ಮಹಿಳಾ ದಿನಾಚರಣೆ ಪ್ರಯುಕ್ತ ಒಂದು ಏಕಾಂಕ

ಮಹಿಳಾ ದಿನಾಚರಣೆ ಪ್ರಯುಕ್ತ ಒಂದು ಏಕಾಂಕ

(Office ಗೆ ಪ್ರಶಾಂತ್ ಲೇಟಾಗಿ ಆಗಮನ . . )
 
ಸುಶಾಂತ್: ಏನಪ್ಪಾ  ಇವತ್ತೂ  ಲೇಟು! ಬಾಸ್ ಇನ್ನೂ ಬಂದಿಲ್ಲ ..ಹಾಗಾಗಿ ಬದುಕ್ಕೊಂಡೆ ಬಿಡು.
 
ಪ್ರಶಾಂತ್: ಏನ್ಹೇಳ್ಳಪ್ಪಾ,  ಮನೇಂದ್ರೆ ಸಾಕು, ತಲೆ ಚಿಟ್ಟು ಹಿಡಿದು ಬಿಡುತ್ತೆ.
 
ಸುಶಾಂತ್: ಯಾರಪ್ಪಾ ನಮ್ಮ ಮಹಾರಾಜರ ಬೇಸರಕ್ಕೆ ಕಾರಣ?
 
ಪ್ರಶಾಂತ್: ಇನ್ಯಾರು, ಮನೇಲಿರೋ ಶೂರ್ಪನಖಿ. ಅವ್ಳದ್ದು ಯಾವಾಗ್ಲೂ  ಸಿಡಿಮಿಡಿ.  ನನ್ನ ಮೂಡು ಪರ್ಮನೆಂಟಾಗಿ  ಹಾಳಾಗಿ ಬಿಡುತ್ತಪ್ಪ.  ಎಷ್ಟೋ ಸಲ ಡೈವೋರ್ಸ್ ತೊಗೋಬೇಕೂಂತ ಅನ್ಸಿಬಿಡುತ್ತೆ.
 
ಸುಶಾಂತ್: ಅಯ್ಯೋ ಸ್ವಾಮೀs, ವಿಷಯಾನ ಅಷ್ಟೊಂದು   serious  ಮಾಡ್ಬೇಡ. ಅದಿರ್ಲಿ  ಯಾಕೆ ಕೋಪ?
 
ಪ್ರಶಾಂತ್: ಏನೂಂತ ಹೇಳ್ಳಿ,  ಎಷ್ಟೂಂತ  ಹೇಳ್ಳಿ. ಒಂದಾ, ಎರಡಾ?  ಕಾಫೀ ಮಾಡೇ ಅಂದ್ರೆ,  ಮಕ್ಕಳಿಗೆ ಹಾಲು ಮಾಡ್ತಿದೀನಿ, ಒಂದೈದು ನಿಮಿಷಾಂತಾಳೆ. ಕರ್ಚೀಫು ಹುಡುಕ್ಕೊಡೇ ಅಂದ್ರೆ, ಮಕ್ಕಳನ್ನ ರೆಡಿ ಮಾಡ್ತಿದೀನಿ, ಸ್ಕೂಲ್ ವ್ಯಾನ್‍ನವ್ನು  ಒಂದೇ ಸಮನೆ ಹಾರ್ನ್ ಮಾಡ್ತಿದಾನೆ,  ಅವ್ನು ಬಿಟ್ಟು ಹೋದಾಂದ್ರೆ ನೀವೇ ಬಿಡ್ಬೇಕಾಗತ್ತೆ.  ನೀವೇ ಹುಡುಕ್ಕೋಬಾರ್ದಾ ಅಂತಾಳೆ. ಎಲ್ಲಾದಕ್ಕೂ ಸಿಡಿಮಿಡಿ  ಮಾಡಿದ್ರೆ ನನಗೆ ಹೇಗಾಗ್ಬೇಕು ನೀನೇ ಹೇಳು.
 
ಸುಶಾಂತ್: ಓ, ವಿಷಯಾ ಇದು. ಅದ್ಸರಿ, ನೀನು ಎಷ್ಟು ಗಂಟೆಗೆ ಏಳ್ತೀಯಾ? ಮಕ್ಕಳನ್ನು ಸ್ಕೂಲಿಗೆ ರೆಡಿ ಮಾಡ್ತೀಯಾ?
 
ಪ್ರಶಾಂತ್: ನಾನು  ಏಳೂವರೆಗೆಲ್ಲಾ  ಎದ್ಬಿಡ್ತೀನಿ.  ಆಫೀಸ್‍ಗೆ ರೆಡಿ  ಆಗ್ಬೇಕಲ್ಲಾ.  ಮಕ್ಕಳನ್ನು ರೆಡಿ ಮಾಡೋದೆಲ್ಲ ಅವಳ ಡಿಪಾರ್ಟ್‍ಮೆಂಟು.
 
ಸುಶಾಂತ್: ಅತ್ತಿಗೆ ಎಷ್ಟು ಗಂಟೆಗೆ ಏಳ್ತಾರೋ?
 
ಪ್ರಶಾಂತ್: ಅವ್ಳು 5.30ಗೆಲ್ಲಾ ಏಳ್ಬೇಕಾಗುತ್ತೆ.  ನನಗೆ ಮತ್ತು ಮಕ್ಕಳಿಗೆ ತಿಂಡಿ, ಡಬ್ಬಿಗೆ ಊಟ ಎಲ್ಲಾ ರೆಡಿ ಮಾಡ್ಬೇಕಲ್ಲಾ.  ಕೆಲವು ಸಲ ಮಕ್ಕಳು ಅವ್ರಿಗೆ ಬೇಕಾದ ತಿಂಡೀನೇ ಮಾಡೂಂತ ಹಠ ಹಿಡ್ಯೋದೂ ಇದೆ.  ಕೆಲವು ಸಲ ನಾನೂ ನನಗೆ ಬೇರೆ ತಿಂಡಿ ಮಾಡೂ ಅಂತೀನಿ - ನನ್ನ ನಾಲಿಗೆಗೂ ರುಚಿ ಬೇಡವೇ?
 
ಸುಶಾಂತ್: ಇದು, ಯಾವಾಗಾದ್ರೂ ನೀನು ಮಾಡಿದ್ದಿದ್ಯಾ?
 
ಪ್ರಶಾಂತ್: ಇಲ್ಲಪ್ಪಾ.  ಬಹಳ ಅಪರೂಪ.  ಒಂದ್ಸಲ  ಅವರಪ್ಪಂಗೆ ಸೀರಿಯಸ್ ಆಗಿತ್ತೂಂತ ಮಕ್ಕಳನ್ನು ಬಿಟ್ಟು ಊರಿಗೆ ಹೋಗಿದ್ಲು.  ನಾನೂ ರಜಾ ಹಾಕ್ಬೇಕಾಯ್ತು.  ಆದ್ರೆ ಈ  ಮಕ್ಕಳಿವೆಯಲ್ಲ, ಅವಂತೂ  ರಾಕ್ಷಸ ಸಂತಾನ.  ಎರಡು ದಿವಸ ನನ್ನನ್ನು ಹಿಂಡಿ ಹಿಪ್ಪೆ ಮಾಡಿಬಿಟ್ರು.  ಆವತ್ತಿಂದ ಅವಳಿಗೆ ಒಬ್ಬಳೇ ಹೋಗ್ಬೇಡಾಂತ ಹೇಳ್ಬಿಟ್ಟಿದ್ದೀನಿ. 
 
ಸುಶಾಂತ್: ಅಲ್ಲಲೇ  ಮಗನೇ, ಒಂದು ದಿನಕ್ಕೇ ಸೋತು ಸುಣ್ಣ ಆದವನಿಗೆ, ಅತ್ತಿಗೆ  ಪ್ರತಿದಿನ ಹೇಗೆ  ನಿಭಾಯಿಸಬೇಕು, ಕಷ್ಟ ಆಗಲ್ವಾಂತ ಯೋಚ್ನೇನೇ ಬರಲ್ವಲ್ಲೋ! ಆ ತಾಪತ್ರಯದಲ್ಲಿ ನಿನ್ನ ಸಿಲ್ಲಿ ಬೇಡಿಕೆಗಳಿಗೆ ಗಮನ ಕೊಡಕ್ಕಾಗತ್ತಾ?  ಯೋಚನೆ ಮಾಡು.
 
ಪ್ರಶಾಂತ್: ಅಲ್ಲಾ ಅದು ಹಾಗಲ್ಲ . . . . ಮಧ್ಯಾಹ್ನ  ಎಲ್ಲಾ  full free ಅಲ್ವಾ ಅವಳಿಗೆ, ಸೀರಿಯಲ್‍ಗಳನ್ನು ನೋಡಿಕೊಂಡು ಭರ್ಜರಿ ನಿದ್ದೆ ಮಾಡ್ಕೊಂಡು  enjoy ಮಾಡಲ್ವಾ?
 
ಸುಶಾಂತ್: ಓ .. .ಅಣ್ಣಾವ್ರು ಈ ರೂಟಿಗೆ ಬಂದ್ರೋ. . . ಸ್ವಾಮೀ, ತಾವು CCPC ಯಲ್ಲಿದ್ದಾಗ   stagerred duty  ಮಾಡ್ತಿರ್ಲಿಲ್ವೇ? ಬೆಳಿಗ್ಗೆ ಅರ್ಧ ಶಿಫ್ಟು,  4 ಘಂಟೆ ಮೇಲೆ ಅರ್ಧ ಶಿಫ್ಟು  ಆವಾಗ ಒಂದಿಷ್ಟು free time ಸಿಗ್ತಿತ್ತಲ್ಲಾ,  ಮನೆಗೇಂತ ಏನಾದ್ರೂ ಮಾಡಿದ್ದುಂಟೋ?
 
ಪ್ರಶಾಂತ್: ಸರಿ ಹೋಯ್ತು ಬಿಡು, ನೀನ್ಹೇಳೋದು.  rest ಬೇಡ್ವೇನಮ್ಮಾ ಈ ಬಾಡೀಗೆ?
 
ಸುಶಾಂತ್: ನಿಂದಾದ್ರೆ ಬಾಡಿ, ಅತ್ತಿಗೆದಾದ್ರೆ ಗಾಡೀನಾ?  ಸಾರಿನಪುಡಿ ಮಾಡೋದು, ಚಟ್ನಿಪುಡಿ ಮಾಡೋದು ಅದೂ ಇದೂ ಅಂತ ಏನಾದ್ರೂ  ಒಂದು ಕೆಲ್ಸ ಇದ್ದೇ ಇರತ್ತಮ್ಮಾ ಅವ್ರಿಗೆ.  ನೀನಂದುಕೊಂಡ್ಹಾಗೆ  ನಿದ್ದೆ ಮಾಡ್ಕೊಂಡು  ಸುಖದ ಸುಪ್ಪತ್ತಿಗೆ ಮೇಲಿರಲ್ಲ ತಿಳ್ಕೋ.
 
ಪ್ರಶಾಂತ್: ಅಣ್ಣಯ್ಯಾ, ನಾನು ಕಷ್ಟ ಪಟ್ಟು ದುಡಿದು  ಸಂಬಳ ತಂದ್ಹಾಕ್ತೀನಿ ಮನೆಗೆ. ಅದು ಗೊತ್ತಿರ್ಲಿ . . . 
 
ಸುಶಾಂತ್: ಇದಕ್ಕೇನು ಕಡಿಮೆ ಇಲ್ಲಾ ನೋಡು.  ಸ್ವಾಮೀ, ಮನೆಯಾಕೆ  ಮನೇಲಿರ್ತಾಳೆ ಅಂತೀಯಲ್ಲಾ, ಅವರ ಕೆಲಸಕ್ಕೆ economic value ಹಾಕಿದ್ರೆ, ಅವ್ರೂ ಸಂಸಾರಕ್ಕೆ ನಿನ್ನಷ್ಟೇ ದುಡಿದು ಹಾಕ್ತಿದಾರೆ.  ನಿಂದು physical ಆಗಿ ಕಾಣತ್ತೆ.  ಅವರದ್ದು ಕಾಣಲ್ಲ ಅಷ್ಟೇ.  (ಜನಗಳನ್ನು ನೋಡಿ) – ಏನ್ರಮ್ಮಾ ಇದಕ್ಕೂ ಚಪ್ಪಾಳೆ ಹಾಕಲ್ವಾ? - ಹಾಗೆ - ಅಂದ್ಹಾಗೆ  ಯಾರಿಗೂ ಹೇಳಕ್ಹೋಗ್ಬೇಡಾ,  ಇವತ್ತಿನ inflation  ಲೆಕ್ಕದಲ್ಲಿ  ನಿನ್ನ ಹೆಂಡ್ತಿ ದುಡಿತ,  ನಿನ್ನ salary ಗಿಂತ ಜಾಸ್ತಿ ಆಗುತ್ತೆ!
 
ಪ್ರಶಾಂತ್: ಸದ್ಯ, ಇದನ್ನೆಲ್ಲಾ ನನ್ಹೆಂಡ್ತಿ ಮುಂದೆ ಹೇಳಬೇಡ.  ಆಮೇಲೆ  ಅವಳೇ ನನಗೆ ಡೈವರ್ಸ್ ಕೊಟ್ಟಾಳು! ನಾನ್ಹೇಳಿದ್ದು,  ಅವ್ರುಗಳು ಮಧ್ಯಾಹ್ನ  kitty party ಅದೂ ಇದೂಂತ enjoy  ಮಾಡಲ್ವಾ? ನಾವು ಆಫೀಸಿನಲ್ಲಿ ಎಷ್ಟು tension ನಲ್ಲಿ ಕೆಲಸ ಮಾಡ್ತಿರ್ತೀವಿ. 
 
ಸುಶಾಂತ್: ಅದ್ನಿಜಾನ್ನು. ಅದ್ಸರಿ, ಆಫೀಸಿನಲ್ಲಿ ಟೀ-ಕಾಫೀ ಪಾರ್ಟಿ ಎಲ್ಲಾ ಇರಲ್ವಾ? Office tension  ಅಂತೀಯಲ್ಲಾ ಆ ಶೀಲಾ, ರೋಸೀ. . . . 
 
ಪ್ರಶಾಂತ್: ಆ ಶೀಲಾ, ರೋಸೀ ಅವರದ್ದೆಲ್ಲಾ ಡ್ರೆಸ್‍ಸೆನ್ಸ್  ಅಲ್ಟಿಮೇಟಮ್ಮಾ . . ಏಯ್, ಹಾಗ್ಯಾಕೆ ನೋಡ್ತಿದೀಯಾ? `ಅಂಥ'ದ್ದೇನೂ ಇಲ್ಲಮ್ಮಾ!
 
ಸುಶಾಂತ್: `ಅಂಥ'ದ್ದಿದೆ  ಅಂತ ನಾನೆಲ್ಲಿ  ಹೇಳಿದೆ.  ನೀನೇ  `ಹೆಗಲು ಮುಟ್ಕೊಂಡು ನೋಡ್ಕೊಂಡೆ' ಅಷ್ಟೇ! ನಾನ್ಹೇಳಿದ್ದು ನಿನ್ನ ಟೆನ್ಷನ್  ಆಫೀಸ್‍ದೋ, ಆಫೀಸ್ ಜನಗಳದ್ದೋ ಅಂತ!
 
ಪ್ರಶಾಂತ್: ಬಿಡಪ್ಪಾ, ನಿನಗೆ ಬಿಟ್ಟರೆ, ಸೀದಾ ನನ್ನ ಬುಡಕ್ಕೇ ಬೆಂಕಿ ತಂದಿಟ್ಟು ಬಿಡ್ತೀಯಾ!
 
ಸುಶಾಂತ್: ಅದ್ಸರಿ, ಅತ್ತಿಗೆಗೆ  ಯಾವಾಗಲಾದರೂ  ಅವರ ಕೆಲಸಕ್ಕೆ ಸಹಾಯ ಮಾಡ್ತಾ ಇರ್ತೀಯಾ?
 
ಪ್ರಶಾಂತ್: ಯಾಕಿಲ್ಲ, ಮದುವೆ ಆದ ಹೊಸತರಲ್ಲಿ  ಸಂಕ್ರಾಂತೀಗೆ ಒಂದ್ಸಲ, ಸೌತೇಕಾಯಿ  ಹೆಚ್ಕೊಟ್ಟಿದ್ದೆ, ಅಡುಗೆಗೇಂತ. ಈಗ್ಲೂ ಅವ್ಳು ಅದನ್ನ ನೆನಪಿಸ್ಕೋತಾನೇ ಇರ್ತಾಳೆ.
 
ಸುಶಾಂತ್: ಅತ್ತಿಗೆ ನೆನಪಿಸ್ಕೊತಾಳೋ ಅಥವಾ ನೀನೇ ಮತ್ತೆ ಮತ್ತೆ ಅದನ್ನ ಹೇಳ್ತಾ ಇರ್ತಿಯೋ?
 
ಪ್ರಶಾಂತ್: ಎಲ್ಲಾ ಒಂದೇನೇ. ನಾನೇ ಹೇಳ್ತೀನಿ ಅಂತಾನೇ ಇಟ್ಕೋ.  ತಪ್ಪಾ? ಹೆಲ್ಪ್ ಮಾಡಿಲ್ವಾ?
 
ಸುಶಾಂತ್: ಈ ego ನೇ ನಮ್ಮನ್ನ ಸಾಯಿಸೋದು  ಅಣ್ಣಯ್ಯ.  ಯಾವತ್ತೋ ಒಂದಿವ್ಸ ಮಾಡಿದ್ದನ್ನ ಜನ್ಮವಿಡೀ ಹೇಳ್ತಿರ್ತೀವಿ.  ಅದೇ ಅವಳು ನಮಗೆ ಮಾಡಿದ್ರೆ  ನಮಗೆ  irritate ಆಗಲ್ವಾ? ಅದೂ ಅಲ್ದೇ, ಅದು help ಆಗಲೀ, ಅಥವಾ ನೀನಂದು ಕೊಂಡಂತೆ, ನೀನು ಮಾಡಿದ favour  ಆಗ್ಲೀ ಅಲ್ಲ. ಅವ್ಳು ಹೇಗೆ ನಿಮ್ಮ ಸಂಸಾರಕ್ಕೆ  ಮಾಡ್ತಿದಾಳೋ ಹಾಗೆಯೇ, ನೀನೂ ನಿಮ್ಮ ಸಂಸಾರಕ್ಕೆ ಮಾಡ್ತಿರೋ ಕರ್ತವ್ಯ ಅಷ್ಟೇ.  ಇಲ್ಲಿ favour ನ ಪ್ರಶ್ನೇನೇ ಬರಲ್ಲ.  ಹಿಂದೆ ಬ್ಯಾಂಕಲ್ಲಿ  ನಾವು, ಕಂಪ್ಯೂಟರೈಸೇಶನ್ಗೂ ಮುಂಚೆ, ಎಲ್ಲಾ ಸೇರಿ  ಬ್ಯಾಲೆನ್ಸ್ ಮಾಡಿ ಕೈ ಜೋಡಿಸುತ್ತಿದ್ದೆವಲ್ಲಾ, ಹಾಗೇನಮ್ಮಾ ಇದೂನೂವೇ.
 
ಪ್ರಶಾಂತ್: ನೀನು ಎಲ್ಲಾದಕ್ಕೂ  ಹೆಂಗಸರ  ಪರಾನೇ ಮಾತಾಡ್ತೀಯಾ.  ಅವ್ರು ಕಪ್ಪಗಿದ್ರೂ, ದಪ್ಪಕ್ಕಿದ್ರೂ  ನಾವು ಮದುವೆ  ಆಗಿಲ್ವಾ? ನಮ್ಮದೇನೂ greatness ಇಲ್ಲವೇ ಇಲ್ಲಾಂತೀಯಾ?
 
ಸುಶಾಂತ್: ನೋಡು, ನಂ ಗಂಡಸರ  ಕಥೆಯೆಲ್ಲಾ ಇಷ್ಟೇನೇ.  ವಾದದಲ್ಲಿ  ಇನ್ನೇನು ಸೋತ್ಬಿಡ್ತೀವಿ ಅಂತ ಆದಾಗ,  ಇಂಥಾ ವಿಚಾರಕ್ಕೆ ಬಂದ್ಬಿಡ್ತೀವಿ.  ಬೇರೆ  ಹೆಂಗಸಾದ್ರೆ, ಅವಳ ಶೀಲದ ಬಗ್ಗೆ ಮಾತಾಡಕ್ಕೆ ಶುರು ಮಾಡಿಬಿಡ್ತೀವಿ.  ಅದು ಹಾಳಾಗ್ಲಿ, ತಿಂಡಿ ತಿಂದಿದ್ದಾಯ್ತಾ?
 
ಪ್ರಶಾಂತ್: ಅಂತೂ ಸೋತೆ ಅಂತ ಒಪ್ಕೊಂಡ್ಯಾ? ಅಬ್ಬಾ! ತಿಂಡಿ ತಿಂದಿದ್ದಾಯ್ತು. ಯಾಕೆ?
 
ಸುಶಾಂತ್: ಸರಿಯಾಗಿ  ಸಿಂಕಲ್ಲಿ ಕೈ ತೊಳ್ಕೋ. ಅಲ್ಲಿ ಕನ್ನಡೀನೂ ಇದೆ.
 
ಪ್ರಶಾಂತ್: Yes, ತೊಳ್ಕೋತೀನಿ.  ಕನ್ನಡೀಲಿ ನೋಡ್ಕೊಂಡೇ  . . . . . ಏಯ್, ಏನು, ನನ್ನ ಮೂತಿ ಸರಿ ಇಲ್ಲಾಂತ ಕಿಂಡಲ್ ಮಾಡ್ತಿದೀಯ?
 
ಸುಶಾಂತ್: ಇಲ್ಲಪ್ಪಾ ಸತ್ಯಾನೇ ನುಡೀತಿದೀನಿ!
 
ಪ್ರಶಾಂತ್: ಅಣ್ಣೋ, ಇಂಥಾ ಕಠೋರ ಸತ್ಯ ಹೇಳಬೇಡಪ್ಪಾ! ಅರಗಿಸಿಕೊಳ್ಳೋಕೆ ಕಷ್ಟ ಆಗುತ್ತೆ!
 
ಸುಶಾಂತ್: ಅದ್ಸರಿ, ಇತ್ತೀಚೆಗೆ  ಯಾವಾಗಾದ್ರೂ, ಹೆಂಡ್ತೀನ ತಬ್ಕೊಂಡು  ‘I Love you’ ಅಂತ ಹೇಳಿದೀಯಾ?
 
ಪ್ರಶಾಂತ್: ನಿಂದೊಳ್ಳೇ ಕಥೆಯಾಯ್ತು.  ಅದೆಲ್ಲಾ ಮದುವೆಯಾದ ಹೊಸತರಲ್ಲಿ_ ಈಗೆಲ್ಲಿಂದ ಬಂತು!
 
ಸುಶಾಂತ್: ನನ್ನ ಮಾತು ಕೇಳು.  ಈಗಲೂ ಒಮ್ಮೊಮ್ಮೆ ಅವಳನ್ನಪ್ಪಿ ‘I Love you’ ಅಂತ  ಹೇಳಿ ನೋಡು.  ಆವಾಗ, ಡೈವೋರ್ಸ್ ಗೀವೋರ್ಸ್ ಅಂತ ನಿನ್ನ ಬಾಯಿಂದ ಅಪ್ಪಿತಪ್ಪಿಯೂ ಬರಲ್ಲ.
 
ಪ್ರಶಾಂತ್: ಗುರೂ, ನಿಜ ಹೇಳಬೇಕೂಂದ್ರೆ, ನನಗೂ ಎಷ್ಟೋ  ಸಲ ಹೇಳ್ಬೇಕೂಂತಲೇ ಅನ್ನಿಸತ್ತೆ.  ಹಾಳಾದ್ದು `ಅಹಂ' ಅಡ್ಡ ಬಂದ್ಬಿಡುತ್ತೆ - ನಾನೇ ಯಾಕೆ  first ಹೇಳಬೇಕೂಂತ.
 
ಸುಶಾಂತ್: ಅವಳಿಗೆ  ನಿನ್ನ ಅನುಕಂಪ, favour ಏನೂ ಬೇಡಾಮ್ಮ.  They want your TRUE Love. That's all.
 
ಪ್ರಶಾಂತ್: ಹ್ಞಾ. . . . (ನಿಟ್ಟುಸಿರು ಬಿಟ್ಟು)  ಏನೇ ಆಗ್ಲಿ ಇವತ್ತು ಮನೆಗೆ ಹೋದ್ಮೇಲೆ  ಹೇಳೇ ಬಿಡ್ತೀನಿ -  I Love you my lovely lady ಅಂತ.
 
ಸುಶಾಂತ್: ನೋಡು ಇದು ಎಲ್ಲಾ ಗಂಡಂದಿರಿಗೂ  ಅರಿವಾದ ದಿವಸಾನೇ, ಗಂಡ-ಹೆಂಡ್ತಿ ಜಗಳಾನೇ ಇರಲ್ಲ.  ಕಾಕತಾಳೀಯವಾಗಿ, ಇವತ್ತು ಮಹಿಳಾ ದಿನಾಚರಣೆ, ಎಲ್ಲ ಮಹಿಳೆಯರಿಗೂ  ಒಂದು ದೊಡ್ಡ ಚಪ್ಪಾಳೆ ತಟ್ಟೋಣವೇ? (ಜನರತ್ತ ತಿರುಗಿ) ಯಾಕೆ  ನಿಮಗೆ ಸಪರೇಟಾಗಿ  ಹೇಳ್ಬೇಕಾ?
 
ಪ್ರಶಾಂತ್: ಅದೆಲ್ಲಾ ಸರೀನಪ್ಪಾ. ಇಷ್ಟೆಲ್ಲಾ ಗೊತ್ತಿರೋ ನೀನ್ಯಾಕೆ ಇನ್ನೂ ಮದುವೆ ಆಗಿಲ್ಲ!
 
ಸುಶಾಂತ್: ಹ್ಞಾಂ. . . (ನಿಟ್ಟುಸಿರು ಬಿಟ್ಟು) ನನ್ನನ್ನ ಅರ್ಥ ಮಾಡ್ಕೋಳೋವ್ರು ಇನ್ನೂ ಸಿಕ್ಕಿಲ್ಲಾಮ್ಮ!
 
ಪ್ರಶಾಂತ್: ಆ್ಞಂ. . . . . .
 
                                                                  --------------