ಮಹಾ ಯೋಗಿನಿ

ಮಹಾ ಯೋಗಿನಿ

ಪುಸ್ತಕದ ಲೇಖಕ/ಕವಿಯ ಹೆಸರು
ಹಿಂದಿ ಮೂಲ: ಸುರೇಶ್ ಸೋಮಪುರ, ಕನ್ನಡಕ್ಕೆ: ಡಾ. ಎಂ ವಿ ನಾಗರಾಜರಾವ್
ಪ್ರಕಾಶಕರು
ಅಂಕಿತ ಪುಸ್ತಕ, ಬಸವನಗುಡಿ, ಬೆಂಗಳೂರು. ದೂ: ೦೮೦-೨೬೬೧೭೧೦೦
ಪುಸ್ತಕದ ಬೆಲೆ
ರೂ. ೧೮೦.೦೦, ಮುದ್ರಣ: ೨೦೨೪

ಇದೊಂದು ರೋಚಕ ಕಥೆ. ಕೇವಲ ರೋಚಕ ಕಥೆ ಮಾತ್ರವಲ್ಲ ಸತ್ಯ ಕಥೆ. ಲೇಖಕ ಸುರೇಶ ಸೋಮಪುರ ಸ್ವತಃ ಕರ್ಣ- ಪಿಶಾಚಿಯನ್ನು ಸಾಕ್ಷಾತ್ಕಾರ ಮಾಡಿಕೊಳ್ಳಲು ಮನೆ-ಮಠ, ಹೆಂಡತಿ-ಮಕ್ಕಳು, ಬಂಧುಗಳು ಎಲ್ಲರನ್ನೂ ಬಿಟ್ಟು ದೀದಿ ಅಂಬಿಕಾದೇವಿಯ ಸಹಾಯದಿಂದ ಶ್ರೀ ಚೈತನ್ಯಾನಂದರನ್ನು ಭೇಟಿಯಾಗುತ್ತಾರೆ. ಅವರ ಮಾರ್ಗದರ್ಶನದಲ್ಲಿ ತಂತ್ರ-ಮಂತ್ರ ಶವಸಾಧನೆ ಇತ್ಯಾದಿ ನಡೆಸುತ್ತಾರೆ. ಅಂತಿಮವಾಗಿ ‘ಕರ್ಣ-ಪಿಶಾಚಿ’ ಅವರ ವಶವಾಗುತ್ತದೆ.

ಸುರೇಶ್ ಸೋಮಪುರ ತಮ್ಮ ಆಧ್ಯಾತ್ಮಿಕ ಶಕ್ತಿಯಿಂದ ಗಳಿಸಿದ ಚಮತ್ಕಾರಗಳನ್ನು ಮಾನವ ಕಲ್ಯಾಣಕ್ಕಾಗಿ ಪ್ರಯೋಗಿಸಲು ನಿರ್ಧರಿಸುತ್ತಾರೆ. ಮನುಷ್ಯ ತನ್ನ ಜೀವನವನ್ನು ಹೇಗೆ ಕಳೆಯಬೇಕೆಂದು ಪ್ರತಿಪಾದಿಸುತ್ತಾರೆ. ಆತ್ಮ ಪರಮಾತ್ಮ, ಭೂತ-ಪ್ರೇತ, ಧರ್ಮ-ಅಧರ್ಮಗಳಿಗೆ ಹೆದರಿ ಬದುಕುವುದು ಸರಿಯಲ್ಲ. ಮನುಷ್ಯ  ಅಂಧಶ್ರದ್ಧೆಯಿಂದ ಹೊರ ಬರಬೇಕಿದೆ ಎನ್ನುತ್ತಾರೆ. ಬದುಕಲು ಹೊಸ ಮಾರ್ಗವನ್ನು ಕಂಡುಕೊಳ್ಳಲು ಇಲ್ಲಿಯ ಸತ್ಯಕಥೆ ಪ್ರೇರಣೆ ನೀಡುತ್ತದೆ. 

‘ಅಘೋರಿಗಳ ನಡುವೆ’ ಕೃತಿಯ ಮೂಲಕ ಕನ್ನಡ ಓದುಗರಿಗೆ ಚಿರಪರಿಚಿತರಾಗಿರುವ ದಿ. ಸುರೇಶ ಸೋಮಪುರ ಅವರ ಮತ್ತೊಂದು ರೋಚಕ ನೈಜ ಕಥೆ ಇಲ್ಲಿದೆ. ಈ ಕೃತಿಯನ್ನು ಕನ್ನಡಕ್ಕೆ ತಂದಿದ್ದಾರೆ ಡಾ. ಎಂ ವಿ ನಾಗರಾಜರಾವ್ ಇವರು. ಇವರು ತಮ್ಮ ಅನುವಾದಕರ ಮಾತಿನಲ್ಲಿ ಹೇಳಿರುವುದು ಹೀಗೆ…

“ಯಾವುದೇ ಚಮತ್ಕಾರಕ್ಕೆ ಪಂಥಾಹ್ವಾನ ನೀಡುವುದು ಸುಲಭದ ಮಾತಲ್ಲ. ಈ ಕಾಲದಲ್ಲಿ ಅನೇಕ ಚಮತ್ಕಾರಿಗಳು ತಮ್ಮ ಚಮತ್ಕಾರದ ಮೂಲಕ ಮುಗ್ಧ ಜನರನ್ನು ಶೋಷಿಸಿ ಹಣ ಗಳಿಸುವ ಉದ್ದೇಶದಿಂದ ಚಮತ್ಕಾರದ ಅಂಗಡಿಗಳನ್ನು ತೆರೆದಿದ್ದಾರೆ. ಅಮಾಯಕ ಜನರನ್ನು ಮರುಳು ಮಾಡಿ ತಮ್ಮ ಸ್ವಾರ್ಥವನ್ನು ಸಾಧಿಸಿಕೊಳ್ಳುತ್ತಿದ್ದಾರೆ. ಅವರು ವಾಸ್ತವವಾಗಿ ಆಧ್ಯಾತ್ಮಿಕ ಶಕ್ತಿಯಿಂದ ಚಮತ್ಕಾರಗಳನ್ನು ತೋರಿಸಬಲ್ಲರೇನು? "ಕರ್ಣ-ಪಿಶಾಚಿನಿ" ವಶವಾದ ನಂತರ ಲೇಖಕರು ಮಾನಸಿಕ ಹಿಂಸೆಗೆ ಒಳಗಾಗುತ್ತಾರೆ. ಎದುರಿಗಿರುವವರ ಆಂತರ್ಯವನ್ನು ತಿಳಿದ ನಂತರ ಅವರಿಗೆ ಅಸಹ್ಯಉಂಟಾಗುತ್ತದೆ. ಇದರಿಂದ ಬೇಸತ್ತು "ಕರ್ಣ-ಪಿಶಾಚಿನಿ"ಯನ್ನು 'ಕಲ್ಪನಾಯೋಗ'ದ ಮೂಲಕ ದೂರ ಮಾಡುತ್ತಾರೆ. ಅದರಿಂದ ಬಿಡುಗಡೆ ಹೊಂದುತ್ತಾರೆ.

"ಅಘೋರಿಗಳ ನಡುವೆ", "ಕಂಪನ", "ನಾಲ್ಕನೆಯ ಆಯಾಮ" – ಕೃತಿಗಳ ಮೂಲಕ ಕನ್ನಡಿಗರಿಗೆ ಚಿರಪರಿಚಿತವಾಗಿರುವ ದಿ॥ ಸುರೇಶ್ ಸೋಮಪುರರ ಮತ್ತೊಂದು ರೋಚಕ ನೈಜ ಕತೆ ನಮ್ಮ ಮುಂದಿದೆ. ಅವರು ಬದುಕಿದ್ದಾಗ. ಈ ಕತೆಯನ್ನು ಜನರಿಗೆ ತಿಳಿಸಬೇಕು. ಅವರನ್ನು ಮೂಢನಂಬಿಕೆಯಿಂದ ಬಳಲುವುದನ್ನು ತಪ್ಪಿಸಬೇಕೆಂದು ಹೇಳಿ ಈ ಕೃತಿಯನ್ನು ಕನ್ನಡಕ್ಕೆ ಅನುವಾದಿಸಲು ಒಪ್ಪಿ ಆಶೀರ್ವದಿಸಿದ್ದು ನನ್ನ ಭಾಗ್ಯವೇ ಹೌದು.”