ಮಾತೆ ಗೌರಿಯ ಹಬ್ಬ

ಮಾತೆ ಗೌರಿಯ ಹಬ್ಬ

ಅಂಬಾಭವಾನಿ ತಾಯೆ ಪರಮೇಶ್ವರಿ

ಸುಮವಾಣಿ ಗೀರ್ವಾಣಿ ಜಗದೀಶ್ವರಿ

ಗಣಪನ ಮಾತೆ ಸಕಲ ಲೋಕ ಪ್ರೀತೆ

ದೇವಿ ಶಿವೆ ಪಾರ್ವತಿ ಗೌರಿ ರಕ್ಷಿಸು

ಭಾದ್ರಪದ ಮಾಸದ ಶುಕ್ಲಪಕ್ಷದ ತೃತೀಯ ತಿಥಿಯಂದು ಗೌರಿಪೂಜೆ(ಹಬ್ಬ)ವನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ಮಹಿಳೆಯರು ಆಚರಿಸುವರು. ಶಿವನನ್ನು ಪತಿಯನ್ನಾಗಿ ಪಡೆಯಲು ಪಾರ್ವತಿ ಕಠಿಣ ತಪಸ್ಸು ಮಾಡಿದ್ದಾಳೆಂಬ ಉಲ್ಲೇಖ ಪುರಾಣದಲ್ಲಿದೆ. ಪರ್ವತವನ್ನು ಧಾರಣೆ ಮಾಡಿರುವ ಹಿಮವಂತನ ಪುತ್ರಿ ಪಾರ್ವತಿಯು ಕೈಲಾಸದಿಂದ ಭೂಲೋಕಕ್ಕೆ ಅಂದರೆ ತನ್ನ ತವರು ಮನೆಗೆ ಗೌರಿಹಬ್ಬದ ದಿನ ಬರುವಳೆಂಬ ನಂಬಿಕೆ. ಆಕೆ ಆದಿಶಕ್ತಿಯ ಸ್ವರೂಪ. ಬಂದ ಗೌರೀದೇವಿಯನ್ನು ಸತ್ಕರಿಸಿ, ವಿಧವಿಧವಾಗಿ ಭಜಿಸಿ, ಅರ್ಚಿಸಿ, ಮುತ್ತೈದೆಯರಿಗೆ ಬಾಗಿನ ನೀಡಿ, ತನ್ನ ಗಂಡನ ದೀರ್ಘಾಯುಷ್ಯವನ್ನು ಹೆಣ್ಣುಮಕ್ಕಳು ಬೇಡುವರು. ಪಾರ್ವತಿ ನೆಲ-ಮುಗಿಲನ್ನು ಬೆಸೆಯುವ ದೇವಿಯಂತೆ.ಭಾರತದ ಸ್ತ್ರೀಯರ ಅಂತರಂಗದ ಪ್ರತೀಕವೇ ಗೌರಿ ಮಾತೆಯಂತೆ. ಬೇಕಾದಲ್ಲಿ ಬಾಗುವುದು, ಛೇಡಿಸಿದರೆ ಸೆಟೆದು ನಿಲ್ಲುವುದು, ಸತ್ಯ, ನ್ಯಾಯದ ಹಾದಿಯಲ್ಲಿ ನಡೆಯುವುದು, ಪತಿಯ ಜೊತೆಜೊತೆಯಾಗಿ ಬದುಕಿನ ಬಂಡಿ ನಡೆಸುವುದು, ಕುಟುಂಬ ಕ್ಷೇಮಕ್ಕಾಗಿ ತ್ಯಾಗ ಇವೆಲ್ಲವನ್ನೂ ಪಾರ್ವತಿಯ ಪೂಜೆ, ಉಪವಾಸ ಕೈಗೊಂಡು ನೀಡೆಂದು ಬೇಡುವರು. ಪಾರ್ವತಿ-ಪರಮೇಶ್ವರರ ಜೋಡಿಯಂತೆ ಬಾಳಬೇಕೆಂದು ಪ್ರಾರ್ಥಿಸುವರು. ಅವಿವಾಹಿತ ಹೆಣ್ಣುಮಗಳು ಬೇಗ ಕಂಕಣಬಲ ಕೂಡಿಬರಲೆಂದು ಗೌರಿಪೂಜೆ ಮಾಡುವಳಂತೆ. ತವರು ಮನೆಗೆ ಬಂದ ಮಾತೆ ಗೌರಿಯನ್ನು ಚತುರ್ಥಿಯಂದು ದೇವ ಗಣೇಶ ಬಂದು ಕೈಲಾಸಕ್ಕೆ ಕರೆದೊಯ್ಯುತ್ತಾನಂತೆ.

ಮಣ್ಣಿನ ಮೂರುತಿಯನ್ನು ಅಥವಾ ತೆಂಗಿನಕಾಯಿಯಲ್ಲಿ ಅರಶಿನ, ಕುಂಕುಮ, ಕಲಶವಿಟ್ಟು, ಸೀರೆಯುಡಿಸಿ, ಆಭರಣ ಹಾಕಿ, ಸಿಂಧೂರವಿಟ್ಟು ನಾನಾ ರೀತಿ ಅಲಂಕರಿಸುವರು. ಮೂರುತಿಯೊಂದಿಗೆ ಕೆಲವೆಡೆ ಶಿವನನ್ನು,ಗಣೇಶನನ್ನು ಕೂರಿಸುವ ಪದ್ಧತಿಯಿದೆ. ಹೂವು ಹಣ್ಣು, ಸಿಹಿಭಕ್ಷ್ಯಗಳ ನೈವೇದ್ಯ, ಬಾಗಿನ, ಕರ್ಪೂರದಾರತಿ ಬೆಳಗಿ ಇಷ್ಟಾರ್ಥಗಳನ್ನು ಈಡೇರಿಸೆಂದು ಕೇಳಿಕೊಳ್ಳುವರು. ಹೆಣ್ಣುಮಕ್ಕಳು ಕೈಗಳಿಗೆ ಗೋರಂಟಿ ಹಾಕುವ ಕ್ರಮವೂ ಇದೆ.

ಪೌರಾಣಿಕ ಹಿನ್ನೆಲೆಯಂತೆ ದಕ್ಷಯಾಗದಲ್ಲಿ ಪತಿಗೆ ಹವಿಸ್ಸು ನೀಡಿಲ್ಲವೆಂದು, ಅಲಕ್ಷ್ಯವೆಸಗಿದ ತಂದೆಯೆದುರೇ ಸಿಡಿದೆದ್ದ ದಾಕ್ಷಾಯಿಣಿ ಯೋಗಾಗ್ನಿಯಲಿ ದೇಹವನ್ನುದಹಿಸಿಕೊಳ್ಳುವಳು. ಮುಂದೆ ಹಿಮವಂತನ ಮಗಳಾದ ಪಾರ್ವತಿ, ಗೌರಿಯು ಘೋರ ತಪಸ್ಸನ್ನಾಚರಿಸಿ ಶಿವನ ಮಡದಿಯಾಗುತ್ತಾಳೆ. ವರುಷಕ್ಕೊಮ್ಮೆ ತವರಾದ ಭೂಮಿಗೆ ಭೇಟಿ ನೀಡುತ್ತಾಳೆನ್ನುವ ಉಲ್ಲೇಖವಿದೆ. ಆದರ್ಶ, ಗರ್ವ, ಆತ್ಮಾಭಿಮಾನ, ದಿಟ್ಟತನ ,ಶಿಷ್ಟಾಚಾರ, ವಾತ್ಸಲ್ಯ, ಲಾವಣ್ಯ, ನಯನಾಜೂಕು, ಪತಿಯ ಸರಿಸಮ ನಿಲ್ಲುವವಳು ಇವೆಲ್ಲದಕ್ಕೂ ಗೌರಿ ಮಾದರಿ ಹೆಂಗಳೆಯರಿಗೆ. ಮಾತೆ ಗೌರಿಗೆ ಗೌರವ ಸೂಚಿಸುವ ಹಬ್ಬವಿದು. ಎಲ್ಲರಿಗೂ ಮಂಗಳವಾಗಲಿ.

-ರತ್ನಾ ಕೆ ಭಟ್ ತಲಂಜೇರಿ,ಪುತ್ತೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ