ಮಹಿಳಾ ಸ್ವಾಭಿಮಾನದ ಪ್ರತೀಕ - ಸೀತವ್ವ ಜೊಡ್ಡತಿ

ಮಹಿಳಾ ಸ್ವಾಭಿಮಾನದ ಪ್ರತೀಕ - ಸೀತವ್ವ ಜೊಡ್ಡತಿ

೨೦೧೮ರ ತನಕ ಸೀತವ್ವ ಜೊಡ್ಡತಿ ಎಂಬ ಮಹಿಳೆಯ ಹೆಸರು ಬಹುತೇಕ ಅಪರಿಚಿತವಾಗಿತ್ತು. ಆದರೆ ಆ ವರ್ಷ ಕೇಂದ್ರ ಸರಕಾರ ಬಿಡುಗಡೆ ಮಾಡಿದ ಪದ್ಮ ಪ್ರಶಸ್ತಿಯ ಪಟ್ಟಿಯಲ್ಲಿ ಕರ್ನಾಟಕದ ಈ ಮಹಿಳೆಯ ಹೆಸರು ಸಮಾಜ ಸೇವೆಯ ಅಡಿಯಲ್ಲಿ ಇತ್ತು. ಬಹುತೇಕ ಮಂದಿಗೆ ಈ ಆಯ್ಕೆ ಹುಬ್ಬೇರಿಸಿರಬಹುದು. ಯಾರಪ್ಪಾ ಈ ಮಹಿಳೆ? ಏನು ಸಾಧನೆ ಮಾಡಿದ್ದಾರಂತೆ? ಎಂಬೆಲ್ಲಾ ಪ್ರಶ್ನೆಗಳು ಮನದಲ್ಲಿ ಕಾಡುತ್ತಿರಬಹುದು. 

‘ದೇವದಾಸಿ’ ಎಂಬ ಅನಿಷ್ಟ ಪದ್ಧತಿಗೆ ಬಲಿಯಾಗಿ, ನಂತರದ ದಿನಗಳಲ್ಲಿ ಅದರ ಕೆಡುಕುಗಳ ಬಗ್ಗೆ ತಿಳಿದು, ಅದರ ವಿರುದ್ಧ ಹೋರಾಡಿದವರು. ತನ್ನಂತೆಯೇ ಆ ದೇವದಾಸಿ ಪದ್ಧತಿ ಆಚರಣೆ ಮಾಡುತ್ತಿದ್ದ ಸಾವಿರಾರು ಮಹಿಳೆಯರನ್ನು ಸಮಾಜದ ಮುಖ್ಯವಾಹಿನಿಗೆ ಕರೆದು ತಂದ ಮತ್ತು ಈಗಲೂ ಈ ನಿಟ್ಟಿನಲ್ಲಿ ಅಹೋರಾತ್ರಿ ಕಾರ್ಯ ನಿರ್ವಹಿಸುತ್ತಿರುವ ಮಹಿಳೆಯೇ ಸೀತವ್ವ ಜೊಡ್ಡತಿ. ದೇವದಾಸಿ ಎಂಬ ಅನಿಷ್ಟ ಪದ್ಧತಿಯ ಆಚರಣೆಯ ದಾಳಕ್ಕೆ ಸಿಲುಕಿದಾಗ ಸೀತವ್ವರಿಗೆ ಕೇವಲ ೭ ವರ್ಷ. ಸಮಾಜದ ಕಟ್ಟುಪಾಡುಗಳಿಗೆ ಒಳಗಾಗಿ ದೇವದಾಸಿ ಪದ್ಧತಿಯನ್ನು ನಿರ್ವಹಿಸುವುದು ಅವರಿಗೆ ಬಲವಂತದ ಹೇರಿಕೆಯಾಗಿತ್ತು. ಶಾಲೆಗೆ ಹೋಗುವ, ಏನೂ ತಿಳಿಯದ ವಯಸ್ಸಿನಲ್ಲಿ ದೇವದಾಸಿಯಾದ ಸೀತವ್ವ ಅನುಭವಿಸಿದ ಕಷ್ಟಗಳು ಅಷ್ಟಿಷ್ಟಲ್ಲ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಬ್ಬೂರು ಗ್ರಾಮದಲ್ಲಿ ಜನಿಸಿದ ಸೀತವ್ವ ಇವರ ಹುಟ್ಟಿದ ದಿನಾಂಕ, ವರ್ಷ ಯಾರಿಗೂ ಸ್ಪಷ್ಟವಾಗಿ ನೆನಪಿಲ್ಲ. ಇವರ ತಂದೆ ತಾಯಿಯವರಿಗೆ ೫ ಮಂದಿ ಹೆಣ್ಣು ಮಕ್ಕಳ ಹಿಂದೆ ಬಯಸದೇ ಹುಟ್ಟಿದ ಮಗು ಸೀತವ್ವ. ಒಂದರ ಹಿಂದೆ ಒಂದು ಹೆಣ್ಣು ಮಕ್ಕಳೇ ಹುಟ್ಟಿದಾಗ ಸೀತವ್ವನವರನ್ನು ದೇವದಾಸಿಯನ್ನಾಗಿ ಒಪ್ಪಿಸಿದರೆ ಮುಂದಿನ ಮಗು ಗಂಡು ಮಗುವಾಗುತ್ತದೆ ಎಂಬ ಗ್ರಾಮದ ಹಿರಿಯರ (?!)  ಮೂಢನಂಬಿಕೆಯಿಂದ ಅವರ ಹೆತ್ತವರು ಸೀತವ್ವರನ್ನು ಒಲ್ಲದ ಮನಸ್ಸಿನಿಂದ ದೇವದಾಸಿಯನ್ನಾಗಿ ಮಾಡುತ್ತಾರೆ. ಈ ಹರಕೆಯಿಂದ ತನ್ನ ೭ನೇ ವಯಸ್ಸಿಗೇ ಅನಿಷ್ಟ ಪದ್ಧತಿಗೆ ಬಲಿಯಾಗುತ್ತಾರೆ ಸೀತವ್ವ. ತನ್ನ ೧೭ನೇ ವಯಸ್ಸು ತಲುಪುವಾಗ ಅವರು ಮೂವರು ಮಕ್ಕಳ ತಾಯಿಯಾಗಿರುತ್ತಾರೆ.  

೧೯೯೧ರಲ್ಲಿ ಸೀತವ್ವ ಅವರ ಬಾಳಿನಲ್ಲಿ ಬೆಳಕಿನ ಜ್ಯೋತಿಯಾಗಿ ಬರುತ್ತಾರೆ ಮಹಿಳಾ ಅಭಿವೃದ್ಧಿ ನಿಗಮದ ಆಡಳಿತ ನಿರ್ದೇಶಕಿಯಾದ ಲತಮಾಲಾ. ಲತಮಾಲಾ ಅವರು ಸೀತವ್ವ ಅವರಿಗೆ ಈ ದೇವದಾಸಿ ಪದ್ಧತಿ ಹೇಗೆ ಹೆಣ್ಣು ಮಕ್ಕಳ ಬಾಳನ್ನು ನಾಶ ಮಾಡುತ್ತದೆ, ಅವರ ಭವಿಷ್ಯಕ್ಕೆ ಮಾರಕವಾಗುತ್ತದೆ ಎಂದು ವಿವರವಾಗಿ ತಿಳಿಸುತ್ತಾರೆ. ಸೀತವ್ವರ ಮೇಲೆ ಇವರ ಮಾತುಗಳು ತುಂಬಾ ಪ್ರಭಾವ ಬೀರುತ್ತವೆ. ದೇವದಾಸಿ ಪದ್ಧತಿಯಿಂದ ಹೊರಗೆ ಬಂದು ಮುಖ್ಯ ಸಮಾಜವಾಹಿನಿಗೆ ಸೇರಬೇಕು ಎಂದು ನಿರ್ಧರಿಸುತ್ತಾರೆ. ತಮ್ಮ ಜೊತೆ ಈ ದೇವದಾಸಿ ಪದ್ಧತಿಯಲ್ಲಿ ಸಿಲುಕಿದ್ದ ಹಲವಾರು ಮಂದಿ ಜೊತೆ ಈ ವಿಷಯವನ್ನು ಹಂಚಿಕೊಳ್ಳುತ್ತಾರೆ. ಅವರ ಮನಪರಿವರ್ತನೆ ಮಾಡುತ್ತಾರೆ. 

ದೇವದಾಸಿಯರು ಪ್ರತೀ ವರ್ಷ ಉತ್ತರ ಕರ್ನಾಟಕ ಹಾಗೂ ದಕ್ಷಿಣ ಮಹಾರಾಷ್ಟ್ರದಲ್ಲಿ ನಡೆಯುವ ಉತ್ಸವ, ಜಾತ್ರೆಗಳಿಗೆ ತೆರಳುವ ಸಂಪ್ರದಾಯವಿದೆ. ಈ ಸಂಪ್ರದಾಯವನ್ನು ಸೀತವ್ವ ಹಾಗೂ ಸಂಗಡಿಗರು ತಮ್ಮ ದೇವದಾಸಿ ವಿರುದ್ಧದ ಪ್ರಚಾರಕ್ಕಾಗಿ ಬಳಸಿಕೊಂಡರು. ಎಲ್ಲೆಲ್ಲಿ ಹೋಗುತ್ತಿದ್ದರೋ ಅಲ್ಲಿ ಜನ ಜಾಗೃತಿಯನ್ನು ಮಾಡುತ್ತಿದ್ದರು. ಹೀಗೆ ಸೀತವ್ವರ ಪ್ರಭಾವಶಾಲಿ ಭಾಷಣ ಹಾಗೂ ಪ್ರಚಾರಗಳಿಂದ ಒಂದು ವಾರದಲ್ಲೇ ದೇವದಾಸಿ ಪದ್ಧತಿಗೆ ಸಿಲುಕಿದ ೪೫ ಮಂದಿ ಮಹಿಳೆಯರು ಇವರ ತಂಡವನ್ನು ಸೇರಿಕೊಳ್ಳುತ್ತಾರೆ.

ನಂತರ ಗೋಕಾಕ್ಗೆ ತೆರಳುವ ಸೀತವ್ವ ‘ಮಹಿಳಾ ಅಭಿವೃದ್ಧಿ ಸಂರಕ್ಷಣಾ ಸಂಸ್ಥೆ’ (ಮಾಸ್) ಯನ್ನು ಸೇರುತ್ತಾರೆ. ಈ ಸಂಸ್ಥೆಯು ದೇವದಾಸಿ ಪದ್ಧತಿಯನ್ನು ನಿರ್ಮೂಲನೆ ಮಾಡುವುದಕ್ಕಾಗಿ ಶ್ರಮಿಸುತ್ತಿತ್ತು. ಈ ಸಂಸ್ಥೆಯ ಜೊತೆ ಕೈಜೋಡಿಸಿ ಸೀತವ್ವ ಸುಮಾರು ನಾಲ್ಕು ಸಾವಿರ ದೇವದಾಸಿ ಮಹಿಳೆಯರನ್ನು ಈ ಅನಿಷ್ಟ ಪದ್ಧತಿಯಿಂದ ಹೊರ ತರುತ್ತಾರೆ ಮತ್ತು ಅವರಿಗೆ ಸೂಕ್ತ ತರಭೇತಿ ನೀಡಿ ಅವರ ಸಾಮರ್ಥ್ಯಕ್ಕೆ ತಕ್ಕಂಥಹ ಕೆಲಸಗಳಿಗೆ ಸೇರಿಸುತ್ತಾರೆ. ಇದರಿಂದ ಮಹಿಳೆಯರು ಸ್ವಾವಲಂಬಿ ಬದುಕಿನತ್ತ ಮುಖ ಮಾಡುತ್ತಾರೆ. ತಮ್ಮ ೧೭ನೇ ವಯಸ್ಸಿನಲ್ಲಿ ಮಾಸ್ ಸೇರಿಕೊಂಡ ಸೀತವ್ವ ಕಳೆದ ಮೂರು ದಶಕಗಳಿಂದ ದೇವದಾಸಿ ಪದ್ಧತಿ ನಿರ್ಮೂಲನೆ ಹಾಗೂ ದಲಿತೋದ್ಧಾರಕ್ಕೆ ಶ್ರಮಿಸುತ್ತಿದ್ದಾರೆ. ಘಟಪ್ರಭಾ ಎಂಬ ಗ್ರಾಮದಲ್ಲಿ ವಾಸ್ತ್ಯವ್ಯವನ್ನು ಹೂಡಿ ಅಲ್ಲಿಂದಲೇ ಕೆಲಸಕಾರ್ಯಗಳನ್ನು ನಿರ್ವಹಣೆ ಮಾಡುತ್ತಿದ್ದಾರೆ.

೨೦೧೨ರಲ್ಲಿ ಮಾಸ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (CEO) ಯಾಗಿ ಅಧಿಕಾರವನ್ನು ವಹಿಸಿಕೊಳ್ಳುತ್ತಾರೆ. ಸುಮಾರು ನಾಲ್ಕು ಸಾವಿರ ಮಂದಿ ಮಾಜಿ ದೇವದಾಸಿ ಮಹಿಳೆಯರು ಇದರ ಸದಸ್ಯರಾಗಿದ್ದಾರೆ. ಸೀತವ್ವ ಸಮಾಜದಲ್ಲಿ ಜಾಗೃತಿ ಮೂಡಿಸಲು ಮತ್ತು ಹೆತ್ತವರು ತಮ್ಮ ಹೆಣ್ಣು ಮಕ್ಕಳನ್ನು ಈ ಅನಿಷ್ಟ ಪದ್ಧತಿಗೆ ದೂಡದಂತೆ ಮಾಡಲು ಶ್ರಮಿಸುತ್ತಿದ್ದಾರೆ. ಇವರು ಅಸಂಖ್ಯಾತ ಜನಜಾಗೃತಿ ಶಿಬಿರಗಳು ಹಾಗೂ ದೇವದಾಸಿ ಪದ್ಧತಿಯಿಂದ ಹೊರ ಬಂದವರಿಗೆ ಲೈಂಗಿಕ ಕಾಯಿಲೆಗಳ ಬಗ್ಗೆ ಮಾಹಿತಿ, ಆರೋಗ್ಯ ತಪಾಸಣೆ ಎಲ್ಲವನ್ನೂ ಮಾಡಿಸುತ್ತಿದ್ದಾರೆ. ಸೀತವ್ವ ಇವರು ಸುಮಾರು ೩೦೦ಕ್ಕೂ ಅಧಿಕ ಸ್ವಸಹಾಯ ಗುಂಪುಗಳನ್ನು ಸ್ಥಾಪಿಸಿದ್ದಾರೆ. ಇದರಿಂದ ಮಾಜಿ ದೇವದಾಸಿಯರಿಗೆ ತಮ್ಮ ಸಣ್ಣ ಪುಟ್ಟ ಹಣಕಾಸು ವ್ಯವಹಾರಗಳಿಗೆ ಸಾಲ ಸೌಲಭ್ಯ ದೊರೆಯುವಂತಾಗಿದೆ. ಬ್ಯಾಂಕ್ ಗಳು ಹಾಗೂ ಸಣ್ಣ ಫೈನಾನ್ಸ್ ಮೂಲಕವೂ ಇವರಿಗೆ ಹಣಕಾಸಿನ ಬೆಂಬಲ ಸಿಗುತ್ತಿದೆ, ಇದು ದೇವದಾಸಿ ಪದ್ಧತಿಯನ್ನು ತ್ಯಜಿಸಿ ಬಂದವರಿಗೆ ತಮ್ಮ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಲು ನೆರವಾಯಿತು. ಬೆಳಗಾವಿ ಜಿಲ್ಲೆಯ ಸವದತ್ತಿ, ಗೋಕಾಕ, ರಾಯಭಾಗ ಹಾಗೂ ಅಥಣಿ ತಾಲೂಕಿನಲ್ಲಿ ಈ ರೀತಿಯ ಅನಿಷ್ಟ ಪದ್ಧತಿಗಳ ಆಚರಣೆ ಸಾಕಷ್ಟು ನಡೆಯುತ್ತಿದ್ದುವು. ಅವುಗಳಿಗೆಲ್ಲಾ ಸೀತವ್ವ ಮುಂದಾಳತ್ವದ ಈ ಸಂಸ್ಥೆ ಬಹುತೇಕ ತಡೆಯೊಡ್ಡಿದೆ.

ಈ ಎಲ್ಲಾ ಸಮಾಜಮುಖಿ ಕಾರ್ಯಗಳನ್ನು ಗಮನಿಸಿದ ಭಾರತ ಸರಕಾರವು ಸೀತವ್ವ ಜೋಡ್ಡತಿಯವರಿಗೆ ೨೦೧೮ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಸೀತವ್ವ ಅವರಿಗೆ ಈಗ ಸುಮಾರು ೪೮ ವರ್ಷ. ಕಳೆದ ಮೂರು ದಶಕಗಳಿಂದ ಅವರು ಈ ಒಂದು ಕಾರ್ಯಕ್ಕಾಗಿಯೇ ತಮ್ಮ ಜೀವನವನ್ನು ಸವೆಸುತ್ತಾ ಬಂದಿದ್ದಾರೆ. ಮಾಜಿ ದೇವದಾಸಿಯರು ಹಾಗೂ ಅವರ ಮಕ್ಕಳ ಬದುಕು ಉತ್ತಮ ರೀತಿಯಲ್ಲಿ ಸಾಗಲು ತಮ್ಮಿಂದ ಆದಷ್ಟು ಜಾಗೃತಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಆದರೂ ‘ದೇವರ ಸೇವೆ' (ದೇವದಾಸಿ) ಎಂಬ ಅನಿಷ್ಟ ಪದ್ಧತಿಯು ಇನ್ನೂ ನಮ್ಮ ಗ್ರಾಮೀಣ ಭಾಗಗಳಲ್ಲಿ ಆಚರಣೆಯಾಗುತ್ತಿರುವುದು ಖೇದಕರ ಸಂಗತಿ. ಇನ್ನು ಮುಂದಿನ ದಿನಗಳಲ್ಲಾದರೂ ಈ ಪದ್ಧತಿಯು ನಮ್ಮ ಸಮಾಜದಿಂದ ತೊಲಗಲಿ, ಸೀತವ್ವ ಜೋಡ್ಡತಿ ತೋರಿಸಿದ ಧೈರ್ಯವನ್ನು ಎಲ್ಲಾ ಮಹಿಳೆಯರೂ ತೋರಿಸಲಿ ಎಂಬುವುದೇ ನಮ್ಮ ಆಶಯ.

ಚಿತ್ರ ಕೃಪೆ: ವಿವಿಧ ಅಂತರ್ಜಾಲ ತಾಣಗಳಿಂದ