ಮಾತೃ ಛಾಯ (ಭಾಗ 2)

ಮಾತೃ ಛಾಯ (ಭಾಗ 2)

ಕಣ್ಣು ಮುಚ್ಚಿ ಕುಳಿತ ಛಾಯಾಳಿಗೆ ಹಾಗೆಯೇ ನಿದ್ದೆ ಹತ್ತಿತ್ತು. ಅಷ್ಟರಲ್ಲಿ ಮೊಬೈಲ್ ರಿಂಗಣಿಸಿತು. ಉದಾಸೀನದಿಂದಲೇ ಎದ್ದು ಚಾರ್ಜಿಗೆ ಹಾಕಿದ್ದ ಮೊಬೈಲ್ ಕೈಗೆ ಎತ್ತಿ ಕೊಂಡಳು. ರೋಹನ್ ನ ಕರೆ. ಬಸವಳಿದ ಇವಳ ಮುಖದಲ್ಲಿ ಕಿರುನಗೆ ಒಂದು ಮಿಂಚಿತು. ತಕ್ಷಣವೇ ಕಾಲ್ ರಿಸೀವ್ ಮಾಡಿ ' ಹಲೋ' ಎಂದಳು. ಅತ್ತ ಕಡೆಯಿಂದ ಅದೇ ಸ್ಟೈಲಿಶ್ ಧಾಟಿಯಲ್ಲಿ ' ಹಲೋ ಮ್ಯಾಮ್.. ಹೌ ಆರ್ ಯ..? ' ಎಂದು ತೇಲಿ ಬಂದ ರೋಹನ್ ದನಿ. ರೋಹನ್ ಛಾಯ ಕೆಲಸಕ್ಕೆ ಸೇರಿದ ಮೊದಲ ವರ್ಷದಲ್ಲಿ ಬಿಕಾಂ ಕಲಿಯುತ್ತಿದ್ದ ವಿದ್ಯಾರ್ಥಿ. ಬಾಲ್ಯದಲ್ಲೇ ಇವನ ತಂದೆ ತೀರಿಕೊಂಡಿದ್ದರು. ತಾಯಿ ಸೂಪರ್ ಮಾರ್ಕೆಟ್ ಒಂದರಲ್ಲಿ ಕೆಲಸ ಮಾಡಿಕೊಂಡು ಜೀವನ ಹಾಗೂ ಇವನ ವಿದ್ಯಾಭ್ಯಾಸದ ನಿರ್ವಹಣೆ ಮಾಡುತ್ತಿದ್ದರು. ಓದಿನಲ್ಲಿ ಸದಾ ಮುಂದೆ, ಸಾಹಿತ್ಯದಲ್ಲಿ ಎಲ್ಲಿಲ್ಲದ ಆಸಕ್ತಿ. ಸದಾ ಚಟುವಟಿಕೆಯಿಂದ ಕೂಡಿದ ರೋಹನ್ ಛಾಯಾಳ ನೆಚ್ಚಿನ ವಿದ್ಯಾರ್ಥಿಯಾಗಿ ಬಿಟ್ಟಿದ್ದ. ಅವನಿಗೂ ಸಹ ಮನೆಯ ಕಷ್ಟ ಕಾರ್ಪಣ್ಯ, ತಾಯಿಯ ಒದ್ದಾಟ, ಭವಿಷ್ಯದ ಜವಾಬ್ದಾರಿ ಇವುಗಳ ಬಗ್ಗೆ ಕುರಿತು ಚಿಂತಿಸಲು, ಚರ್ಚಿಸಲು ಛಾಯಾ ಮೇಡಂ ಒಬ್ಬ ಒಳ್ಳೆಯ ಆಪ್ತ ಸಲಹಗಾರಳಾಗಿದ್ದರು. ಅಂತಿಮ ವರ್ಷದ ಬಿಕಾಂನಲ್ಲಿಯೇ ಕ್ಯಾಂಪಸ್ ಸೆಲೆಕ್ಷನ್ ಅಲ್ಲಿ ಮಲ್ಟಿ ನ್ಯಾಷನಲ್ ಕಂಪನಿಯೊಂದರಲ್ಲಿ ಒಳ್ಳೆಯ ಹುದ್ದೆಯನ್ನು ಗಳಿಸಿ ದೆಹಲಿಯಲ್ಲಿ ಸೆಟಲ್ ಆಗಿದ್ದ. ಮುಂದೆ ಕಂಪನಿ ಮೂರು ವರ್ಷ ಟ್ರೈನಿಂಗ್ ಎಂದು ಕೆನಡಾಕ್ಕೆ ಕಳುಹಿಸಿತ್ತು. ಜೀವನದಲ್ಲಿ ಏಳು ಬೀಳು, ಸುಖ ದುಃಖ, ಖುಷಿ ನೋವು, ಪ್ರತಿಯೊಂದನ್ನು ಛಾಯಾ ಮೇಡಂಗೆ ಫೋನ್ ಮಾಡಿ ಹಂಚಿಕೊಳ್ಳುತ್ತಿದ್ದ. ಕೆನಡಾದಿಂದ ಹಿಂದಿರುಗಿ ಮುಂಬೈಯಲ್ಲಿ ತನಗೊಂದು ಫ್ಲಾಟ್ ಖರೀದಿಸಿ, ತಾಯಿ ಮುಂಬೈ ಬರಲು ಒಪ್ಪದೇ ಇದ್ದಾಗ ಬೆಂಗಳೂರಿನಲ್ಲೇ ಒಂದು ಮನೆ ಕಟ್ಟಿಸಿ ಕೊಟ್ಟಿದ್ದ. ತನ್ನೊಡನೆ ಕೆಲಸ ಮಾಡುತ್ತಿದ್ದ ಹುಡುಗಿ ಒಬ್ಬಳನ್ನು ಪ್ರೀತಿಸಿ ಮದುವೆಯಾಗಿ ಸಂತೋಷದಿಂದಿದ್ದ ರೋಹನ್ ಗೆ ಮಕ್ಕಳಾಗುವ ಭಾಗ್ಯವಿರದಿದ್ದದ್ದು ದುರದೃಷ್ಟವೇ ಸರಿ. ಗಂಡ ಹೆಂಡತಿ ಇಬ್ಬರಲ್ಲೂ ದೋಷವಿದ್ದ ಕಾರಣ ರೋಹನ್ ದಂಪತಿಗಳಿಗೆ ಮಕ್ಕಳಾಗುವ ಅವಕಾಶವಿರಲಿಲ್ಲ. ಈ ವಿಷಯ ರೋಹನ್ ಜೀವನಕ್ಕೆ ಬರೆಸಿಡಿನಂತೆ ಬಂದೆರಗಿತ್ತು. ನೊಂದ ರೋಹನ್ ತುಂಬಾ ಖಿನ್ನತೆಗೆ ಒಳಗಾಗಿದ್ದ ‌ ಯಾರೊಂದಿಗೂ ಹೇಳಿಕೊಳ್ಳಲಾಗದ ಈ ವೈಯಕ್ತಿಕ ವಿಚಾರವನ್ನು ತನ್ನ ತಾಯಿ ಸಮಾನಳಾದ ಛಾಯಾಳ ಬಳಿ ಹೇಳಿಕೊಂಡು ದುಃಖಿಸಿದ್ದ. ಛಾಯಾ ತನ್ನ ಸ್ವಂತ ಮಗನಂತೆ ರೋಹನ್ ಗೆ ಸಮಾಧಾನ ಮಾಡುತ್ತಾ ಅವನನ್ನು ಖಿನ್ನತೆಯಿಂದ ಹೊರ ತಂದಿದ್ದಳು. ಒಂದು ಅನಾಥ ಮಗುವನ್ನು ದತ್ತು ತೆಗೆದುಕೊಂಡು ಸಾಕಿ ಸಲಹು. ದೇವರು ನಿನಗೆ ಈ ಪುಣ್ಯದ ಕೆಲಸ ಮಾಡಿಸಲಿಕ್ಕಾಗಿಯೇ ನಿನಗೆ ನಿನ್ನದೇ ಮಗು ಆಗದಂತೆ ಯೋಜನೆ ಹಾಕಿರ ಬಹುದು. ಎಲ್ಲವೂ ದೈವೇಚ್ಛೆ. ಒಂದು ಅನಾಥ ಮಗುವಿಗೆ ತಂದೆ ತಾಯಿಯಾಗಿ ಅದರ ಬದುಕು ರೂಪಿಸು ಎಂದು ಹುರಿದುಂಬಿಸಿದ್ದಳು. ಇದರಿಂದ ಬಹಳ ಸಂತಸಗೊಂಡ ರೋಹನ್ ಹೆಂಡತಿಯೊಂದಿಗೆ ಚರ್ಚಿಸಿ ಅನಾಥ ಹೆಣ್ಣು ಮಗುವೊಂದನ್ನು ದತ್ತು ಪಡೆದು ಕಣ್ಮಣಿಯಂತೆ ಸಾಕಿ ಸಲಹುತ್ತಿದ್ದ. ಸುಮಾರು ಆರೇಳು ತಿಂಗಳ ನಂತರ ಇಂದು ಫೋನ್ ಮಾಡಿದ್ದ. ನಾಳೆ ಬೆಳಿಗ್ಗೆ ಫ್ರೀ ಇದ್ದೀರಾ, ಹೆಂಡತಿ ಮಗುವಿನೊಂದಿಗೆ ಬರುತ್ತೇನೆಂದು ಹೇಳಲು. ಭಾನುವಾರ, ರಜಾದಿನ. ಖಂಡಿತವಾಗಿ ಬಾ ಎಂದು ಆತ್ಮೀಯವಾಗಿ ಕರೆದು ಫೋನಿಟ್ಟಳು. ಛಾಯಾಳ ಮನಸ್ಸು ದೇಹ ಎರಡೂ ಉಲ್ಲಾಸಗೊಂಡಿದ್ದವು. 

ಮರುದಿನ ಹೆಂಡತಿ ಮಗುವಿನೊಂದಿಗೆ ಆಮಂತ್ರಣ ಪತ್ರಿಕೆಯನ್ನು ಹಿಡಿದು ಬಂದಿದ್ದ ರಾಹುಲ್. ತಾಯಿ ತೀರಿಹೋಗಿ ಒಂದು ವರ್ಷವಾಗಿತ್ತು. ತಾನು ತಾಯಿಗಾಗಿ ಕಟ್ಟಿಸಿದ್ದ ಮನೆಯಲ್ಲಿ ಒಂದು ಅನಾಥಾಶ್ರಮ ಶುರು ಮಾಡುತ್ತಿದ್ದು, ಅದರ ಆರಂಭದ ಸಮಾರಂಭಕ್ಕೆ ಛಾಯಾಳನ್ನು ನ ಮುಖ್ಯ ಅತಿಥಿಯಾಗಿ ಆಹ್ವಾನಿಸಲು ಬಂದಿದ್ದ. ಛಾಯಾಳಿಗೆ ಊಹಿಸಲೂ ಸಾಧ್ಯವಾಗದಷ್ಟು ಆನಂದ ಆಶ್ಚರ್ಯ ಒಟ್ಟೊಟ್ಟಿಗೆ. ಅಲ್ಲೇ ಇದ್ದ ಅವಳ ಮನೆಯವರೂ ತಲೆ ಬುಡ ಅರ್ಥವಾಗದೆ ಒಬ್ಬರ ಮುಖ ಒಬ್ಬರು ನೋಡುತ್ತಾ ಕುಳಿತರು. ಛಾಯಾ ನಿಧಾನವಾಗಿ  " ರಾಹುಲ್ ಮುಖ್ಯ ಅತಿಥಿಯಾಗಿ ನಾನು ಬರಬೇಕ? ನಾನು ಯಾಕೋ" ಎಂದು ತಡವರಿಸಿದಳು. ಆಗ ರಾಹುಲ್ ತನ್ನ ಕೈ ಯಲ್ಲಿದ್ದ ಆಮಂತ್ರಣ ಪತ್ರಿಕೆಯನ್ನ ಅವಳ ಕೈ ಗೆ ಕೊಡುತ್ತಾ " ಮೇಡಂ ಇಂದು ನಾನೊಂದು ಅನಾಥಾಶ್ರಮ ಸ್ಥಾಪನೆ ಮಾಡಲು ನೀವೇ ಪ್ರೇರಣೆ"  ಎಂದು ಕೈ  ಮುಗಿದು ಹೇಳಿದಾಗ ಎಲ್ಲರು ಬೆರಗಾಗಿ ನಿಶ್ಚಲವಾಗಿ ಕುಳಿತು ಬಿಟ್ಟರು. "ನಾನಾ? ಹೇಗೆ?" ಎಂದು ಛಾಯಾ ಬಡಬಡಿಸಿದಾಗ ರಾಹುಲ್ ಕಣ್ಣು ಸನ್ನೆ ಮಾಡಿ ಹೆಂಡತಿಗೆ ಮಗುವನ್ನು ಹೊರ ಕರೆದೊಯ್ಯಲು ಹೇಳಿದ. ಅವಳು ಮಗು ಕರೆದು ಕೊಂಡು ಹೊರ ಹೋದ ಮೇಲೆ "ಮೇಡಂ ನಮಗೆ ಮಕ್ಕಳಾಗುವುದಿಲ್ಲ ಎಂದು ಬಹಳ ನೊಂದಿದ್ದ ನನಗೆ ಉತ್ತಮ ಮಾರ್ಗದರ್ಶನ ನೀಡಿ ಸಮಾಧಾನ ಮಾಡಿ ಹೊಸ ಆಲೋಚನೆಯೊಂದನ್ನು ನನ್ನ ಮನಸ್ಸಿನಲ್ಲಿ ಬಿತ್ತಿದಿರಿ. ನನಗೆ ಹಾಗೂ ನನ್ನ ಹೆಂಡತಿಗೆ ಮಕ್ಕಳೆಂದರೆ ತುಂಬಾ ಇಷ್ಟ. ನಾವಿಬ್ಬರೂ ನಮಗೊಂದು ಮುದ್ದಾದ ಮಗು ಬೇಕು, ಅದನ್ನ ಹೀಗೆ ಸಾಕಬೇಕು ಹಾಗೆ ಬೆಳೆಸಬೇಕು ಎಂದು ಏನೇನು ಕನಸು ಕಂಡಿದ್ದೆವು. ಆದರೆ ಬ್ಯಾಡ್ ಲಕ್ ನಮ್ಮಿಬ್ಬರಿಗೂ ಮಕ್ಕಳಾಗುವ ಚಾನ್ಸೇ ಇರಲಿಲ್ಲ. ವಿಷಯ ತಿಳಿದ ನಮಗೆ ತೀವ್ರ ಆಘಾತ ಆಗಿತ್ತು. ಬದುಕು ಶೂನ್ಯ ಎನಿಸಿಬಿಟ್ಟಿತ್ತು. ಜೀವನವೇ ಬೇಡ ಒಟ್ಟಿಗೆ ಪ್ರಾಣ ಬಿಡುವಷ್ಟು ಖಿನ್ನತೆಗೆ ಒಳಗಾಗಿದ್ದೆವು. ಅದೇನು ನನಗೆ ಯಾರ ಬಳಿ ಹೇಳಿಕೊಳ್ಳಲಾಗದಿದ್ದರೂ ನಿಮ್ಮ ಬಳಿ ನನ್ನ ದುಃಖ ತೋಡಿಕೊಳ್ಳಬೇಕೆಂದೆನಿಸಿತು. ನಿಮಗೆ ಕಾಲ್ ಮಾಡಿದಾಗ ನಾನು ತೀವ್ರ ಡಿಪ್ರೆಸ್ಡ್ ಆಗಿದ್ದೆ. ಆದರೆ ನೀವು ಸ್ವಲ್ಪವೂ ಬೇಸರಿಸದೇ ನಾನೆಷ್ಟು ಸಾರಿ ಫೋನ್ ಮಾಡಿದರು ಸಮಾಧಾನದಿಂದ ನನಗೆ ಸಾಂತ್ವನ ಹೇಳಿ ಬದುಕಲು ಮೋಟಿವೇಟ್ ಮಾಡಿದಿರಿ. ನೀವು  ಅಂದು ನೀಡಿದ ಸಲಹೆ ಇಂದು ನಾನು ಅನಾಥಾಶ್ರಮವೊಂದನ್ನು ತೆರೆಯಲು ಕಾರಣವಾಯಿತು. ಅನಾಥ ಮಗುವೊಂದಕ್ಕೆ ತಂದೆ ತಾಯಿಯಾಗಿ. ದೇವರು ಯಾರಿಗೂ ಕೊಡದ ಈ ಪುಣ್ಯ ಕೆಲಸದ ಜವಾಬ್ದಾರಿ ನಿಮಗೆ ಕೊಟ್ಟಿದ್ದಾನೆ ಒಂದು ಅನಾಥ ಮಗುವಿಗೆ ತಂದೆ ತಾಯಿಯಾಗಿ ಅದಕ್ಕೆ ಒಂದು ಉತ್ತಮ ಜೀವನ ಭವಿಷ್ಯ ರೂಪಿಸಿಕೊಡು ದೇವರು ಒಳ್ಳೆಯದು ಮಾಡುತ್ತಾನೆ ಈ ಕಾರ್ಯಕ್ಕಾಗಿ ದೇವರು ನಿಮ್ಮಿಬ್ಬರನ್ನು ಆಯ್ಕೆ ಮಾಡಿದ್ದಾನೆ ಬೇಸರಿಸಬೇಡ ಎಂಬ ಮಾತುಗಳು ನಮ್ಮ ಬದುಕಿನಲ್ಲಿ ದೇವವಾಣಿಯಾಗಿ ಮೂಡಿತು. ಮನೆಗೆ ಬಂದು ನೀವು ಹೇಳಿದ ಮಾತುಗಳನ್ನು ನನ್ನ ಹೆಂಡತಿಗೆ ಹೇಳಿದಾಗ ಅವಳು ತುಂಬು ಹೃದಯದಿಂದ ಮಗುವನ್ನು ದತ್ತು ಸ್ವೀಕರಿಸಲು ಒಪ್ಪಿ ಅನಾಥಾಶ್ರಮವೊಂದರಿಂದ ಹೆಣ್ಣು ಮಗು ಒಂದನ್ನು ದತ್ತು ತಂದು ಸಾಕಿದೆವು. ಆ ಮಗುವಿನ ಕಾಲ್ಗುಣ ಮೇಡಂ ನಮ್ಮ ಬದುಕು ಬದಲಾಯಿತು. ನಮಗೆ ಕಂಪನಿಯಲ್ಲಿ ಪ್ರೂಮೋಷನ್ ಸಿಕ್ಕಿತು ಸಂಬಳ ದುಪ್ಪಟ್ಟಾಯಿತು ಎಷ್ಟೋ ವರ್ಷದಿಂದ ವ್ಯಾಜ್ಯದಲ್ಲಿದ್ದ ನಮ್ಮ ತಂದೆಯ ಆಸ್ತಿ ದಾಯಾದಿಗಳ ಕಪಿಮುಷ್ಠಿಯಿಂದ ಕಾನೂನಾತ್ಮಕವಾಗಿ ನಮಗೆ ದೊರೆಯಿತು. ಈಗ ನಮಗೆ ಯಾವ ಕೊರತೆಯೂ ಇಲ್ಲ ಭಗವಂತ ಬೇಕಾದಷ್ಟು ಹಣ ಸಂಪತ್ತು ಕೊಟ್ಟಿದ್ದಾನೆ.  ನಮ್ಮ ಮಗುವಿನಂತೆ ಎಷ್ಟೋ ತಂದೆ ತಾಯಿಯರಿಲ್ಲದ ಮಕ್ಕಳು ಅನಾಥರಾಗಿ ಬೀದಿ ಬೀದಿ ಬದಿಯಲ್ಲಿ ಭಿಕ್ಷೆ ಬೇಡಿ ಬದುಕುತ್ತಿದ್ದಾರೆ, ಅವರಿಗೆಲ್ಲ ನಾವು ಒಂದು ಮನೆ ಕುಟುಂಬದ ವಾತಾವರಣ ನೀಡಿ ವಿದ್ಯಾಭ್ಯಾಸ ಕೊಟ್ಟು ಬದುಕಲ್ಲಿ ನೆಲೆಗಾಣಿಸಬೇಕೆಂಬ ತೀರ್ಮಾನ ಮಾಡಿದೆವು. ಎನ್. ಜಿ. ಓ. ಒಂದರ ಸಹಕಾರ ಸಲಹೆಯಂತೆ ನಮ್ಮ ತಾಯಿ ತೀರಿದ ನಂತರ ಆ ಮನೆಯನ್ನು ಅನಾಥಾಶ್ರಮವಾಗಿ ರೂಪಿಸಬೇಕೆಂದು ತೀರ್ಮಾನಿಸಿದವು. ಮೇಡಂ ನಿಮ್ಮಿಂದಲೇ ನಾವಿಂದು ಇಷ್ಟು ಸಂತೋಷವಾಗಿರುವುದು. ಬದುಕು ನಮಗೆ ನೀಡಿದ ಚಾಲೆಂಜ್ ಅನ್ನು ನಿಮ್ಮ ಸಲಹೆಯಂತೆ ಸ್ವೀಕರಿಸಿ ಗೆದ್ದಿದ್ದೇವೆ. ನಿಮ್ಮಿಂದಲೇ ನಾವು ಇಂದು ಹತ್ತಾರು ಅನಾಥ ಮಕ್ಕಳ ಪೋಷಣೆಗೆ ಸಜ್ಜಾಗಿರುವುದು. ದಯವಿಟ್ಟು ಬಂದು ನಮ್ಮ ಸನ್ಮಾನ ಸ್ವೀಕರಿಸಿ ನಮಗೆ ಅವನ ಆ ಮಕ್ಕಳಿಗೆ ಆಶೀರ್ವದಿಸಬೇಕೆಂದು ಕೇಳಿಕೊಳ್ಳುತ್ತೇನೆ ಮೇಡಂ." ಎಂದು ಛಾಯಾಳ ಕಾಲಿಗೆ ಎರಗಿದ ರೋಹನ್ ಕಣ್ಣಲ್ಲಿ ಭಾವನೆಗಳ ಮಹಾಪೂರವೇ ಹರಿದಿತ್ತು. ಛಾಯಾಳು ಸಹ ಭಾವುಕಳಾದಳು. ಮನೆಯವರೆಲ್ಲರೂ ತಟಸ್ಥರಾಗಿ ರೋಹನ್ ನ ಮಾತು ಆಲಿಸುತ್ತಿದ್ದರು. ಸುದೀಪ್ ನಿಧಾನವಾಗಿ ಆಮಂತ್ರಣ ಪತ್ರಿಕೆಯನ್ನು ತೆರೆದು "ಮಾತೃಛಾಯ" ಎಂದು ಓದಿದಾಗ, ರಾಹುಲ್ ಅವನ ಕಡೆ ನೋಡಿ "ಸರ್ ನನಗೆ ಇಬ್ಬರು ತಾಯಂದಿರು ನನ್ನ ಹೆತ್ತ ತಾಯಿ, ಇನ್ನೊಬ್ಬರು ಛಾಯಾ ಮೇಡಂ. ನಮ್ಮ ಈ ಆಶ್ರಮ ಇವರಿಬ್ಬರಿಗೆ ನಾ ಸಲ್ಲಿಸುವ ಕೃತಜ್ಞತೆ". ಎಂದಾಗ ಎಲ್ಲರ ಕಣ್ಣಾಲಿಗಳು ತುಂಬಿ ಬಂದವು. ರಾಹುಲ್ ಎಲ್ಲರಿಗೂ ತಪ್ಪದೇ ಕಾರ್ಯಕ್ರಮಕ್ಕೆ ಬರಬೇಕೆಂದು ಒತ್ತಾಯಿಸಿ, ಹೆಂಡತಿ ಮಗುವಿನೊಂದಿಗೆ ಹಿರಿಯರೆಲ್ಲರ ಕಾಲಿಗೆರಗಿ ಹೊರಟನು. 

ಛಾಯಾಳ ಜೊತೆ ಎಲ್ಲಿಯೂ ಹೋಗ ಬಯಸದ ಅವಳ ಮನೆಯವರೆಲ್ಲರೂ ಆಶ್ರಮದ ಉದ್ಘಾಟನೆಯ ದಿನ ಬಹಳ ಸಂಭ್ರಮದಿಂದ ಇವಗಳಿಗಿಂತ ಮೊದಲು ತಯಾರಾಗಿ ಹೊರಟಿದ್ದರು. ನೂರಾರು ಜನರ ಸಮ್ಮುಖದಲ್ಲಿ, ದೊಡ್ಡ ದೊಡ್ಡ ಗಣ್ಯರ ಜೊತೆ ವೇದಿಕೆ ಹಂಚಿಕೊಂಡ ಛಾಯಾಳಿಗೆ ಏನೋ ಅನನ್ಯ ಅನುಭವ. ರೋಹನ್ ಸಭೆಯ ಕುರಿತು ಮಾತನಾಡುವಾಗ ಪದೇಪದೇ ಮಾತೃ ಸಮಾನ ಛಾಯಾ ಮೇಡಂ ಅವರೇ ನನ್ನ ಬದುಕಿನ ಬಹು ದೊಡ್ಡ ಪ್ರೇರಣೆ ಎಂದು ಹೇಳಿಕೊಂಡಾಗ ಕರತಾಡನದ ಮಧ್ಯೆ ಛಾಯಾಳ ಮಾತೃ ಹೃದಯ ತುಂಬಿ ಬಂದಿತು. 

ಮನೆಗೆ ಬಂದ ಮೇಲೆ ಮನೆಯವರ ನಡುವಳಿಕೆಯಲ್ಲಿ ಎಲ್ಲಿಲ್ಲದ ಬದಲಾವಣೆ ಕಂಡಿತು. ಮಕ್ಕಳೂ ಸಹ ಗೌರವಯುತವಾಗಿ ನಡೆದುಕೊಳ್ಳತೊಡಗಿದರು. ಸದಾ ಇವಳ ಕಂಡರೆ ಗುರುಗುಟ್ಟುತ್ತಿದ್ದ ಸುದೀಪ್, ತಪ್ಪಿತಸ್ಥನಂತೆ ತಣ್ಣಗಾಗಿ ಬಿಟ್ಟಿದ್ದ. ಇವಳ ಅತ್ತೆ ತನ್ನ ಕಿಟ್ಟಿ ಪಾರ್ಟಿ ಗೆಳತಿಯರಿಗೆ ಫೋನ್ ಮಾಡಿ ಇಂದಿನ ನ್ಯೂಸ್ ಪೇಪರ್ ನೋಡ್ರಿ. ನಮ್ಮ ಛಾಯಾಳ ಫೋಟೋ ಬಂದಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವುದನ್ನು ಕೇಳಿ ಛಾಯಾಳ ಮುಖದ ಮೇಲೆ ವ್ಯಂಗ್ಯ ನಗೆಯೊಂದು ಮೂಡಿತು. ಸುಮ್ಮನೆ ಕಾಲೇಜಿಂದ ಬಂದು ಕುಳಿತ ಛಾಯಾಳಿಗೆ ಒಂದು ದಿನ ಇದ್ದಕ್ಕಿದ್ದಂತೆ ಯೋಚನೆ ಎಂದು ಹೊಳೆಯಿತು. ತಕ್ಷಣವೇ ರಾಹುಲ್ ಗೆ ಫೋನ್ ಮಾಡಿ " ರಾಹುಲ್ ನಿನ್ನ ಜೊತೆ ಒಂದು ಇಂಪಾರ್ಟೆಂಟ್ ವಿಷಯ ಮಾತಾಡಬೇಕಪ್ಪ. ನೀನು ತಪ್ಪು ತಿಳಿದುಕೊಳ್ಳಬಾರದು" ಎಂದಳು. ಅದೇನು ಮೇಡಂ. ಯಾವ ಮುಜುಗರವೂ ಇಲ್ಲದೆ ಹೇಳಿ. ನಾನೂ ನಿಮ್ಮ ಒಬ್ಬ ಮಗ ಅನ್ನೋದ ಮರೀಬೇಡಿ." ಎಂದನು. ಆಗ ಇವಳು" ರೋಹನ್ ನಾನು  ಕೆಲಸಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ನನಗೆ ನಿನ್ನ ಅನಾಥಾಶ್ರಮದಲ್ಲಿ ಬಂದು ಮಕ್ಕಳ ಜೊತೆ ಸಮಯ ಕಳೆಯಲು ಅವಕಾಶ ಸಿಗುತ್ತಾ ನನ್ನ ಕೈಲಾದದ್ದನ್ನು ಅವರಿಗೆ ಕಲಿಸ್ತೀನಿ, ದಿನಾಲೂ ಸ್ವಲ್ಪ ಹೊತ್ತು ಬಂದು ಅವರ ಜೊತೆ ಟೈಮ್ ಸ್ಪೆಂಡ್ ಮಾಡ್ತೀನಿ, ನೀನು ನನಗೆ ಸಂಬಳ ಏನು ಕೊಡುವುದು ಬೇಡ. ನನಗೆ ಆ ಮಕ್ಕಳ ಜೊತೆ ಸಮಯ ಕಳೆಯಲು ಅವಕಾಶ ಮಾಡಿ ಕೊಡ್ತೀಯಾ?"ಹಿಂಜರಿಯುತ್ತಲೇ ಕೇಳಿದಳು. , ಅದಕ್ಕೆ ರೋಹನ್ " ಮೇಡಂ.. ಅದು ನಮ್ಮ ಆಶ್ರಮ ಅಲ್ಲ ಮೇಡಂ. ಅದು ನಿಮ್ಮ ಮಡಿಲು. ಆ ಪುಟ್ಟ ಮಕ್ಕಳ ಜೊತೆ ನೀವು ಬಂದು ಟೈಂ ಸ್ಪೆಂಡ್ ಮಾಡೋದು ಅವರ ಭಾಗ್ಯವೇ ಸರಿ. ಯು ಆರ್ ಆಲ್ವೇಸ್ ವೆಲ್ ಕಂ ಮೇಡಂ.. ನೀವು ಬಂದು ಅಲ್ಲಿ ಸ್ವಲ್ಪ ಹೊತ್ತು ಇದ್ದು ಹೋದರೆ ನನಗೆ ಬಹಳ ದೊಡ್ಡ ಜವಾಬ್ದಾರಿ ಕಡಿಮೆ ಆಗುತ್ತದೆ. ದಯವಿಟ್ಟು ಬನ್ನಿ ಮೇಡಂ. ಅದು ನಿಮ್ಮ ಮನೆ. ಆ ಮನೆ ಹುಟ್ಟಿದ್ದೇ ನಿಮ್ಮಿಂದ.." ಅನ್ನುವಾಗ ಅವನ ಗಂಟಲು ತುಂಬಿ ಬಂದಿತು. 

ಲೇಖಕರು :ದಿವ್ಯಾ ರಾವ್ ಸಂಗ್ರಹ: ವೀರೇಶ್ ಅರಸೀಕೆರೆ.

ಚಿತ್ರ ಕೃಪೆ: ಇಂಟರ್ನೆಟ್ ತಾಣ