ಮಾಂಸಹಾರಿ ಸಸ್ಯಗಳ ಅದ್ಭುತ ಲೋಕ
ಹೊಟ್ಟೆಪಾಡಿಗಾಗಿ ನಾವು ಏನೆಲ್ಲಾ ಸರ್ಕಸ್ ಮಾಡುತ್ತೇವೆ. ದಾಸರು ಹೇಳಿದ ಹಾಗೆ ‘ ಎಲ್ಲರೂ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ' ಇದು ನೂರು ಶೇಕಡಾ ಸತ್ಯವಾದ ಮಾತು. ಇದು ಮಾನವರಿಗೆ ಮಾತ್ರ ಅನ್ವಯಿಸುತ್ತಾ, ಇಲ್ಲ ಪ್ರಾಣಿಗಳಿಗೂ, ಪಕ್ಷಿಗಳಿಗೂ ಹಾಗೂ ಜೀವ ಇರುವ ಎಲ್ಲಾ ಜೀವಿಗಳಿಗೂ ಅನ್ವಯಿಸುತ್ತದೆ ಎಂಬುವುದರಲ್ಲಿ ಎರಡು ಮಾತಿಲ್ಲ. ಬಟ್ಟೆಯ ಹಂಗು ಮಾನವನನ್ನು ಬಿಟ್ಟರೆ ಬೇರೆ ಜೀವಿಗಳಿಗಿಲ್ಲ. ಆದರೆ ಹೊಟ್ಟೆಯ ಹಸಿವು ಎಂಬುದು ಸಕಲ ಜೀವಿಗಳನ್ನು ಏನೆಲ್ಲಾ ಮಾಡಿಸಿಬಿಡುತ್ತದೆ? ನಿಮಗೆ ತಿಳಿದೇ ಇದೆ. ಇರಲಿ, ಇದು ಓಡಾಡುವ ಜೀವ ಜಂತುಗಳ ವಿಷಯವಾಯಿತು. ಹೊಟ್ಟೆ ಪಾಡಿಗಾಗಿ ಸಸ್ಯಗಳೂ ಮಾಂಸಹಾರ ತಿನ್ನುತ್ತವೆಯೆಂದರೆ ನಿಮಗೆ ಅಚ್ಚರಿಯಾದೀತು ಅಲ್ಲವೇ? ಸಸ್ಯಗಳಿಗೇಕೆ ಮಾಂಸಹಾರ? ಅದಕ್ಕೆ ಬೇಕಾಗುವುದು ಗಾಳಿ, ಬೆಳಕು, ನೀರು ಮತ್ತು ಮಣ್ಣು ಅಲ್ಲವೇ ಎಂದು ನಿಮ್ಮ ಅನಿಸಿಕೆಯಾಗಿರಬಹುದು. ಆದರೆ ಕೆಲವು ಸಸ್ಯಗಳಿಗೆ ಮಣ್ಣಿನಲ್ಲಿರುವ ಸಾರಾಂಶಗಳು ಸಾಕಾಗುವುದಿಲ್ಲ. ಮುಖ್ಯವಾಗಿ ಸಾರಜನಕದ (ನೈಟ್ರೋಜೆನ್) ಕೊರತೆ ಭೂಮಿಯ ಮಣ್ಣಿನಲ್ಲಿ ಕಂಡು ಬರುತ್ತದೆ. ಕೆಲವು ಸಸ್ಯಗಳು ಬೆಳೆಯುವುದು ಇಂತಹ ಕಡಿಮೆ ಸಾರ ಇರುವ ಸ್ಥಳಗಳಲ್ಲಿ. ಆ ಕಾರಣದಿಂದ ಅದು ತಾನು ಬದುಕುವುದಕ್ಕಾಗಿ ಕೀಟಗಳನ್ನು ಹಿಡಿದು ತಿನ್ನುತ್ತದೆ. ಹಿಡಿದು ತಿನ್ನಲು ಸಸ್ಯಗಳಿಗೆ ಬಾಯಿ ಇದೆಯೇ? ಖಂಡಿತಾ ಇಲ್ಲ. ಆದರೆ ಮಾಂಸಹಾರಿ ಸಸ್ಯಗಳು ತಮ್ಮ ಹೂವು, ಎಲೆಗಳಲ್ಲಿ ಗಮನಾರ್ಹ ಬದಲಾವಣೆ ಮಾಡಿಕೊಂಡು ಕೀಟಗಳನ್ನು ಕಬಳಿಸುತ್ತದೆ. ಇಂತಹ ಕೆಲವು ಸಸ್ಯಗಳ ಬಗ್ಗೆ ನಾವು ತಿಳಿದುಕೊಳ್ಳೋಣ ಬನ್ನಿ.
ಹೂಜಿ ಗಿಡ (Pitcher Plant): ಈ ಸಸ್ಯದ ಎಲೆಯು ಹೂಜಿಯ ಆಕಾರದಲ್ಲಿ ಪರಿವರ್ತನೆಯಾಗಿದ್ದು (ಚಿತ್ರ ಗಮನಿಸಿ) ಹೂಜಿ ನಳಿಕೆಯು ಟೊಳ್ಳಾಗಿದೆ. ಅದರಲ್ಲಿ ನೀರು ಇರುತ್ತದೆ. ಹೂಜಿಯ ಮೇಲ್ಭಾಗದಲ್ಲಿ ಒಂದು ಸಣ್ಣ ಎಲೆಯು ಅದರ ಮುಚ್ಚಳದಂತೆ ಕೆಲಸ ಮಾಡುತ್ತದೆ. ಆ ಮುಚ್ಚಳದ ಕೆಳಭಾಗದಲ್ಲಿ ಸಿಹಿಯಾದ ಜೇನಿನಂಥಹ ಪದಾರ್ಥವಿರುತ್ತದೆ. ಅದರ ಆಕರ್ಷಣೆಗೆ ನೋಣಗಳು, ಕೀಟಗಳು, ಇರುವೆಗಳು ಬರುತ್ತವೆ. ಆ ಜೇನು ಹೀರುವ ಸಂದರ್ಭದಲ್ಲಿ ಕೀಟಗಳು ಜಾರಿ ಆ ಹೂಜಿಯೊಳಗೆ ಬೀಳುತ್ತವೆ. ಒಮ್ಮೆ ಬಿದ್ದ ನಂತರ ಆ ಕೀಟದ ಕತೆ ಮುಗಿಯಿತು ಅಂತಾನೇ ತಿಳಿದುಕೊಳ್ಳಿ. ಆ ಹೂಜಿಯ ಒಳಗೆ ಇರುವ ನೀರಿನಲ್ಲಿ ಬಿದ್ದ ನಂತರ ಆ ಕೀಟಗಳು ಸಾಯುತ್ತವೆ. ಆ ಕೀಟಗಳ ದೇಹದಿಂದ ಸಸ್ಯದ ಬೆಳವಣಿಗೆಗೆ ಬೇಕಾದ ಸಾರವನ್ನು ಸಣ್ಣ ನಳಿಕೆಯಂತಹ ಭಾಗದಿಂದ ಹೀರುತ್ತವೆ. ಕೆಲವು ಹೂಜಿಗಳು ಆಕಾರದಲ್ಲಿ ದೊಡ್ಡದಾಗಿರುತ್ತವೆ. ಅದರ ಒಳಗೆ ಕಪ್ಪೆ, ಇಲಿಗಳೂ ಬಿದ್ದು ಜೀವ ಕಳೆದುಕೊಂಡದ್ದೂ ಇದೆ. ಈ ಸಸ್ಯದ ಆಕಾರ ಮತ್ತು ಅದರ ಬಣ್ಣ ತುಂಬಾನೇ ಸೊಗಸಾಗಿರುತ್ತದೆ. ನೋಡಲು ಆಕರ್ಷಕವಾಗಿರುವುದರಿಂದ ಕೀಟಗಳು ಬಹುಬೇಗನೇ ಆಕರ್ಷಣೆಗೆ ಒಳಗಾಗುತ್ತವೆ. ಹೂಜಿ ಗಿಡವು ಹಲವಾರು ವಿಧಗಳಲ್ಲಿ ಹಾಗೂ ಆಕಾರಗಳಲ್ಲಿ ಕಂಡು ಬರುತ್ತದೆ.
ವೀನಸ್ ಕೀಟಾಕರ್ಷಕ ಬಲೆಯ ಸಸ್ಯ (Venus Fly Trap): ಇದು ಇನ್ನೊಂದು ಬಗೆಯ ಆಕರ್ಷಕವಾದ ಮಾಂಸಹಾರಿ ಸಸ್ಯ ಇದು (ಚಿತ್ರ ಗಮನಿಸಿ). ಈ ಸಸ್ಯದ ಎಲೆಗಳು ಕೀಟ ಹಿಡಿಯುವುದಕೋಸ್ಕರ ಒಂದು ವಿಶೇಷವಾದ ಜಾಲವನ್ನು ನಿರ್ಮಿಸಿಕೊಳ್ಳುತ್ತವೆ. ಪರಸ್ಪರ ಮುಚ್ಚಿ ಕೊಳ್ಳುವ ಚಿಪ್ಪುಗಳಂತಹ (ಎಸಳಿನ ರೀತಿ) ಆಕಾರವನ್ನು ಇದರ ಎಲೆಗಳು ಹೊಂದಿರುತ್ತವೆ. ಇವುಗಳು ನೋಡಲು ಬಹಳ ಆಕರ್ಷಕವಾಗಿಯೂ, ಅವುಗಳ ಒಳ ಮೈಯಲ್ಲಿ ಸಿಹಿಯಾದ ಜೇನಿನಂತಹ ಅಂಶವೂ ಇರುತ್ತದೆ. ಕೀಟವು ಇದರ ಆಕರ್ಷಣೆಗೆ ಒಳಗಾಗಿ ಆ ಎರಡು ಕವಾಟಗಳ ನಡುವಿನ ಭಾಗಕ್ಕೆ ಬರುತ್ತವೆ. ಅಲ್ಲಿ ಸೂಕ್ಷ್ಮ ಸಂವೇದನಾಶೀಲತೆಯನ್ನು ಹೊಂದಿದ ಸಣ್ಣ ಸಣ್ಣ ಕಡ್ಡಿಗಳಂತಹ ಆಕಾರದ ರಚನೆಗಳಿರುತ್ತವೆ. ಕೀಟಗಳ ಕಾಲು ಅಥವಾ ಮೈಯ ಯಾವುದಾದರೂ ಭಾಗ ಆ ಕಡ್ಡಿಗಳಿಗೆ ತಾಗಿದಾಗ ಅವು ತಕ್ಷಣವೇ ಕವಾಟವನ್ನು ಮುಚ್ಚಿ ಬಿಡುತ್ತವೆ. ಆ ಚಿಪ್ಪು ಅಥವಾ ಕವಾಟದ ತುದಿಗಳಲ್ಲಿ ಮುಳ್ಳುಗಳಂತಹ ರಚನೆಗಳಿರುವುದರಿಂದ ಕೀಟ ಆ ಕವಾಟದೊಳಗೇ ಬಂಧಿಯಾಗಿ ಬಿಡುತ್ತದೆ. ಚಿತ್ರದಲ್ಲಿ ನೀವು ಇದನ್ನು ಗಮನಿಸಬಹುದು. ಒಮ್ಮೆ ಬಂಧನಕ್ಕೊಳಪಟ್ಟ ಬಳಿಕ ಏನೇ ಮಾಡಿದರೂ ಕೀಟಕ್ಕೆ ಹೊರಬರಲು ಆಗುವುದಿಲ್ಲ. ಅದರ ಬಂಧನ ಬಿಗಿಯಾಗುತ್ತಾ ಹೋಗುತ್ತದೆ. ಆ ಕವಾಟದ ಗೋಡೆಯಲ್ಲಿರುವ ಅಂಗಾಶಗಳು ನಿಧಾನವಾಗಿ ಕೀಟದ ದೇಹದಿಂದ ಸಾರವನ್ನು ಹೀರುತ್ತವೆ. ಇದರಿಂದಾಗಿ ಆ ಸಸ್ಯದ ಬೆಳವಣಿಗೆಗೆ ಬೇಕಾದ ಪೋಷಕಾಂಶಗಳು ಸಿಗುತ್ತವೆ.
ಸನ್ ಡ್ಯೂ ಅಥವಾ ಡ್ರಾಸಿರಾ (Sun Dew or Drosera): ಇದೊಂದು ಅತ್ಯಂತ ಸುಂದರವಾದ ಸಸ್ಯ. ಈ ಸಸ್ಯವನ್ನು ನೋಡಿದ ಯಾರಿಗಾದರೂ ಇದರ ಮೇಲೆ ಮೋಹ ಉಂಟಾಗುತ್ತದೆ. ಇದರ ಎಲೆಯ ಸುತ್ತಲೂ ಮಣಿಗಳಂತಹ ರಚನೆ ಇರುತ್ತದೆ. ಇದು ಮಂಜಿನ ಹನಿಗಳಂತೆ ಇರುತ್ತದೆ. ಚಿತ್ರದಲ್ಲಿ ನೀವು ಗಮನಿಸಿದರೆ ಸೂರ್ಯನ ಬೆಳಕು ಇದರ ಮೇಲೆ ಬಿದ್ದಾಗ ಅದು ಆಕರ್ಷಕವಾಗಿ ಹೊಳೆಯುತ್ತದೆ ಅದೇ ಕಾರಣದಿಂದ ಈ ಸಸ್ಯವನ್ನು ಸನ್ ಡ್ಯೂ (ಸೂರ್ಯನ ಹನಿ) ಎಂದು ಕರೆಯುತ್ತಾರೆ. ಆದರೆ ಈ ಹನಿಗಳು ಮಾತ್ರ ಕೀಟಗಳಿಗೆ ಪ್ರಾಣ ಕಳೆದುಕೊಳ್ಳುವಂತೆ ಮಾಡುವ ಅಪಾಯಕಾರಿ ರಚನೆಗಳು. ಹನಿಗಳು ಸುಂದರ ಮಾತ್ರವಲ್ಲ ಅದಕ್ಕೆ ಜೇನಿನಂತಹ ಸಿಹಿಯಾದ ರುಚಿಯೂ ಇರುತ್ತದೆ. ಪರಿಮಳವಾದ ಸುವಾಸನೆಯೂ ಇರುತ್ತದೆ. ಇದರಿಂದ ಆಕರ್ಷಿತವಾಗುವ ಕೀಟಗಳು ಈ ಸಸ್ಯದ ಮೇಲೆ ಕುಳಿತುಕೊಂಡು ಆ ಜೇನಿನ ರುಚಿಯನ್ನು ಸವಿಯುವಷ್ಟರಲ್ಲೇ ಅದಕ್ಕೆ ಇದೊಂದು ಮೋಸದ ಜಾಲ ಎಂದು ತಿಳಿದುಬಿಟ್ಟಿರುತ್ತದೆ. ಆಮೇಲೆ ಏನು ಮಾಡಿದರೂ ಆ ಸಸ್ಯದಿಂದ ಬಚಾವಾಗಲು ಸಾಧ್ಯವಿಲ್ಲ. ಏಕೆಂದರೆ ಆ ಹನಿಗಳು ತುಂಬಾನೇ ಅಂಟಂಟಾಗಿರುತ್ತವೆ. ಆ ಅಂಟಿಗೆ ಕೀಟಗಳು ಒಮ್ಮೆ ಸಿಲುಕಿದರೆ ಮತ್ತೆ ಬಿಡಿಸಿಕೊಳ್ಳಲು ಸಾಧ್ಯವಿಲ್ಲ. ಕ್ರಮೇಣ ಸಸ್ಯವು ಆ ಕೀಟವನ್ನು ಸುತ್ತುವರಿಯುತ್ತದೆ. ಅದರಿಂದ ತನಗೆ ಬೇಕಾದ ಸಾರವನ್ನು ಹೀರಿಕೊಳ್ಳುತ್ತದೆ. ಇದಕ್ಕೆ ಡ್ರಾಸಿರಾ ಸಸ್ಯವೆಂದೂ ಕರೆಯುತ್ತಾರೆ. ಸುಮಾರು ೨೫೦ ಬಗೆಯ ಈ ಜಾತಿಗೆ ಸೇರಿದ ಸಸ್ಯ ಪ್ರಭೇಧಗಳು ಕಂಡು ಬಂದಿವೆ. ವಿಧ ವಿಧ ನಮೂನೆಯ, ಆಕರ್ಷಕವಾಗಿ ಬಿಳಿ, ನೀಲಿ ಬಣ್ಣದ ಹೂವು ಬಿಡುವ ತಳಿಗಳೂ ಇವೆ. ಒಂದು ರೀತಿಯ ಜೌಗು ಪ್ರದೇಶದಲ್ಲಿ ಕಂಡು ಬರುವ ಈ ಡ್ರಾಸಿರಾ ಸಸ್ಯಗಳು ಅಲ್ಲಿಯ ಮಣ್ಣಿನಲ್ಲಿ ಪೋಷಕಾಂಶಗಳು ಸಿಗದಿರುವ ಕಾರಣ ಕೀಟಗಳನ್ನು ಕಬಳಿಸಿ ತನಗೆ ಬೇಕಾದ ಪೋಷಕಾಂಶಗಳನ್ನು ಗಳಿಸಿಕೊಳ್ಳುತ್ತದೆ.
ಇದೇ ರೀತಿ ಮಾಂಸಹಾರಿಯಾಗಿರುವ ಇನ್ನೂ ಕೆಲವು ಸಸ್ಯಗಳು ಇವೆ. ತಾನು ಜೀವಂತವಾಗಿರಲು ಬೇರೆ ಒಂದು ಕೀಟದ ಜೀವ ತೆಗೆಯುವ ಈ ಸಸ್ಯಗಳ ಜೀವನ ಶೈಲಿಯೇ ಅಪರೂಪ ಮತ್ತು ಅದ್ಭುತ. ಏಕೆಂದರೆ ಓಡಾಡುವ ಜೀವಿಗಳಂತೆ ಈ ಸಸ್ಯಗಳಿಗೆ ಮೆದುಳು ಇರುವುದಿಲ್ಲ. ಆದುದರಿಂದ ಬೇಟೆಯನ್ನು ಹಿಡಿ, ತಿನ್ನು ಎಂಬ ಸಂದೇಶವನ್ನು ಅದು ಮೆದುಳಿನಿಂದ ಪಡೆದುಕೊಳ್ಳಲಾರದು. ಆದರೂ ಸೂಕ್ಷ ಸಂವೇದನೆಗಳ ಮೂಲಕ ತನ್ನ ಅಂಗಾಂಗಗಳನ್ನು ಅದು ಕೀಟ ಭಕ್ಷಣೆಗೆ ಬಳಸಿಕೊಂಡು ಜೀವಿಸುವುದು ಒಂದು ವಿಸ್ಮಯವೇ ಸರಿ.
ಚಿತ್ರ ವಿವರ : ೧. ಹೂಜಿ ಗಿಡ
೨. ವೀನಸ್ ಕೀಟಾಕರ್ಷಕ ಬಲೆ
೩. ಡ್ರಾಸಿರಾ ಸಸ್ಯ
ಚಿತ್ರ ಕೃಪೆ: ವಿವಿಧ ಅಂತರ್ಜಾಲ ತಾಣ