ಮಾತೃಭೂಮಿಯ ಬಗ್ಗೆ ಅರಿವಿಲ್ಲದ ವಿದ್ಯಾರ್ಥಿ ಪಡೆ!
ಮಹಾಪಾಪಿ ಕಸಬ್‌ಗೆ ಮರಣದಂಡನೆ ಶಿಕ್ಷೆ ಘೋಷಣೆಯಾದ ಸುದ್ದಿ ಪತ್ರಿಕೆಗಳಲ್ಲಿ ಬಂದ ದಿನ. ಜನರ ಮನದಲ್ಲಿ ಮುಂಬೈ ದಾಳಿಯ ನೆನಪು ಮರುಕಳಿಸಿ ಕಣ್ಣುಗಳು ಒದ್ದೆಯಾಗಿದ್ದವು. ನಿತ್ಯಾನಂದಸ್ವಾಮಿ, ವೆಂಕಟೇಶಮೂರ್ತಿ-ಹಾಲಪ್ಪ ಪ್ರಕರಣಗಳು ಜನರಲ್ಲಿ ಆಗಲೇ ರೇಜಿಗೆ ಹುಟ್ಟಿಸಿದ್ದವು. ಇಂಥ ಸಂದರ್ಭದಲ್ಲಿ ಮರುಭೂಮಿಯಲ್ಲಿನ ಓಯಸಿಸ್‌ನಂತೆ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ರ್‍ಯಾಂಕ್ ವಿಜೇತರ ಸಾಧನೆಗಳ ವಿವರಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡು ಜನರ ಮನಸ್ಸನ್ನು ಕೊಂಚ ಅರಳಿಸಿದವು. ಆದರೆ, ಅದೇ ದಿನ, ಅಂದರೆ ಮೇ ೭ರಂದು ಬೆಂಗಳೂರಿನ ಆಂಗ್ಲ ದೈನಿಕವೊಂದರಲ್ಲಿ ಪ್ರಕಟವಾದ ವರದಿಯೊಂದು ನಮ್ಮ ವಿದ್ಯಾರ್ಥಿಸಮೂಹದ ಬಗ್ಗೆ ಚಿಂತೆ ಹುಟ್ಟಿಸುವಂತಿತ್ತು!
ಠಾಕೂರ್ ಗೊತ್ತಿಲ್ಲ
ಮೇ ೭ರಂದು ಶುಕ್ರವಾರ ರವೀಂದ್ರನಾಥ ಠಾಕೂರರ ೧೫೦ನೇ ಜನ್ಮದಿನ. ಅಂದು ಆ ಆಂಗ್ಲ ದೈನಿಕವು ಠಾಕೂರರ ಚಿತ್ರವೊಂದನ್ನು ಬೆಂಗಳೂರಿನ ಕೆಲವು ಪ್ರತಿಷ್ಠಿತ ಕಾಲೇಜುಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ತೋರಿಸಿ ಚಿತ್ರದ ವ್ಯಕ್ತಿಯನ್ನು ಗುರುತಿಸುವಂತೆ ಕೇಳಿತು. ಆ ಯುವಕ-ಯುವತಿಯರು ’ಬೆಬ್ಬೆಬ್ಬೆ’ ಅಂದರು! ಅವರಿಗೆ ರವೀಂದ್ರನಾಥ ಠಾಕೂರರ ಗುರುತೇ ಹತ್ತಲಿಲ್ಲ! ಒಬ್ಬ ವಿದ್ಯಾರ್ಥಿ ಕೊಟ್ಟ ಉತ್ತರ ಹೀಗಿತ್ತು: "ಈತ ಯಾರೋ ಒಬ್ಬ ಪೈಂಟರ್. ಅಲ್ಲ, ತಾಳಿ, ಈತ ಆರ್ಕಿಟೆಕ್ಟ್. ಈತ ಬಾಬ್ ಮಾರ್ಲೆಯಹಾಗೆ ಕಾಣುತ್ತಾನೆ." ಹೀಗೆ ಉತ್ತರ ಕೊಟ್ಟಾತ ಪತ್ರಿಕೋದ್ಯಮದ ವಿದ್ಯಾರ್ಥಿ!
ಠಾಕೂರ್ ಬಗ್ಗೆ ಪತ್ರಿಕೆಯು ಕೇಳಿದ ವಿವಿಧ ಪ್ರಶ್ನೆಗಳಿಗೆ ಆ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಕೊಟ್ಟ ಉತ್ತರಗಳು ಹೀಗಿದ್ದವು:
ಪ್ರಶ್ನೆ: "ರವೀಂದ್ರನಾಥ್ ಟ್ಯಾಗೋರರು ಆರಂಭಿಸಿದ ವಿದ್ಯಾಲಯದ ಹೆಸರೇನು?"
ಉತ್ತರ: "ಟ್ಯಾಗೋರ್ ಇಂಟರ್‌ನ್ಯಾಷನಲ್ ವಿದ್ಯಾಲಯ." (ಈ ಉತ್ತರ ಬಂದಿದ್ದು ಪತ್ರಕೋದ್ಯಮದ ವಿದ್ಯಾರ್ಥಿನಿಯಿಂದ!)
ಪ್ರಶ್ನೆ: "ಟ್ಯಾಗೋರರು ರಚಿಸಿರುವ ಪ್ರಸಿದ್ಧ ಗೀತೆ ಯಾವುದು?"
ಉತ್ತರ: "ವಂದೇ ಮಾತರಂ." (ನಮ್ಮ ರಾಷ್ಟ್ರಗೀತೆಯ ರಚನಕಾರನ ಹೆಸರು ಗೊತ್ತಿಲ್ಲದ ಈ ವಿದ್ಯಾರ್ಥಿನಿಗೆ ರಾಷ್ಟ್ರಗೀತೆಯ ಪೂರ್ಣಪಾಠ ಗೊತ್ತಿರುವುದೂ ಅನುಮಾನ! ’ವಂದೇ ಮಾತರಂ’ ಗೀತೆ ಈಗ ಜನರ ಬಾಯಲ್ಲಿ ಹೆಚ್ಚು ನಲಿದಾಡುತ್ತಿರುವುದರಿಂದ ಈಕೆ ’ವೈಲ್ಡ್ ಗೆಸ್’ ಮಾಡಿದ್ದಾಳೆ ಅಷ್ಟೆ.)
ಪ್ರಶ್ನೆ: "ಟ್ಯಾಗೋರರಿಗೆ ಸಂದ ಅಂತಾರಾಷ್ಟ್ರೀಯ ಪ್ರಶಸ್ತಿ ಯಾವುದು?"
ಉತ್ತರ: "ನನಗೆ ನೆನಪಿಲ್ಲ."
ಪ್ರಶ್ನೆ: "ಟ್ಯಾಗೋರರಿಗೆ ನೊಬೆಲ್ ಪ್ರಶಸ್ತಿ ಬಂದದ್ದು ಗಣಿತ, ಶಾಂತಿ, ಸಾಹಿತ್ಯ ಈ ಮೂರರ ಪೈಕಿ ಯಾವುದಕ್ಕೆ?"
ಉತ್ತರ: (ಹಲವು ವಿದ್ಯಾರ್ಥಿನಿಯರು ಒಕ್ಕೊರಲಿನಿಂದ) "ಶಾಂತಿಗೆ."
ಇದು ಇಂದಿನ ನಮ್ಮ ಶಿಕ್ಷಣಕ್ರಮದಡಿಯಲ್ಲಿ ಬಹಳಷ್ಟು ವಿದ್ಯಾರ್ಥಿಗಳು ಸ್ವದೇಶದ ಬಗ್ಗೆ ಹೊಂದಿರುವ ಜ್ಞಾನ!
ವಿದ್ಯಾರ್ಥಿ ಎಂಬ ಯಂತ್ರ
ನಮ್ಮ ಇಂದಿನ ಶಿಕ್ಷಣಕ್ರಮವು ವಿದ್ಯಾರ್ಥಿಗಳಿಗೆ ಮಾತೃಭೂಮಿಯ ಬಗ್ಗೆ ಸೂಕ್ತ ಅರಿವು ಹುಟ್ಟಿಸುವಲ್ಲಿ ಸಮರ್ಪಕವಾಗಿ ಕಾರ್ಯತತ್ಪರವಾಗಿಲ್ಲ. ಸಮಾಜವಿಜ್ಞಾನವೆಂಬ ಪಠ್ಯವಿಷಯವು (೧) ಅನಗತ್ಯ ಮಾಹಿತಿಗಳಿಂದ (೨) ಅಪ್ರಸ್ತುತರಾದ ಅಥವಾ ಬೇಡವಾದ ಹಲವು ವ್ಯಕ್ತಿಗಳ ಚರಿತ್ರೆ, ಗುಣಗಾನಗಳಿಂದ (೩) ಸರ್ಕಾರಕ್ಕೆ ಬೇಕಾದ ವ್ಯಕ್ತಿಗಳ ವೈಭವೀಕರಣದಿಂದ (೪) ಹಲವು ಅವಶ್ಯ ವಿಷಯ, ವ್ಯಕ್ತಿಗಳ ವಿರುದ್ಧ ಪಕ್ಷಪಾತದಿಂದ ಮತ್ತು (೫) ಚರಿತ್ರೆಯ ತಿರುಚುವಿಕೆಯಿಂದ ಕೂಡಿದೆ. ಈ ಚೋದ್ಯಕ್ಕೆ ಪೂರಕವಾಗಿಯೆಂಬಂತೆ ಪೋಷಕರು ತಮ್ಮ ಮಕ್ಕಳಿಗೆ ಭಾರತದ ಸಂಸ್ಕೃತಿ, ಪರಂಪರೆ, ಇತಿಹಾಸ, ವರ್ತಮಾನ ಇವುಗಳ ತಿಳಿವಳಿಕೆ ಹೆಚ್ಚಿಸುವಲ್ಲಿ ಆಸಕ್ತಿ ತೋರುತ್ತಿಲ್ಲ.
ಪಾಠ ನುಂಗಿ ಪರೀಕ್ಷೆಯಲ್ಲಿ ಉಗುಳಿ ಅಂಕ ಗಳಿಸುವ ಯಂತ್ರಗಳನ್ನಾಗಿಯಷ್ಟೇ ವಿದ್ಯಾರ್ಥಿಗಳನ್ನು ತಯಾರುಮಾಡುತ್ತಿವೆ ನಮ್ಮ ಪಠ್ಯವಿಷಯಗಳು. ವಿದ್ಯಾರ್ಥಿಯು ವರ್ಷವಿಡೀ ಪಠ್ಯವಿಷಯದೊಳಗೇ ಮುಳುಗಿಕೊಂಡಿರುವಂತೆ ನೋಡಿಕೊಳ್ಳುತ್ತಿವೆ ನಮ್ಮ ಶಿಕ್ಷಕವರ್ಗ ಮತ್ತು ಪೋಷಕವರ್ಗ.
ಇಂಥ ಮನೋಭಾವ ಹೊಂದಿರುವ ಬಹಳಷ್ಟು ಪೋಷಕರು ಮತ್ತು ಶಿಕ್ಷಕರು ಎಳೆಯ ಪೀಳಿಗೆಯನ್ನು ಸ್ವದೇಶದ ಬಗೆಗಿನ ಅರಿವಿನಿಂದ ವಂಚಿತರನ್ನಾಗಿ ಮಾಡುತ್ತಿರುವುದು ಆತಂಕಕಾರಿ ಸಂಗತಿ. ಮಾತೃಭೂಮಿಯ ಬಗ್ಗೆ ಮತ್ತು ಮಾತೃಭೂಮಿಯ ಮಹಾನ್ ವ್ಯಕಿಗಳ ಬಗ್ಗೆ ಅರಿವಿಲ್ಲದ ಪೀಳಿಗೆಗೆ ಮಾತೃಭೂಮಿಯಮೇಲೆ ಅಭಿಮಾನ ಹುಟ್ಟುವುದಾದರೂ ಹೇಗೆ? ಸ್ವದೇಶಾಭಿಮಾನದ ಕೊರತೆ ಇರುವ ಪೀಳಿಗೆಯಿಂದ ಈ ದೇಶ ಉದ್ಧಾರ ಹೊಂದುವುದು ಸಾಧ್ಯವೆ?
ಚರಿತ್ರೆ ಪಾಠ
ಬ್ಯಾಂಕ್ ಅಧಿಕಾರಿಯಾಗಿ ಮೂರು ದಶಕಗಳ ಕಾಲ ಹಲವು ರಾಜ್ಯಗಳಲ್ಲಿ ಬದುಕು ಸಾಗಿಸಿದ ನಾನು ಹಲವೆಡೆ ಸ್ವಇಚ್ಛೆಯಿಂದ ಶಾಲಾ ಮಕ್ಕಳಿಗೆ ಉಚಿತವಾಗಿ ಪಾಠ ಹೇಳಿಕೊಟ್ಟಿದ್ದೇನೆ. ಶಾಲೆಗಳಲ್ಲಿ ಉಚಿತವಾಗಿ ತರಗತಿಗಳನ್ನು ತೆಗೆದುಕೊಂಡಿದ್ದೇನೆ. ಉತ್ತರ ಕರ್ನಾಟಕದ ಪ್ರೌಢಶಾಲೆಯೊಂದರಲ್ಲಿ ತರಗತಿಯೊಂದಕ್ಕೆ ಉಚಿತವಾಗಿ ಶೈಕ್ಷಣಿಕ ವರ್ಷವಿಡೀ ’ಚರಿತ್ರೆ’ಯ ತರಗತಿಗಳನ್ನು ತೆಗೆದುಕೊಂಡ ನಾನು ಪಠ್ಯಭಾಗವನ್ನು ಬೋಧಿಸುವಾಗ ಜೊತೆಜೊತೆಗೇ ಭಾರತದ ಸಂಸ್ಕೃತಿ, ಪರಂಪರೆ, ನಿಜಚರಿತ್ರೆ, ಪ್ರಮುಖ ವ್ಯಕ್ತಿಗಳು ಇತ್ಯಾದಿ ವಿಷಯಗಳನ್ನೂ ಹೆಚ್ಚುವರಿಯಾಗಿ ತಿಳಿಸಿಹೇಳತೊಡಗಿದೆ. ವರ್ಷಾಂತ್ಯದಲ್ಲಿ ವಿದ್ಯಾರ್ಥಿಗಳಲ್ಲಿ ಅದ್ಭುತ ಬದಲಾವಣೆಯನ್ನು ನಾನು ಕಂಡೆ. ಅದುವರೆಗೆ ಶಾಲಾಪಠ್ಯದ ಅಧ್ಯಯನದಲ್ಲಿ ಮಾತ್ರ ಆಸಕ್ತರಾಗಿದ್ದ ವಿದ್ಯಾರ್ಥಿಗಳೀಗ ದೇಶದ ಇತಿಹಾಸ, ಸಂಸ್ಕೃತಿಗಳಿಗೆ ಸಂಬಂಧಿಸಿದ ಪಠ್ಯೇತರ ಕೃತಿಗಳನ್ನು ಓದುವ ಆಸಕ್ತಿಯನ್ನೂ ಬೆಳೆಸಿಕೊಂಡಿದ್ದರು. ಅವರಲ್ಲಿ ದೇಶಾಭಿಮಾನ ಪ್ರಜ್ವಲಿಸತೊಡಗಿತ್ತು. ದೇಶಕ್ಕಾಗಿ ತಾನು ಏನಾದರೂ ಮಹತ್ತರ ಕೊಡುಗೆ ಸಲ್ಲಿಸಬೇಕೆಂಬ ಇಚ್ಛೆ ಅವರಲ್ಲಿ ಕುಡಿಯೊಡೆದು ಬೆಳೆಯತೊಡಗಿತು. ಅವರೆಲ್ಲ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದರು, ಮಾತ್ರವಲ್ಲ, ತಮ್ಮ ಭವಿಷ್ಯದ ಜೊತೆಗೆ ದೇಶದ ಭವಿಷ್ಯವನ್ನೂ ಉಜ್ವಲಗೊಳಿಸುವ ಸಂಕಲ್ಪ ತೊಟ್ಟರು.
ನಮ್ಮ ದೇಶಕ್ಕಿಂದು ಇಂಥ ಯುವಸಮೂಹದ ಅಗತ್ಯವಿದೆ.
ಸರ್ಕಾರಕ್ಕೆ ಸಾಧ್ಯ
ಕೇವಲ ಒಂದು ಶೈಕ್ಷಣಿಕ ವರ್ಷವಷ್ಟೇ ತರಗತಿಗಳಲ್ಲಿ ಬೋಧನೆ ಮಾಡುವ ಮೂಲಕ ಪ್ರೌಢಶಾಲೆಯೊಂದರ ವಿದ್ಯಾರ್ಥಿಗಳಲ್ಲಿ ದೇಶಪ್ರೇಮವನ್ನು ಜಾಗೃತಗೊಳಿಸಲು ನನ್ನಿಂದ ಸಾಧ್ಯವಾದರೆ ಇಡೀ ಶಿಕ್ಷಣಕ್ರಮವನ್ನೇ ಕೈಯೊಳಗಿಟ್ಟುಕೊಂಡಿರುವ ಸರ್ಕಾರಗಳಿಂದ ಇಂಥ ಸಾಧನೆ ಸಾಧ್ಯವಿಲ್ಲವೆ? ಪಠ್ಯವಿಷಯದಲ್ಲಿ ನಿಜಚರಿತ್ರೆ, ದೇಶದ ಸಂಸ್ಕೃತಿ, ಪರಂಪರೆ, ಪಕ್ಷಪಾತರಹಿತ ಇತಿಹಾಸ, ನೀತಿಬೋಧೆ ಮುಂತಾದವುಗಳನ್ನು ಅಳವಡಿಸಲು ಸಾಧ್ಯವಿಲ್ಲವೆ?
ಈ ಮೌಲ್ಯಗಳನ್ನು ಕಡೆಗಣಿಸಿ, ವರ್ಷವಿಡೀ ನುಂಗಿದ ಮಾಹಿತಿಯನ್ನು ಪರೀಕ್ಷೆಯಲ್ಲಿ ಉಗುಳಿ ಅಂಕ ಗಳಿಸುವ ಯಂತ್ರಗಳನ್ನಾಗಿಯಷ್ಟೇ ವಿದ್ಯಾರ್ಥಿಗಳನ್ನು ತಯಾರು ಮಾಡುವ ಇಂದಿನ ನಮ್ಮ ಶಿಕ್ಷಣಕ್ರಮ ಹೀಗೇ ಮುಂದುವರಿದಲ್ಲಿ ಮುಂದಿನ ಪೀಳಿಗೆಗಳು ಧನಾರ್ಜನೆ ಮತ್ತು ವಿಷಯಭೋಗಗಳಲ್ಲೇ ಜೀವನದ ಧನ್ಯತೆ ಕಾಣುವ ಪ್ರವೃತ್ತಿ ಉಲ್ಬಣಿಸುವುದರಲ್ಲಿ ಅನುಮಾನವಿಲ್ಲ. ದೇಶವು ಅಂಥ ಅಪಾಯಕ್ಕೆ ತುತ್ತಾಗುವ ಮುನ್ನ ನಾವು ಎಚ್ಚತ್ತುಕೊಳ್ಳಬೇಕು. ನಮ್ಮ ಮಕ್ಕಳು ಮಾತೃಭೂಮಿಯ ಇತಿಹಾಸ, ಸಂಸ್ಕೃತಿಗಳ ಸಮಗ್ರ ಅರಿವು ಹೊಂದುವಂತಾಗಬೇಕು. ಅವುಗಳೆಡೆಗೆ ಅವರು ಅಭಿಮಾನ ಬೆಳೆಸಿಕೊಳ್ಳಬೇಕು. ಇದಕ್ಕೆ ತಕ್ಕಂತೆ ನಮ್ಮ ಪಠ್ಯವಿಷಯ ಹಾಗೂ ಶಿಕ್ಷಣಕ್ರಮ ರೂಪುಗೊಳ್ಳಬೇಕು. ಜೊತೆಗೇ ಸಮರ್ಥ ಶಿಕ್ಷಕರ ಪಡೆಯೂ ತಯಾರಾಗಬೇಕು.
’ಜನಗಣಮನ’ ರಚಿಸಿದವರು ರವೀಂದ್ರನಾಥ ಠಾಕೂರ್ ಎಂಬುದು ನಮ್ಮ ಮಕ್ಕಳಿಗೆ ಗೊತ್ತಿರಬೇಕು ಮಾತ್ರವಲ್ಲ, ’ವಂದೇ ಮಾತರಂ’ ರಚಿಸಿದವರು ಬಂಕಿಮಚಂದ್ರ ಚಟ್ಟೋಪಾಧ್ಯಾಯ ಎಂಬುದೂ ಗೊತ್ತಿರಬೇಕು.
-೦-
(ಇದೇ ದಿನಾಂಕ ೨೨ರಂದು ಶನಿವಾರ ’ಸಂಪದ’ದಲ್ಲಿ ನಾನು ಪ್ರಕಟಿಸಿರುವ ’ಮೋಹಿನಿ-ಭಸ್ಮಾಸುರರ ಕಥೆ’ (ಅಂದರೆ, ಕಥೆ ಅಲ್ಲ) ಇದನ್ನು ಓದಿರದವರು ದಯೆಯಿಟ್ಟು ಓದಿ.)