ಮಹೇಶ್ವರಿ

ಮಹೇಶ್ವರಿ

ಪುಸ್ತಕದ ಲೇಖಕ/ಕವಿಯ ಹೆಸರು
ಸು. ರುದ್ರಮೂರ್ತಿ ಶಾಸ್ತ್ರಿ
ಪ್ರಕಾಶಕರು
ತನು ಮನು ಪ್ರಕಾಶನ, ವಿವೇಕಾನಂದ ವೃತ್ತದ ಹತ್ತಿರ, ಮೈಸೂರು
ಪುಸ್ತಕದ ಬೆಲೆ
ರೂ. ೨೭೫.೦೦, ಮುದ್ರಣ: ೨೦೨೩

ಸು. ರುದ್ರಮೂರ್ತಿ ಶಾಸ್ತ್ರಿಯವರು ಬರೆದ ‘ಮಹೇಶ್ವರಿ’ ಎಂಬ ಕಾದಂಬರಿಗೆ ಆಧಾರವಾದ ಶೂದ್ರಕನ ಸಂಸ್ಕೃತ ನಾಟಕ 'ಮೃಚ್ಛಕಟಿಕ' ಬಹಳ ಪ್ರಸಿದ್ಧವಾದ ಕೃತಿ. ಅದರಲ್ಲಿ ವಸಂತಸೇನೆ ಮತ್ತು ಚಾರುದತ್ತರ ಪ್ರೇಮ ಕಥೆಯೇ ಪ್ರಧಾನವಾದರೂ, ಪರೋಕ್ಷವಾಗಿ ರಾಜಕೀಯ ದುರಾಡಳಿತದ ಒಂದು ಎಳೆ ಗುಪ್ತಗಾಮಿನಿಯಾಗಿದೆ. ಆ ಅಂಶಕ್ಕೆ ಈ ಕಾದಂಬರಿಯಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ ಎನ್ನುತ್ತಾರೆ ಲೇಖಕರು. ರುದ್ರಮೂರ್ತಿ ಶಾಸ್ತ್ರಿಯವರು ತಮ್ಮ ಮುನ್ನುಡಿಯಲ್ಲಿ ಬರೆದ ಕೆಲವು ಸಾಲುಗಳು ನಿಮ್ಮ ಓದಿಗಾಗಿ ಇಲ್ಲಿ ನೀಡಲಾಗಿವೆ. ಅದರಲ್ಲಿ...

“ಉಜ್ಜಯಿನಿಯ ಅರಮನೆ ವಿಶೇಷವಾಗಿ ಅಲಂಕಾರಗೊಂಡಿತ್ತು. ಅರಮನೆ ಮಾತ್ರವಲ್ಲ, ಇಡೀ ನಗರವೇ ನವವಧುವಿನಂತೆ ಅಲಂಕಾರಗೊಂಡು ಸಂಭ್ರಮಿಸುತ್ತಿತ್ತು. ಪ್ರತಿಯೊಂದು ಮನೆಯಲ್ಲೂ ಪ್ರತಿಯೊಂದು ವ್ಯಕ್ತಿಯಲ್ಲೂ ಸಂತೋಷ, ಸಂಭ್ರಮ ತುಂಬಿ ತುಳುಕುತ್ತಿತ್ತು. ಪ್ರತಿಯೊಂದು ಮನೆಯೂ, ಪ್ರತಿಯೊಂದು ಬೀದಿಯೂ ತಳಿರು ತೋರಣಗಳಿಂದ ಅಲಂಕೃತವಾಗಿದ್ದವು; ವರ್ಣರಂಜಿತ ರಂಗೋಲಿಗಳಿಂದ ಸುಂದರಗೊಂಡಿದ್ದವು. ಎಲ್ಲರೂ ಹೊಸಬಟ್ಟೆ ತೊಟ್ಟು, ಸುಂದರವಾಗಿ ಅಲಂಕರಿಸಿಕೊಂಡು ಆನಂದದಿಂದ ಸಡಗರದಿಂದ ಓಡಾಡುತ್ತಿದ್ದರು.

ಅದು ಪಾಲಕ ಮಹಾರಾಜನ ಪಟ್ಟಾಭಿಷೇಕದ ವಾರ್ಷಿಕೋತ್ಸವ. ಪ್ರಜೆಗಳಿಗೆ ಪಾಲಕನ ಮೇಲೆ ಅಪಾರವಾದ ಪ್ರೀತಿ ಗೌರವ; ಪಾಲಕನಿಗೂ ಪ್ರಜೆಗಳ ಮೇಲೆ ಅಪಾರವಾದ ಅಕ್ಕರೆ. ವಾರ್ಷಿಕೋತ್ಸವ ಕೇವಲ ರಾಜನ ಮನೆಯವರಿಗೂ, ಅರಮನೆಗೂ ಮಾತ್ರ ಸೀಮಿತವಾಗಬಾರದೆಂದು ಪಾಲಕ ತಾನು ಪಟ್ಟವೇರಿದ ಮೊದಲ ವರ್ಷದಿಂದಲೇ ಪಟ್ಟಾಭಿಷೇಕದ ವಾರ್ಷಿಕೋತ್ಸವವನ್ನು ಇಡೀ ಉಜ್ಜಯಿನಿ ನಗರದ ಹಬ್ಬದಂತೆ ಆಚರಿಸುತ್ತಿದ್ದ. ಪ್ರಜೆಗಳೆಲ್ಲರೂ ತಮ್ಮ ಮನೆಯ ಹಬ್ಬದಂತೆಯೇ ಪ್ರೀತಿಯಿಂದ ಭಾಗವಹಿಸುತ್ತಿದ್ದರು.

ಗುರುತರವಾದ ಅಪರಾಧ ಮಾಡಿದವರ ಹೊರತಾಗಿ ಉಳಿದ ಎಲ್ಲರನ್ನೂ ಸೆರೆಮನೆಯಿಂದ ಬಿಡಿಸಲಾಗಿತ್ತು. ಅಂದು ಬೆಳಿಗ್ಗೆ ಉಜ್ಜಯಿನಿಯ ಮಹಾಕಾಲ ದೇವಾಲಯದಲ್ಲಿ ವೈಭವದ ವಿಶೇಷಪೂಜೆ. ಅಲ್ಲಿ ಗಣಿಕೆ, ಅಪ್ಸರೆಗಿಂತ ಚೆಲುವೆಯಾದ ವಸಂತಸೇನೆಯ ಮನಮೋಹಕ ನೃತ್ಯ. ಅದು ಪರಮೇಶ್ವರನಿಗೆ ಭಕ್ತಿಕುಸುಮಾಂಜಲಿಯನ್ನು ಸಮರ್ಪಿಸುವ ಸಾತ್ವಿಕ ನೃತ್ಯ, ಗೀತೆಯ ಭಾವ, ನರ್ತಕಿಯ ಭಾವ ಭಂಗಿಗಳಲ್ಲಿ ಶೃಂಗಾರದ ಹೊರತಾಗಿ ಭಕ್ತಿ, ಸಮರ್ಪಣ ಭಾವಗಳಿಗೇ ಹೆಚ್ಚಿನ ಆದ್ಯತೆ.

ರಾಜನೂ ಈ ಕಾದಂಬರಿಗೆ ಆಧಾರವಾದ ಶೂದ್ರಕನ ಸಂಸ್ಕೃತ ನಾಟಕ 'ಮೃಚ್ಛಕಟಿಕ' ಬಹಳ ಪ್ರಸಿದ್ಧವಾದ ಕೃತಿ. ಅದರಲ್ಲಿ ವಸಂತಸೇನೆ ಮತ್ತು ಚಾರುದತ್ತರ ಪ್ರೇಮ ಕಥೆಯೇ ಪ್ರಧಾನವಾದರೂ, ಪರೋಕ್ಷವಾಗಿ ರಾಜಕೀಯ ದುರಾಡಳಿತದ ಒಂದು ಎಳೆ ಗುಪ್ತಗಾಮಿನಿಯಾಗಿದೆ. ಆ ಅಂಶಕ್ಕೆ ಈ ಕಾದಂಬರಿಯಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ.

ಮಿತಿ ಮೀರಿದಾಗ ಯಾವುದೇ ದುರಾಡಳಿತ ಬದುಕಿ ಉಳಿಯಲಾರದು. ನೊಂದ ಜನ ಅಂತಿಮವಾಗಿ ತಿರುಗಿ ಬೀಳುವುದು ಖಂಡಿತ. ಸಾಕಷ್ಟು ದೌರ್ಜನ್ಯಗಳಿಗೆ ಒಳಗಾದ ಉಜ್ಜಯನಿಯ ಪ್ರಜೆಗಳು ಮಹೇಶ್ವರಿ, ಚಾರುದತ್ತ, ಆರ್ಯಕನ ನೇತೃತ್ವದಲ್ಲಿ ದೊಡ್ಡ ಆಂದೋಲನವನ್ನು ರೂಪಿಸಿ, ದುರಾಡಳಿತವನ್ನು ನಾಶಗೊಳಿಸಿದ ರೋಚಕ ಕಥೆ ಈ ಕಾದಂಬರಿಯಲ್ಲಿದೆ.” ೨೪೪ ಪುಟಗಳ ಈ ಕಾದಂಬರಿಯು ಓದುತ್ತಾ ಓದುತ್ತಾ ರೋಚಕ ಘಟ್ಟಕ್ಕೆ ತಲುಪುತ್ತದೆ.