ಮಾತು ಕೃತಿಗಿಳಿದ ಸಮಯ...

ಮಾತು ಕೃತಿಗಿಳಿದ ಸಮಯ...

ಮಾನವೀಯ ಮೌಲ್ಯಗಳ ಪುನರುತ್ಥಾನದ " ಜ್ಞಾನ ಭಿಕ್ಷಾ ಪಾದಯಾತ್ರೆ " ಸಮಯದಲ್ಲಿ ಬೆಂಗಳೂರಿನ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ವಿವಿಧ ಸ್ವಯಂ ಉದ್ಯೋಗ - ವ್ಯಾಪಾರ ಮಾಡುವ ಕೆಲವು ಗೆಳೆಯರು ಮಾಗಡಿಯಲ್ಲಿ ಭೇಟಿಯಾಗಿ ನಮ್ಮ ಕೆಲಸದ ನಡುವೆಯೂ ಏನಾದರು ಸಮಾಜಮುಖಿ ಕೆಲಸ ಮಾಡುವ ಮನಸ್ಸು ಇದೆ. ಅದಕ್ಕೆ ನಿಮ್ಮ ಸಲಹೆಯನ್ನು ನೀಡಿ ಎಂದು ಕೇಳಿದರು. ಖಂಡಿತ ನಮ್ಮ ಸಂಪೂರ್ಣ ಸಹಕಾರ ಸದಾ ಇರುತ್ತದೆ ಎಂದು ಭರವಸೆ ನೀಡಿದೆವು. 

ಅಂದಿನಿಂದ ಆ ಗೆಳೆಯರ ಜೊತೆ  ಸಂಪರ್ಕದಲ್ಲಿ ಇದ್ದೆ. ಅವರು " ಪ್ರಬುದ್ಧ ಸಮಾಜ ನಿರ್ಮಾಣ ವೇದಿಕೆ " ಎಂಬ ಸಂಸ್ಥೆಯನ್ನು ನೋಂದಣಿ ಮಾಡಿಸಿದರು. ಟ್ರೆಕ್ಕಿಂಗ್ ಅವರ ಅತ್ಯಾಸಕ್ತ ಹವ್ಯಾಸವೂ ಆಗಿದೆ. ಆಗಾಗ ಚಾರಣ ಮಾಡುತ್ತಿರುತ್ತಾರೆ. 

ಇತ್ತೀಚೆಗೆ ಅವರ ತಂಡದ ಸದಸ್ಯರ ಪರಿಚಯದ ಶಿಕ್ಷಕರು ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಐ ಡಿ ಹಳ್ಳಿ ಎಂಬ ಗ್ರಾಮದಲ್ಲಿ ಅಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರ ಸಹಕಾರದೊಂದಿಗೆ ಇದೇ ತಂಡದಿಂದ ವಿಶ್ವ ಪರಿಸರದ ದಿನದಂದು ಶಾಲೆಯ‌ ಆವರಣದಲ್ಲಿ ಕೆಲವು ಗಿಡ ನೆಡಲಾಯಿತು.

ಆ ಸಂದರ್ಭದಲ್ಲಿ ಶಾಲೆಗೆ ಒಂದು ಧ್ವನಿವರ್ಧಕ ವ್ಯವಸ್ಥೆಯ ಅವಶ್ಯಕತೆ ಇದೆ ಎಂದು ಶಾಲೆಯ ಶಿಕ್ಷಕ ವೃಂದ ಮಾಡಿದ ಮನವಿಗೆ ಸ್ಪಂದಿಸಿದ ‌ನಮ್ಮ ತಂಡ ನಿನ್ನೆ ದಿನಾಂಕ 23-06-2022 ಗುರುವಾರ ಅದೇ ಶಾಲೆಯಲ್ಲಿ ಪರಿಸರ ಸಂರಕ್ಷಣೆ, ಜಾಗೃತಿ ಮತ್ತು ಸ್ವಚ್ಚತಾ ಕಾರ್ಯಕ್ರಮ ಏರ್ಪಡಿಸಿ ಜೊತೆಗೆ ಬೆಂಗಳೂರಿನಿಂದ ಹೊಸ ಧ್ವನಿವರ್ಧಕ ಬಾಕ್ಸ್ ತೆಗೆದುಕೊಂಡು ಹೋಗಲು ನಿರ್ಧರಿಸಲಾಯಿತು.

ಅದೇ ಊರಿನ ಅದೇ ಶಾಲೆಯಲ್ಲಿ ‌ಕಲಿತ ನಮ್ಮ ಆತ್ಮೀಯ ಗೆಳೆಯರು ಆದ ಡಾ.ಟಿ.ಶ್ರೀನಿವಾಸರೆಡ್ಡಿ, ನಿವೃತ್ತ ಅಪರ ನಿರ್ದೇಶಕರು  , ಪಶುಪಾಲನೆ ಇಲಾಖೆ. ಹಾಲಿ ಸಾರ್ವಜನಿಕ  ಕುಂದು ಕೊರತೆ ಪ್ರಾಧಿಕಾರದ ಅಧ್ಯಕ್ಷರು,  ಗ್ರಾಮೀಣ ಅಭಿವೃದ್ಧಿ ಇಲಾಖೆ, ಗುಲ್ಬರ್ಗ  ವಿಭಾಗ. ಅವರ ಸಹಕಾರದೊಂದಿಗೆ..

ಬೆಳಗ್ಗೆ 8 ಗಂಟೆಗೆ ಬೆಂಗಳೂರಿನಿಂದ ಹೊರಟ 9 ಜನರ ನಮ್ಮ ತಂಡ ಸುಮಾರು 12 ಗಂಟೆಯ ವೇಳೆಗೆ ಅಲ್ಲಿ ತಲುಪಿ ಶಾಲೆಯ ಆವರಣದಲ್ಲಿಯೇ ಸುಮಾರು ‌250 ಮಕ್ಕಳು, ಶಿಕ್ಷಕ ಮತ್ತು ಸಿಬ್ಬಂದಿ ವರ್ಗ ಮತ್ತು ನಾವುಗಳು ಒಂದು ಪುಟ್ಟ ಕಾರ್ಯಕ್ರಮ ನಡೆಸಿ, ಮಕ್ಕಳಿಗೆ ಕೆಲವು ಹಿತ ನುಡಿಗಳನ್ನು ಹೇಳಿ, ಧ್ವನಿವರ್ಧಕ ನೀಡಿ, ಶಾಲೆಯ ಮೈದಾನದಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಮತ್ತಿತರ ಕಸವನ್ನು ಸಂಗ್ರಹಿಸಿ ಚೀಲದಲ್ಲಿ ತುಂಬಿ ಕೊನೆಗೆ ಅಲ್ಲಿಯೇ ಮಕ್ಕಳಿಗಾಗಿ ಮಾಡಿದ ಬಿಸಿಯೂಟವನ್ನೇ ನಾವೆಲ್ಲರೂ ಸೇವಿಸಿ ನಂತರ ಶಿಕ್ಷಕರೊಂದಿಗೆ ಅಲ್ಲಿನ ಶೌಚಾಲಯ ವ್ಯವಸ್ಥೆ, ಗ್ರಂಥಾಲಯ ಸೌಕರ್ಯಗಳ ಬಗ್ಗೆ ಚರ್ಚಿಸಿ ಸಾಧ್ಯವಾದಷ್ಟು ನಮ್ಮಿಂದ ಮಾಡಬಹುದಾದ ಸಹಾಯದ ಭರವಸೆ ನೀಡಿ ಸಂಜೆಯ ವೇಳೆಗೆ ಬೆಂಗಳೂರಿಗೆ ಹಿಂತಿರುಗಿದೆವು.

ಇದರಿಂದ ಆ ಸರ್ಕಾರಿ ಶಾಲೆಯ ಬಡ ಮಕ್ಕಳಿಗೆ ಎಷ್ಟು ಉಪಯೋಗವಾಯಿತೋ ಗೊತ್ತಿಲ್ಲ. ಆದರೆ ಅದರಲ್ಲಿ ‌ಭಾಗವಹಿಸಿದ ನಮಗೆ ಮಾತ್ರ ಒಂದು ಸಣ್ಣ ಆತ್ಮ ತೃಪ್ತಿ ದೊರೆಯಿತು. ನಾವು ಏನಾದರೂ ಸಹಾಯ ಮಾಡುವುದು ಹೆಚ್ಚಾಗಿ ಬೇರೆಯವರಿಗಾಗಿಯಲ್ಲ ನಮ್ಮ ಆತ್ಮ ತೃಪ್ತಿಗಾಗಿ ಎಂಬುದು ಹೆಚ್ಚು ವಾಸ್ತವ ಎನಿಸುತ್ತದೆ. ಕೊಡುವುದರಲ್ಲಿ ಪಡೆಯುವುದಕ್ಕಿಂತ ಹೆಚ್ಚು ಸಮಾಧಾನ ಮತ್ತು ನೆಮ್ಮದಿ ಇದೆ.

ಇದನ್ನು ಇಲ್ಲಿ ಪ್ರಸ್ತಾಪಿಸಲು ಮುಖ್ಯ ಕಾರಣ ಸರ್ಕಾರಿ ಶಾಲೆಗಳಲ್ಲಿ ಓದಿದ ಮತ್ತು ಈಗ ಸಮಾಜದಲ್ಲಿ ‌ಅನುಕೂಲಕರವಾಗಿರುವ ಹಳೆಯ ವಿದ್ಯಾರ್ಥಿಗಳು ತಾವು ಓದಿದ ಊರಿನ ಶಾಲೆಯ ಮತ್ತು ಅಲ್ಲಿನ ಮಕ್ಕಳಿಗಾಗಿ ಅವಶ್ಯಕತೆ ಇರುವ ಏನಾದರೂ ಸಹಾಯ ಮಾಡಲು ಸಾಧ್ಯವೇ ಎಂದು ಪ್ರಯತ್ನಿಸಲಿ ಎಂಬ ಆಶಯದಿಂದ. ಅದು ಕೇವಲ ವಸ್ತು ಅಥವಾ ಹಣದ ರೂಪವೇ ಆಗಿರಬೇಕು ಎಂದೇನಿಲ್ಲ. ನಮ್ಮ ಅನುಭವ ಮತ್ತು ತಿಳಿವಳಿಕೆಯನ್ನು ಸಹ ನೀಡಿ ಒಂದಷ್ಟು ಒಳ್ಳೆಯ ಬದಲಾವಣೆಗೆ ನಾವು ಕಾರಣವಾಗಬಹುದು.

ಈಗಾಗಲೇ ಈ ನಿಟ್ಟಿನಲ್ಲಿ ಹಲವಾರು ಜನರು ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಇದು ಆಡಳಿತ ವ್ಯವಸ್ಥೆಯ ಜವಾಬ್ದಾರಿ. ಅದು ವಿಫಲವಾದ ಕಾರಣ ಅಥವಾ ಪರಿಣಾಮಕಾರಿಯಲ್ಲದ ಕಾರಣ ಸಾರ್ವಜನಿಕರಾದ ನಾವು ನಮ್ಮ ಮಕ್ಕಳ ಭವಿಷ್ಯಕ್ಕಾಗಿ ಒಂದಷ್ಟು ಪ್ರಯತ್ನ ಮಾಡಬೇಕಾಗಿದೆ.

ತಮ್ಮ ಸಾಕಷ್ಟು ಕೆಲಸಗಳ ಒತ್ತಡದ ನಡುವೆಯೂ " ಪ್ರಬುದ್ಧ ಸಮಾಜ ನಿರ್ಮಾಣ ವೇದಿಕೆಯ " ಗೆಳೆಯರ ಈ ಕರ್ತವ್ಯವನ್ನು ಶ್ಲಾಘಿಸುತ್ತಾ ಅವರಿಗೆ ಹೃದಯ ಪೂರ್ವಕ ಅಭಿನಂದನೆಗಳು. ಹಾಗೆಯೇ ರಾಜ್ಯದ ಯಾವುದೇ ಭಾಗದ ಯಾರಾದರೂ ಸಮಾಜಮುಖಿ ಕೆಲಸಗಳನ್ನು ಮಾಡಲು ಯಾವುದೇ ಸಲಹೆಗಳ ಅವಶ್ಯಕತೆ ಇದ್ದರೆ ಯಾವುದೇ ಸಂಕೋಚವಿಲ್ಲದೇ ನಮ್ಮನ್ನು ಸಂಪರ್ಕಿಸಬಹುದು. ನೋಡೋಣ ಸಣ್ಣ ಸಣ್ಣ ಪ್ರಯತ್ನಗಳು ಹೆಮ್ಮರವಾಗುವ ಕನಸಿನೊಂದಿಗೆ ಮತ್ತೊಂದು ದಿನ, ಮತ್ತೊಂದು ಹೆಜ್ಜೆ ಮುಂದೆ ಮುಂದೆ....

-ವಿವೇಕಾನಂದ ಹೆಚ್.ಕೆ., ಬೆಂಗಳೂರು

ಸಾಂಕೇತಿಕ ಚಿತ್ರ ಕೃಪೆ: ಇಂಟರ್ನೆಟ್ ತಾಣ