ಮಹಿಳೆಯರ ಸ್ವಾತಂತ್ರ್ಯ ಮತ್ತು ಸಮಾನತೆಯನ್ನು ಬೆಂಬಲಿಸುತ್ತಾ...

ಮಹಿಳೆಯರ ಸ್ವಾತಂತ್ರ್ಯ ಮತ್ತು ಸಮಾನತೆಯನ್ನು ಬೆಂಬಲಿಸುತ್ತಾ...

ಹೆಣ್ಣು-ಸೌಂದರ್ಯ-ಮೇಕಪ್-ತುಂಡುಡುಗೆ-ಗಂಡು-ಆತನ ಮನಸ್ಸು-ನಮ್ಮ ಸಂಪ್ರದಾಯ ಇತ್ಯಾದಿ, ಸಾಂಪ್ರದಾಯಿಕ ಮತ್ತು ಆಧುನಿಕ ಮನಸ್ಥಿತಿಯ ಎರಡೂ ವರ್ಗದ ಕೆಲವರಿಗೆ ಕಿರಿಕಿರಿ ಎನಿಸಬಹುದು. ಆದರೆ ಮನಸ್ಸುಗಳ ಅಂತರಂಗದ ಚಳವಳಿಯ ಭಾಗವಾಗಿ ಇದನ್ನು ಚರ್ಚಿಸಲೇಬೇಕಾಗಿದೆ.

ಸೌಂದರ್ಯ ಎಂದರೇನು? ಆರೋಗ್ಯವೇ? ದೇಹ ರಚನೆಯೇ? ಬಣ್ಣವೇ? ಆಕಾರವೇ? ಬುದ್ದಿವಂತಿಕೆಯೇ? ಪ್ರಸಾಧನವೇ? ಬಟ್ಟೆಯೇ? ಮಾತುಗಳೇ? ಹಣವೇ? ಅಧಿಕಾರವೇ?  ಲಿಂಗವೇ? ಮತ್ತು ಸೌಂದರ್ಯ ಅಡಗಿರುವುದೆಲ್ಲಿ? ದೇಹದಲ್ಲಿಯೇ? ನೋಡುಗರ ಕಣ್ಣು ಮನಸ್ಸುಗಳಲ್ಲಿಯೇ? ನಡವಳಿಕೆಯಲ್ಲಿಯೇ? ಸಹಜತೆಯಲ್ಲಿಯೇ? ಕೃತಕತೆಯಲ್ಲಿಯೇ? ಭಾವನೆಗಳಲ್ಲಿಯೇ?

ಇದನ್ನು ಸ್ಪಷ್ಟವಾಗಿ ಹೇಳುವುದು ಕಷ್ಟವಾಗುತ್ತದೆ ಅಥವಾ ಭಾಗಶಃ ಸತ್ಯ ಮಾತ್ರವಾಗುತ್ತದೆ. ವ್ಯಕ್ತಿಯಿಂದ ವ್ಯಕ್ತಿಗೆ, ಪ್ರದೇಶದಿಂದ ಪ್ರದೇಶಕ್ಕೆ, ವಯಸ್ಸಿನಿಂದ ವಯಸ್ಸಿಗೆ, ಅರಿವು ಅಜ್ಞಾನದಿಂದ ಆಧ್ಯಾತ್ಮಿಕತೆಯವರೆಗೆ ಬದಲಾಗುತ್ತಲೇ ಇರುತ್ತದೆ. ಇದನ್ನು ಸರಳ ಸಾಮಾನ್ಯ ಜನರು ಹೊಂದಿರುವ ಅಭಿಪ್ರಾಯದ ಮೇಲೆ ಮಾತ್ರ ಚರ್ಚಿಸುವುದು ಉತ್ತಮ.

ಮನುಷ್ಯ ಸೌಂದರ್ಯದ ಬಗ್ಗೆ ಮಾತನಾಡುವುದಾದರೆ, ಸಾಮಾನ್ಯವಾಗಿ ಹೆಣ್ಣು ಸೌಂದರ್ಯದ ಸಂಕೇತ ಮತ್ತು ಪ್ರತಿರೂಪ ಎಂದು ಕರೆಯಲಾಗುತ್ತದೆ. ಸೃಷ್ಟಿಯಲ್ಲಿರುವ ಒಂದು ಸಣ್ಣ ಭಿನ್ನತೆ ಎಂದರೆ, ಮಗುವಿನ ಜನನದ ಗರ್ಭಾಶಯ ಹೊಂದಿರುವುದು ಹೆಣ್ಣು ಮತ್ತು ಅದು ಒಂದು ವರ್ಷ ಕಾಲದಷ್ಟು ದೀರ್ಘ ಪ್ರಕ್ರಿಯೆ ಹಾಗೂ ನೋವು, ಜವಾಬ್ದಾರಿ, ಗಂಭೀರ ಆರೈಕೆ ಬಯಸುವ ಕ್ರಿಯೆ. ಇದು ಹೆಣ್ಣನ ಬಗ್ಗೆ ಸ್ವಲ್ಪ ಗೌರವಯುತ ಮತ್ತು ಮೃದು ಧೋರಣೆ ಹೊಂದುವಂತೆ ಮಾಡಿದೆ. 

ಆಧುನಿಕ ನಾಗರಿಕ ಸಮಾಜದಲ್ಲಿ ಕೌಟುಂಬಿಕ ವ್ಯವಸ್ಥೆಯ  ಅಡಿಯಲ್ಲಿ ಮದುವೆ ಎಂಬ ಒಂದು ಸಂಪ್ರದಾಯ ರೂಪಿಸಿ ಸಂತಾನಾಭಿವೃದ್ಧಿ ಮತ್ತು ಲೈಂಗಿಕ ಕ್ರಿಯೆಗೆ ಅಧೀಕೃತತೆ ನೀಡಲಾಗಿದೆ‌. ಇಲ್ಲಿ ಗಂಡು ಹೆಣ್ಣನ್ನು ಮದುವೆ ಹೆಸರಿನಲ್ಲಿ ಬಂಧಿಸಲಾಗುತ್ತದೆ, ನಿಯಂತ್ರಿಸಲಾಗುತ್ತದೆ ಮತ್ತು ಇಬ್ಬರ ಅಧಿಕಾರ ಸ್ವಾತಂತ್ರ್ಯ ಮೊಟಕುಗೊಳಿಸಲಾಗುತ್ತದೆ. ಆದರೆ ಭಾರತೀಯ ಸಮಾಜದಲ್ಲಿ ಬಹುತೇಕ ಪುರುಷ ಪ್ರಧಾನ ವ್ಯವಸ್ಥೆ ಇರುವುದರಿಂದ ಹೆಣ್ಣನ್ನು ಗಂಡಿಗೆ ಮಾರಲಾಗುತ್ತದೆ. ಆಕೆ ಆತನ ಖಾಸಗಿ ಆಸ್ತಿ ಎಂದೇ ಭಾವಿಸಲಾಗಿದೆ. ಪತಿಯೇ ಪರದೈವ ಎಂಬ ನಾಣ್ಣುಡಿಗೆ ಆಕೆ ಬದ್ದಳಾಗಿರಬೇಕಾಗುತ್ತದೆ. ಇದೇ ಕಾರಣಕ್ಕಾಗಿ ಮತ್ತು ಲೈಂಗಿಕತೆಯ ಸಾಂಪ್ರದಾಯಿಕ ಶೈಲಿಯಿಂದಾಗಿ ಹೆಣ್ಣಿಗೆ ನಾಚಿಕೆ - ಸೌಂದರ್ಯ - ಸೌಮ್ಯತೆಯ ಆರೋಪ ಹೊರಿಸಲಾಗಿದೆ ಮತ್ತು ಅದನ್ನೇ ಅಧೀಕೃತಗೊಳಿಸಲಾಗಿದೆ.

ಇದರಿಂದಾಗಿ ಹೆಣ್ಣು ಸೌಂದರ್ಯವನ್ನು ಕಾಪಾಡಿಕೊಂಡು ಗಂಡನ್ನು ಆಕರ್ಷಿಸುವುದು ತನ್ನ ಕರ್ತವ್ಯ ಜವಾಬ್ದಾರಿ ವೃತ್ತಿ ಎಂದು ಭಾವಿಸುವಂತಾಗಿದೆ. ಇಲ್ಲಿ ಸೌಂದರ್ಯದ ಇನ್ನೊಂದು ಮುಖವೂ ಇದೆ. ಸಾಂಪ್ರದಾಯಿಕ ಶೈಲಿಯ ಭಾರತದಲ್ಲಿ ಆಧುನಿಕ ಮಹಿಳೆಯರ ತುಂಡುಡುಗೆ.  ಉಡುಗೆ ಅವರವರ ಸ್ವಾತಂತ್ರ್ಯ. ಅದನ್ನು ಪ್ರಶ್ನಿಸುವುದು ಸರಿಯಲ್ಲ. ಆದರೆ ಸಾಮಾನ್ಯ ಜನರಲ್ಲಿ ಇರುವ ಅಭಿಪ್ರಾಯವನ್ನು ಅರ್ಥಮಾಡಿಕೊಳ್ಳುವ ಮತ್ತು ಅರ್ಥಮಾಡಿಸುವ ಒಂದು ಪ್ರಯತ್ನ. ಹೆಚ್ಚು ಹೆಚ್ಚು ದೇಹ ಕಾಣುವ, ಕಡಿಮೆ ಬಟ್ಟೆ ತೊಡುವ ಹೆಣ್ಣನ್ನು ಹೆಚ್ಚು ಆಧುನಿಕ ಮತ್ತು ಶ್ರೀಮಂತ ಮಹಿಳೆ ಎಂದು ಸಾಮಾನ್ಯವಾಗಿ ಭಾವಿಸಲಾಗುತ್ತದೆ. ಅದಕ್ಕಾಗಿಯೇ ಫ್ಯಾಷನ್ ಡಿಸೈನಿಂಗ್ ಎಂಬ ಬೃಹತ್ ಉದ್ಯಮ ಅತಿ ವೇಗವಾಗಿ ಬೆಳವಣಿಗೆ ಕಾಣುತ್ತಿದೆ. 

ಇಲ್ಲಿನ ಮೂಲಭೂತ ಪ್ರಶ್ನೆ. ಹೆಣ್ಣು ಕಡಿಮೆ ಬಟ್ಟೆ ತೊಟ್ಟು ತನ್ನ ದೇಹದ ಭಾಗಗಳು ಕಾಣುವಂತೆ ಇರುವುದು ತನ್ನ ಸೌಂದರ್ಯವನ್ನು ಹೆಚ್ಚಿಸುತ್ತದೆ ಎಂದು ಭಾವಿಸಿರಬಹುದೇ? ಅದು ನನ್ನ ಸ್ವಾತಂತ್ರ್ಯ ಮತ್ತು ಹಕ್ಕು ಅದನ್ನು ಸಹಜವಾಗಿ ಚಲಾಯಿಸುವುದರಿಂದ ನನ್ನ ಆತ್ಮವಿಶ್ವಾಸ ಹೆಚ್ಚುವುದು ಎಂದೇ? ಇತರರು ನನ್ನನ್ನು ನೋಡಲಿ ಎಂಬ ಭಾವನೆಯೇ? ತನ್ನ ಇರುವಿಕೆಯನ್ನು ತೋರ್ಪಡಿಸುವ ಒಂದು ಆಕರ್ಷಕ ವಿಧಾನವೇ? ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆಯೇ? ಸಿನಿಮಾ ಮಾಧ್ಯಮಗಳ ಆಕರ್ಷಣೆಯೇ ?

ಇಲ್ಲಿ ಇನ್ನೂ ಒಂದು ಸೂಕ್ಷ್ಮವಿದೆ. ದೇಹ ಕಾಣುವ ಉಡುಗೆ ತೊಡುವ ಹೆಣ್ಣಿಗೆ ತನ್ನ ದೇಹದ ಯಾವ ಭಾಗಗಳು ಕಾಣುತ್ತಿವೆ, ಅದನ್ನು ಹೊರಗಿನ ಜನ ಹೇಗೆ ಮತ್ತು ಯಾವ ದೃಷ್ಟಿಯಿಂದ ನೋಡುತ್ತಾರೆ ಎಂಬ ಅರಿವೂ ಇರುತ್ತದೆ. ತನ್ನ ತಾಯಿ, ತಂಗಿ, ಅಕ್ಕ, ಮಗಳು ಮುಂತಾದ ರಕ್ತ ಸಂಬಂಧಿಗಳನ್ನು ಹೊರತುಪಡಿಸಿದ ಹೆಣ್ಣಿನ ಬಗ್ಗೆ ಈ ಸಮಾಜದ ಸಾಮಾನ್ಯ ಅಭಿಪ್ರಾಯ ಅವರಿಗೂ ತಿಳಿದಿದೆ.

ಇಲ್ಲಿನ  ಜಿಜ್ಞಾಸೆ ಎಂದರೆ, ಸೌಂದರ್ಯ ಬಟ್ಟೆಯಲ್ಲಿ ಅಡಗಿದೆ ಎಂದರೆ ದೇಹದ ಮಹತ್ವ ಏನು? ದೇಹದಲ್ಲಿ ಅಡಗಿದೆ ಎಂದರೆ ಯಾವ ಬಟ್ಟೆ ಹಾಕಿದರೆ ಏನು? ಜೊತೆಗೆ ಹೆಣ್ಣಿನ ತುಂಡುಡುಗೆ ಎಷ್ಟು ಮಿತಿ ಎಂಬುದಕ್ಕೆ ಯಾವುದೇ ಮಾನದಂಡ ನಿಗದಿಪಡಿಸಲು ಸಾಧ್ಯವಿಲ್ಲ. ಹಾಗೆಯೇ ಸಾಂಪ್ರದಾಯಿಕ ಉಡುಗೆ ಅತ್ಯಂತ ಸಭ್ಯ ಎಂದು ಹೇಳುವುದು ಮೂರ್ಖತನ. ಏಕೆಂದರೆ ಮತ್ತೆ ಮೂಲ ಪ್ರಶ್ನೆ ಸೌಂದರ್ಯ ನೋಡುವವರ ದೃಷ್ಟಿ ಅವಲಂಬಿಸಿದೆ ಎನ್ನಲಾಗುತ್ತದೆ. 

ತುಂಡುಡುಗೆ ಮಹಿಳೆಯರ ದೌರ್ಜನ್ಯಕ್ಕೆ ಕಾರಣ ಎಂಬುದಕ್ಕೆ ಯಾವುದೇ ಆಧಾರವಿಲ್ಲ. ಏಕೆಂದರೆ ಪ್ರಪಂಚದ ಎಲ್ಲಾ ಪ್ರದೇಶಗಳಲ್ಲೂ ಯಾವುದೇ ರೀತಿಯ ಉಡುಗೆ ಇರಲಿ ಹೆಣ್ಣಿನ ಮೇಲಿನ ಲೈಂಗಿಕ ದೌರ್ಜನ್ಯ ಮಾತ್ರ ಒಂದೇ ರೀತಿಯಲ್ಲಿದೆ. ಅದಕ್ಕಾಗಿ ಅದರ ವಿರೋಧಿ ದಿನವನ್ನು ವಿಶ್ವದಾದ್ಯಂತ ಆಚರಿಸುವ ಪರಿಸ್ಥಿತಿ ಇದೆ. ಏನೇ ಆಗಲಿ, ಇದೊಂದು ವಿವಿಧ ಮುಖಗಳ ಸ್ಪಷ್ಟ ಉತ್ತರ ಸಿಗದ ವ್ಯವಸ್ಥೆಯ ಒಂದು ಲೋಪದೋಷ. ಆಧುನಿಕ ನಾಗರಿಕ ಪ್ರಜ್ಞೆ ಇದಕ್ಕೆ ಒಂದಷ್ಟು ಪರಿಹಾರ ಒದಗಿಸಬಹುದು.

ಹೆಣ್ಣಿನ ಶೋಷಣೆಯ ಇನ್ನಷ್ಟು ಆಳವಾದ ಅಂಶಗಳು ಇವೆ. ಆದರೆ ಅದು ಜನರ ಸಾಮಾನ್ಯ ನಂಬಿಕೆಯ ಅಶ್ಲೀಲತೆಯನ್ನು ಮೀರಬಹುದು. ಅದಕ್ಕಾಗಿ ಇಷ್ಟು ಮಾತ್ರ. ಎಲ್ಲಾ ಸಂದರ್ಭದಲ್ಲೂ ಮಹಿಳೆಯರ ಸ್ವಾತಂತ್ರ್ಯ ಮತ್ತು ಸಮಾನತೆಯನ್ನು ಬೆಂಬಲಿಸುತ್ತಾ...

  • 291 ನೆಯ ದಿನ ನಮ್ಮ ಜ್ಞಾನ ಭಿಕ್ಷಾ ಪಾದಯಾತ್ರೆ ಕೊಡಗು ಜಿಲ್ಲೆಯ ಮದೆನಾಡು ಗ್ರಾಮದಿಂದ ಸುಮಾರು 10 ಕಿಲೋಮೀಟರ್ ದೂರದ ಮಡಿಕೇರಿ ತಾಲ್ಲೂಕು ತಲುಪಿತು. ಮಲೆನಾಡು ಕೊಡಗಿನ ಸೌಂದರ್ಯ ನೋಡಿಯೇ ಅನುಭವಿಸಬೇಕು. ಇಂದು 19/8/2021 ಗುರುವಾರ 292 ನೆಯ ದಿನ  ನಮ್ಮ ಕಾಲ್ನಡಿಗೆ ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನಿಂದ  ಸುಮಾರು 16  ಕಿಲೋಮೀಟರ್ ‌ದೂರದ ಮೂರ್ನಾಡು ಗ್ರಾಮ ತಲುಪಲಿದೆ. ನಾಳೆ 20/8/2021 ಶುಕ್ರವಾರ  293 ನೆಯ ದಿನ ನಮ್ಮ ಕಾಲ್ನಡಿಗೆ ವಿರಾಜಪೇಟೆ ತಾಲ್ಲೂಕಿನತ್ತಾ...

-ವಿವೇಕಾನಂದ. ಹೆಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ