ಮಹಿಳಾ ಕ್ರಿಕೆಟ್ ಗೆ ಹೊಸ ಶಕೆ
ಕ್ರಿಕೆಟ್ ಕೇವಲ ಆಟವಲ್ಲ, ಅದೊಂದು ಧರ್ಮ ಎಂದೇ ಪರಿಭಾವಿಸಿರುವ ಭಾರತದಲ್ಲಿ ಕ್ರಿಕೆಟ್ ಪಟುಗಳಿಗೆ ಲಿಂಗ ತಾರತಮ್ಯವಿಲ್ಲದೆ ಸಮಾನ ವೇತನವನ್ನು ಬಿಸಿಸಿಐ ಘೋಷಿಸಿರುವುದು ಚರಿತ್ರಾರ್ಹ ಮತ್ತು ಅತ್ಯಂತ ಸಂತಸದಾಯಕ ಸಂಗತಿ. ಪ್ರಪಂಚದಲ್ಲೇ ಐತಿಹಾಸಿಕವೆಂಬಂತೆ ಇತ್ತೀಚೆಗೆ ನ್ಯೂಜಿಲ್ಯಾಂಡ್ ಕ್ರಿಕೆಟ್ ಮಂಡಳಿ ಸಮಾನ ವೇತನ ಕೀರ್ತಿ ಜಾರಿ ಮಾಡಿ ಅಪಾರ ಪ್ರಶಂಸೆಗೆ ಪಾತ್ರವಾಗಿತ್ತು. ಇದರ ಬೆನ್ನಲ್ಲೇ ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿ ಬಿಸಿಸಿಐ ಕೂಡ ಪುರುಷ, ಮಹಿಳೆ ಎನ್ನುವ ಭೇದ ತೋರದೆ ಆಟದ ಸಂಭಾವನೆ ಸರಿದೂಗಿಸುವ ಮೂಲಕ ಮಹಿಳಾ ಪಟುಗಳ ಬಹುದಿನಗಳ ಬೇಡಿಕೆಯನ್ನು ಈಡೇರಿಸುವಲ್ಲಿ ಸಫಲವಾಗಿದೆ.
ಟೀಮ್ ಇಂಡಿಯಾದ ಪುರುಷ ಆಟಗಾರರು ಪ್ರತಿ ಟೆಸ್ಟ್ ಪಂದ್ಯಕ್ಕೆ ೧೫ ಲಕ್ಷ ರೂ., ಏಕದಿನ ಪಂದ್ಯಕ್ಕೆ ೬ ಲಕ್ಷ ರೂ. ಹಾಗೂ ಟಿ ೨೦ ಪಂದ್ಯಕ್ಕೆ ೩ ಲಕ್ಷ ರೂ. ವೇತನ ಪಡೆಯುತ್ತಿದ್ದರು. ಪುರುಷ ಆಟಗಾರರಂತೆ ತಮಗೂ ಸರಿಸಮನಾದ ವೇತನ ಜಾರಿಗೊಳಿಸುವಂತೆ ಮಹಿಳಾ ಕ್ರಿಕೆಟ್ ಪಟುಗಳು ಆಗಾಗ ಧ್ವನಿ ಎತ್ತಿದ್ದರೂ ಅದಕ್ಕೆ ಸೂಕ್ತ ಮಾನ್ಯತೆ ಸಿಕ್ಕಿರಲಿಲ್ಲ. ಕಳೆದ ೩ ವರ್ಷಗಳಲ್ಲಿ ಬಿಸಿಸಿಐ ಬೊಕ್ಕಸ ಸುಮಾರು ೬೦೦೦ ಕೋಟಿ ರೂ. ಗಳಷ್ಟು ಹೆಚ್ಚಳವಾಗಿದೆ. ಬಿಸಿಸಿಐ ನ ಲಾಭಾಂಶ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿರುವ ಕಾರಣ ಹಾಗೂ ಮಹಿಳಾ ಆಟಗಾರ್ತಿಯರ ಅಮೋಘ ಪ್ರದರ್ಶನ ಪರಿಗಣಿಸಿ ಮಂಡಳಿಯು ಸರಿಸಮನಾದ ವೇತನವನ್ನು ತಡವಾಗಿಯಾದರೂ ಜಾರಿಗೊಳಿಸಿ ನ್ಯಾಯ ಕಲ್ಪಿಸಿದೆ.
ಜಗತ್ತಿನ ಅತಿ ಸಿರಿವಂತ ಕ್ರಿಕೆಟ್ ಮಂಡಳಿಯು ವೇತನ ಸರಿದೂಗಿಸಲು ಇಷ್ಟು ವರ್ಷ ಎಳೆದದ್ದೇ ವಿಪರ್ಯಾಸ. ಲಿಂಗ ತಾರತಮ್ಯವಿಲ್ಲದ ಸಮಾನ ವೇತನದ ಕುರಿತು ಚರ್ಚೆಗಳೆದ್ದಾಗ ಕೆಲವು ಕ್ರಿಕೆಟ್ ಪಂಡಿತರು ಮಹಿಳಾ ಕ್ರಿಕೆಟ್ ವಿರುದ್ಧ ಆರೋಪ ಪಟ್ಟಿ ಸಲ್ಲಿಸುವ ಕಾಯಕಕ್ಕೆ ಇಳಿಯುತ್ತಿದ್ದರು. ಟೀಮ್ ಇಂಡಿಯಾದ ಪುರುಷ ಕ್ರಿಕೆಟಿಗರಷ್ಟೇ ಪ್ರತಿಭಾ ಪ್ರದರ್ಶನ ತೋರಬೇಕೆನ್ನುವ ಒತ್ತಡವೂ ಮಹಿಳಾ ಪಟುಗಳ ಮೇಲೆ ಪರೋಕ್ಷವಾಗಿ ಹೇರಲಾಗುತ್ತಿತ್ತು. ಪುರುಷ ಕ್ರಿಕೆಟ್ ಪಂದ್ಯಗಳನ್ನು ವೀಕ್ಷಿಸುವಷ್ಟು ಪ್ರೇಕ್ಷಕರು ಮಹಿಳೆಯರ ಆಟ ನೋಡಲು ಆಗಮಿಸುವುದಿಲ್ಲ. ಲಕ್ಸುರಿ ಜಾಹೀರಾತು ಸಂಸ್ಥೆಗಳನ್ನು ಸೆಳೆಯುವಲ್ಲಿಯೂ ಹಿಂದೆ ಬಿದ್ದಿವೆ. ದೊಡ್ಡ ದೊಡ್ಡ ಫ್ರಾಂಚೈಸಿಗಳ ಹೂಡಿಕೆದಾರರನ್ನು ಆಕರ್ಷಿಸುವಲ್ಲಿಯೂ ಹಿನ್ನಡೆ ಕಂಡಿದೆ- ಇಂಥ ಬೆರಳೆಣಿಕೆ ದೋಷಗಳನ್ನು ಮುಂದಿಟ್ಟುಕೊಂಡೇ ಸಮಾನ ವೇತನದ ಬಾಗಿಲಲ್ಲಿ ಆಟಗಾರರನ್ನು ಕಾಯುತ್ತಿದ್ದ ಪ್ರವೃತ್ತಿಗೆ ಬಿಸಿಸಿಐ ಕೊನೆಗೂ ಮಂಗಳ ಹಾಡಿದೆ.
ಮಹಿಳೆಯರು ಇಂದು ಎಲ್ಲಾ ರಂಗಗಳಲ್ಲೂ ಸಮಾನ ವೇತನ ಪಡೆಯುವಷ್ಟು ಸಶಕ್ತ ಸಾಧನೆ ಮೆರೆಯುತ್ತಿದ್ದಾರೆ. ಇಲ್ಲೆಲ್ಲವೂ ಮಹಿಳೆಯರ ಕೈಹಿಡಿದದ್ದು ಪ್ರತಿಭೆ, ಕುಶಲಮತಿ ಎನ್ನುವುದು ಕೂಡ ಅಷ್ಟೇ ಮುಖ್ಯ. ಕ್ರಿಕೆಟ್ ನಲ್ಲಿಯೂ ಕಳೆದೆರಡು ದಶಕಗಳಲ್ಲಿ.೨೦೦೫ ಹಾಗೂ೨೦೧೭ ರಲ್ಲಿ ಭಾರತೀಯ ಆಟಗಾರ್ತಿಯರು ಸೆಮಿಫೈನಲ್ ಪ್ರವೇಶಿಸಿ ವಿರೋಚಿತ ಹೋರಾಟ ನಡೆಸಿ ಗಮನ ಸೆಳೆದಿದ್ದರು. ಅದರಲ್ಲೂ ೨೦೧೮ ರ ಏಷ್ಯಾಕಪ್ ಹೊರತುಪಡಿಸಿ, ಭಾರತೀಯ ಮಹಿಳಾ ತಂಡ ಏಳು ಬಾರಿ ಚಾಂಪಿಯನ್ ಆಗಿ ಹೊಮ್ಮಿದ್ದು ಸಣ್ಣ ಸಾಧನೆಯೇನಲ್ಲ.
ಪ್ರಸ್ತುತ ಸಮಾನ ವೇತನ ಕಲ್ಪಿಸಿರುವುದರಿಂದ ಹೆಚ್ಚೆಚ್ಚು ಸಂಖ್ಯೆಯಲ್ಲಿ ಮಹಿಳಾ ಪ್ರತಿಭೆಗಳನ್ನು ಕ್ರಿಕೆಟ್ ನತ್ತ ಆಕರ್ಷಿಸಲು ಸಾಧ್ಯವಾಗಲಿದೆ. ಕ್ರಿಕೆಟ್ ಅನ್ನು ವೃತ್ತಿಜೀವನವನ್ನಾಗಿ ಸ್ವೀಕರಿಸುವವರ ಸಂಖ್ಯೆ ಹೆಚ್ಚಳವಾಗಲಿದೆ. ಮಹಿಳಾ ಐಪಿಎಲ್ ಆಯೋಜಿಸಲೂ ಬಿಸಿಸಿಐ ಬಲವಾಗಿ ನಿರ್ಧಾರ ಮಾಡಿರುವ ಈ ಕಾಲಘಟ್ಟದಲ್ಲೇ ಸಮಾನ ವೇತನ ನೀತಿಯು ಜಾರಿ ಗೊಂಡಿರುವುದು ಭಾರತೀಯ ಮಹಿಳಾ ಕ್ರಿಕೆಟ್ ತಂಡಕ್ಕೆ ಹೊಸ ಶಕ್ತಿ, ಆತ್ಮವಿಶ್ವಾಸ ಹೆಚ್ಚಿಸಿರುವುದಂತೂ ಸತ್ಯ. ಸಕಲ ಸವಾಲುಗಳನ್ನೂ ಮೀರಿ ಮಹಿಳೆಯರ ತಂಡ ಉಜ್ವಲ ಕಾಣುವಂತಾಗಲಿ.
ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ೨೮-೧೦-೨೦೨೨
ಚಿತ್ರ ಕೃಪೆ: ಅಂತರ್ಜಾಲ ತಾಣ