ಮಾತೆಯೇಕೆ ಮುನಿದಳು?

ಮಾತೆಯೇಕೆ ಮುನಿದಳು?

ಕವನ

ವಿಷದ ಹಾವಿನ ಜೊತೆಯಲಾಡುವೆ

ಕುಸಿದು ಹೋದೆನು ನೋಡಿ ಭಯದಲಿ

ಮಸೆದು ಹಲ್ಲನು ಜರೆದು ಹರಿಯನು ಮಾತೆ ರೋಷದಲಿ

ಹಸಿವೆಗೆನ್ನುತ ನನ್ನ ಕೇಳದೆ

ಮೊಸರು ಗಡಿಗೆಯನೆತ್ತಿಕೊಳ್ಳುವೆ

ತುಸುವೆ ಬೆಣ್ಣೆಯನರಸಿ ಗಡಿಗೆಯನೊಡೆದೆ ನೋಡಲ್ಲಿ||

 

ಕರುಣೆಯಿಲ್ಲದ ದನುಜ ಕಾಡಿರೆ

ದುರುಳರಂತ್ಯವ ಗೈವೆನೆನ್ನುತ

ಕರದ ಮುಷ್ಟಿಯ ಬಿಗಿದು ನಡೆದರೆ ನನಗೆ ಭಯ ತರದೆ?

ತರಳ ನೀನಿದೊ ಪುಟ್ಟ ಬಾಲಕ

ಕರೆದ ಕೂಗಿಗೆ ತಿರುಗಿ ನೋಡದೆ

ಮರುಳನಂತೆಯೆ ನೀನು ನಡೆದರೆ ನನಗೆ ಭಯವಿರದೆ||

 

ನಂದ ಕಂದನ ತುಂಟತನವಿದು

ನಂದಗೋಕುಲ ಮಂದಿಗಚ್ಚರಿ

ತಂದೆ ತಾಯಿಗೆ ಭಯವ ತಂದಿರೆ ಜರೆದು ಮಾಧವನ

ಬಂದು ಹಲವರು ದುಷ್ಟ ದನುಜರು

ತಂದುದಂಜಿಕೆ ಮಾತೆ ಹೃದಯಕೆ

ನೊಂದು ನುಡಿದಳು ತಾಯ್ಯಶೋದೆಯು ಕರೆದು ಕೇಶವನ||

 

ಮಾತೆ ಜರೆಯಲು ಜೋಲು ಮುಖದಲಿ

ಮಾತನಾಡದೆ ನಿಂದ ಕೃಷ್ಣನು

ಸೋತು ಸೊರಗಿದ ತರದಿ ನಿಂತನು ಮನದೆ ನಗುತಿದ್ದ

ಭೀತಿಗೊಂಡಿಹ ತಾಯ ರಮಿಸಲು

ಮಾತೆ ಮುನಿಸನು ಕಳೆಯಲೆನ್ನುತ

ಜೋತು ಬೀಳುತ ತಾಯಿ ಹೆಗಲಿಗೆ ಕೊರಳ ಬಳಸಿದ್ದ||

-ಪೆರ್ಮುಖ ಸುಬ್ರಹ್ಮಣ್ಯ ಭಟ್ 

ಚಿತ್ರ್