ಮಹಿಳಾ ಆರೋಪಿಗಳ ಬಂಧನ ವೇಳೆ ವಿವೇಚನೆ ಅತ್ಯವಶ್ಯ

ಸೂರ್ಯಾಸ್ತದ ಬಳಿಕ ಮಹಿಳಾ ಆರೋಪಿಗಳ ಬಂಧನಕ್ಕೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್ ಅತ್ಯಂತ ಮಹತ್ವದ ತೀರ್ಪೊಂದನ್ನು ನೀಡಿದೆ. ಸಂಜೆಯ ಬಳಿಕ ಮಹಿಳೆಯರನ್ನು ಬಂಧಿಸುವಂತಿಲ್ಲ ಎಂದು ನ್ಯಾಯಾಲಯ ಈ ಹಿಂದೆ ನಿರ್ದೇಶನ ನೀಡಿತ್ತೇ ವಿನಃ ಯಾವುದೇ ಆದೇಶ ನೀಡಿರಲಿಲ್ಲ. ಸೂರ್ಯಾಸ್ತದ ಬಳಿಕ ಮಹಿಳೆಯರನ್ನು ಬಂಧಿಸಬಹುದು ಎನ್ನುವ ಮೂಲಕ ಈ ಬಗೆಗಿನ ಕಾನೂನು ಜಿಜ್ಞಾಸೆಗೆ ಮದ್ರಾಸ್ ಹೈಕೋರ್ಟ್ ತೆರೆ ಎಳೆದಿದೆ.
ನಿರ್ದಿಷ್ಟ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮಹಿಳೆಯೊಬ್ಬರನ್ನು ರಾತ್ರಿ ವೇಳೆ ಬಂಧಿಸಿದ್ದರ ಸಂಬಂಧ ತಮ್ಮ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದನ್ನು ಪ್ರಶ್ನಿಸಿ ಪೋಲೀಸರು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್ ನ ದ್ವಿಸದಸ್ಯ ಪೀಠ, ಸಾಮಾನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ರಾತ್ರಿ ಫ಼ೇಳೆ ಮಹಿಳೆಯರನ್ನು ಬಂಧಿಸುವುದನ್ನು ನಿರ್ಬಂಧಿಸಲಾಗಿದೆಯೇ ಹೊರತು ಗಂಭೀರ ಅಪರಾಧ ಪ್ರಕರಣಗಳಲ್ಲಿ ಮ್ಯಾಜಿಸ್ಟ್ರೇಟ್ ಅವರ ಅನುಮತಿ ಪಡೆದು ಮಹಿಳಾ ಆರೋಪಿಗಳನ್ನು ಬಂಧಿಸಬಹುದು ಎಂದು ತೀರ್ಪು ನೀಡಿದೆ.
ರಾತ್ರಿ ವೇಳೆ ಮಹಿಳಾ ಆರೋಪಿಗಳ ಬಂಧನದ ಸಂಬಂಧ ದೇಶದಲ್ಲಿ ಪದೇ ಪದೆ ಚರ್ಚೆ, ವಿವಾದಗಳು ನಡೆಯುತ್ತಲೇ ಇವೆ. ಕೆಲವು ಸಂದರ್ಭಗಳಲ್ಲಿ ಪೋಲೀಸರು ಅಥವಾ ಸಂಬಂಧಿತ ತನಿಖಾ ಸಂಸ್ಥೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಒಂದಿಷ್ಟು ಅತಿರೇಕದಿಂದ ವರ್ತಿಸಿ ಮಹಿಳಾ ಆರೋಪಿಗಳನ್ನು ಬಂಧಿಸಿದ್ದು ತೀವ್ರ ವಿವಾದಕ್ಕೆ ಕಾರಣವಾಗಿದ್ದವು. ಈ ಹಿನ್ನಲೆಯಲ್ಲಿ ನ್ಯಾಯಾಲಯ, ಮಹಿಳೆಯರನ್ನು ಸೂರ್ಯಾಸ್ತದಿಂದ ಸೂರ್ಯೋದಯದ ಅವಧಿಯವರೆಗೆ ಬಂಧಿಸುವಂತಿಲ್ಲ ಎಂದು ನಿರ್ದೇಶನ ನೀಡಿತ್ತು. ಆದರೆ ನ್ಯಾಯಾಲಯದ ಈ ನಿರ್ದೇಶನವನ್ನು ಕೆಲವು ಮಹಿಳಾ ಆರೋಪಿಗಳು ದುರುಪಯೋಗ ಪಡೆದುಕೊಂಡು ಪೋಲೀಸರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಾ ಬಂದಿದ್ದರು. ಅಷ್ಟು ಮಾತ್ರವಲ್ಲದೆ ದೇಶದ್ರೋಹ, ಉಗ್ರಗಾಮಿ ಚಟುವಟಿಕೆಗಳ ಸಹಿತ ಗಂಭೀರ ಅಪರಾಧ ಕೃತ್ಯಗಳಲ್ಲಿ ಶಾಮೀಲಾದ ಮಹಿಳಾ ಆರೋಪಿಗಳು ನ್ಯಾಯಾಲಯದ ಈ ನಿರ್ದೇಶನವನ್ನು ಗುರಾಣಿಯನ್ನಾಗಿಸಿಕೊಂಡು ಬಂಧನದಿಂದ ಪಾರಾಗಿ ತಲೆಮರೆಸಿಕೊಳ್ಳುತ್ತಿದ್ದರು. ನ್ಯಾಯಾಲಯದ ಈ ನಿರ್ದೇಶನ ಪೋಲೀಸರು ಮತ್ತು ತನಿಖಾ ಸಂಸ್ಥೆಗಳ ತನಿಖಾ ಪ್ರಕ್ರಿಯೆಗೆ ಬಲುದೊಡ್ದ ಅಡಚಣೆಯಾಗಿ ಪರಿಣಮಿಸಿತ್ತು. ಈಗ ಮದ್ರಾಸ್ ಹೈಕೋರ್ಟ್ ಈ ಎಲ್ಲ ಗೊಂದಲ, ಚರ್ಚೆಗೆ ತೆರೆ ಎಳೆಯುವಂತಹ ತೀರ್ಪು ನೀಡಿದೆ. ಇದರಿಂದಾಗಿ ಪೋಲೀಸರು ಮತ್ತು ತನಿಖಾ ಸಂಸ್ಥೆಗಳಿಗೆ ಅಪರಾಧ ಪ್ರಕರಣಗಳನ್ನು ತ್ರರಿತ ಗತಿಯಲ್ಲಿ ಭೇಧಿಸಲು ಮತ್ತು ಆರೋಪಿಗಳನ್ನು ತಕ್ಷಣ ಬಂಧಿಸಲು ಅವಕಾಶ ಲಭಿಸಿದಂತಾಗಿದೆ. ಇದಕ್ಕಿಂತಲೂ ಮುಖ್ಯವಾಗಿ ಅಪರಾಧ ಸಂಚನ್ನು ಪ್ರಾಥಮಿಕ ಹಂತದಲ್ಲಿಯೇ ನಿಷ್ಫಲಗೊಳಿಸಲು ತನಿಖಾ ಸಂಸ್ಥೆಗಳಿಗೆ ಈ ತೀರ್ಪು ನೆರವಾಗಲಿದೆ.
ಮಹಿಳಾ ಆರೋಪಿಗಳ ಬಂಧನದ ವೇಳೆ ಪೋಲೀಸ್ ಮತ್ತು ತನಿಖಾ ಸಂಸ್ಥೆಗಳ ಅಧಿಕಾರಿಗಳು ಮತ್ತು ಮಹಿಳಾ ಸಿಬ್ಬಂದಿ ಒಂದಿಷ್ಟು ವಿವೇಚನೆ ಮತ್ತು ಎಚ್ಚರಿಕೆಯ ನಡೆ ಇರಿಸುವುದು ಅತ್ಯವಶ್ಯ. ಯಾವುದೇ ಅಪರಾಧ ಪ್ರಕರಣ ಬೆಳಕಿಗೆ ಬಂದು, ಅದರಲ್ಲಿ ಮಹಿಳಾ ಆರೋಪಿಗಳು ಶಾಮೀಲಾಗಿರುವ ಬಗೆಗೆ ಶಂಕೆ ವ್ಯಕ್ತವಾದ ತಕ್ಷಣ ರಾತ್ರಿಯಾದರೂ ಬಂಧಿಸಬಹುದು ಎಂದು ನ್ಯಾಯಪೀಠ ಪೋಲೀಸರಿಗೆ ಪೂರ್ಣ ಅಧಿಕಾರ ನೀಡಿಲ್ಲ.ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ, ಮ್ಯಾಜಿಸ್ಟ್ರೇಟ್ ಅನುಮತಿಯನ್ನು ಪಡೆದೇ ಮಹಿಳಾ ಆರೋಪಿಗಳನ್ನು ಬಂಧಿಸುವಂತೆ ಎಚ್ಚರಿಕೆಯ ಮಾತುಗಳಲ್ಲಿಯೇ ತಿಳಿಸಿದೆ. ಬೇಕಾಬಿಟ್ಟಿಯಾಗಿ ರಾತೋರಾತ್ರಿ ಮಹಿಳಾ ಆರೋಪಿಗಳನ್ನು ಬಂಧಿಸಲು ಯಾವುದೇ ತನಿಖಾ ಸಂಸ್ಥೆಗಳಿಗೆ ಅವಕಾಶವನ್ನು ಕೂಡ ಹೈಕೋರ್ಟ್ ನೀಡಿಲ್ಲ. ರಾತ್ರಿ ವೇಳೆ ಮಹಿಳಾ ಆರೋಪಿಗಳನ್ನು ಬಂಧಿಸುವಾಗ ಕಟ್ಟುನಿಟ್ಟಾಗಿ ಈ ಬಗೆಗಿನ ಮಾರ್ಗಸೂಚಿಗಳನ್ನು ಪಾಲಿಸುವುದರ ಜತೆಯಲ್ಲಿ ಮಹಿಳೆಯರ ಘನತೆ, ಗೌರವಕ್ಕೆ ಧಕ್ಕೆಯಾಗದಂತೆ ಎಚ್ಚರಿಕೆ ವಹಿಸುವುದು ಅಗತ್ಯ.
ಕೃಪೆ: ಉದಯವಾಣಿ, ಸಂಪಾದಕೀಯ, ದಿ: ೧೧-೦೨-೨೦೨೫
ಚಿತ್ರ ಕೃಪೆ: ಅಂತರ್ಜಾಲ ತಾಣ