯೋ, ಇನ್ನೂ ಸ್ವಾರಸ್ಯಕರ.
ಕಸುನಾ ಪಕ್ಷದ ಮೆರವಣಿಗೆಗೆ ಎದುರಾಗಿ ಆ ದಿನ ಇನ್ನೊಂದು ಪಕ್ಷದ ಮೆರವಣಿಗೆ ಬಂತು. ಕಮಲಧ್ವಜ ಹಿಡಿದು ಜಯಘೋಷಗೈಯುತ್ತಿದ್ದ ಘೋಷಾ ಸ್ತ್ರೀಯರಲ್ಲಿ ಕೆಲವರು, ಎದುರುಪಕ್ಷದ ಧ್ವಜ ಹಿಡಿದು ಘೋಷಣೆ ಒದರುತ್ತಿದ್ದ ಕೆಲವರನ್ನುದ್ದೇಶಿಸಿ, "ಮುಝೇ ದೋಸೌ ಮಿಲ್ಯಾ. ತುಝೆ ಕಿತ್ನಾ ಮಿಲ್ಯಾ?", "ಘರ್ ಆತೇ ವಖತ್ ಬಿರ್‍ಯಾನೀ ಲೇಕೇ ಆನಾ", ಇತ್ಯಾದಿ ಸಂಭಾಷಣೆ ನಡೆಸಿದ್ದನ್ನು ಅಂದು ನಾನು ಗಮನಿಸಿದೆ. ಅವರು ಪತ್ನಿ-ಪತಿ, ತಾಯಿ-ಮಗ, ಹೀಗೆ ಒಂದೇ ಮನೆಯವರಾಗಿದ್ದರೆಂಬುದು ಮತ್ತು ಹೊಟ್ಟೆಪಾಡಿಗಾಗಿ ಈ ರೀತಿ ವಿರುದ್ಧ ಪಕ್ಷಗಳ ’ಪೇಯ್ಡ್ ಕಾರ್ಯಕರ್ತ’ರಾಗುವ ಅಸಹಾಯಕತೆಗೆ ಸಿಲುಕಿದ್ದರೆಂಬುದು ಅವರ ಸಂಭಾಷಣೆಗಳಿಂದ ಸ್ಪಷ್ಟವಾಗಿತ್ತು.
ಒಟ್ಟಾರೆ ಹೇಳುವುದಾದರೆ, ಹಿಂದು-ಮುಸ್ಲಿಂ ಉಭಯರಿಗೂ ಮಕ್ಮಲ್ ಟೋಪಿ ದಯಪಾಲಿಸಿ, ಅಂದರಿಕಿ ಮಂಚಿವಾಡು ಎಂಬಂತಹ ಪೋಸು ನೀಡಿ, ಎರಡೂ ಮತಗಳ ಮತ ಗಿಟ್ಟಿಸಿಕೊಂಡು ಕಸುನಾ ಮಹಾನುಭಾವರು ಆ ಚುನಾವಣೆ ಗೆದ್ದರು. ಆ ಸಂದರ್ಭದಲ್ಲವರು ಉದಾರ ದಾನಿಗಳೂ ಆಗಿದ್ದರೆಂದು ಕೇಳಿದ್ದೇನೆ.
ಇನ್ನು ಕಸುನಾ ಅವರ ಸದಾಶಿವನಗರದ ಬಂಗ್ಲೆಯ ಮುಂದೆ ಸದಾ ನೆರೆದಿರುವ ಜನಸ್ತೋಮ ಕುರಿತು ಹೀಗೆ ಹೇಳಬಹುದು, ಬೆಲ್ಲ ಇದ್ದಲ್ಲಿ ಇರುವೆಗಳು ಮುತ್ತುತ್ತವೆ, ಕಸಾಯಿಖಾನೆಯ ಮೇಲ್ಗಡೆ ಹದ್ದುಗಳು ಹಾರಾಡುತ್ತಿರುತ್ತವೆ.
ನಾನು ಹೀಗೆಂದಮಾತ್ರಕ್ಕೆ, ಕಸುನಾ ಓರ್ವ ಕಸಾಯಿ ಅಥವಾ ಕಟುಕ ಎಂದು ನೀವಂದುಕೊಂಡರೆ ನಾನೇನೂ ಮಾಡಲಾರೆ.