ಮಾಕೋನ ಏಕಾಂತ
ಛಂದ ಪುಸ್ತಕ ಪ್ರಕಾಶನ ಇವರು ಪ್ರತೀ ವರ್ಷ ಉದಯೋನ್ಮುಖ ಕಥೆಗಾರರ ಹಸ್ತ ಪ್ರತಿಗಳ ಸ್ಪರ್ಧೆ ನಡೆಸುತ್ತಾರೆ. ಬಹುಮಾನ ವಿಜೇತರ ಕಥಾ ಸಂಕಲನವನ್ನೂ ಹೊರತರುತ್ತಾರೆ. ಈ ವರ್ಷ ಕತೆಗಾರ್ತಿ ಕಾವ್ಯಾ ಕಡಮೆ ಅವರ ‘ಮಾಕೋನ ಏಕಾಂತ' ಎಂಬ ಕಥಾ ಸಂಕಲನದ ಹಸ್ತಪ್ರತಿಗೆ ಬಹುಮಾನ ದೊರೆತಿದೆ. ಈ ಸ್ಪರ್ಧೆಗೆ ತೀರ್ಪುಗಾರರಾಗಿದ್ದವರು ಹಿರಿಯ ವಿಮರ್ಶಕರಾದ ಟಿ.ಪಿ.ಅಶೋಕ ಇವರು.
ಇವರು ತಮ್ಮ ಮುನ್ನುಡಿಯಲ್ಲಿ “ತಮ್ಮ ಕವಿತೆ, ಕಾದಂಬರಿ ಹಾಗೂ ನಾಟಕಗಳಿಂದ ಈಗಾಗಲೇ ಪ್ರಸಿದ್ಧರಾಗಿರುವ, ಹಲವು ಪ್ರಶಸ್ತಿಗಳಿಂದ ಪುರಸ್ಕೃತರಾಗಿರುವ ಪ್ರತಿಭಾವಂತ ಯುವ ಲೇಖಕಿ ಕಾವ್ಯಾ ಕಡಮೆ ಅವರು ‘ಮಾಕೋನ ಏಕಾಂತ' ಎಂಬ ಕಥಾ ಸಂಕಲನಕ್ಕೆ ೨೦೨೧ರ ಛಂದ ಪುಸ್ತಕ ಹಸ್ತಪ್ರತಿ ಸ್ಪರ್ಧೆಯಲ್ಲಿ ‘ಛಂದ ಪುಸ್ತಕ ಬಹುಮಾನ'ವನ್ನು ಗಳಿಸಿದ್ದಾರೆ.
ಅವರ ಸಂಕಲನದಲ್ಲಿ ಎಂಟು ಕತೆಗಳಿವೆ. ವಿಭಿನ್ನ ಸಾಂಸ್ಕೃತಿಕ ಆವರಣಗಳಲ್ಲಿ ಅರಳಿರುವ ಈ ಕತೆಗಳು ಅನುಭವದ ತಾಜಾತನದಿಂದ, ಲವಲವಿಕೆಯ ನಿರೂಪಣೆಯಿಂದ, ಪ್ರಬುದ್ಧ ನಿರ್ವಹಣೆಯಿಂದ ಮನಮುಟ್ಟುತ್ತವೆ. ತೀರ್ಪು ಕೊಡುವ ಆತುರಕ್ಕೆ ಬೀಳದೆ ಮನುಷ್ಯ ಸ್ವಭಾವ ಮತ್ತು ಸಂಬಂಧಗಳ ಹಲವು ಆಯಾಮಗಳನ್ನು ಮುಕ್ತವಾಗಿ, ಸೂಕ್ಷ್ಮವಾಗಿ ಪರಿಶೀಲಿಸಿಕೊಳ್ಳುವ ವ್ಯವಧಾನ, ಉದಾರತೆ ಇಲ್ಲಿ ಕಾಣುತ್ತವೆ. ಜೀವನ ವೈಶಾಲ್ಯ-ವೈವಿಧ್ಯಗಳ ಬಗ್ಗೆ ಲೇಖಕಿ ಉಳಿಸಿಕೊಂದಿರುವ ಬೆರಗು ಈ ಕತೆಗಳ ಸ್ಥಾಯೀ ಭಾವವಾಗಿದೆ. ಸಿದ್ಧ ಜಾಡನ್ನು ಬಿಟ್ಟು ಹೊಸ ಹೊಸ ಲೋಕಗಳನ್ನು ಅನ್ವೇಷಿಸುವ ದಿಟ್ಟತನ, ಕಾವ್ಯಕ್ಕೆ ಸಮೀಪವೆನ್ನಿಸುವಂಥ ಭಾಷಾ ಬಳಕೆ, ಕತೆಗಿಂತ ಕಥನಕ್ಕೆ ನೀಡಿರುವ ಪ್ರಾಮುಖ್ಯತೆಗಳಿಂದಾಗಿ ಈ ಬರಹಗಳು ವಿಶಿಷ್ಟವಾಗಿವೆ. ಕನ್ನಡೇತರ ಪರಿಸರಗಳಲ್ಲಿ ಸೃಷ್ಟಿಯಾಗುವ ಅನುಭವಗಳನ್ನು ಕನ್ನಡ ಭಾಷೆಯಲ್ಲಿ ಗ್ರಹಿಸಿ-ಅಭಿವ್ಯಕ್ತಿಸುವ ಮೂಲಕ ಕನ್ನಡ ಓದುಗರ ಭಾವಲೋಕಗಳನ್ನು ಹಿಗ್ಗಿಸುವಲ್ಲಿ ಲೇಖಕಿ ಸಾಕಷ್ಟು ಯಶಸ್ವಿಯಾಗಿದ್ದಾರೆ. ಈ ಕತೆಗಳನ್ನು ಓದುತ್ತಿದ್ದಂತೆ ಹೊಸದೇನನ್ನೋ ಅನುಸಂಧಾನ ಮಾಡುತ್ತಿರುವ ಅನುಭವವಾಗುತ್ತದೆ.” ಎಂದು ಬರೆದಿದ್ದಾರೆ.
ಕತೆಗಾರ್ತಿ ತಮ್ಮ ‘ಅರಿಕೆ'ಯಲ್ಲಿ ಹೀಗೆ ಬರೆದಿದ್ದಾರೆ “ ಈ ಸಂಕಲನದ ಕತೆಗಳನ್ನು ಹತ್ತೇ ತಿಂಗಳಲ್ಲಿ, ಹಿರಿಯರಾದ ಎಚ್ ಎಸ್ ಆರ್ ಹೇಳುವಂತೆ ತಾಯ್ತನದ ಸಿಹಿ ಶಿಲುಬೆ ಹೊತ್ತೇ ಬರೆದದ್ದು. ಏನೆಂದೇ ಅರ್ಥವಾಗದ, ಇಲ್ಲಿನ ತನಕ ಕಂಡ ಯಾವ ಅನುಭವಕ್ಕೂ ತೀವ್ರತೆಯಲ್ಲಿ ಹತ್ತಿರಕ್ಕೂ ಸುಳಿಯದ ತಾಯ್ತನವೆಂಬ ಈ ವಿಲಕ್ಷಣ ಕ್ರಿಯೆಯನ್ನು ಹಾಯ್ದು ಬರುವಾಗ ಜಗತ್ತಿನಲ್ಲಿ ಇಷ್ಟೆಲ್ಲ ಜನ ಇದನ್ನೇ ಮಾಡುತ್ತಲೂ, ನಗುನಗುತ್ತಲೂ ಇರುತ್ತಾರಲ್ಲ ಎನ್ನುವುದೇ ಆಶ್ಚರ್ಯವನ್ನುಂಟು ಮಾಡಿತ್ತು. (ಇಲ್ಲಿ ತಾಯಿ ಎಂಬುದನ್ನು ಹೆಣ್ಣು ಎಂಬರ್ಥದಲ್ಲಷ್ಟೇ ಬಳಸಿಲ್ಲ.) ಇನ್ನೊಂದೇ ಒಂದು ಅಕ್ಷರವನ್ನೂ ಮೂಡಿಸಲಾರೆ ಎಂದು ಕೈಚೆಲ್ಲಿ ಕುಳಿತಾಗ ಓದುವುದು - ಬರೆಯುವುದು ಬಿಟ್ಟು ಇದ್ಯಾವುದಕ್ಕೂ ಇನ್ಯಾವ ಮುಲಾಮೂ ಇಲ್ಲ ಎಂದು ಧೈರ್ಯ ತುಂಬಿ ಬರೆಯಲು ಹಚ್ಚಿದ ವಿವೇಕ ಶಾನುಭಾಗ ಸರ್ ಅವರಿಗೆ ವಿಶೇಷ ನಮನಗಳು”
ಕಥಾ ಸಂಕಲನದ ಪ್ರತಿಯೊಂದು ಕಥೆಯನ್ನು ಓದಿ ಮುಗಿಸಿದ ಬಳಿಕ ಈ ಕಥೆಗೆ ಇನ್ನೊಂದು ಅರ್ಥವೂ ಇರಬಹುದೇ ಎಂದು ಅನಿಸದೇ ಇರದು. ಹಾಗಿವೆ ಕಥೆಗಳು. ಹೊಸ ಪರಿಸರ ಹಾಗೂ ಹೊಸತನವನ್ನು ಹೊಂದಿರುವ ಕಥೆಗಳು ಬಹಳ ಸರಾಗವಾಗಿ ಓದಿಸಿಕೊಂಡು ಹೋಗುತ್ತವೆ. ಈ ಕಥಾ ಸಂಕಲನದಲ್ಲಿ ‘ಮಾಕೋನ ಏಕಾಂತ, ತಂದೆ, ಮೀಲೋ, ಪದವಿ ಪ್ರದಾನ, ಕ್ಲಾರಾ ನನ್ನ ಗೆಳತಿ, ಸುನೇತ್ರಾ ಪಬ್ಲಿಷರ್ಸ್, ಕೊನೇ ಊಟ ಮತ್ತು ಆ ಒಂದು ಥರ ಎಂಬ ೮ ಕತೆಗಳಿವೆ. ೧೩೨ ಪುಟಗಳಿರುವ ಈ ಪುಸ್ತಕವನ್ನು ಲೇಖಕಿ ‘ಮಗು ವಿಸ್ಮಯ' ನಿಗೆ ಅರ್ಪಿಸಿದ್ದಾರೆ.