ಮಾತಿನ ಭರದಲ್ಲಿ ಆಟವ ಮರೆಯಬೇಡಿ !

‘ಮಾತು ಮನೆ ಕೆಡಿಸಿತು' ಎನ್ನುವ ಮಾತೇ ಇದೆ. ಹಲವಾರು ಮಂದಿ ಅಗತ್ಯಕ್ಕಿಂತ ಅನಗತ್ಯ ಮಾತುಗಳನ್ನಾಡಿ ಕೆಲಸವನ್ನು ಹಾಳು ಮಾಡಿಕೊಳ್ಳುತ್ತಾರೆ. ಇದರಿಂದಾಗಿ ಅವರಿಗೆ ಸಮಯದ ಹಾಗೂ ಆದಾಯದ ನಷ್ಟವೂ ಆಗುತ್ತದೆ. ಏಕೆಂದರೆ ಮಾತು, ಒಂದು ಮುತ್ತಿನ ಹಾಗೆ ಒಡೆದರೆ ಅದಕ್ಕೆ ಬೆಲೆ ಇಲ್ಲ. ಅದೇ ರೀತಿ ಅನಗತ್ಯ ಮಾತು, ನಮ್ಮ ವ್ಯಕ್ತಿತ್ವಕ್ಕೆ ಕಪ್ಪು ಚುಕ್ಕೆಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ನಿಮಗೊಂದು ಪುಟ್ಟ ಘಟನೆ ಹೇಳುವೆ.
ಕೆಲವು ದಿನಗಳ ಹಿಂದೆ ಖಾಸಗಿ ವಾಹಿನಿಯೊಂದರಲ್ಲಿ ನಡೆದ ಸಂಗತಿ ಇದು. ನೀವೂ ಈ ಘಟನೆಯನ್ನು ಗಮನಿಸಿರಬಹುದು. ಖ್ಯಾತ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ನಡೆಸಿಕೊಡುವ ‘ಕೌನ್ ಬನೇಗಾ ಕರೋಡ್ ಪತಿ' ಎನ್ನುವ ಕಾರ್ಯಕ್ರಮದಲ್ಲಿ ಒರ್ವ ವ್ಯಕ್ತಿ ಬಂದಿದ್ದ. ಆತ ಒಂದು ಖಾಸಗಿ ಶಾಲೆಯ ಮುಖ್ಯೋಪಾಧ್ಯಾಯರಂತೆ. ಆದರೆ ಆತನ ನಡೆ-ನುಡಿಯಲ್ಲಿ ಎಲ್ಲೂ ಆತ ಒಬ್ಬ ಜವಾಬ್ದಾರಿಯುತ ಶಿಕ್ಷಕ ಎನ್ನುವ ಲಕ್ಷಣ ಕಂಡು ಬರಲಿಲ್ಲ. ನನ್ನ ಜೊತೆ ದೂರದರ್ಶನ ನೋಡುತ್ತಿದ್ದ ನನ್ನ ಅಮ್ಮನೂ ಇದೇ ರೀತಿಯ ಅಭಿಪ್ರಾಯ ವ್ಯಕ್ತ ಪಡಿಸಿದರು. ಅಮಿತಾಬ್ ಬಚ್ಚನ್ ಅವರ ಪ್ರತಿಯೊಂದು ಮಾತಿಗೂ ಆ ವ್ಯಕ್ತಿ ಕೊಂಕು ಮಾತನಾಡುತ್ತಿದ್ದ. ಅಮಿತಾಬ್ ಬಚ್ಚನ್ ಕಾರ್ಯಕ್ರಮದ ನಿರ್ವಾಹಕರಾದುದರಿಂದ ಬಹಳಷ್ಟು ಸಂಯಮದಿಂದ ವರ್ತಿಸಿದರು. ಬಹುಷಃ ಈ ಕಾರ್ಯಕ್ರಮ ನೋಡುತ್ತಿದ್ದ ಎಲ್ಲರಿಗೂ ಆತನನ್ನು ಹೊರಗೆ ಕಳಿಸಬಹುದಿತ್ತು ಎಂದು ಅನಿಸಿರಲೂ ಬಹುದು. ಆತ ಅಷ್ಟೊಂದು ಕಿರಿಕಿರಿ ವ್ಯಕ್ತಿಯಾಗಿದ್ದ. ಬಹುಷಃ ಆತನ ಗಮನ ಇದ್ದುದು ಅನಗತ್ಯ ಮಾತುಕತೆಗಳನ್ನಾಡಲು ಹೊರತು ಆಟದ ಮೇಲೆ ಅಲ್ಲ.
ಆತ ಮುಖ್ಯೋಪಾಧ್ಯಾಯನಾಗಿರುವ ಶಾಲೆ ಅವನ ಕುಟುಂಬದವರ ಸಂಸ್ಥೆಯಿಂದಲೇ ನಡೆಸುವಂತಹ ಶಾಲೆ. ಇಲ್ಲವಾಗಿದ್ದೇ ಆದಲ್ಲಿ ಆತನನ್ನು ಆ ಹುದ್ದೆಯಿಂದ ಯಾವಾಗಲೋ ಹೊರಹಾಕುತ್ತಿದ್ದರು. ಅಮಿತಾಬ್ ನಟಿಸಿದ 'ಮೊಹಬ್ಬತೇ’ ಚಿತ್ರದ ಬಗ್ಗೆ ಮಾತನಾಡುತ್ತಾ ಆತ ಶಿಕ್ಷಕನಾಗಿದ್ದವನು ಮಕ್ಕಳನ್ನು ಹದ್ದು ಬಸ್ತಿನಲ್ಲಿ ಇಡಬಾರದು, ಮಕ್ಕಳಿಗೆ ಪ್ರೀತಿ-ಪ್ರೇಮ ಮಾಡಲು ಅವಕಾಶ ನೀಡಬೇಕು ಎಂಬೆಲ್ಲಾ ಪುರಾಣವನ್ನು ಕೊರೆಯತೊಡಗಿದ. ಅದೊಂದು ಚಲನ ಚಿತ್ರ ಮತ್ತು ಅಮಿತಾಬ್ ಓರ್ವ ಪಾತ್ರಧಾರಿ ಅಷ್ಟೇ ಎಂಬುವುದನ್ನೂ ಗಮನಕ್ಕೆ ತೆಗೆದುಕೊಳ್ಳದೇ ಮಾತನಾಡತೊಡಗಿದ. ಅಮಿತಾಬ್ ಒಂದೆರಡು ಬಾರಿ ನೀವೇ ಮಾತನಾಡುತ್ತೀರಲ್ಲಾ? ನನ್ನ ಅಗತ್ಯ ಇಲ್ಲವೆಂದು ಕಾಣುತ್ತದೆ. ನಾನು ಆಟ ಬಿಟ್ಟು ಹೋಗುತ್ತೇನೆ ಎಂದು ತಮಾಷೆಯ ರೀತಿಯಲ್ಲಿ ಹೇಳಿದರೂ ಅವರ ಮಾತಿನಲ್ಲಿನ ಗೂಢಾರ್ಥವನ್ನು ಅರಿಯದೇ ಅನಗತ್ಯ ವಿಷಯವನ್ನು ಮಾತನಾಡುವುದರಲ್ಲೇ ಆತ ಸಮಯವನ್ನು ಕಳೆದ.
ಆತನ ಮಾತು ಕೇಳಿ ಕೇಳಿ ಸಾಕಾಗಿ ಕಡೆಗೊಮ್ಮೆ ಅಮಿತಾಬ್ ಬಚ್ಚನ್ ಕೇಳಿಯೇ ಬಿಟ್ಟರು “ಮಾನ್ಯರೇ, ತಾವು ಈ ಕಾರ್ಯಕ್ರಮ ಮುಗಿದ ಬಳಿಕ ರಾಜಕೀಯ ಪಕ್ಷವನ್ನು ಸೇರಿಕೊಳ್ಳುವ ಸಾಧ್ಯತೆ ಇದೆಯೇ?” ಎಂದು. ಆತನ ಅನಗತ್ಯ ಮಾತುಗಳು ಆತ ಮಾಡುತ್ತಿದ್ದ ಒಳ್ಳೆಯ ಕೆಲಸವಾದ ೪೦ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ವಿಷಯವನ್ನು ಗೌಣವಾಗಿಸಿತು. ಗುಟ್ಕಾ, ತಂಬಾಕು ಸೇವನೆಯ ಕೆಟ್ಟ ಚಟದ ಬಗ್ಗೆ ಆತ ಮಾತನಾಡಿದ ಸಂಗತಿ ಒಳ್ಳೆಯದಿದ್ದರೂ ಕೂಡಾ ‘ಎಲ್ಲಾ ಬಣ್ಣ ಮಸಿ ನುಂಗಿತು’ ಅಂದ ಹಾಗಾಯಿತು. ತನ್ನ ಮಾತುಗಳನ್ನು ಕೇಳುವವರು ಇದ್ದಾರೆ, ನನಗೊಂದು ಉತ್ತಮ ವೇದಿಕೆ ಸಿಕ್ಕಿದೆ ಎಂದು ಭಾವಿಸಿ ಅನಗತ್ಯ ಮಾತುಗಳನ್ನು ಆಡಿ ಕಡೆಗೆ ಸುಲಭವಾದ ಪ್ರಶ್ನೆಯೊಂದಕ್ಕೆ ತಪ್ಪು ಉತ್ತರ ನೀಡಿ ಕನಿಷ್ಟ ಮೊತ್ತವನ್ನು (ರೂ.೧೦,೦೦೦) ಪಡೆದುಕೊಂಡು ಹೋದ. ಆತನ ಜ್ಞಾನ, ಆತ ಇದ್ದ ಹುದ್ದೆ ಯಾವುದೂ ಈ ಆಟದಲ್ಲಿ ಆತನಿಗೆ ಪ್ರಮುಖವೆನಿಸಲಿಲ್ಲ. ಕೇವಲ ಮಾತು ಆತನ ಆಟ ಕೆಡಿಸಿತು. ಆತನಿಗೆ ಆಟದಲ್ಲಿ ಕೇಳುತ್ತಿದ್ದ ಪ್ರಶ್ನೆಗಳ ಮೇಲಿನ ಗಮನಕ್ಕಿಂತ ಆಸಕ್ತಿ ಇದ್ದದ್ದು ಆ ಪ್ರಶ್ನೆಗೆ ಉತ್ತರಿಸಿದ ಬಳಿಕ ಅಮಿತಾಬ್ ಬಚ್ಚನ್ ಅವರನ್ನು ಹೇಗೆ ಕಿಚಾಯಿಸಬಹುದು ಎಂದು ಮಾತ್ರ. ಆತನು ತನ್ನ ಆಟ ಬೇಗನೇ ಮುಗಿಸಿದ್ದು ನನ್ನ ಅಮ್ಮನಿಗೂ ಖುಷಿಕೊಟ್ಟಿತು. ಅಧಿಕ ಪ್ರಸಂಗಿಗೆ ಹಾಗೇ ಆಗ ಬೇಕು ಅಂತ ಹೇಳಿದರು.
ನಮ್ಮ ಜೀವನದಲ್ಲೂ ಈ ರೀತಿಯ ವ್ಯಕ್ತಿಗಳು ನಮಗೆ ಸಿಗುತ್ತಾರೆ. ಅವರು ನಮ್ಮ ಲಕ್ಷ್ಯವನ್ನು ಅನಗತ್ಯ ವಿಷಯದ ಕಡೆ ಹೆಚ್ಚು ಸೆಳೆಯುತ್ತಾರೆ. ಹೀಗೆ ಮಾಡುವುದರಿಂದ ನಮಗೆ ಹೇಗೆ ನಷ್ಟವೋ ಅವರಿಗೂ ಹಾಗೇ ಆಗುತ್ತದೆ ಎಂಬುವುದಕ್ಕೆ ಮೇಲಿನ ಘಟನೆಯೇ ಸಾಕ್ಷಿ. ಮೇಲಿನ ಘಟನೆಯಲ್ಲಿರುವ ವ್ಯಕ್ತಿ ಆಟದ ಮೇಲೆ ತಮ್ಮ ಗಮನವನ್ನು ಕೇಂದ್ರೀಕರಿಸಿದ್ದರೆ ಕನಿಷ್ಟ ಮೂರು ಲಕ್ಷವನ್ನಾದರೂ ಗಳಿಸಬಹುದಾಗಿತ್ತು. ಆತನನ್ನು ನೋಡುವಾಗ ನನಗೆ ‘ಕೊಟ್ಟ ಕುದುರೆಯನ್ನು ಏರಲು ಬಾರದವನು ಯಾವ ರೀತಿಯ ಶೂರ' ಎಂಬ ಮಾತು ನೆನಪಾಗುತ್ತದೆ. ಆತನಿಗೆ ವೇದಿಕೆ ಇತ್ತು. ಹಾಟ್ ಸೀಟ್ ಗೆ ಬರುವ ಅವಕಾಶವೂ ದೊರೆತಿತ್ತು. ಆದರೆ ಅದನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳಲು ವಿಫಲನಾದ. ನಮ್ಮಲ್ಲೂ ಹಲವರು ಮಾಡುವುದು ಹೀಗೆನೇ.
ಆತನ ಬಳಿಕ ಹಾಟ್ ಸೀಟಿಗೆ ಬಂದ ಕೊಲ್ಕತ್ತಾದ ಓರ್ವ ಕೂಲಿ ಕಾರ್ಮಿಕ ಯಾವುದೇ ಅನಗತ್ಯ ಮಾತುಗಳನ್ನು ಆಡದೇ ತನ್ನ ಲಕ್ಷ್ಯದತ್ತ ಗಮನ ಹರಿಸಿ ಆರು ಲಕ್ಷ ಹಣ ಸಂಪಾದಿಸಿದ. ಏಕೆಂದರೆ ಆತನಿಗೆ ಕಷ್ಟದ ಅರಿವಿತ್ತು. ಆತನನ್ನು ಸಾಕಲು ಅಮ್ಮ ಮಾಡಿದ ತ್ಯಾಗದ ಬಗ್ಗೆ ಗೊತ್ತಿತ್ತು. ಮನೆಯ ಕಷ್ಟ, ಅಕ್ಕನಿಗೆ ಕೊಡಬೇಕಾದ ಸಾಲ ಇವೆಲ್ಲದರ ಅರಿವು ಇದ್ದುದರಿಂದ ಬಹಳ ಚೆನ್ನಾಗಿ ಸಂಯಮದಿಂದ ಆಡಿ, ತೂಕದ ಮಾತುಗಳನ್ನು ನುಡಿದು ಅಮಿತಾಬ್ ಬಚ್ಚನ್ ಜೊತೆಗೆ ಅಲ್ಲಿ ನೆರೆದಿದ್ದ ಎಲ್ಲಾ ಪ್ರೇಕ್ಷಕರ ಕರತಾಡನಕ್ಕೆ ಸಾಕ್ಷಿಯಾದ. ಅದಕ್ಕೇ ಮಿತ್ರರೇ, ನಾವು ಯಾವತ್ತೂ ಸಿಕ್ಕ ಅವಕಾಶವನ್ನು ಸೊಗಸಾಗಿ ಬಳಸಿಕೊಳ್ಳಬೇಕು. ಎಷ್ಟು ಅಗತ್ಯವೋ ಅಷ್ಟೇ ಮಾತುಗಳನ್ನು ಆಡಬೇಕು. ಇದರಿಂದ ನಮ್ಮ ಗೌರವೂ ಅಧಿಕವಾಗುತ್ತದೆ ಮತ್ತು ನಮ್ಮ ಮಾತಿಗೂ ಬೆಲೆ ಸಿಗುತ್ತದೆ.
ಚಿತ್ರ ಕೃಪೆ: ಅಂತರ್ಜಾಲ ತಾಣ