ಮಹಾ ವಿಸ್ಮಯ
ಆಧ್ಯಾತ್ಮಿಕ ಪ್ರವಚನಗಳನ್ನು ನೀಡುವುದರಲ್ಲಿ ಗೌರ ಗೋಪಾಲ ದಾಸ ಇವರದ್ದು ಎತ್ತಿದಕೈ. ಸೊಗಸಾದ ಪುಟ್ಟ ಪುಟ್ಟ ಕಥೆಗಳೊಂದಿಗೆ ಹಿತವಚನಗಳನ್ನು ಬೆರೆಸಿ ಓದುಗರಿಗೆ ಹಾಗೂ ಕೇಳುಗರಿಗೆ ಉಣ ಬಡಿಸುವುದರಲ್ಲಿ ಇವರಿಗೆ ಇವರೇ ಸಾಟಿ. ಗೌರ ಗೋಪಾಲ ದಾಸ ಅವರು ಆಂಗ್ಲ ಭಾಷೆಯಲ್ಲಿ ಬರೆದ “Life’s Amazing Secrets” ಎಂಬ ಪುಸ್ತಕವನ್ನು “ಮಹಾ ವಿಸ್ಮಯ" ಎಂಬ ಹೆಸರಿನಲ್ಲಿ ಕನ್ನಡಕ್ಕೆ ತಂದಿದ್ದಾರೆ ‘ತಾಷ್ಕೆಂಟ್ ಡೈರಿ’ ಕೃತಿಯ ಖ್ಯಾತಿಯ ಎಸ್ ಉಮೇಶ್ ಇವರು. ಇವರ ಅನುವಾದವೆಂದರೆ ಅದು ಎಲ್ಲೂ ಬೇರೆ ಭಾಷೆಯಿಂದ ತಂದ ಸರಕು ಎಂದು ತಿಳಿಯುವುದೇ ಇಲ್ಲ. ಮೂಲ ಬರಹವೇ ಎಂಬಂತೆ ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. ಅದೇ ಉಮೇಶ್ ಅವರ ಅನುವಾದದ ಶಕ್ತಿ.
“ಮಹಾ ವಿಸ್ಮಯ" ಕೃತಿಯಲ್ಲಿ ಲೋಕ ಸಂಚಾರಿ ಕಂಡ ಅದ್ಭುತ ಜೀವನ ರಹಸ್ಯಗಳನ್ನು ಅನಾವರಣ ಮಾಡಿದ್ದಾರೆ. ಪುಸ್ತಕದ ಬೆನ್ನುಡಿಯಲ್ಲಿ ಕಂಡ ಪದಗಳ ಪ್ರಕಾರ “ಮುಂಬೈ ರಸ್ತೆಯ ಟ್ರಾಫಿಕ್ ನಲ್ಲಿ ಸಂತ ಗೌರ ಗೋಪಾಲ ದಾಸರು ತಮ್ಮ ಶ್ರೀಮಂತ ಶಿಷ್ಯನೊಂದಿಗೆ ಸಾಗುವಾಗ ನಡೆಸುವ ಸಂಭಾಷಣೆಯೇ ಈ ಕೃತಿಯ ಮೂಲ ಹಂದರ. ಆ ಪಯಣದಲ್ಲಿ ಶ್ರೀಗಳು ಮನುಷ್ಯನ ಮಾನಸಿಕ ಸ್ಥಿತಿ, ಬದುಕಿನ ಪರಮೋಚ್ಛ ಧ್ಯೇಯ, ಸಂತೋಷದ ಕೀಲಿಕೈ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಮಾತನಾಡುತ್ತಾರೆ. ಹತ್ತಾರು ದೃಷ್ಟಾಂತಗಳನ್ನು ಹೇಳುತ್ತಾರೆ.
ನಿಮಗೆ ಸಂಬಂಧಗಳನ್ನು ಅಚ್ಚುಕಟ್ಟಾಗಿ ಇಟ್ಟುಕೊಳ್ಳುವ ಇರಾದೆ ಇದ್ದರೆ, ನಿಮ್ಮಲ್ಲಿರುವ ಆಂತರಿಕ ಶಕ್ತಿಯ ವಿರಾಟ್ ಸ್ವರೂಪವನ್ನು ಕಾಣಬೇಕೆಂದರೆ, ನೀವು ಕೆಲಸ ಮಾಡುವ ಸ್ಥಳದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂದು ಅರಿಯುವ ಹಂಬಲವಿದ್ದರೆ ಅಥವಾ ಜಗತ್ತಿಗೇನಾದರೂ ಕೊಡುಗೆ ನೀಡಬೇಕೆನ್ನುವ ಮನಸ್ಸಿದ್ದರೆ ಈ ಕೃತಿಯನ್ನು ಓದಿ. ನಿಮ್ಮದೇ ಮಹೋನ್ನತ ಬದುಕಿನ ಅದ್ಭುತ ಪಯಣದಲ್ಲಿ ಶ್ರೀಗಳು ನಿಮ್ಮ ಕೈಹಿಡಿದು ಜೊತೆ ಜೊತೆಗೇ ಸಾಗುತ್ತಾರೆ. ಬದುಕಿನ ಆಳ ಮತ್ತು ಅಗಲದ ದಿಗ್ದರ್ಶನ ಮಾಡಿಸುತ್ತಾರೆ.
ಗೌರ ಗೋಪಾಲ ದಾಸರು ಜಗತ್ತಿನಾದ್ಯಂತ ಗೌರವಿಸಲ್ಪಡುವ ಶ್ರೇಷ್ಟ ಸಂತರು. ನಿತ್ಯ ಲಕ್ಷಾಂತರ ಜನರ ಜ್ಞಾನದ ಹಸಿವನ್ನು ನೀಗಿಸುತ್ತಿರುವ ಜ್ಞಾನಯೋಗಿಗಳು. ತಮ್ಮ ಚೊಚ್ಚಲ ಕೃತಿಯಲ್ಲಿ ಬದುಕಿನ ಅಗಾಧ ಅನುಭವವನ್ನು ಅತ್ಯಂತ ಸರಳವಾಗಿ, ಹಾಸ್ಯಮಯವಾಗಿ, ಹೃದ್ಯವಾಗಿ ನಿರೂಪಿಸಿದ್ದಾರೆ. ಇಲ್ಲಿನ ಒಂದೊಂದೂ ಸಾಲುಗಳೂ ನಿಮ್ಮನ್ನು ಅದ್ಭುತ ಚಿಂತನೆಗೆ ಓರೆ ಹಚ್ಚುತ್ತವೆ. ಹಾಗಾಗಿ ಈ ಪುಸ್ತಕವೊಂದು ಬದುಕಿನ ಮಹಾ ವಿಸ್ಮಯಗಳ ಮಹಾಯಾನ.”
ಗೌರ ಗೋಪಾಲ ದಾಸರು ತಮ್ಮ ಮಾತಿನಲ್ಲಿ “ಆಯಾ ಕಾಲಘಟ್ಟಕ್ಕೆ ತಕ್ಕಂತೆ ನಾವು ನಮ್ಮ ಆದ್ಯತೆಗಳನ್ನು ಬದಲಿಸಿಕೊಳ್ಳಬೇಕು. ಬದುಕಿನಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಬೇಕು. ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು ಮತ್ತು ನಮ್ಮ ವರ್ತನೆಗಳಲ್ಲಿ ಬದಲಾವಣೆ ತಂದುಕೊಳ್ಳಬೇಕು. ಅದೆಲ್ಲವನ್ನೂ ಈ ಪುಸ್ತಕದಲ್ಲಿ ವಿವರವಾಗಿ ತಿಳಿಸಲಾಗಿದೆ. ನಮ್ಮ ವರ್ತನೆಗಳು ಎಂದರೆ ಅವು ಒಂದು ರೀತಿಯಲ್ಲಿ ಕಾರಿನ ಚಕ್ರದಲ್ಲಿರಬೇಕಾದ ಗಾಳಿಯಂತೆ. ಕಾರಿನ ಚಕ್ರದಲ್ಲಿ ಗಾಳಿಯ ಒತ್ತಡ ಕಡಿಮೆಯಾದರೂ ಚಕ್ರ ಪಂಕ್ಚರ್ ಆಗುವ ಸಾಧ್ಯತೆ ಇರುತ್ತದೆ. ಆಗ ನಮ್ಮ ಗುರಿ ಮುಟ್ಟುವುದು ಅಸಾಧ್ಯ. ಅದೇ ರೀತಿ ಬದುಕಿನ ಚಕ್ರಗಳಿಗೆ ಮೌಲ್ಯಗಳು ಮತ್ತು ನಮ್ಮ ವರ್ತನೆಗಳೆಂಬ ಗಾಳಿತುಂಬಿ ಸುಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕು. ಹೀಗೆ ಬದುಕಿನ ಚಕ್ರಗಳನ್ನು ಸರಿದೂಗಿಸುತ್ತಾ ಸಾಗುವಾಗ ಸ್ಟೀರಿಂಗನ್ನು ಬಿಡುವಂತಿಲ್ಲ. ಜೀವನದ ಸ್ಟೀರಿಂಗ್ ಎಂದರೆ ಅದು ಆಧ್ಯಾತ್ಮ ಚಿಂತನೆ. ಕಾರಿನ ಎಲ್ಲ ಚಕ್ರಗಳು ಸರಿಯಾದ ಸ್ಥಿತಿಯಲ್ಲಿದ್ದು, ಚಕ್ರದಲ್ಲಿನ ಗಾಳಿ ಸರಿಯಾದ ಪ್ರಮಾಣದಲ್ಲಿದ್ದಾಗಿಯೂ ಕೈಯಲ್ಲಿ ಸ್ಟ್ರೀರಿಂಗ್ ವೀಲ್ ಇಲ್ಲದಿದ್ದರೆ ನಿಗದಿತ ಗುರಿಯನ್ನು ತಲುಪುವುದು ಅಸಾಧ್ಯ. ಅದನ್ನೇ ಗೌತಮ ಬುದ್ಧ ಹೀಗೆ ಹೇಳಿದ್ದಾನೆ “ಮೊಂಬತ್ತಿಯೊಂದು ಬೆಂಕಿಯ ಸ್ಪರ್ಶವಿಲ್ಲದೆ ಬೆಳಗಲಾರದು. ಅದೇ ರೀತಿ ಆಧ್ಯಾತ್ಮಿಕತೆ ಇಲ್ಲದೆ ಮಾನವನ ಬದುಕು ಪರಿಪೂರ್ಣವಾಗಲಾರದು". ಎಂದು ಅಭಿಪ್ರಾಯಪಟ್ಟಿದ್ದಾರೆ.
ಪುಸ್ತಕದ ಪರಿವಿಡಿಯಲ್ಲಿ ಆನಂದದ ಕೀಲಿಕೈ, ನಡೆದು ಬಂದ ಹಾದಿ, ಸಂಬಂಧಗಳ ವರ್ತುಲದಲ್ಲಿ, ವೃತ್ತಿಪರ ಬದುಕು, ಸಮಾಜದೆದುರು ಆತ್ಮನಿವೇದನೆ ಮೊದಲಾದ ಅಧ್ಯಾಯಗಳಿವೆ. ೨೫೫ ಪುಟಗಳ ಈ ಪುಸ್ತಕವನ್ನು ಲೇಖಕರು “ಶತ ಶತಮಾನಗಳಿಂದ ಪರಮ ಪಾವನ ಗಂಗೆಯಂತೆ ಸಾವಿರ ತೊರೆಗಳಾಗಿ ಹರಿದು ಭರತ ಭೂಮಿಯನ್ನು ಪಾವಿತ್ರ್ಯಗೊಳಿಸಿರುವ ಆಧ್ಯಾತ್ಮ ಜಗತ್ತಿನ ಸಾಧು-ಸಂತರ ಪಾದಪದ್ಮಂಗಳಿಗೆ" ಅರ್ಪಣೆ ಮಾಡಿದ್ದಾರೆ.