ಮಾತಾಡುವ ಮಾತಿಲ್ಲದ ಚಿತ್ರ - ಪುಷ್ಪಕ ವಿಮಾನ



ಜಗತ್ತಿನಲ್ಲಿ ಮೊದಲ ಬಾರಿಗೆ ಚಲನಚಿತ್ರಗಳು ಪರದೆಯ ಮೇಲೆ ಮೂಡಿ ಬರುತ್ತಿದ್ದಾಗ ಅವುಗಳು ಕೇವಲ ನಟ-ನಟಿಯರ ನಟನೆಯನ್ನೇ ಅವಲಂಭಿಸಿದ್ದವು. ಅವರ ಆಂಗಿಕ ಭಾಷೆಯ ಮೂಲಕವೇ ಅವರೇನು ಹೇಳ ಬಯಸಿದ್ದಾರೆ ಎಂದು ತಿಳಿಯುತ್ತಿತ್ತು. ಕಾರಣವೆಂದರೆ ಅವುಗಳು ಮೂಕಿ ಚಿತ್ರಗಳಾಗಿದ್ದವು. ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ೧೯೩೪ರಲ್ಲಿ ಬಿಡುಗಡೆಯಾದ ‘ಸತಿ ಸುಲೋಚನ’ ಎನ್ನುವ ಚಲನ ಚಿತ್ರವು ಟಾಕಿ ಚಿತ್ರವಾಗಿತ್ತು. ನಂತರ ಕನ್ನಡ ಚಿತ್ರರಂಗವು ನಿರಂತರವಾಗಿ ಟಾಕಿ ಸಿನೆಮಾಗಳನ್ನೇ ಕಂಡಿತ್ತು. ೧೯೮೭ರ ನವೆಂಬರ್ ೨೭ರಂದು ಬಿಡುಗಡೆಯಾದ ‘ಪುಷ್ಪಕ ವಿಮಾನ’ ಎಂಬ ಮೂಕಿ ಚಿತ್ರವು ಇತಿಹಾಸವನ್ನೇ ಸೃಷ್ಟಿಸಿ ಬಿಟ್ಟಿತು. ಟಾಕಿ ಸಿನೆಮಾದ ಸಮಯದಲ್ಲೂ ಮೂಕಿ ಚಿತ್ರವೇ? ಎಲ್ಲರ ಹುಬ್ಬೇರಿಸುವಂತೆ ಮಾಡಿದ ಈ ಚಿತ್ರ ನಿರ್ಮಾಪಕರ, ವಿಮರ್ಶಕರ ನಿರೀಕ್ಷೆಯನ್ನೇ ಮೀರಿ ಸೂಪರ್ ಹಿಟ್ ಆಗಿತ್ತು.
‘ಪುಷ್ಪಕ ವಿಮಾನ’ ಚಲನ ಚಿತ್ರವು ಯಾವ ಭಾಷೆಯ ಚಿತ್ರ ಎನ್ನುವುದು ಸ್ವಲ್ಪ ಗೊಂದಲದಲ್ಲಿದ್ದರೂ ಇದರಲ್ಲಿ ಬೇರೆ ಬೇರೆ ಭಾಷೆಯ ಕಲಾವಿದರ ಜೊತೆ ಕನ್ನಡದ ಕಲಾವಿದರೂ ಅಭಿನಯಿಸಿದ್ದಾರೆ. ಕರ್ನಾಟಕದಲ್ಲಿ ಬಿಡುಗಡೆಯಾದಾಗ ‘ಪುಷ್ಪಕ ವಿಮಾನ’ ಎನ್ನುವ ಹೆಸರಿದ್ದ ಚಿತ್ರ ಉತ್ತರ ಭಾರತದಲ್ಲಿ ಬಿಡುಗಡೆಯಾದಾಗ ‘ಪುಷ್ಪಕ್’ ಎನ್ನುವ ಹೆಸರನ್ನು ಹೊಂದಿತ್ತು. ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಅಲ್ಲಿಯ ಪ್ರಾದೇಶಿಕ ಹೆಸರನ್ನು ಹೊಂದಿತ್ತು. ಆದರೆ ಭಾಷೆಯ ಹಂಗಿಲ್ಲದ, ಸಂಭಾಷಣೆಯ ಅಗತ್ಯ ಇಲ್ಲದ ಈ ಚಿತ್ರದ ಬಗ್ಗೆ ಹುಡುಕಾಡಿದಾಗ ಸಿಕ್ಕ ಕೆಲವು ಆಸಕ್ತಿದಾಯಕ ಸಂಗತಿಗಳನ್ನು ನಿಮ್ಮ ಮುಂದೆ ಹರಡುತ್ತಿದ್ದೇನೆ.
ಪುಷ್ಪಕ ವಿಮಾನ ಚಿತ್ರದ ಜಂಟಿ ನಿರ್ಮಾಪಕ, ನಿರ್ದೇಶಕ ಸಿಂಗೀತಂ ಶ್ರೀನಿವಾಸ್. ಇವರು ಟಾಕಿ ಯುಗದಲ್ಲಿ ಮೂಕಿ ಚಿತ್ರ ಮಾಡುವೆ ಎಂದು ಹೊರಟಾಗ ಇಡೀ ಗಾಂಧಿನಗರವೇ ನಕ್ಕು ಬಿಟ್ಟಿತ್ತಂತೆ. ಅದರ ಜೊತೆಗೆ ಪತ್ರಿಕೆಯೊಂದು ಅತ್ಯಂತ ಕೆಟ್ಟದಾದ ಪ್ರತಿಕ್ರಿಯೆ ಕೊಟ್ಟಿತ್ತಂತೆ. ಅದು ಹೇಗಿತ್ತೆಂದರೆ, ‘ನಿರ್ದೇಶಕ ಸಿಂಗೀತಂ ಶ್ರೀನಿವಾಸ್ ರಾವ್ ಅವರು ಕತ್ತಲಿನಲ್ಲಿ ಕರಿ ಬೆಕ್ಕಿಗೆ ಗಂಟೆ ಕಟ್ಟಲು ಹೊರಟಿದ್ದಾರೆ. ನಿರ್ಮಾಪಕ ಶೃಂಗಾರ ನಾಗರಾಜ್ ಪಾಳು ಬಾವಿಗೆ ನೀರು ಹಾಕಲು ಹೊರಟಿದ್ದಾರೆ’ ಎಂದು ಪ್ರಕಟವಾಗಿತ್ತಂತೆ. ಎಲ್ಲಾ ಉದ್ಯಮದಲ್ಲಿ ಇರುವಂತೆ ಚಲನ ಚಿತ್ರೋದ್ಯಮದಲ್ಲೂ ಹಿತಶತ್ರುಗಳಿಗೆ ಕಡಿಮೆ ಇರಲಿಲ್ಲ. ಆದರೂ ಶೃಂಗಾರ ನಾಗರಾಜ್ ಹಾಗೂ ಸಿಂಗೀತಂ ಶ್ರೀನಿವಾಸ್ ಧೃತಿಗೆಡಲಿಲ್ಲ. ಚಲನ ಚಿತ್ರ ಮಾಡಿಯೇ ಬಿಟ್ಟರು. ನಂತರ ನಗುವ ಸರದಿ ಇವರಿಬ್ಬರದಾಗಿತ್ತು.
ಪುಷ್ಕಕ ವಿಮಾನ ಬಿಡುಗಡೆಯಾದಲ್ಲೆಲ್ಲಾ ಸೂಪರ್ ಹಿಟ್ ಆಗಿತ್ತು. ಚಲನ ಚಿತ್ರ ವಿಮರ್ಶಕರಿಂದ ‘ಅಪೂರ್ವ ಚಿತ್ರರತ್ನ’ ಎಂಬ ಮೆಚ್ಚುಗೆಯನ್ನೂ ಪಡೆಯಿತು. ಭಾಷೆಯ ಹಂಗಿಲ್ಲದ ಈ ಚಿತ್ರ ಎಲ್ಲಾ ಭಾಷೆಗಳಲ್ಲೂ ಹಿಟ್ ಆಯಿತು. ನಿರ್ಮಾಪಕರಿಗೆ ಉತ್ತಮ ಆದಾಯವನ್ನೂ ತಂದುಕೊಟ್ಟಿತು. ಆದರೆ ಚಿತ್ರ ನಿರ್ಮಾಣದ ಸಮಯದಲ್ಲಿ ಮತ್ತು ಚಿತ್ರೀಕರಣ ಪೂರ್ಣಗೊಂಡ ಬಳಿಕ ಚಿತ್ರದ ಜಂಟಿ ನಿರ್ಮಾಪಕರಾದ ಶೃಂಗಾರ ನಾಗರಾಜ್ ಹಾಗೂ ಸಿಂಗೀತಂ ಶ್ರೀನಿವಾಸ್ ಅವರು ಇದರ ನಿರ್ಮಾಣ ಮತ್ತು ಬಿಡುಗಡೆಯಾಗಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಪುಟ್ಟದಾದ ಟ್ರಾವೆಲ್ ಏಜೆನ್ಸಿಯನ್ನು ಹೊಂದಿದ್ದ ಶೃಂಗಾರ್ ನಾಗರಾಜ್ ಆರ್ಥಿಕವಾಗಿ ಅಷ್ಟೇನೂ ಸಬಲರಾಗಿರಲಿಲ್ಲ. ಆದರೆ ಅವರಿಗೆ ಸಿಂಗೀತಂ ಶ್ರೀನಿವಾಸ್ ಅವರ ಮೇಲೆ ನಂಬಿಕೆ ಇತ್ತು. ಬಹಳಷ್ಟು ಮಂದಿ ‘ಟ್ರಾವೆಲ್ ಏಜೆನ್ಸಿ ಇಟ್ಟುಕೊಂಡವರು ಆಕಾಶಕ್ಕೆ ಹಾರುವ ಪುಷ್ಪಕ ವಿಮಾನ ಹಾರಿಸಲು ಹೊರಟರೆ ಯಶಸ್ಸು ಸಿಗುವುದೇ..?’ ಎಂದು ಕುಹಕವಾಡಿದ್ದರು. ಆದರೆ ತಮ್ಮ ಚಿತ್ರದ ಮೇಲೆ ನಂಬಿಕೆಯನ್ನು ಹೊಂದಿದ್ದ ನಾಗರಾಜ್ ಅವರು ತಮಿಳು ವಿತರಕರೊಬ್ಬರಿಂದ ಸುಮಾರು ೮ ಲಕ್ಷ ರೂಪಾಯಿ ಮುಂಗಡ ಪಡೆದುಕೊಂಡರು. ಆದರೆ ‘ಪಾಪಿ ಕಾಲಿಟ್ಟಲ್ಲಿ ಮೊಣಕಾಲು ನೀರು’ ಎನ್ನುವಂತೆ ಚಿತ್ರದ ಬಿಡುಗಡೆಗೂ ಮೊದಲು ಆ ಚಿತ್ರದ ಶೋ ನೋಡಿದ ಆ ವಿತರಕ ಚಿತ್ರವನ್ನು ಇಷ್ಟ ಪಡದೇ ತಾನು ಕೊಟ್ಟ ಮುಂಗಡವನ್ನು ಹಿಂದೆ ಪಡೆದುಕೊಂಡ. ಆದರೂ ನಾಗರಾಜ್ ಧೈರ್ಯಗೆಡಲಿಲ್ಲ. ಯಾರನ್ನೋ ಕಾಡಿಬೇಡಿ ಹಣವನ್ನು ತಂದರು. ಹೀಗೆ ಪುಷ್ಪಕ ವಿಮಾನ ತೆರೆ ಕಾಣುವ ಹೊತ್ತಿಗೆ ಸುಮಾರು ೪೫ ಲಕ್ಷ ಹಣವನ್ನು ನುಂಗಿ ಹಾಕಿತು. ಸುಮಾರು ೩೮ ವರ್ಷಗಳ ಹಿಂದೆ ಈ ಹಣಕ್ಕೆ ಕೋಟಿಗಟ್ಟಲೆ ಬೆಲೆ ಇತ್ತು. ನಾಗರಾಜ್ ಅವರ ಅದೃಷ್ಟ ಅವರನ್ನು ಕೈಬಿಡಲಿಲ್ಲ. ಚಿತ್ರ ತೆರೆ ಕಂಡಲೆಲ್ಲಾ ಅದ್ಭುತ ಯಶಸ್ಸು ದಾಖಲಿಸಿತು. ೪೦ ವಾರಗಳ ಪ್ರದರ್ಶನ ಕಂಡು ದಾಖಲೆಯನ್ನು ನಿರ್ಮಿಸಿತು.
ಪುಷ್ಪಕ ವಿಮಾನ ಚಿತ್ರೀಕರಣಕ್ಕೂ ಮೊದಲು ನಿರ್ಮಾಪಕ ಮತ್ತು ನಿರ್ದೇಶಕರು ಒಂದು ನಿರ್ಧಾರವನ್ನು ತೆಗೆದುಕೊಂಡಿದ್ದರು. ಅದೇನೆಂದರೆ ಈ ಚಿತ್ರಕ್ಕೆ ನಾಯಕನಾಗಲು ಕಮಲಹಾಸನ್ ಒಪ್ಪಿದರೆ ಮಾತ್ರ ಚಿತ್ರೀಕರಣ ಪ್ರಾರಂಭ ಮಾಡುವುದು ಇಲ್ಲವಾದರೆ ನಿರ್ಮಾಣ ಕಾರ್ಯ ಸ್ಥಗಿತಗೊಳಿಸುವುದು ಎಂದು. ಅದೃಷ್ಟವಶಾತ್ ಕಮಲಹಾಸನ್ ಈ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡರು. ಕಮಲಹಾಸನ್ ಅವರಿಗೆ ಸಿಂಗೀತಂ ಶ್ರೀನಿವಾಸ್ ಅವರ ತಾಕತ್ತಿನ ಅರಿವು ಇತ್ತು. ಈ ಚಿತ್ರಕ್ಕೆ ಛಾಯಾಗ್ರಹಣ ಮಾಡಿದವರು ಬಿ ಸಿ ಗೌರಿಶಂಕರ್ ಮತ್ತು ಸಂಗೀತ ನಿರ್ದೇಶನ ಎಲ್ ವೈದ್ಯನಾಥನ್. ಚಿತ್ರದ ಪ್ರಾರಂಭದಲ್ಲಿ ಸುಬ್ಬಲಕ್ಷ್ಮಿಯವರ ಸುಪ್ರಭಾತದ ಹಾಡೊಂದು ಬಿಟ್ಟರೆ ಉಳಿದ ಭಾಗದಲ್ಲಿ ಕೇಳುವುದು ಕೇವಲ ಸಂಗೀತ ಮಾತ್ರ. ಕೇವಲ ನಟನೆಯಲ್ಲಿ ಮಾತ್ರ ಚಲನ ಚಿತ್ರದ ಕಥೆಯನ್ನು ಅರ್ಥ ಮಾಡಿಸುವುದು ಬಹು ಸವಾಲಿನ ಕೆಲಸವೇ ಆಗಿತ್ತು. ಆದರೆ ಕಮಲಹಾಸನ್ ಮತ್ತು ಅಮಲಾ ಅದ್ಭುತವಾಗಿ ನಟಿಸಿ ಮೂಕಿ ಚಿತ್ರಕ್ಕೂ ಜೀವ ತಂದುಕೊಟ್ಟರು. ಇವರಿಗೆ ಲೋಕನಾಥ್, ಟೀನೂ ಆನಂದ್, ಪ್ರತಾಪ್ ಪೊಠಾಣ್, ಮನ್ ದೀಪ್ ರಾಯ್, ರಮ್ಯ, ಪಿ ಎಲ್ ನಾರಾಯಣ ಮೊದಲಾದವರು ಉತ್ತಮ ಸಾಥ್ ನೀಡಿದರು. ಛಾಯಾಗ್ರಹಣ ಮತ್ತು ಸಂಗೀತ ಈ ಚಿತ್ರಕ್ಕೆ ಕಣ್ಣು ಮತ್ತು ಕಿವಿಯೇ ಆಗಿತ್ತು. ಇದರ ಯಶಸ್ಸು ಸಲ್ಲಬೇಕಾದದ್ದು ಗೌರಿಶಂಕರ್ ಮತ್ತು ವೈದ್ಯನಾಥನ್ ಅವರಿಗೆ.
ನಿಮಗೆ ಗೊತ್ತಿದೆಯೋ ಇಲ್ಲವೋ, ಈ ಚಿತ್ರದ ಬಹುಭಾಗದ ಚಿತ್ರೀಕರಣ ನಡೆದದ್ದು ಬೆಂಗಳೂರಿನ ಪ್ರತಿಷ್ಟಿತ ಪಂಚತಾರಾ ಹೋಟೇಲ್ ವಿಂಡ್ಸರ್ ಮ್ಯಾನರ್ ನಲ್ಲಿ. ಆಗಲೇ ಇದರ ಬಾಡಿಗೆ ಲಕ್ಷಾಂತರ ರೂಪಾಯಿ ಆಗಿತ್ತು. ಕರ್ನಾಟಕಕ್ಕಿಂತ ಹೆಚ್ಚಿನ ಗಳಿಕೆಯು ಮಹಾರಾಷ್ಟ್ರದಲ್ಲಿ ಆಯಿತು. ಕರ್ನಾಟಕಕ್ಕೆ ೧೫ ಪ್ರಿಂಟ್ ಗಳು, ಆಂಧ್ರಕ್ಕೆ ೨೦, ತಮಿಳುನಾಡಿಗೆ ೧೦, ಮುಂಬೈ, ದೆಹಲಿ, ಉತ್ತರ ಪ್ರದೇಶಗಳಿಗೆ ತಲಾ ೧೦ ಪ್ರಿಂಟ್ ಗಳನ್ನು ಬಿಡುಗಡೆ ಮಾಡಲಾಗಿತ್ತು. ತಾಷ್ಕೆಂಟ್ ನಲ್ಲಿ ನಡೆದ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಪುಷ್ಪಕ ವಿಮಾನ ಪ್ರದರ್ಶಿತವಾಗಿ ಜನ ಮೆಚ್ಚುಗೆ ಪಡೆದುಕೊಂಡಿತು. ರಷ್ಯಾ ಸರಕಾರ ಮುಂದಿನ ೧೦ ವರ್ಷಗಳ ಕಾಲ ಈ ಚಿತ್ರವನ್ನು ಪ್ರದರ್ಶನ ಮಾಡುವ ಹಕ್ಕುಗಳನ್ನು ಖರೀದಿಸಿತು.
ಹುಟ್ಟಿನಿಂದ ಕನ್ನಡಿಗರೇ ಆದ ಸಿಂಗೀತಂ ಶ್ರೀನಿವಾಸ್ ತೆಲುಗು ಚಿತ್ರರಂಗದಲ್ಲಿ ಅತ್ಯದ್ಭುತ ಯಶಸ್ಸನ್ನು ಕಂಡವರು. ತಮಿಳು ಚಿತ್ರರಂಗದಲ್ಲೂ ತಮ್ಮ ಛಾಪನ್ನು ಮೂಡಿಸಿ ಕಮಲಹಾಸನ್ ಅವರಿಗೆ ಆಪ್ತರಾಗಿಬಿಟ್ಟರು. ಕನ್ನಡದಲ್ಲೂ ಡಾ. ರಾಜ್ ನಟನೆಯ ಹಾಲು ಜೇನು, ಭಾಗ್ಯದ ಲಕ್ಷ್ಮೀ ಬಾರಮ್ಮ, ಶಿವರಾಜ್ ಕುಮಾರ್ ನಟನೆಯ ಮೊದಲ ಚಿತ್ರ ಆನಂದ್ ಮೊದಲಾದ ಚಿತ್ರಗಳನ್ನು ನಿರ್ದೇಶನ ಮಾಡಿದ್ದರು. ಕಮಲಹಾಸನ್ ತ್ರಿಪಾತ್ರದಲ್ಲಿ ನಟಿಸಿ ದಾಖಲೆ ಮಾಡಿದ ‘ಅಪೂರ್ವ ಸಹೋದರ್ಗಳ್’ ಎನ್ನುವ ಚಿತ್ರವನ್ನು ನಿರ್ದೇಶನ ಮಾಡಿದ್ದು ಸಿಂಗೀತಂ ಶ್ರೀನಿವಾಸ್ ಅವರೇ. ಸುಮಾರು ಏಳು ವರ್ಷಗಳ ಕಾಲ ‘ಪುಷ್ಪಕ ವಿಮಾನ’ ದ ಕನಸು ಕಂಡು ಅದನ್ನು ಸಾಕಾರಗೊಳಿಸಿ ಯಶಸ್ಸು ಕಂಡವರು ಸಿಂಗೀತಂ ಶ್ರೀನಿವಾಸ್ ಮತ್ತು ಶೃಂಗಾರ ನಾಗರಾಜ್. ಟಾಕಿ ಯುಗದಲ್ಲಿ ಮೂಕಿ ಸಿನೆಮಾ ನಿರ್ಮಾಣ ಮಾಡಿ ಎಂದೂ ಅಳಿಸಲಾಗದ ದಾಖಲೆ ಮಾಡಿ ಚಿತ್ರರಂಗದ ಇತಿಹಾಸದಲ್ಲಿ ಶಾಶ್ವತವಾದ ಸ್ಥಾನವನ್ನು ಪಡೆದರು.
ಚಿತ್ರ ೧: ಪುಷ್ಪಕ ವಿಮಾನ ಚಿತ್ರದ ಪೋಸ್ಟರ್
ಚಿತ್ರ ೨: ಚಿತ್ರದ ಕೆಲವು ದೃಶ್ಯಗಳು
ಚಿತ್ರ ೩: ನಿರ್ದೇಶಕ ಸಿಂಗೀತಂ ಶ್ರೀನಿವಾಸ್
(ಆಧಾರ)
ಚಿತ್ರ ಕೃಪೆ: ಅಂತರ್ಜಾಲ ತಾಣ