ಮಾತು ಕಮ್ಮಿ..ಭಾವ ತೀವ್ರ ..ರೂಪ ಉಗ್ರ...!
ಉಗ್ರಂ ಚಿತ್ರದ ಬಗ್ಗೆ ಹೇಳಬೇಕು ಅನಿಸುತ್ತಿದೆ. ಆದರೆ, ಆರಂಭದ 20 ನಿಮಿಷ ನೋಡದೆ ಇರೋದ್ರಿಂದ, ವಿಮರ್ಶ ಮಾಡೋದು ಎಷ್ಟು ಸರಿ ಅನ್ನೋ ಅನುಮಾನವೂ ಇದೆ. ಅದಾಗ್ಯೂ ಉಗ್ರಂ ಬಗ್ಗೆ ಹೇಳಬೇಕು ಎಂದು ಬಲವಾದ ಉತ್ಸಾಹ ಮೂಡುತ್ತಿದೆ. ಕಾರಣ, ಉಗ್ರಂ ಅಷ್ಟು ಚೆನ್ನಾಗಿದೆ. ಬೇರೆಯವರಿಗೆ ಈ ಚಿತ್ರದ ಬಗ್ಗೆ ಹೇಳಲೇಬೇಕು ಅನ್ನೋವಷ್ಟು ಮಟ್ಟಿಗೆ ಈ ಚಿತ್ರ ನಿಮ್ಮ ಸೆಳೆಯುತ್ತದೆ. ಓದಲು ಮುಂದೆ ಒಂದಷ್ಟು ವಿಶ್ಲೇಷಣೆ ಇದೆ.
ಉಗ್ರಂ ಕತೆ ಸಿಂಪಲ್ ಆಗಿದೆ. ಒಲ್ ಲೈನ್ನಲ್ಲಿ ಹೇಳಿಬಿಡಬಹುದು. ಹಾಗಂತ ಇದು ಜಾಳು..ಜಾಳು ಕತೆ ಅಲ್ಲ. ಗಟ್ಟಿ ಕತೇನೆ. ಅದಕ್ಕೂ ಮಿಗಿಲಾಗಿ ಉಗ್ರಂ ಮೇಕಿಂಗ್ ಸೆಳೆಯುತ್ತದೆ. ಕ್ಯಾಮೆರಾ ವರ್ಕ್ ರೋಚಕತೆ ಮೂಡಿಸುತ್ತದೆ. ಬ್ಯಾಗ್ರೌಂಡ್ ಸ್ಕೋರ್ ಉಗ್ರತೆಯ ಅನುಭವ ನೀಡುತ್ತದೆ. ಶ್ರೀಮುರಳಿ ಅಭಿನಯ ನಿಮ್ಮನ್ನ ಕಾಡುತ್ತದೆ. ಆದರೆ, ಎಲ್ಲದಕ್ಕೂ ಇಲ್ಲಿ ಮೌನವೇ ಸಾಕ್ಷಿ. ಮಾತು ಕಡಿಮೆ. ಮೌನ ಗಟ್ಟಿ. ವ್ಯಕ್ತಪಡಿಸೋ ಹಾವ-ಭಾವ ಕತೆಯ ತೀವ್ರತೆಯ ಹೆಚ್ಚಿಸುತ್ತದೆ.
ಶ್ರೀಮುರಳಿ ನಿಮ್ಮನ್ನ ಆವರಿಸಿಕೊಳ್ಳುತ್ತಾರೆ. ಮಾತೇಯಿಲ್ಲದೇ ಭಾವಾವೇಷದಿಂದ, ಮನಸ್ಸಿನಲ್ಲಿ ಇಳಿಯುತ್ತಾರೆ. ಪಾತ್ರವೇ ಅದನ್ನ ಬೇಡಿರೊದ್ರಿಂದ, ಶ್ರೀಮುರಳಿ ಯ ಈ ರೀತಿಯ ಉಗ್ರರೂಪ ಇಷ್ಟವಾಗುತ್ತದೆ. ಉಗ್ರರೂಪಕ್ಕೂ ಲಾಜಿಕ್ ಇಟ್ಟಿರೋ ನಿರ್ದೇಶಕ ಪ್ರಶಾಂತ್ ನೀಲ್, ಎಲ್ಲೂ ಬಾಲಿಶ ಅನ್ನಿಸೋವಂತಹ ಸನ್ನಿವೇಶ ಸೃಷ್ಠಿಸಿಲ್ಲ. ಎಲ್ಲವೂ ಅರ್ಥ ಪೂರ್ಣವಾಗಿಯೇ ಇವೆ. ಸಂಭಾಷಣೆಯಂತೂ ಕತೆಯ ಜೀವಾಳ. ಪ್ರತಿ ಸಂಭಾಷಣೆಗೂ ಭಾವ ತೀವ್ರತೆಯಿದೆ. ರೊಚ್ಚಿಗೆದ್ದು ಹಾರಾಡುವ ಪಾತ್ರಗಳ ಪೋಷಣೆ ಇಲ್ಲಿ ಕಂಡರೂ, ಅವು ಹೆಚ್ಚಿಲ್ಲ.
ಉಗ್ರಂ ಕತೆ ಏನೂ: ಉಗ್ರಂ ಕತೆ ಹೇಳಿಬಿಟ್ಟರೆ, ಏನೂ ಆಗೋದಿಲ್ಲ. ಹೇಳಿ ಬಿಡಬಹುದು. ಅದನ್ನ ಸೂಪರ್ ಮೇಕಿಂಗ್ ಜೊತೆಗೆ ನೋಡಿದ್ರೇ ಅದರ ಮಜವೇ ಬೇರೆ. ಆದರೂ ಸಂಕ್ಷಿಪ್ತ ಕಥೆ ಹೇಳ್ತಿನಿ ಕೇಳಿ. ಮುಗೋರ್ ಎಂಬ ಊರು. ಈ ಊರಲ್ಲಿ ರೌಡಿಗಳದ್ದೇ ಅಟ್ಟಹಾಸ. ಎಲ್ಲರೂ ದುಡ್ಡಿಗಾಗಿ ರಕ್ತ ಹರಿಸೋರೆ. ಮುಗೋರ್ ಎಂಬ ಊರನ್ನ ಆಳಬೇಕು ಎನ್ನೋರೇ. ಅವರಲ್ಲಿ ಬಾಲಾ ಎಂಬ ಪುಡಿ ರೌಡಿ ಒಬ್ಬ. ಈ ರೌಡಿಗೊಬ್ಬ ಬಾಲ್ಯದ ಗೆಳೆಯ. ಹೆಸ್ರು ಅಗಸ್ಥ್ಯ. ಅಗಸ್ಥ್ಯ ಗೆಳೆಯನಿಗಾಗಿ ಏನೇಲ್ಲ ಮಾಡೋವಷ್ಟು ಪ್ರಾಮಾಣಿಕ. ಅಮ್ಮ ಹೇಳಿದ ಮಾತನ್ನೂ ತಪ್ಪದವ. ಆದರೆ, ಅಮ್ಮ ಹೇಳಿದಲು ಎಂಬ ಒಂದೇ ಒಂದು ಕಾರಣಕ್ಕೆ ಅಗಸ್ಥ್ಯ ಅಂಡರ್ವಲ್ಡ್ ಗೆ ಎಂಟ್ರಿ ಆಗ್ತಾನೆ. ಹಾಗಂತ ಇದು ಸೆಂಟಿಮೆಂಟಲ್ ಮೂವಿ ಅಲ್ಲವೇ ಅಲ್ಲ. ಇದರ ದಿಕ್ಕೂ ಬೇರೆ. ಇದರ ಓಟವೂ ಬೇರೆ...
ಕ್ಯಾಮೆರಾ ವರ್ಕ್; ಚಿತ್ರಕ್ಕೆ ಮೂವರು ಕೆಲಸ ಮಾಡಿದ್ದಾರೆ. ರಾಮ್ಲೀಲಾ ಚಿತ್ರಕ್ಕೆ ಛಾಯಾಗ್ರಾಹಕರಾಗಿದ್ದ, ರವಿವರ್ಮನ್ ಮೊದಲ ಕ್ಯಾಮೆರಾಮನ್. ರವಿಕುಮಾರ್ ಎಂಬೋರು ಮತ್ತೊಬ್ಬರು. ಕೊನೆಯದಾಗಿ ಬಂದೋರು, ಭುವನ್ ಗೌಡ. ಇವರ ಕೈಚಳದಲ್ಲಿ ಉಗ್ರಂ ತುಂಬಾ ಚೆನ್ನಾಗಿ ಮೂಡಿ ಬಂದಿದೆ.
ನಿರ್ದೇಶಕರ ನಿರೂಪನೆ; ನಿರ್ದೇಶಕ ಪ್ರಶಾಂತ್ ನೀಲ್ಗೆ ಇದು ಮೊದಲ ಪ್ರಯತ್ನ. ಸಿನಿಮಾವನ್ನ ನೋಡಿಯೇ ಬೆಳೆದದ್ದು ಬಿಟ್ಟರೆ. ಯಾವ ದೊಡ್ಡ ನಿರ್ದೇಶಕರ ಬಳಿಯೂ ಕೆಲಸ ಮಾಡಿಲ್ಲ ಪ್ರಶಾಂತ್. ಆದರೆ, ಉಗ್ರಂ ನೋಡಿದ್ರೆ, ರಾಮ್ಗೋಪಾಲ್ ವರ್ಮ್ ಅವರ ಸಿನಿಮಾ ತುಂಬಾ ಹಚ್ಚಿಕೊಡಂತಿದೆ. ಅವರ ಸಿನಿಮಾಗಳ ಛಾಯೆ ಉಗ್ರಂನಲ್ಲಿ ಕಾಣಿಸುತ್ತದೆ. ಕತೆ ವಿಷ್ಯಕ್ಕೆ ಬಂದ್ರೆ, ಕನ್ನಡದ ಕತೆನೇ ಇದಾಗಿದೆ. ಭೂಗತ ಜಗತ್ತಿನ ಕಥೆಯನ್ನ, ಬಾಲಿವುಡ್ನ ಸ್ಟೈಲ್ನಲ್ಲಿ ಹೇಳಿರೋದು ಪ್ರಶಾಂತ್ ಬುದ್ದಿವಂತೆ ಅಂದರೂ ತಪ್ಪಿಲ್ಲ. ಹಾಗಿದೆ ಪ್ರಶಾಂತ್ ನಿರ್ದೇಶನ.
ಹರಿಪ್ರಿಯ ಮತ್ತು ತಿಲಕ್; ಉಗ್ರಂ ಚಿತ್ರದ ಅಷ್ಟೂ ಪಾತ್ರಗಳಿಗೂ ಮಹತ್ವ ಇದೆ. ಯಾವುದೇ ರೋಲ್ ಹಾಗೆ ಬಂದು ಹೀಗೆ ಹೋಗೋದಿಲ್ಲ. ಹಾಗೇನಾದ್ರೂ ಹೋದರೆ, ಅದು ಡಮ್ಮಿನೂ ಅಲ್ಲ. ಸ್ಟ್ರಾಂಗ್ ಕ್ಯಾರೆಕ್ಟರ್ಗಳೇ ಕತೆಯ ಓಟದಲ್ಲಿ ಬರುತ್ತವೆ. ಅದರಲ್ಲೂ ಬಾಲಾ ಕ್ಯಾರೆಕ್ಟರ್ ಮಾಡಿರೋ ತಿಲಕ್ ಪಾತ್ರ ಚೆನ್ನಾಗಿದೆ. ಅಷ್ಟೇ ಮಹತ್ವನ್ನೂ ಪಡೆದಿದೆ. ನಾಯಕ ಶ್ರೀಮುರಳಿ ಜೊತೆ..ಜೊತೆಗೇನೆ ಇದು ಸಾಗುತ್ತದೆ. ಹರಿಪ್ರಿಯ ಉಗ್ರಂ ಕಥೆಗೆ ಒಂದು ಸುಂದರ ರೂಪ. ವಿದೇಶದಿಂದ ಬಂದಿರೋ ಚೆಲುವೆ. ಪದ್ಮಜಾ ರಾವ್ ಅಮ್ಮನಾಗಿ ಮನಸ್ಸಿನಲ್ಲಿ ಉಳಿಯುತ್ತಾರೆ. ಅವಿನಾಶ್, ಅತುಲ್ ಕುಲಕರ್ಣಿ,ಜೈಜಗದೀಶ್ ಕಾಡೋದಿಲ್ಲ. ಆದರೆ, ನೆನಪಿನಲ್ಲಿ ಉಳಿಯುತ್ತಾರೆ. ಚಿತ್ರ ನೋಡಿ ಹೊರಗೆ ಬರೋರಿಗೆ, ಒಂದು ಒಳ್ಳೆ ಸಿನಿಮಾ ನೋಡಿದ ಅನುಭವ ಕಂಡು ಆಗುತ್ತದೆ. ಉಗ್ರಂ ಹಾಗಿದೆ. ಒಮ್ಮೆ ನೋಡಬಹುದು.
- ರೇವನ್ ಪಿ.ಜೇವೂರ್