ಮಾತೆಂದರೆ ಏನು ಗೂಗಲ್?

ಮಾತೆಂದರೆ ಏನು ಗೂಗಲ್?

ಪುಸ್ತಕದ ಲೇಖಕ/ಕವಿಯ ಹೆಸರು
ನೂತನ ಎಂ. ದೋಶೆಟ್ಟಿ
ಪ್ರಕಾಶಕರು
ಸರ್ವಮಂಗಳ ಪ್ರಕಾಶನ, ಹೆಬ್ಬಾಳ ಕೆಂಪಾಪುರ, ಬೆಂಗಳೂರು-೫೬೦೦೨೪
ಪುಸ್ತಕದ ಬೆಲೆ
ರೂ. ೯೫.೦೦, ಮುದ್ರಣ : ೨೦೨೩

‘ಮಾತೆಂದರೆ ಏನು ಗೂಗಲ್? ಇದು ನೂತನ ದೋಶೆಟ್ಟಿ ಇವರ ಕವನ ಸಂಕಲನ. ೭೮ ಪುಟಗಳ ಈ ಪುಟ್ಟ ಪುಸ್ತಕದ ಬಗ್ಗೆ ನೂತನ ಅವರೇ ಬರೆದ ಮಾತುಗಳು ಇಲ್ಲಿವೆ. ಓದುವಿರಾಗಿ...

“ಕವಿತೆ ನಾನು ಬರೆದದ್ದೋ ಅಥವಾ ಬರೆಸಿಕೊಳ್ಳಲು ನಾನೊಂದು ಮಾಧ್ಯಮವೋ? ಕಾಡುವ ಒಂದು ಪದ, ಒಂದು ಸಾಲು, ಒಂದು ನೋಟವೇ ನೆವವಾಗಿ, ಒಂದು ನಾವು, ಒಂದು ಆಘಾತ, ಒಂದು ಭಯ. ಒಂದು ಆತಂಕ, ಒಂದು ಸಾಲು, ಒಂದು ಅವಮಾನ, ಒಂದು ಸಾವು... ಇಂಥ ಬಹುತೇಕ ಋಣಾತ್ಮಕ ಸ್ವಾಮಿಗಳು ಒಮ್ಮೊಮ್ಮೆ ಒಲೆಯ ಮೇಲಿಟ್ಟ ನೀರಿನಂತೆ ಮರಳಿಸಿ, ಮರಳಿಸಿ, ಕೆಲವೊಮ್ಮೆ ಮಲೆನಾಡ ರಾತ್ರಿಗಳ ಕೊರೆಯುವ ಚಳಿಯಲ್ಲಿ ಮಂಜಉಗಟ್ಟಉವ ಗುಂಡಿಗೆಯ ನಡುಕದಂತೆ ಅಟ್ಟಾಡಿಸಿ ಕಾಡುತ್ತವೆ. ಇವು ಸ್ವಂತವೇ ಆದರೂ ಅದನ್ನು ಮೀರಿ ಸಾರ್ವಜನಿಕವಾಗಬಲ್ಲ ತುಡಿತವೇ ಇವುಗಳ ಹುಟ್ಟಿಗೆ ಕಾರಣವಿರಬಹುದು. ಆ ಸೃಷ್ಟಿ ಘಳಿಗೆಯ ಅನನ್ಯ ಭಾವವನ್ನು ಯಾವ ಕವಿತೆಯೂ ಕಟ್ಟಲಾರದೆನೊ. ಬಹುಶಃ ಇಂಥ ಭಾವದ ಮೋಹಕ್ಕೆ ಒಳಗಾಗಿಯೇ ಕವಿತೆ ಬರೆಯುವ ತುಮುಲ, ಕವಿ ಎನ್ನಿಸಿಕೊಳ್ಳುವ ಹಂಬಲ ಬರೆಯುವವರಿಗೆ ಇರಲಿಕ್ಕೆ ಸಾಕು.

ಅಕ್ಷರ ಲೋಕದ ಈ ಮೋಡಿ ಏಕಾಂತಕ್ಕೆ ಸಂಗಾತಿ.ಇಲ್ಲಿ ಮೌನಕ್ಕೆ ಮಾತಿನ ಹಂಬಲ. ಶಾಲೆ- ಕಾಲೇಜುಗಳ ಸಮಯದಲ್ಲಿ ಕದ್ದು ಮುಚ್ಚಿ ಬರೆದದ್ದು ಕುಳಿತಲ್ಲೇ ಕುಳಿತು ಮರಿ ಹಾಕಿತ್ತು. ಅಬ್ಬರದ ಪ್ರಚಾರ, ಪೋಷಣೆಯ ಇಂದಿನ ದಿನಗಳಲ್ಲಿ ಶತಾಯಗತಾಯ ಒಟ್ಟುಗೂಡಿಸಿಕೊಳ್ಳುವ ಧೈರ್ಯವೂ ಬೆದರಿ ಈ ಕಾರಣದಿಂದ ಹಿಂದೇಟು ಹಾಕುತ್ತದೆ. ಇಂಥ ಸಂದಿಗ್ಧಗಳಲ್ಲಿ ತಕ್ಷಣಕ್ಕೆ ಕೈ ಹಿಡಿಯುವುದು ಕವಿತೆ. ಒಂದು ಹೊಳಹಾಗಿ ಹುಟ್ಟುವ ಸಾಲು, ನದಿಯಾಗಿ ಹರಿದು ತನ್ನ ಗತಿಯನ್ನು ತಾನೇ ನಿರ್ಧರಿಸಿಕೊಳ್ಳುವುದೇ ಸೋಜಿಗ. ಆನಂತರ‌ ತಾಯಾಗಿ, ಗುರುವಾಗಿ ಅದನ್ನು ಪೊರೆಯುವ ಕೆಲಸವಾಗಬೇಕು. ಇಲ್ಲಿ ಸಹಾಯಕ್ಕೆ ಬರುವುದು ಒಂದು, ಅನುಭವ ಹಾಗೂ ಸಹನೆ. ಈ ಮೂರು ಶಿಲ್ಪಿಗಳು ಅದಕ್ಕೊಂದು ರೂಪು ಕೊಡುತ್ತವೆ. ಈ ರೂಪು ಕವಿತೆ ಹಾಗೂ ಕವಿತೆಯ ಸೋಲು - ಗೆಲುವುಗಳ ದಿಕ್ಸೂಚಿ. ಈ ಪ್ರಕ್ರಿಯೆಯ ಒಂದೊಂದು ಹಂತವೂ ಅತ್ಯಂತ ಎಚ್ಚರದ ಹಾಗೂ ಪ್ರಜ್ಞಾಪೂರ್ವಕ ನಡೆ. ಹೀಗೆ ಹುಟ್ಟಿದ ಕವಿತೆ ಓದುಗರನ್ನು ತಲುಪಿದಾಗ ತನ್ನದಲ್ಲದ ಅನೇಕ ಹೊಳಹುಗಳನ್ನು, ಆಯಾಮಗಳನ್ನು ಪಡೆದುಕೊಳ್ಳುತ್ತದೆ. ಇದು ಕವಿತೆಯ ಸೊಗಸು. ಎಲ್ಲ ಕವಿತೆಗಳಿಗೂ ಈ ಭಾಗ್ಯವಿರಲಾರದು. ಸಂಕಲನದ ಕೆಲ ಕವಿತೆಗಳ, ಕೆಲ ಸಾಲುಗಳು ಓದುಗರ ನೆನಪಿನಲ್ಲಿ, ನಾಲಿಗೆಯ ಮೇಲೆ ಉಳಿಯುವಂತಾದರೆ ಅದು ಕವಿತೆಯ ಸಾರ್ಥಕತೆ. ಈ ಹಂತದಲ್ಲಿ ಕವಿ ನಿಜಕ್ಕೂ ಗೌಣ. ಅಲ್ಲೇನಿದ್ದರೂ ಕವಿತೆಯದೇ ಪಾರುಪತ್ಯ. ಕವಿ ಇಲ್ಲವಾಗಿ, ಕವಿತೆಯೇ ಎಲ್ಲವೂ ಆಗುವ ಘಳಿಗೆಯನ್ನೇ ಒಂದು ಒಳ್ಳೆಯ ಕವಿತೆ ಹಾಗೂ ಕವಿ ಎದುರು ನೋಡುವುದು.

ಈ ಸಂಕಲನದ ಕವಿತೆಗಳ ಮೂಲಕ ಸುತ್ತಲ ಜಗತ್ತನ್ನು, ಅದರ ಓರೆ- ಕೋರೆಗಳನ್ನು ಒಂದು ಮಿತಿಯಲ್ಲಿ ನೋಡುವ ಪ್ರಯತ್ನ ಇದು. ಕವಿ ಸುತ್ತಲ ಜಗತ್ತಿಗೆ ಕಣ್ಣಾಗುವಂತೆ ಮಿತಿಯನ್ನು ಅರಿಯುವುದೂ ಮುಖ್ಯ. ಈ ಮಿತಿ ಕವಿಯಲ್ಲಿ ಮೃದುತ್ವವನ್ನೂ, ಮಾನವೀಯತೆಯನ್ನೂ, ಆರ್ದ್ರತೆಯನ್ನೂ ಬೆಳೆಸುತ್ತದೆ. ಈ ಗುಣಗಳಿಂದ ಒಂದೊಮ್ಮೆ ಕವಿ ಸೋತರೂ ಕವಿತೆ ಸೋಲುವುದಿಲ್ಲ. ಇದು ಸಾಹಿತ್ಯ ಅಂದರ ಆರಾಧಕನಲ್ಲಿ ಕಾಣಲು ಬಯಸುವ ಗುಣ ಕೂಡ.

ಇಂದು ಕಾಣುವ ಸಾಮಾಜಿಕ ಹಾಗೂ ಧಾರ್ಮಿಕ ಅಶಾಂತಿ ಆತಂಕ ಹುಟ್ಟಿಸುತ್ತದೆ. ಈ ಕಣ್ಣೋಟ ಕವಿತೆಗಳಲ್ಲಿ ಅಲ್ಲಲ್ಲಿ ಕಾಣುತ್ತದೆ. ಸಾಮಾಜಿಕ ಭ್ರಷ್ಟತೆ ಈ ಶತಮಾನದ ಬಹುದೊಡ್ಡ ಶತ್ರು. ಇದರ ಕಾಟದಿಂದ ಯಾರೂ ತಪ್ಪಿಸಿಕೊಳ್ಳಲಾರರು. ಅಲ್ಲಲ್ಲಿ ಅನುಭವಿಸಿದ ಇಂಥ ಕಾಟಗಳು ತಮ್ಮ ಹಾಡನ್ನು ಗುನುಗಿವೆ. ಸಾವು ನಿರ್ಮಿಸುವ ನಿರ್ವಾತ ಬಹಳ ಕಾಡುವಂಥದ್ದು. ಅದು ಹತ್ತಿರದವರದ್ದೇ ಆಗಿರಬಹುದು ಅಥವಾ ಕೊರೊನಾ ಕಾಲದಲ್ಲಿ ಆದ ಅಸಂಖ್ಯಾತ ರಾಜ್ ಅನಾಮಿಕರದ್ದಾಗಿರಬಹುದು. ಹೀಗೆ ಕಾಡಿದ ಕ್ಷಣಗಳು ತಮ್ಮ ಬಿಡುಗಡೆಯನ್ನು ಸಾಲುಗಳಲ್ಲಿ ಕಂಡುಕೊಂಡಿವೆ.

ಸಾವು ಬಹುವಿಧಗಳಲ್ಲಿ ಅನಾವರಣವಾಗಿದೆ. ಸಾವು ಈ ಕಾಲದ ಬಹುದೊಡ್ಡ ಆತಂಕ ಎಂದೂ ನನಗೆ ಅನ್ನಿಸುತ್ತದೆ. ದೀಪ, ಹಳೆಯ ಸಂದೂಕ, ರಾತ್ರಿ, ಸೂರ್ಯ, ಬೆಳಗು, ಹಾಯಿದೋಣಿ, ಅಪಘಾತ, ಕಸ, ಮಾತು, ಪೌರಾಣಿಕ ಪಾತ್ರಗಳು ಹೀಗೆ ಮನಸ್ಸನ್ನು ತಟ್ಟಿದ ತಂತು ತಾನಾಗಿ ತನ್ನ ರೂಪಿಸಿಕೊಂಡಿದೆ.

ಇಲ್ಲಿನ ಬಹುತೇಕ ಕವಿತೆಗಳು ನಾನು ಬಹು ಅಕ್ಕರೆಯಿಂದ ಕಳಿಸುವ ಪತ್ರಿಕೆಗಳು ಹಾಗೂ ಅಂತರ್ಜಾಲ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅವುಗಳನ್ನು ಓದುಗರಿಗೆ ತೆರೆದಿಟ್ಟ ಪ್ರಜಾವಾಣಿ, ಮಯೂರ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು ಅವಧಿ, ಕೆಂಡಸಂಪಿಗೆ, ಹಿತೈಷಿಣಿ, ಸಂಗಾತಿ, ನಸುಕು, ಆಲೋಚನೆ ಅಂತರ್ಜಾಲ ಪತ್ರಿಕೆಗಳಿಗೆ ನಾನು ಋಣಿ. ಓದಿ ಪ್ರತಿಕ್ರಿಯಿಸಿದ ಎಲ್ಲ ಸ್ನೇಹಿತರಿಗೆ ಈ ಮೂಲಕ ನಮನಗಳು. ಈಗ ಸಂಕಲನದ ರೂಪದಲ್ಲಿ ನಿಮ್ಮ ಮುಂದೆ ಬರುತ್ತಿರುವ ಈ ಕೃತಿಗೆ ನಿಮ್ಮ ಓದಿನ ಸ್ವಾಗತವಿರಲಿ. ನೀವು ಬರೆಯುವ ಮುನ್ನುಡಿಗಳಿಂದ ಕವಿತೆಗಳು ಬದುಕಲಿ. ಅವು ಕವಿಯನ್ನು ಬದುಕಿಸುತ್ತವೆ.

ಇದು ನನ್ನ ನಾಲ್ಕನೆಯ ಕವನ ಸಂಕಲನ. ಈ ಹಿಂದಿನ ಮೂರು ಕವನ ಸಂಕಲನಗಳನ್ನೂ ನಾಡಿನ ಹಿರಿ- ಕಿರಿಯ ಅನೇಕ ಕವಿಗಳ ಓದಿಗಾಗಿ ಕಳಿಸಿದ್ದೇನೆ. ಹಿರಿಯರಾದ ಡಾ. ಜಿ ಎಸ್ ಸಿದ್ಧಲಿಂಗಯ್ಯನವರು, ಪ್ರೊ. ಜಿ ಹೆಚ್ ಹನ್ನೆರಡು ಮಠರು, ಪ್ರೊ. ಹೆಚ್ ಎಸ್ ಈಶ್ವರ್ ಅವರು, ವನರಾಗ ಶರ್ಮಾ ಅವರು ಪ್ರತಿ ಬಾರಿ ಓದಿ ಪತ್ರ ಬರೆದಿದ್ದಾರೆ. ಅವರಿಗೆ ನನ್ನ ನಮನಗಳು. ನಾಡಿನ ಪ್ರಮುಖ ಪತ್ರಿಕೆಗಳಾದ ಪ್ರಜಾವಾಣಿ, ಕನ್ನಡ ಪ್ರಭ, ವಿಜಯ ಕರ್ನಾಟಕ ಪತ್ರಿಕೆಗಳು ಹಿಂದಿನ ಮೂರು ಸಂಕಲನಗಳ ವಿವರವಾದ ವಿಮರ್ಶೆಯನ್ನು ಪ್ರಕಟಿಸಿವೆ. ಇವರಿಗೆ ನನ್ನ ವಂದನೆಗಳು. ಕವಿತೆ ಪ್ರಾಮಾಣಿಕತೆ ಕವಿತೆಯಲ್ಲಿ ಬಿಂಬಿಸುತ್ತದೆ. ಇಂಥ ಬಿಂಬಗಳು ಎಲ್ಲ ಸಾಹಿತ್ಯ ಪ್ರಕಾರಗಳಲ್ಲೂ ಕಾಣುವಂತಾಗಲಿ ಎಂಬ ಮಹದಾಶಯದೊಂದಿಗೆ ಈ ಸಂಕಲನವನ್ನು ನಿಮ್ಮ ಮುಂದಿಡುತ್ತಿದ್ದೇನೆ.”