ಮಾತಿಲ್ಲ ಕತೆಯಿಲ್ಲ
ಕವನ
ಮಸಣದಲಿ ಕುಳಿತಿಹರು
ವೇದನೆಯ ಪಡುತಿಹರು
ತಿಳಿದು ತಿಳಿಯದೆ ಇರಲು
ಬದುಕ ಕೊನೆಗೊಳಿಸಿಹರು//
ಮಾತಿಲ್ಲ ಕತೆಯಿಲ್ಲವು
ಹೃದಯದೊಳು ತಲ್ಲಣವು
ಪ್ರೀತಿಸಿದ ಮನಸ್ಸಿನೊಳು ಚೆಲ್ಲಾಟವು//
ಕನಸುಗಳ ಜೊತೆಗಾರ
ಸರಿಯುತಿಹನೂ ದೂರ
ತನುವಿನಾಳದ ತುಂಬ ಬಹು ಭಾರ ಭಾರ//
ವೇದನೆಯ ಸನಿಹದಲಿ
ಕುಳಿತುಕೊಳ್ಳಲು ಚಳಿಲಿ
ಹಬೆಯಲಿ ಸಿಲುಕಿದ ತೆರದಿ ಬೆಂದು ಬಳಲಿ//
ಅವನು ಬರಲೇ ಇಲ್ಲ
ಇವಳು ಏಳಲೇ ಇಲ್ಲ
ಸಿಗದೆ ಇರಲವರು ಮಾತೇ ಇಲ್ಲ//
-ರತ್ನಾ ಕೆ.ಭಟ್, ತಲಂಜೇರಿ
ಚಿತ್ರ್
